ಮಗನ ಸಾವಿನ ಸುದ್ದಿ ಕೇಳಿ ತಾಯಿಗೆ ಆಘಾತ

7
ಮಗಳನ್ನು ಬಿಗಿದಪ್ಪಿಕೊಂಡು ರೋದಿಸಿದ ಕಾನ್‌ಸ್ಟೆಬಲ್ ಸುಶೀಲ್‌ಕುಮಾರ ಪತ್ನಿ

ಮಗನ ಸಾವಿನ ಸುದ್ದಿ ಕೇಳಿ ತಾಯಿಗೆ ಆಘಾತ

Published:
Updated:

ಬೀದರ್‌: ಇರುವ ಒಬ್ಬ ಮಗನನ್ನು ಕಳೆದುಕೊಂಡ ತಾಯಿ ಆಘಾತಗೊಂಡು ಮನೆಯಂಗಳದಲ್ಲಿ ಗೋಡೆಗೆ ಒರಗಿ ಮೌನವಾಗಿ ಕುಳಿತಿದ್ದಳು. ಅತ್ತು ಅತ್ತು ಕಣ್ಣೊಳಗಿನ ನೀರು ಬತ್ತಿ ಹೋಗಿದ್ದವು. ಪತ್ನಿಗೆ ಅತಂತ್ರಭಾವ ಮೂಡಿ ದಿಕ್ಕು ತೋಚದಂತಾಗಿ ಮಗಳನ್ನು ಬಿಗಿದಪ್ಪಿಕೊಂಡು ಮನೆಯ ಒಳಗೆ, ಹೊರಗೆ ಬಂದು ಹೋಗುತ್ತಿದ್ದಳು. ಸಂಬಂಧಿಗಳೆಲ್ಲ ಇವರನ್ನೇ ದಿಟ್ಟಿಸಿ ನೋಡುತ್ತಿದ್ದರು...

ತೆಲಂಗಾಣ-ಛತ್ತೀಸ್‌ಗಡ ಗಡಿಯಲ್ಲಿ ಗುರುವಾರ ನಕ್ಸಲರ ವಿರುದ್ಧ ತೆಲಂಗಾಣ ಪೊಲೀಸರು ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ನಕ್ಷಲರ ಗುಂಡಿಗೆ ಬಲಿಯಾದ ಅಲ್ಲಿನ ಕಾನ್‌ಸ್ಟೆಬಲ್ ನಗರದ ಗ್ರೇಸ್‌ಕಾಲೊನಿಯ ಸುಶೀಲ್‌ಕುಮಾರ ವಿಲ್ಸನ್ ಅವರ ಮನೆಯಲ್ಲಿ ಕಂಡು ಬಂದ ದೃಶ್ಯ ಇದು.

ಗ್ರೇಸ್‌ಕಾಲೊನಿಯಲ್ಲಿ ಎಲ್ಲರೂ ಹೋಳಿ ಹಬ್ಬದ ಸಿದ್ಧತೆಯಲ್ಲಿದ್ದಾಗ ಸುಶೀಲ್‌ಕುಮಾರ ಸಾವಿನ ಸುದ್ದಿ ಅವರ ಕುಟುಂಬದ ಸದಸ್ಯರ ಮೇಲೆ ಬರಸಿಡಿಲಿನಂತೆ ಬಂದೆರಗಿದೆ. ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.

‘ಬುಧವಾರ ನನ್ನೊಂದಿಗೆ ಮಾತನಾಡಿದ್ದರು. ದಂತ ವೈದ್ಯಕೀಯ ಕೋರ್ಸ್‌ ಮಾಡುತ್ತಿರುವ ನನಗೆ ಇನ್ನು ಕೆಲವು ಪುಸ್ತಕ ತಂದುಕೊಂಡುವೆ ಚೆನ್ನಾಗಿ ಓದುವಂತೆ ಹೇಳಿದ್ದರು. ಆದರೆ, ಹೋಳಿ ಹಬ್ಬದ ದಿನ ಕೆಟ್ಟ ಸುದ್ದಿ ಕೇಳಿ ನನಗೆ ಏನೂ ತೋಚದಾಯಿತು’ ಎಂದು ಸುಶೀಲ್‌ಕುಮಾರ ಪತ್ನಿ ಸುಷ್ಮಾ ದುಃಖ ತೋಡಿಕೊಂಡರು.

ಅನುಮಾನ ಬಂತು: ‘ತೆಲಂಗಾಣ ಪೊಲೀಸರು ನನ್ನ ಮೊಬೈಲ್‌ಗೆ ಕರೆ ಮಾಡಿ ಸುಶೀಲ್‌ಕುಮಾರನ ಬಗೆಗೆ ವಿಚಾರಿಸಿದರು. ನಾನು ಅವರ ತಂದೆ ಎಂದು ಪರಿಚಯಿಸಿಕೊಂಡೆ. ಸುಶೀಲ್‌ಕುಮಾರಗೆ ಏನಾಗಿದೆ ಎಂದು ಕೇಳಿದೆ. ಆದರೆ, ಅವರಿಂದ ಸ್ಪಷ್ಟ ಉತ್ತರ ದೊರೆಯಲಿಲ್ಲ. ತೆಲಗು ಟಿವಿ ಆನ್‌ ಮಾಡಿದಾಗ ನಕ್ಸಲರ ಗುಂಡಿಗೆ ಬೀದರ್‌ನ ಪೊಲೀಸ್‌ ಕಾನ್‌ಸ್ಟೆಬಲ್‌ ಮೃತಪಟ್ಟಿರುವ ಸುದ್ದಿ ಪ್ರಸಾರವಾಗುತ್ತಿತ್ತು. ಆಗಲೇ ನನಗೆ ನನ್ನ ಮಗ ಬದುಕಿಲ್ಲ ಎನ್ನುವುದು ಮನವರಿಕೆ ಆಯಿತು’ ಎಂದು ಸುಶೀಲ್‌ಕುಮಾರ ತಂದೆ ವಿಜಯ ಬೋಪನಪಳ್ಳಿ ತಿಳಿಸಿದರು.

‘ನನಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಅವನೇ ಸುಶೀಲ್‌ಕುಮಾರ. ನಾನು ಟೇಲರ್‌ ಕೆಲಸ ಮಾಡಿಕೊಂಡಿದ್ದೇನೆ. ನನ್ನ ಪತ್ನಿ ಶಾರದಾಳ ತವರು ಮನೆ ತೆಲಂಗಾಣದ ಜಹೀರಬಾದ್‌ ತಾಲ್ಲೂಕಿನ ಪಟಪಳ್ಳಿ. ನನ್ನ ಮಗ ಅತ್ತೆ ಮನೆಯಲ್ಲಿ ಬೆಳೆದು ಅಲ್ಲಿಯೇ ಶಿಕ್ಷಣ ಪಡೆದು ಪೊಲೀಸ್‌ ಇಲಾಖೆಗೆ ಸೇರಿಕೊಂಡಿದ್ದ. 2009ರಲ್ಲಿ ಮದುವೆ ಆಗಿದೆ. ಸೊಸೆ ಈಗ ಆರು ತಿಂಗಳು ಗರ್ಭಿಣಿ. ಅವರಿಗೆ ಮೂರು ವರ್ಷದ ಮಗಳೂ ಇದ್ದಾಳೆ. ಅವಳಿಗೆ ಹೇಗೆ ಸಾಂತ್ವನ ಹೇಳುವುದು ಅರ್ಥವಾಗುತ್ತಿಲ್ಲ’ ಎಂದು ಕಣ್ಣೀರು ಹಾಕುತ್ತ ಹೇಳಿದರು.

‘ನಾವು ಮೆಥೋಡಿಸ್ಟ್‌ ಚರ್ಚ್‌ ಸದಸ್ಯರು. ನಮ್ಮ ಊರು ಇದೇ (ಬೀದರ್) ಆಗಿರುವ ಕಾರಣ ಸುಶೀಲ್‌ಕುಮಾರ ಅಂತ್ಯ ಸಂಸ್ಕಾರವನ್ನು ಶನಿವಾರ ಬೆಳಿಗ್ಗೆ 10 ಗಂಟೆಗೆ ಮಂಗಲಪೇಟ್‌ ಸ್ಮಶಾನದಲ್ಲಿ ನೆರವೇರಿಸಲಿದ್ದೇವೆ’ ಎಂದು ತಿಳಿಸಿದರು.

***

ಪೊಲೀಸ್‌ ಬಂದೋಬಸ್ತ್‌

ಗ್ರೇಸ್‌ಕಾಲೊನಿಯ ಸುಶೀಲ್‌ಕುಮಾರ ನಿವಾಸದ ಬಳಿ ಪೊಲೀಸ್‌ ಬಂದೋ ಬಸ್ತ್‌ ಮಾಡಲಾಗಿದೆ. ಜಹೀರಾಬಾದ್‌ ಡಿವೈಎಸ್ಪಿ, ಎನ್‌.ರವಿ, ಸಿಪಿಐ ಕೃಷ್ಣ ಕಿಶೋರ, ಪಿಎಸ್‌ಐ ಸುಭಾಷ ಅವರು ಸುಶೀಲ್‌ಕುಮಾರ ಮನೆಗೆ ಭೇಟಿ ನೀಡಿ ಸಾವಿನ ಸುದ್ದಿ ತಿಳಿಸಿದರು.

‘ಮಂಗಲಪೇಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸುಶೀಲ್‌ಕುಮಾರ ಅವರ ಅಂತ್ಯ ಸಂಸ್ಕಾರ ನಡೆಯಲಿದೆ’ ಎಂದು ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೇವರಾಜ್‌ ತಿಳಿಸಿದರು.

***

ಚಾಕೆಟ್‌ ಧರಿಸಿದರೂ ಸಾವು

‘ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಶೀಲ್‌ಕುಮಾರ ಗುಂಡು ನಿರೋಧಕ ಜಾಕೆಟ್‌ ಹಾಕಿಕೊಂಡಿದ್ದರೂ ಟೊಂಕದ ಬಳಿ ಗುಂಡು ತಗುಲಿ ಕೊನೆಯುಸಿರೆಳೆದಿದ್ದಾರೆ’ ಎಂದು ತೆಲಂಗಾಣ ಡಿವೈಎಸ್‌ಪಿ ವಿನೋದ್ ತಿಳಿಸಿದರು.

‘ತೆಲಂಗಾಣ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಕುಟುಂಬದ ಸದಸ್ಯರಿಗೆ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry