ಮಂದ ಬೆಳಕಿನ ಮಂದ್ರ ಸ್ವರದ ಅಲೆಗಳ ಇಂಪಲ್ಲಿ...

ಸೋಮವಾರ, ಮಾರ್ಚ್ 25, 2019
28 °C

ಮಂದ ಬೆಳಕಿನ ಮಂದ್ರ ಸ್ವರದ ಅಲೆಗಳ ಇಂಪಲ್ಲಿ...

Published:
Updated:
ಮಂದ ಬೆಳಕಿನ ಮಂದ್ರ ಸ್ವರದ ಅಲೆಗಳ ಇಂಪಲ್ಲಿ...

ಈತ ಭಾವತೀವ್ರತೆಯ ಪ್ರೇಮಿ. ಜೀವನದ ಸಿದ್ಧ ಮಾದರಿಗಳನ್ನು ಕಿತ್ತು ಎಸೆದು ಹೊಸತನಕ್ಕಾಗಿ ಹಂಬಲಿಸಿದವ. ಸ್ವಾತಂತ್ರ್ಯ, ಸಮಾನತೆ ಹುಡುಕುತ್ತಾ ನಡೆದವ. ಹಾಗೆ ನಡೆದು ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದವ. ಸುಮಾರು 60 ವರ್ಷಗಳ ಹಿಂದೆ ಈತ ತನ್ನ ಗೆಳೆಯರೊಂದಿಗೆ ಫ್ರಾನ್ಸ್‌ನಲ್ಲಿ ಶುರು ಮಾಡಿದ್ದ ಹುಡುಕಾಟ ಇಂದಿಗೂ ಜಗತ್ತಿನೆಲ್ಲೆಡೆ ಹರಡುತ್ತಲೇ ಇದೆ!

ಇಂತಹ ನಿರಂತರ ಹುಡುಕಾಟಕ್ಕೆ ಮುನ್ನುಡಿ ಬರೆದವನ ಹೆಸರು ಜ್ಹೇ ಲುಕ್ ಗೊಡಾರ್ಡ್. ಆ ಹುಡುಕಾಟ ಹೊಸ ಅಲೆ ಸಿನಿಮಾ. ಈತನ ಕುರಿತಾದ ಸಿನಿಮಾವೊಂದು (ರಿಡೌಟಬಲ್‌) ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹತ್ತನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. ಈ ನೆಪದಲ್ಲಿ ಅವನನ್ನು ನೆನಪಿಸಿಕೊಳ್ಳುತ್ತ ಹೊಸ ಅಲೆ ಸಿನಿಮಾ ಆರಂಭವಾದ ಬಗೆಯನ್ನೂ ಇಂದಿನ ಸಿನಿಮಾ ಅಲೆಯನ್ನೂ ಅದು ಕೆದಕಿದಂತೆ ತೋರಿತು. ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಬಹುಮಟ್ಟಿನ ಸಿನಿಮಾಗಳು ಈ ಅಲೆಯ ಶಬ್ದ ಮತ್ತು ಮೌನ ಎರಡನ್ನೂ ಕಟ್ಟಿಕೊಟ್ಟವು.

ಫ್ರೆಂಚ್‌ ಸಿನಿಮಾ ನಿರ್ದೇಶಕನೊಬ್ಬನ ಪುಟಗಳಿಂದ ಹೆಕ್ಕಿಕೊಟ್ಟ ಅನುಭವವೇ ಈ ‘ರಿಡೌಟಬಲ್‌’ ಸಿನಿಮಾ. ಅದರಲ್ಲೂ ಕ್ರಾಂತಿಕಾರಿ ಮತ್ತು ಪ್ರಭಾವಿ ಸಿನಿಮಾ ನಿರ್ದೇಶಕನ ಪ್ರೀತಿ ತುಂಬಿದ ಅಧ್ಯಾಯ. ಎಲ್ಲರಿಗಿಂತ ಭಿನ್ನವಾಗಿರಲು ಬಯಸುವ ಅವನಲ್ಲಿ ತುಂಬ ಮಾನವೀಯ ಮಗ್ಗುಲೊಂದು ಇದೆ. ಆದರೂ, ಯಾವಾಗಲೂ ನಿಯಮ ಬದಲಿಸುವ ಹಟವೊಂದು ಅವನನ್ನು ಸುಮ್ಮನೆ ಕೂರಲು ಬಿಡುವುದಿಲ್ಲ. ಕುಟುಕುತ್ತಲೇ ಇರುತ್ತದೆ. ಅಷ್ಟಕ್ಕೂ ಸಿನಿಮಾವೊಂದು ಯಾಕೆ ಜೀವನಕ್ಕಿಂತ ಭಿನ್ನವಾಗಿರಬೇಕು ಎಂಬ ಪ್ರಶ್ನೆ ಅವನಲ್ಲಿ ಮೂಡಿದೆ. ಆದರೆ, ಅಂತಹ ಸಿನಿಮಾವನ್ನು ಪ್ರೇಕ್ಷಕರು ಸ್ವೀಕರಿಸಬೇಕಲ್ಲ? ಅವನು ಮತ್ತೆ ಸ್ವವಿಮರ್ಶೆಗೆ ತೊಡಗುತ್ತಾನೆ.

ಕಾರ್ಯಕರ್ತನಂತೆ ವರ್ತಿಸಿ ಫ್ಯಾಸಿಸ್ಟ್‌ ಹೇರಿಕೆ ವಿರೋಧಿಸಿ ಬೀದಿಗಿಳಿಯುತ್ತಾನೆ. ಯುವಕರಿಂದ ಟೀಕೆ ಎದುರಾದರೂ ಸರಿಯೇ ಆ ಯುವಜನರಲ್ಲಿ ಅವನಿಗೊಂದು ನಂಬಿಕೆ ಇದೆ. ಅಂತೆಯೇ ಸಮಾಜವಾದದಲ್ಲೂ. ಏನಾದರೂ ಭಿನ್ನವಾದುದನ್ನು ಮಾಡುವುದಾದರೆ ಅವರೇ ಮಾಡಬೇಕು ಎಂಬ ಭರವಸೆ ಅವನಿಗಿದೆ.

ನಿರ್ದೇಶಕನೇ ಇಲ್ಲದ, ನಾಯಕನೂ ಇಲ್ಲದ, ಸಾಹಿತ್ಯ ಸಹ ಇಲ್ಲದ ಸಿನಿಮಾ ಪ್ರಯೋಗದ ಪ್ರಸ್ತಾಪವೂ ಬರುತ್ತದೆ ಅಲ್ಲಿ. ಹಾಗೇ ಇಂಥದೊಂದು ಸಿನಿಮಾ ಮಾಡುವ ಚರ್ಚೆ ಅವನ ಸ್ನೇಹಿತರ ಜೊತೆ ನಡೆದಾಗ ಪ್ರೇಕ್ಷಕರೂ ಇಲ್ಲದ ಸಿನಿಮಾ ಎಂದೊಬ್ಬರು ಹಾಸ್ಯ ಮಾಡುತ್ತಾರೆ.

ಆ ಪ್ರಯೋಗದಲ್ಲಿ ಸಿನಿಮಾ ನಿರ್ಮಾಣದ ಎಲ್ಲ ನಿರ್ಧಾರಗಳನ್ನೂ ತಂಡದವರೆಲ್ಲ ಒಮ್ಮತಕ್ಕೆ ಬಂದು ತೆಗೆದುಕೊಳ್ಳುವ ಪ್ರಯತ್ನ ವಿಭಿನ್ನವಾಗಿದೆ. ಆದರೂ ಸಿನಿಮಾದ ಹೊಸ ಸಾಧ್ಯತೆಗಳ ಕ್ಷಿತಿಜ ವಿಸ್ತರಿಸುತ್ತಲೇ ಇರಬೇಕು ಎನ್ನುವ ಅವನ ತುಡಿತ ಜಗದ ಇತರ ಕಡೆಯೆಲ್ಲ ಹರಡುತ್ತ ಪ್ರಭಾವ ಬೀರುತ್ತಲೇ ಇದೆ.

ಜೀವನವೇ ಒಂದು ರೀತಿಯ ಭಯಹುಟ್ಟಿಸುವ ಘನತೆ, ಎಚ್ಚರಿಕೆ ನೀಡುವಂತಿದೆ ಎಂಬ ಅರ್ಥದಲ್ಲಿ ಪುನರ್‌ವಿಮರ್ಶೆಗೊಳಪಡಿಸುವ ಪ್ರಕ್ರಿಯೆ ಅದು. ಇಂಥದೊಂದು ಸಿನಿಮಾ ಕೈಗೆತ್ತಿಕೊಂಡಿರುವ ನಿರ್ದೇಶಕ ಮಿಷೆಲ್‌ ಕೂಡ ಇಂದಿನ ಸಿನಿಮಾ ಸಂಸ್ಕೃತಿಯನ್ನು ಹೀಗೆ ಮತ್ತೆ ವಿಮರ್ಶಿಸುವ ಅಗತ್ಯವನ್ನು ಮನಗಾಣಿಸಿದ್ದಾರೆ. ಹಾಗಾಗಿ, ಬೆಂಗಳೂರಿನ ಸಿನಿಮೋತ್ಸವ ಮತ್ತು ಜಗತ್ತಿನ ವಿವಿಧೆಡೆ ನಡೆಯುವ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಒಂದು ರೀತಿಯ ಎಲ್ಲ ಹೊಸ ಅಲೆಯ ಸಿನಿಮಾಗಳ ಜತೆಗೂ ‘ಲೆ ರಿಡೌಟಬಲ್‌’ ನಂಟು ಬೆಳೆಸಿಕೊಳ್ಳುತ್ತದೆ.

ವಾಸ್ತವದೊಡನೆ ಸಹಕರಿಸುವ, ಯಾವುದನ್ನೂ ದೂಷಿಸದ ನಿಲುವು ಈ ಹೊಸ ಅಲೆಯಲ್ಲಿದೆ ಎಂದಿದ್ದ ಗೊಡಾರ್ಡ್‌. ಸಿನಿಮಾ ಒಂದು ಎಕ್ಸ್‌ರೇ ಇದ್ದಂತೆ. ನಿರ್ದೇಶಕನ ಆರೋಗ್ಯ ಮತ್ತು ಅನಾರೋಗ್ಯವನ್ನೂ ಹೇಳಿಬಿಡುತ್ತದೆ. ‘ಅಲ್ಲೊಂದು ನನ್ನದೇ ಚಿತ್ರಣ ಇದೆ. ನಾನು ಯಾರೊಡನಾದರೂ ಮಾತನಾಡಬೇಕು. ಬರಿಯ ಶಬ್ದಗಳಲ್ಲಿ ನಾನು ಮಾತನಾಡಲಾರೆ. ಹಾಗಂತ ಯಾರನ್ನಾದರೂ ಸತತ ಸ್ಪರ್ಶಿಸುತ್ತಲೇ ಇದ್ದು ಎಲ್ಲವನ್ನೂ ಎಲ್ಲರೊಂದಿಗೂ ಹೇಳಲಾಗುವುದಿಲ್ಲ. ಚಿತ್ರಗಳು ಮತ್ತು ಶಬ್ದ ಇಲ್ಲದೆ ಹೇಳಿದರೆ ಅದು ಬರಿಯ ಹೇಳಿಕೆ ಆಗುತ್ತದೆ. ಚಿತ್ರಗಳು ಬೇಕು. ಬಿಡಿಯಾದ ಚಿತ್ರಗಳು ಒಂದು ಸ್ಟೇಷನ್‌ನಿಂದ ಇನ್ನೊಂದು ಸ್ಟೇಷನ್‌ಗೆ ಪಯಣಿಸುವ ರೈಲುಗಳಂತೆ ಎನ್ನುವ ನಿಲುವು ಅವನದು. ಅವನಿದ್ದ ಕಾಲವಾದರೂ ಎಂಥದು!

ಎರಡನೆಯ ಮಹಾಯುದ್ಧ ಮುಗಿದದ್ದೇ ಯುರೋಪ್ ಹಲವಾರು ಸ್ಥಿತ್ಯಂತರಗಳಿಗೆ ಒಳಗಾಯಿತು. ಆರ್ಥಿಕವಾಗಿ ನಲುಗಿದರೂ ಅಲ್ಲಿಯ ಕೆಲವು ರಾಷ್ಟ್ರಗಳು ಸಾಂಸ್ಕೃತಿಕವಾಗಿ ಅರಳುತ್ತಿದ್ದವು. ಅದುವರೆಗಿದ್ದ ಹಿಟ್ಲರ್ ಮತ್ತು ಮುಸಲೋನಿಯ ಸರ್ವಾಧಿಕಾರ ಪತನವಾಗಿ ಸ್ವತಂತ್ರ ಸಮಾಜವೊಂದು ಅರಳುವ ಹಾದಿಯಲ್ಲಿತ್ತು. ಸಿನಿಮಾ, ಸಾಹಿತ್ಯ ಒಳಗೊಂಡಂತೆ ಬಹುತೇಕ ಕಲಾ ಪ್ರಕಾರಗಳು ಸರ್ಕಾರದ ಸೆನ್ಸಾರ್‌ಶಿಪ್‌ನಿಂದ ಹೊರಬಂದು ನಿರುಮ್ಮಳವಾಗಿ ಸ್ವತಂತ್ರವಾಗಿ ಉಸಿರಾಡುವ ವಾತಾವರಣ ನಿರ್ಮಾಣವಾಗುತ್ತಿತ್ತು. ಇದೇ ಸಮಯ ಫ್ರೆಂಚ್ ಸರ್ಕಾರ ಅಮೆರಿಕದ ಜೊತೆ ಹಲವು ಒಡಂಬಡಿಕೆಗಳಿಗೆ ಸಹಿ ಹಾಕಿತು. ಅವುಗಳಲ್ಲಿ ಒಂದು ಅಮೆರಿಕದ ಹಾಲಿವುಡ್ ಚಿತ್ರಗಳಿಗೆ ಫ್ರಾನ್ಸ್ ಮುಕ್ತ ಅವಕಾಶ ನೀಡುವುದು. ಈ ಮುಂಚೆ ಇದ್ದ ಫ್ರೆಂಚ್ ಸಿನಿಮಾಗಳ ಜೊತೆ ಹಾಲಿವುಡ್ ಸಿನಿಮಾಗಳೂ ಜನರನ್ನು ಆಕರ್ಷಿಸತೊಡಗಿದವು. ಈ ಎರಡೂ ಬಗೆಯ ಸಿನಿಮಾಗಳು ರಮ್ಯ ಮನೋಹರ, ಮೌಲ್ಯಗಳನ್ನು ಆಧರಿಸಿದ, ಪತ್ತೆದಾರಿ- ಕಲ್ಪನಾ ವಿಲಾಸಿ ಕಥೆಗಳನ್ನು ಹೇಳುತ್ತಿದ್ದವು.

ಒಳ್ಳೆಯದು ಮತ್ತು ಕೆಟ್ಟದು ಎನ್ನುವ ವರ್ಗೀಕರಣಗಳಲ್ಲಿ ಸಮಾಜ ಮತ್ತು ಬದುಕನ್ನು ವಿಂಗಡಿಸಿ ನೀತಿ ಪಾಠ ಹೇಳುವ ಮಾರಲ್ ಸಿನಿಮಾಗಳಾಗಿದ್ದವು. ಅಲ್ಲಿನ ಬಹುತೇಕ ಪಾತ್ರಗಳು ಮೇಲ್ವರ್ಗಗಳ ಬದುಕನ್ನು ಯಥೇಚ್ಛವಾಗಿ ಚಿತ್ರಿಸುತ್ತಿದ್ದವು. ಚಿತ್ರಕಥೆಯಲ್ಲಿನ ಆಕಸ್ಮಿಕ ತಿರುವುಗಳು, ಬಂಧ, ನಾಯಕನ ಒಳ್ಳೆಯತನ, ಅಸಾಧಾರಣ ಸಾಮರ್ಥ್ಯ- ಆ ಸಾಮರ್ಥ್ಯಕ್ಕೆ ಎದುರಾಗುವ ಸಂಕಷ್ಟಗಳು, ಆ ಸಂಕಷ್ಟಗಳ ನಾಯಕ ಎದುರಿಸುವ ಪರಿ, ದುರ್ಬುದ್ಧಿಯ ಖಳನಾಯಕನನ್ನು ಸೋಲಿಸಿ ನಾಯಕ ಪಡೆಯುವ ಜಯ ಹೀಗೆ ಒಂದೇ ರೀತಿಯ ಕಥೆಗಳನ್ನು ಹೆಣೆಯಲಾಗುತ್ತಿತ್ತು. ಸ್ಥಾಪಿತ ಸಮಾಜವೊಂದರ ಮೌಲ್ಯಗಳನ್ನು ಪೋಷಿಸುವ ರೀತಿಯಲ್ಲೇ ಹೆಣೆಯಲಾಗುತ್ತಿದ್ದ ಕಥೆಗಳನ್ನು ಸಿನಿಮಾ ಮಾಡುತ್ತಿದ್ದುದು ಕೆಲವೇ ಕೆಲವು ಕಂಪನಿಗಳು. ಅವುಗಳ ಹಿಡಿತದಲ್ಲಿದ್ದ ಸಿನಿಮಾಗಳು ವ್ಯಾಪಾರವಾಗಿದ್ದವು. ಗೊಡಾರ್ಡ್‌ ಟಿ.ವಿ. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನು ಒಪ್ಪುತ್ತಾನೆ. ‘ಅವರು ಉತ್ತಮ ಚಿತ್ರಗಳನ್ನು ಮಾಡಬಹುದು. ಆದರೆ, ಅದು ಅವರಿಗೆ ಬೇಕಿಲ್ಲ. ಅವರಿಗೆ ಬೇಕಿರುವುದು ಬಿಜಿನೆಸ್‌’ ಅನ್ನೋದು ಅವನ ಉವಾಚ.

60ರ ದಶಕದಲ್ಲಿ ಒಂದೇ ಬಗೆಯ ನಿರ್ಮಾಣ, ಚಿತ್ರಣ, ಸಿನಿಮಾದ ಸೌಂಡ್, ಸಂಕಲನ, ನಟನೆ ಎಂದು ಆ ಚಿತ್ರಗಳು ಏಕತಾನತೆಯಿಂದ ನಳನಳಿಸುತ್ತಿದ್ದವು. ಈ ನಳನಳಿಕೆ ಕೆಲವರಿಗೆ ಅಸಹ್ಯದಂತೆ ಕಾಣತೊಡಗಿತು. ಸಾಮಾನ್ಯರ ದಿನನಿತ್ಯದ ಬದುಕಿನಿಂದ ಬಹುದೂರದಲ್ಲಿರುವ ಈ ಬಗೆಯ ಸಿನಿಮಾಗಳನ್ನು ವಿರೋಧಿಸಿ ನಾಲ್ಕು ಮಂದಿ ಫ್ರಾನ್ಸ್‌ನ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಅವರಿಗೆ ಇಟಲಿಯಲ್ಲಿ ಶುರುವಾಗಿದ್ದ ನಿಯೋ ರಿಯಲಿಸಂ ಚಿತ್ರಗಳು ಮಾದರಿಯಾಗಿದ್ದವು. ವಿಟ್ಟಾರಿಯೊ ಡಿಸಿಕಾನ ‘ಬೈಸಿಕಲ್ ಥೀವ್ಸ್’ನಂತಹ ಚಲನಚಿತ್ರಗಳು ಹೊಸ ಆಲೋಚನೆಗೆ ಅವಕಾಶ ನೀಡಿದ್ದವು. ಸಿನಿಮಾ ಎಂಬ ಅದ್ಭುತವನ್ನು ಜಗತ್ತಿಗೆ ಪರಿಚಯಿಸಿದ ಫ್ರಾನ್ಸ್‌ನಲ್ಲೂ ಈ ಬಗೆಯ ಚಿತ್ರಗಳು ಈ ಹಿಂದೆ ಬಂದ ಉದಾಹರಣೆಗಳಿದ್ದರೂ ಬಹುಜನರನ್ನು ತಲುಪದೆ ಅವು ಸೊರಗಿದ್ದವು ಅಥವಾ ಅಂತಹ ಚಿತ್ರಗಳಿಗೆ ಮನ್ನಣೆ ದೊರಕದೆ ಕಳೆದುಹೋಗುತ್ತಿದ್ದವು.

ಹಾಲಿವುಡ್ ಮತ್ತು ಅದರ ಪ್ರಭಾವಕ್ಕೆ ಒಳಗಾದ ಫ್ರೆಂಚ್ ಸಿನಿಮಾಗಳೂ ಫ್ರಾನ್ಸ್‌ನಲ್ಲಿ ಮೆರೆದಾಡುತ್ತಿದ್ದ ಸಮಯದಲ್ಲಿ ಗೊಡಾರ್ಡ್ ಸಿನಿಮಾ ಮೋಹ ಬೆಳೆಸಿಕೊಂಡ. ನೋಡಿ ನಂತರ ಬರೆಯಬೇಕೆನಿಸಿತು. ಅವನ ಜೊತೆ ಫ್ರಾನ್ಸ್ವಾ ತ್ರುಫೊ ಎಂಬ ಯುವಕರು ಪತ್ರಿಕೆಗಳಲ್ಲಿ ಅಂತಹ ಸಿನಿಮಾಗಳನ್ನು ಕಟುವಾಗಿ ವಿಮರ್ಶಿಸಿ ಲೇಖನಗಳನ್ನು ಬರೆಯತೊಡಗಿದ್ದರು. ಸಿನಿಮಾ ಪತ್ರಿಕೆಗಳು ಹರಡುತ್ತಿದ್ದ ಆ ಕಾಲಘಟ್ಟದಲ್ಲಿ ಇವರಿಬ್ಬರು ಹೊಸ ಸಿನಿಮಾದ ಅವಶ್ಯಕತೆ ಮತ್ತು ಸಾಧ್ಯತೆಗಳ ಕುರಿತು ಚರ್ಚಿಸುತ್ತಿದ್ದರು. ಸಮಾಜ ಮತ್ತು ಬದುಕುಗಳನ್ನು ವಸ್ತುನಿಷ್ಠ ನೆಲೆಯಲ್ಲಿ ನೋಡುವ, ಅರ್ಥೈಸಿಕೊಳ್ಳುವ ಪರಿಯನ್ನು ತೆರೆಗೆ ತರಲು ತಾವೇ ಸಿನಿಮಾ ಕ್ಷೇತ್ರಕ್ಕೆ ಇಳಿದೂ ಬಿಟ್ಟರು.

‘ರಿಡೌಟಬಲ್‌’ನಲ್ಲಿ ಗೊಡಾರ್ಡ್‌ನ ಒಂದು ಸಂಭಾಷಣೆ ಹೀಗಿದೆ: ನಮ್ಮ ಸಿನಿಮಾಗಳೇನು ಯುವಕರನ್ನು ಹಾಳು ಮಾಡಲ್ಲ, ಬದಲಿಗೆ ಆ ಯುವಕರೇ ಸಿನಿಮಾಕ್ಕೆ ಬಂದು ಸಿನಿಮಾವನ್ನು ಹಾಳು ಮಾಡಬೇಕಿದೆ. ಈ ಸಂಭಾಷಣೆಯೇ ಸಾಕು. ಗೊಡಾರ್ಡ್ ಮತ್ತವನ ಗೆಳೆಯರ ಸಿನಿಮಾಗಳನ್ನು ಅಂದಿನ ಫ್ರಾನ್ಸ್ ಸಮಾಜ ಹೇಗೆ ಸ್ವೀಕರಿಸಿತ್ತು ಎಂಬುದನ್ನು ಹೇಳಲು. ಹಾಲಿವುಡ್ ಶೈಲಿಯಲ್ಲಿ ಕ್ಲಾಸಿಕ್ ಸಾಹಿತ್ಯದ ಕೃತಿಗಳನ್ನು ತೆರೆಗೆ ತರುತ್ತಿದ್ದ ಫ್ರೆಂಚ್ ಸಿನಿಮಾಗಳ ನಡುವೆ ಯಾವುದೇ ಮುಚ್ಚು ಮರೆಯಿಲ್ಲದೆ ಗಂಡು- ಹೆಣ್ಣಿನ ಸಂಬಂಧಗಳನ್ನು ಬಿಡಿಸಿಡುವ, ವಾಸ್ತವಕ್ಕೆ ಅತಿ ಸಮೀಪದ ಪಾತ್ರಗಳನ್ನು ತೆರೆಯ ಮೇಲೆ ತರುವ ಈ ಚಿತ್ರಗಳು ಸಿನಿಮಾದ ಹೊಸ ಸಾಧ್ಯತೆಗಳಿಗಾಗಿ ಹಾತೊರೆಯುತ್ತಿದ್ದವು. ಮನುಷ್ಯರ ಬದುಕನ್ನು ಆಯಾ ಸಂದರ್ಭಗಳಿಗೆ ಅನುಸಾರವಾಗಿಯೇ ಅರ್ಥೈಸಿಕೊಳ್ಳಬೇಕೇ ವಿನಾ ಈ ಮುಂಚೆ ವಿಧಿಸಲ್ಪಟ್ಟ ನೀತಿ ಪಾಠಗಳ ಅಳತೆಗೋಲಿನಿಂದ ಅಲ್ಲ ಎನ್ನುತ್ತಾ ಮಧ್ಯಮವರ್ಗದ (ಬೂರ್ಜ್ವಾ) ಮೌಲ್ಯಗಳನ್ನು ಧಿಕ್ಕರಿಸಿ ಧರ್ಮ, ಸರ್ಕಾರಗಳಂತಹ ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯದೆ ಮನುಷ್ಯರ ಒಳ ಹೊರಗನ್ನು ಸ್ವತಂತ್ರವಾಗಿ ವ್ಯಕ್ತಪಡಿಸಲು ಸಿನಿಮಾ ಮಾಧ್ಯಮವನ್ನು ಬಳಸಿಕೊಳ್ಳಬೇಕೆಂದು ಹೊರಟ ಗೊಡಾರ್ಡ್ ಮತ್ತವನ ಸ್ನೇಹಿತರ ಪ್ರಯತ್ನಗಳು ತಕ್ಷಣ ಗೆಲುವು ಪಡೆಯಲಿಲ್ಲ.

ಫ್ರಾನ್ಸ್ವಾ ತ್ರುಫೊನ ಮೊದಲ ಸಿನಿಮಾ ‘400 Blows’ ಕೇನ್ಸ್ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದದ್ದೇ ಫ್ರೆಂಚ್ ಹೊಸ ಅಲೆ ಸಿನಿಮಾ ಎಂಬ ಸಾಂಸ್ಕೃತಿಕ ಚಳವಳಿ ಮೆಲ್ಲಗೆ ಯುರೋಪನ್ನು ತಬ್ಬಿಕೊಳ್ಳತೊಡಗಿತು. ಸಿನಿಮಾದ ಭಾಷೆಯೇ ಬದಲಾಗತೊಡಗಿತು. ಮೌಲ್ಯಗಳನ್ನು ಬಿತ್ತರಿಸುತ್ತಾ ಸಾಗುತ್ತಿದ್ದ ಕೃತಕ ಸಿನಿಮಾಗಳು ಈ ಹೊಸ ಅಲೆ ಎಂಬ ಹೊಸ ಸಿನಿಮಾದ ಕಚ್ಚಾ ದೃಶ್ಯಗಳ ಎದುರು ಕಂಪಿಸಿದವು.

1950- 60ರ ದಶಕದಲ್ಲಿ ಘಟಿಸಿದ ಫ್ರಾನ್ಸ್‌ನ ರಾಜಕೀಯ ಬದಲಾವಣೆ ಕೂಡ ಈ ಚಳವಳಿಗೆ ಪೂರಕ ಬೆಳವಣಿಗೆಯನ್ನೇ ನೀಡಿತು. ಅಂದಿನ ಫ್ರಾನ್ಸ್‌ನ ಸಂಸ್ಕೃತಿ ಸಚಿವನಾದ ಆಂದ್ರೆ ಮಾಲ್ರೊ ಸಿನಿಮಾ ಕಲೆಯಲ್ಲಿ ಆಗಬೇಕಿರುವ ಬದಲಾವಣೆಗೆ ಸಹಕಾರಿಯಾಗಿ ನಿಂತ. ಫ್ರಾನ್ಸ್ ಹೊಸ ಬಗೆಯ ಸಿನಿಮಾವನ್ನು ಸ್ವಾಗತಿಸಲು ಮುಂದಾಯಿತು. ಈ ಮೂಲಕ ಸಾಮಾನ್ಯ ವರ್ಗದ ಕಷ್ಟ- ಸಂತಸಗಳು ಮೊದಲ ಬಾರಿಗೆ ತೆರೆಯ ಮೇಲೆ ಬಂದು ಬಹಳ ಜನರನ್ನು ಆಕರ್ಷಿಸಿದವು. ಉಳ್ಳವರ ಖುಷಿ- ನೋವುಗಳಿಗೆ ವೇದಿಕೆಯಾಗಿದ್ದ ಸಿನಿಮಾ ಈಗ ಸಾಮಾನ್ಯರ ದನಿಯಾಯ್ತು. ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ವ್ಯಕ್ತಿಗಳು, ವಿಷಯಗಳು ಮುನ್ನೆಲೆಗೆ ಬಂದಷ್ಟೇ ಅಸ್ತಿತ್ವವಾದ, ಎಕ್ಸ್‌ಪ್ರೆಶನಿಸಂ ಮುಂತಾದ ತತ್ವಜ್ಞಾನಗಳು ಪ್ರಾಮುಖ್ಯ ಪಡೆದುಕೊಂಡವು.

ಗೊಡಾರ್ಡ್‌ನಂತೂ ಕಮ್ಯುನಿಸ್ಟ್ ಮತ್ತು ಅಸ್ತಿತ್ವವಾದಿ ಸಿದ್ಧಾಂತಗಳ ಪ್ರಚಾರಕನಾಗಿ ಬದಲಾದ. ಗೊಡಾರ್ಡ್‌ ಸೇರಿದಂತೆ ಫ್ರಾನ್ಸ್ವಾ ತ್ರುಫೊ, ಎರಿಕ್ ರೋಮರ್‌ರಂತಹ ಕೆಲ ನಿರ್ದೇಶಕರು ಲೈಂಗಿಕತೆಯನ್ನು ತಮ್ಮ ಚಿತ್ರಗಳಲ್ಲಿ ತೋರಿಸಿ ಅನೇಕರನ್ನು ಬೆಚ್ಚಿ ಬೀಳಿಸಿದರು. ಈ ಸಿನಿಮಾಗಳಲ್ಲಿ ಬಂದ ಮುಕ್ತ ಲೈಂಗಿಕ ದೃಶ್ಯಗಳು ಬೇಕೆಂದೇ ತೂರಿಸಲ್ಪಟ್ಟಿರದೆ ಅಥವಾ ವಾಣಿಜ್ಯದ ದೃಷ್ಟಿಯಿಂದ ಸೇರಿಸದೆ ಕಥೆಯ ಓಘದಲ್ಲಿ ಅತ್ಯಂತ ಸಹಜವಾಗಿ ಘಟಿಸಿ ವಾಸ್ತವಕ್ಕೆ ಕನ್ನಡಿಯಾಗುತ್ತವೆ. ಗಂಡಿನ ಕಣ್ಣಿನ ಮೂಲಕ ಹೆಣ್ಣಿನ ದೇಹ ನೋಡಲಿಲ್ಲ ಇಲ್ಲಿಯ ಕ್ಯಾಮೆರಾ. ಹೆಣ್ಣಿಗೂ ದೇಹ, ಮನಸ್ಸು ಇದೆ ಎಂಬ ಭಾವನೆ ಮೂಡಿಸಿತು.

ಇಲ್ಲಿಯ ಲೈಂಗಿಕತೆ ನೋಡುಗರ ಭಾವನೆಗಳನ್ನು ಕೆರಳಿಸದೆ ಮನುಷ್ಯ ಸಹಜವಾದ ಆ ಸಂದರ್ಭದ ಆಳ ಆಗಲಗಳನ್ನು ಬಗೆಯುತ್ತದೆ. ಹಾಗಾಗಿಯೇ ಇಂದಿಗೂ ಜಗತ್ತಿನ ಹೊಸ ಅಲೆ ಸಿನಿಮಾ ಅಥವಾ ಪರ್ಯಾಯ ಸಿನಿಮಾಗಳು ಲೈಂಗಿಕತೆಯನ್ನು ಯಾವುದೇ ಬಣ್ಣಗಳಿಲ್ಲದೆ ಸಹಜವಾಗಿ ತೋರಿಸುತ್ತವೆ. ವ್ಯಾಪಾರಿ ಸಿನಿಮಾಗಳಲ್ಲಿ ಲೈಂಗಿಕತೆಯನ್ನು ಪ್ರಚೋದನೆ, ಕೀಳು ಕೈಚಳಕದಂತೆ ಬಳಸಿದರೆ ಇಲ್ಲಿ ಅದು ಒಂದು ಅನನ್ಯ ಅನುಭವವಾಗಿ, ಅನ್ವೇಷಣೆಯಾಗಿ ಚಿತ್ರಿತವಾಗುತ್ತದೆ. ಗಾಳಿ, ನೀರು, ಆಹಾರಗಳಂತೆ ಲೈಂಗಿಕತೆಯನ್ನೂ ಸಹಜವಾಗಿ ಬಳಸುತ್ತಾರೆ. ಈ ಕಾರಣದಿಂದಾಗಿ 1959ರಿಂದ 1969ರವರೆಗೆ ಫ್ರಾನ್ಸ್‌ನಲ್ಲಿ ಹೊಸ ಅಲೆ ಸಿನಿಮಾ ಹೊಸ ಹವಾ ಸೃಷ್ಟಿ ಮಾಡಿಬಿಟ್ಟಿತು. ಅದು ಯುರೋಪನ್ನು ಸೆಳೆದಂತೆಯೇ ಜಗತ್ತಿನೆಲ್ಲೆಡೆಯೂ ಹರಡಿಕೊಳ್ಳತೊಡಗಿತು.

ಪ್ರಖರ ಬೆಳಕಿನಿಂದ ಕಣ್ಣು ಕೋರೈಸುತ್ತಿದ್ದ ಸಿನಿಮಾಗಳ ಎದುರು ಮಂದ್ರ ಬೆಳಕಿನ, ಕಡಿಮೆ ಸದ್ದಿನ ಮತ್ತು ಹೊಸ ನಟ, ನಟಿಯರನ್ನುಳ್ಳ ಈ ಹೊಸ ಅಲೆ ಸಿನಿಮಾಗಳು ಬಜೆಟ್ ವಿಷಯದಲ್ಲಿ ತೀರಾ ಸಾಮಾನ್ಯವಾಗಿದ್ದವು. ಕಂಪನಿ ಸಿನಿಮಾಗಳ ಬ್ರಹ್ಮಾಂಡ ಲೋಕದೆದುರು ಇವು ಬೀದಿಬದಿಯ, ಸಾಮಾನ್ಯರ ಮನೆಯೊಳಗಿನ ಹಾಗೆಯೇ ಕಾರ್ಖಾನೆಗಳ ಲೋಕವನ್ನೂ ತೆರೆದಿಟ್ಟು ಬಹುಜನರನ್ನು ಆಕರ್ಷಿಸಿದವು. ಕ್ಯಾಮೆರಾ ಕೋನಗಳು, ಕೆಲ ತಂತ್ರಗಳು ನೋಡುಗರನ್ನು ವಿಸ್ಮಯಗೊಳಿಸಿದವು.

ಒಂದೇ ಬಗೆಯ, ನೇರ ನಿರೂಪಣೆಯ ಸಿನಿಮಾಗಳಿಗೆ ಒಗ್ಗಿ ಹೋಗಿದ್ದ ನೋಡುಗರು ಈ ಚಲನಚಿತ್ರಗಳು ಬಳಸುತ್ತಿದ್ದ ಸಿನಿತಂತ್ರಗಳಿಗೆ ಮನಸೋತರು. ಇಂತಹ ತಂತ್ರಗಳಲ್ಲೊಂದು: ಪಾತ್ರಗಳು ಕ್ಯಾಮೆರಾ ನೋಡುತ್ತಾ ಪ್ರೇಕ್ಷಕರೊಂದಿಗೆ ಮಾತನಾಡುವುದು. ಈ ಬಗೆಯ ತಂತ್ರವನ್ನು ಯೋಚಿಸಿಯೂ ನೋಡಿರದಿದ್ದ ಪ್ರೇಕ್ಷಕರು ಇಂತಹ ಸಂಭಾಷಣೆಗಳ್ನು ಕೇಳಿ ಪುಲಕಗೊಂಡರು. ಖ್ಯಾತ ನಾಟಕಕಾರ ಬರ್ಟೊಲ್ಟ್ ಬ್ರೆಕ್ಟ್‌ನ ನಾಟಕ ಸಿದ್ಧಾಂತಗಳಿಂದ ಪ್ರಭಾವಿತವಾದ ಗೊಡಾರ್ಡ್‌ನಂತಹ ನಿರ್ದೇಶಕರು ಅವನ ತಂತ್ರಗಳನ್ನು ಸಿನಿಮಾಗಳಲ್ಲಿ ಬಳಸತೊಡಗಿದರು. ಪ್ರೇಕ್ಷಕರನ್ನು ಸದಾ ಎಚ್ಚರದಲ್ಲಿರಿಸುವ ಮತ್ತು ಅವರುಗಳು ಇಲ್ಲಿಗೆ ಬಂದಿರುವುದು ಚಲನಚಿತ್ರ ನೋಡಲೇ ಹೊರತು ಕಲ್ಪನಾ ವಿಲಾಸದಲ್ಲಿ ತೇಲಲು ಅಲ್ಲ ಎನ್ನುವುದನ್ನು ನೆನಪಿಸಲು ಇವರು ಆ ತಂತ್ರ ಬಳಸುತ್ತಿದ್ದರು. ಕಥೆಯ ಓಘದಲ್ಲಿ ಕಳೆದುಹೋಗದೆ ಅಥವಾ ಕಥೆಯೊಂದಿಗೆ ತಮ್ಮನ್ನು ತಾವು ಸಮೀಕರಿಸಿಕೊಳ್ಳದೆ ಸಿನಿಮಾವನ್ನು ಸಿನಿಮಾವಾಗಿಯೇ ನೋಡುತ್ತಾ ಅದನ್ನು ವಿಮರ್ಶಿಸಲು, ಅರ್ಥ ಮಾಡಿಕೊಳ್ಳಲು ಈ ಹೊಸ ಅಲೆ ಸಿನಿಮಾ ಪ್ರೇಕ್ಷಕರನ್ನು ಒತ್ತಾಯಿಸುವ ಪರಿ ಅನನ್ಯ.

ಹೀಗೆ ಕಥಾವಸ್ತು, ಚಿತ್ರಕಥೆ, ಪಾತ್ರಗಳು ಎಂದು ಸಿನಿಮಾದ ಎಲ್ಲಾ ವಿಭಾಗಗಳನ್ನು ಹೊಸದಾಗಿ ಕಟ್ಟಿದ ಇವರ ಪ್ರಯತ್ನಗಳು ಮೆಲ್ಲಗೆ ಜಗತ್ತಿನೆಲ್ಲೆಡೆ ಹರಡಿಕೊಂಡವು. ಜಗತ್ತಿನ ಇತಿಹಾಸದಲ್ಲಿ ಎಂದೂ ಅಳಿಸಲಾಗದಂತಹ 1968ರ ಫ್ರೆಂಚ್ ವಿದ್ಯಾರ್ಥಿ ಕ್ರಾಂತಿಗೆ ಈ ಹೊಸ ಅಲೆ ಸಿನಿಮಾವೇ ವೇದಿಕೆಯಾಗಿತ್ತು

ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೂ ಮೂಲ ಇದೇ ಹೊಸ ಅಲೆ ಸಿನಿಮಾವೇ! ರಿಡೌಟಬಲ್‌ ಸಿನಿಮಾದಲ್ಲಿ ಅದರ ನಾಯಕ ಗೊಡಾರ್ಡ್‌ ಸತ್ತಿದ್ದಾನೆ ಎಂದು ಅವನ ಪಾತ್ರವೇ ಹೇಳುವ ದೃಶ್ಯವಿದೆ. ಆದರೆ, ಇಂತಹ ಸಿನಿಮೋತ್ಸವಗಳು ಮತ್ತೆ ಮತ್ತೆ ಸಾರುತ್ತವೆ– ಅವನು ಇಂದಿನ ಮತ್ತು ಎಂದಿನ ಹೊಸ ಅಲೆಯಲ್ಲೂ ಇದ್ದೇ ಇರುವವ ಮೌನ ರಿಂಗಣ ಚಿತ್ರಣವಾಗಿ

ಅಂತ.⇒v

ಕತ್ತಲಹೊದಿಕೆಯೊಳು ಮಿಣಮಿಣ ಬೆಳಕು!

ಚಿತ್ರಮಂದಿರದಲ್ಲಿ ಗವ್ವೆನ್ನುವ ಕತ್ತಲು. ಪರದೆಯ ಬೆಳಕಿನಾಟ ಬಿಟ್ಟರೆ ಮತ್ತಲ್ಲಿ ಹೊಳೆಯುವ ಎಳೆಯಿಲ್ಲ. ಕುರ್ಚಿಗಳ ಸಾಲಿನಲ್ಲಿ ತಲೆಗಳು. ಚಿತ್ರದ ಕಡೆಗೆ ಗಮನ. ಆದರೆ ಇದ್ದಕ್ಕಿದ್ದಂತೆ ಸರಬರ ಸದ್ದು. ಅಲ್ಲಲ್ಲಿ ಮಿಣಮಿಣ ಬೆಳಕು ಮೊಬೈಲ್‌ ಫೋನ್ ಪರದೆಯಲ್ಲಿ ಮಿಂಚತೊಡಗಿದ್ದವು.

ಊರ್ಧ್ವಮುಖಿಯಾಗಿದ್ದ ಫೋನು ಅಲ್ಲಲ್ಲೇ ಮತ್ತೆ ಮುಖಮರೆಮಾಡಿಕೊಳ್ಳುತ್ತಿದ್ದವು. ಹಿಂದಿನ ಸಾಲಿನಿಂದ ಪಿಸಪಿಸ ಮಾತುಗಳು. ಗುಸುಗುಸು... ಮುಂದಿನ ಚಿತ್ರ ಯಾವುದು, ಸ್ಕ್ರೀನ್‌ ಯಾವುದು ಎಂಬ ಚರ್ಚೆ ಸಣ್ಣಗೆ... ಎರಡು ತಲೆಗಳಲ್ಲಿ ಒಂದು ಪರ್ಸು ತಡಕಾಡುತ್ತಿದ್ದರೆ ಇನ್ನೊಂದು ಮೆಸೇಜು ನೋಡುವುದರಲ್ಲಿ ತಲ್ಲೀನ.

ಆಗೆಲ್ಲ ಪರದೆಯಿಂದ ನರಳಾಟ, ಮುಲುಗಾಟ. ಉಸಿರಾಟದ ಜುಗಲ್‌ಬಂದಿ. ಪ್ರದರ್ಶನಕ್ಕೆ ಬಂದ ಚಿತ್ರಗಳಲ್ಲಿ ಮಿಥುನ ಖುಲ್ಲಂಖುಲ್ಲಾ ಕ್ರಿಯೆಯಾಗಿತ್ತು. ಹರೆಯದವರು ಅದೊಂದು ಕ್ರಿಯೆಯೆಂಬಂತೆ ಪರದೆಯತ್ತ ಕಣ್‌ ನೆಟ್ಟಿದ್ದರೆ ಅವರೊಟ್ಟಿಗೆ ಬಂದ ಅಮ್ಮ, ಅಪ್ಪ, ಅಣ್ಣ ಮುಂತಾದವರು ಮುಜುಗರ ಅನುಭವಿಸುತ್ತ ಪರ್ಸು ತಡಕಾಡುತ್ತಿದ್ದರು. ಹಸಿದವರಂತೆ ಹೊರಹೋಗಿ ಜೂಸು ಹಿಡಿದುಕೊಂಡು ಬರುತ್ತಿದ್ದರು. ಪಾಪ್‌ಕಾರ್ನ್‌ (ಪಾಪ ಕಾರಣ) ತರಲು ಎದ್ದು ಹೋಗುತ್ತಿದ್ದರು. ಸಿನಿಮಾದ ಓಟಕ್ಕೆ, ಓಘಕ್ಕೆ ಎಲ್ಲೂ ನಡುವೆ ತುರುಕದಂತೆ ಮಿಥುನದ ದೃಶ್ಯ ಅಡಕವಾಗಿರುತ್ತಿದ್ದವು. ಅವು ಅನಿವಾರ್ಯವೇ ಆಗಿದ್ದರಿಂದ ಕಥಾ ಹಂದರದಲ್ಲಿ ತೊಡಕೇನೂ ಬರುತ್ತಿರಲಿಲ್ಲ.

ಸಿನಿಮಾ ನೋಡುಗರಲ್ಲಿ ಬೆಳಕಿನ ಸಂಚಲನವಂತೂ ಬರುತ್ತಿತ್ತು. ನೋಡಬೇಕೆ, ನೋಡಬಾರದೇ, ತಲೆ ತಗ್ಗಿಸಬೇಕೆ? ಕಲ್ಲಾಗಿ ನೋಡಬೇಕೆ? ಎದ್ದು ಹೋಗಬೇಕೆ? ಇಂಥವೇ ಪ್ರಶ್ನೆಗಳು ಮನಸಿನಲ್ಲಿ ಮೂಡುವಾಗಲೇ ಆ ಕ್ರಿಯೆ ಮುಗಿದು ಹೋಗಿರುತ್ತಿತ್ತು. ಮತ್ತೆ ಗವ್ವೆನ್ನುವ ಕತ್ತಲೆಯಲ್ಲಿ ಈ ಮಿಣುಕು ಹುಳಗಳು ಕಣ್ಮುಚ್ಚಿ, ಅವುಗಳ ಒಡೆಯ, ಒಡತಿಯರು ಪರದೆ ಕಡೆಗೆ ನೋಡುವಂತೆ ಮಾಡುತ್ತಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry