ಜಯದ ಮುನ್ನುಡಿಗೆ ಕಾದಿರುವ ಭಾರತ

7
ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿ; ಇಂದು ಅರ್ಜೆಂಟೀನಾ ಎದುರು ಪೈಪೋಟಿ

ಜಯದ ಮುನ್ನುಡಿಗೆ ಕಾದಿರುವ ಭಾರತ

Published:
Updated:
ಜಯದ ಮುನ್ನುಡಿಗೆ ಕಾದಿರುವ ಭಾರತ

ಇಫೊ, ಮಲೇಷ್ಯಾ: ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಯಲ್ಲಿ ಆರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತ ತಂಡದವರು ಈ ಹಾದಿಯಲ್ಲಿ ಗೆಲುವಿನ ಮುನ್ನುಡಿ ಬರೆಯಲು ಹಾತೊರೆಯುತ್ತಿದ್ದಾರೆ.

27ನೇ ಆವೃತ್ತಿಯ ಟೂರ್ನಿ ಶನಿವಾರದಿಂದ ನಡೆಯಲಿದ್ದು ಸರ್ದಾರ್‌ ಸಿಂಗ್‌ ನೇತೃತ್ವದ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾದ ಸವಾಲು ಎದುರಿಸಲಿದೆ.

ಗುರುವಾರ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಎದುರು ಮಣಿದಿತ್ತು. ಈ ಪಂದ್ಯದಲ್ಲಿ ಉಪ ನಾಯಕ ರಮಣದೀಪ್‌ ಸಿಂಗ್ ಏಕೈಕ ಗೋಲು ದಾಖಲಿಸಿ ಗಮನ ಸೆಳೆದಿದ್ದರು.

ಹೋದ ವರ್ಷ ನಡೆದಿದ್ದ ವಿಶ್ವ ಹಾಕಿ ಲೀಗ್‌ ಫೈನಲ್ಸ್‌ನಲ್ಲಿ ಭಾರತ ಮತ್ತು ಅರ್ಜೆಂಟೀನಾ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಆಗ ಅರ್ಜೆಂಟೀನಾ 1–0 ಗೋಲಿನಿಂದ ಗೆದ್ದಿತ್ತು. 2008ರ ಟೂರ್ನಿಯ ಫೈನಲ್‌ ನಲ್ಲೂ ಎರಡೂ ತಂಡಗಳು ಎದುರಾಗಿದ್ದವು. ಆಗ ಅರ್ಜೆಂಟೀನಾ 2–1 ಗೋಲುಗಳಿಂದ ಭಾರತವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು.

ಹಿಂದಿನ ಈ ಸೋಲುಗಳಿಗೆ ಮುಯ್ಯಿ ತೀರಿಸಿಕೊಳ್ಳಲು ಸರ್ದಾರ್‌ ಸಿಂಗ್ ಪಡೆಗೆ ಈಗ ಉತ್ತಮ ಅವಕಾಶ ಸಿಕ್ಕಿದೆ.

2008ರಲ್ಲಿ ಸರ್ದಾರ್‌ ಸಿಂಗ್‌ ನಾಯಕತ್ವದಲ್ಲಿ ಭಾರತ ಬೆಳ್ಳಿ ಗೆದ್ದಿತ್ತು. 2015ರಲ್ಲಿ ಅವರ ನೇತೃತ್ವದಲ್ಲಿ ಕಂಚು ಗೆದ್ದಿದ್ದ ತಂಡ 2016ರಲ್ಲಿ ಮತ್ತೊಮ್ಮೆ ಬೆಳ್ಳಿಗೆ ಕೊರಳೊಡ್ಡಿತ್ತು. ಹೀಗಾಗಿ ಈ ಬಾರಿಯೂ ಪದಕ ಒಲಿಯಬಹುದೆಂಬ ನಿರೀಕ್ಷೆ ಗರಿಗೆದರಿದೆ.

ಅನುಭವಿಗಳಾದ ಆಕಾಶ್‌ದೀಪ್‌ ಸಿಂಗ್‌, ಎಸ್‌.ವಿ.ಸುನಿಲ್‌, ಮನದೀಪ್‌ ಸಿಂಗ್‌, ಮಿಡ್‌ಫೀಲ್ಡರ್‌ ಮನಪ್ರೀತ್‌ ಸಿಂಗ್‌, ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಮತ್ತು ಡ್ರ್ಯಾಗ್‌ಫ್ಲಿಕ್‌ ಪರಿಣತ ಆಟಗಾರ ರೂಪಿಂದರ್‌ ಪಾಲ್‌ ಸಿಂಗ್‌ ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ ಅವರು ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ.

ಇವರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಶ್ರೇಷ್ಠ ಸಾಮರ್ಥ್ಯ ತೋರುವ ವಿಶ್ವಾಸ ಹೊಂದಿದ್ದಾರೆ.

‘ಆಸ್ಟ್ರೇಲಿಯಾ ಎದುರಿನ ಅಭ್ಯಾಸ ಪಂದ್ಯದಲ್ಲಿ ಆಡಿದ್ದರಿಂದ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಆಟಗಾರರಿಗೆ ಅನುಕೂಲವಾಗಿದೆ. ಹಿರಿಯರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಗಳಿಸಿರುವ ಯುವ ಆಟಗಾರರು ಗುಣಮಟ್ಟದ ಆಟ ಆಡುವ ವಿಶ್ವಾಸ ಇದೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಶೋರ್ಡ್‌ ಮ್ಯಾರಿಜ್‌ ಹೇಳಿದ್ದಾರೆ.

ವಿಶ್ವಾಸದಲ್ಲಿ ಅರ್ಜೆಂಟೀನಾ: ಒಲಿಂ‍ಪಿಕ್ಸ್‌ನಲ್ಲಿ ಚಿನ್ನ ಗೆದ್ದ ಹೆಗ್ಗಳಿಕೆ ಹೊಂದಿರುವ ಅರ್ಜೆಂಟೀನಾ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು ಭಾರತವನ್ನು ಸುಲಭವಾಗಿ ಮಣಿಸುವ ಲೆಕ್ಕಾಚಾರ ಹೊಂದಿದೆ. ಈ ತಂಡ ಟೂರ್ನಿಯಲ್ಲಿ ಒಮ್ಮೆ ಪ್ರಶಸ್ತಿ ಜಯಿಸಿದೆ.

ಆಸ್ಟ್ರೇಲಿಯಾ ಸಾಧನೆ

ಆಸ್ಟ್ರೇಲಿಯಾ ತಂಡ ಸುಲ್ತಾನ್‌ ಅಜ್ಲಾನ್‌ ಷಾ ಕಪ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಹಿರಿಮೆ ಹೊಂದಿದೆ. ಕಾಂಗರೂಗಳ ನಾಡಿನ ತಂಡದ ಖಾತೆಯಲ್ಲಿ 9 ಟ್ರೋಫಿಗಳಿವೆ.

1983ರಲ್ಲಿ ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದಿದ್ದ ಚೊಚ್ಚಲ ಟೂರ್ನಿಯಲ್ಲೇ ಆಸ್ಟ್ರೇಲಿಯಾ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು: ಭಾರತ, ಮಲೇಷ್ಯಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ಐರ್ಲೆಂಡ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry