ಸವಾಲಿನ ರಾಜಕೀಯಕ್ಕೆ ಸಿದ್ಧವಾಗುತ್ತಿದೆ ವೇದಿಕೆ

7
ಬಂಟ್ವಾಳದಲ್ಲಿ ಮುಂದುವರಿದಿದೆ ಬಿಜೆಪಿಯ ಶತಪ್ರಯತ್ನ

ಸವಾಲಿನ ರಾಜಕೀಯಕ್ಕೆ ಸಿದ್ಧವಾಗುತ್ತಿದೆ ವೇದಿಕೆ

Published:
Updated:
ಸವಾಲಿನ ರಾಜಕೀಯಕ್ಕೆ ಸಿದ್ಧವಾಗುತ್ತಿದೆ ವೇದಿಕೆ

ಮಂಗಳೂರು: ಕಲ್ಲಡ್ಕ ಗಲಭೆಯ ಸಂದರ್ಭದಲ್ಲಿ ಸಚಿವ ಬಿ. ರಮಾನಾಥ ರೈ ಅವರು ‘ತಾಕತ್ತಿದ್ದರೆ ಬಂಟ್ವಾಳದಲ್ಲಿ ಚುನಾವಣೆ ಗೆಲ್ಲಿ’ ಎಂದು ಬಿಜೆಪಿಗೆ ಸವಾಲು ಹಾಕಿರುವ ಹಿನ್ನೆಲೆಯಲ್ಲಿ ಕರಾವಳಿಯ ಬಂಟ್ವಾಳ ಕ್ಷೇತ್ರ ಈ ಬಾರಿಯ ಚುನಾವಣೆ ಸಂದರ್ಭ ಹೆಚ್ಚು ಗಮನ ಸೆಳೆಯಲಿದೆ.

ಏಳುಬಾರಿ ಚುನಾವಣೆ ಎದುರಿಸಿ ಆರು ಬಾರಿ ಗೆಲುವು ಕಂಡಿರುವ ರಮಾನಾಥ ರೈ ಅವರನ್ನು ಮಣಿಸುವ ನಿಟ್ಟಿನಲ್ಲಿ ಬಿಜೆಪಿ ಆರು ತಿಂಗಳ ಹಿಂದೆಯೇ ತಳಮಟ್ಟದ ಕೆಲಸಗಳನ್ನು ಶುರು ಮಾಡಿತ್ತು. ‘ಸಂಸದೆ ಶೋಭಾ ಕರಂದ್ಲಾಜೆ ಮತ್ತು ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ಉದ್ದೇಶಿಸಿ ಸಚಿವರು ಹಾಕಿದ ಸವಾಲಿಗೆ ಪ್ರತಿಯಾಗಿ ‘ಕೇವಲ ಸಾಮಾನ್ಯ ವ್ಯಕ್ತಿಯನ್ನು ನಿಲ್ಲಿಸಿ ಕ್ಷೇತ್ರವನ್ನು ಗೆಲ್ಲುತ್ತೇವೆ’ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿತ್ತು. ಆ ನಿಟ್ಟಿನಲ್ಲಿಯೇ ಉಳಿಪಾಡಿ ಗುತ್ತು ರಾಜೇಶ್‌ ನಾಯ್ಕ್‌ ಅವರನ್ನು ಅಭ್ಯರ್ಥಿಯನ್ನಾಗಿಯೇ ಬಿಂಬಿಸಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಲ್ಲವಾದ್ದರಿಂದ ಬಂಟ್ವಾಳ ಕ್ಷೇತ್ರದಲ್ಲಿಯೂ ಪಕ್ಷದ ಪ್ರಮುಖರು ಟಿಕೆಟ್‌ ಆಕಾಂಕ್ಷೆಯಲ್ಲಿದ್ದಾರೆ. ಆದರೆ ಸಚಿವ ರಮಾನಾಥ ರೈ ಅವರ ಸವಾಲಿನ ಹೇಳಿಕೆಯ ದಿನದಿಂದಲೂ ರಾಜೇಶ್‌ ನಾಯ್ಕ್‌ ತಳಮಟ್ಟದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಅಮಿತ್‌ ಶಾ ಅವರು ಬಂಟ್ವಾಳಕ್ಕೆ ಭೇಟಿ ನೀಡಿದ್ದಾಗಲೂ, ಸಮಾವೇಶದ ಉಸ್ತುವಾರಿ, ಶಾ ಸ್ವಾಗತದ ಹೊಣೆಯನ್ನು ರಾಜೇಶ್‌ ಅವರೇ ಹೊತ್ತುಕೊಂಡಿದ್ದರು. ಕಾರ್ಯಕರ್ತರ ಸಮಾವೇಶದ ಬಳಿಕ ಬಂಟ್ವಾಳದ ಬಿಜೆಪಿ ಘಟಕದಲ್ಲಿ ಒಮ್ಮತದ ನಡೆಯನ್ನೂ ಸ್ಥಳೀಯರು ಗುರುತಿಸುತ್ತಿದ್ದಾರೆ.

ಒಡ್ಡೂರು ಪಾರ್ಮ್ಸ್‌ನಲ್ಲಿ ಸಾವಯವ ಕೃಷಿ ನಡೆಸುವ ಮೂಲಕ ಸಜ್ಜನ ಕೃಷಿಕನೆಂದೇ ಗುರುತಿಸಿಕೊಂಡಿರುವ ರಾಜೇಶ್‌ ನಾಯ್ಕ್‌ ಕೂಡ ಸ್ಥಳೀಯ ಕಾರ್ಯಕ್ರಮಗಳಲ್ಲಿ ಅದರಲ್ಲಿಯೂ ಕೃಷಿ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಬೆರೆಯಲು ಆಸಕ್ತಿ ತೋರುತ್ತಿದ್ದರು. ಸೌಮ್ಯ ಸ್ವಭಾವದ, ಧಾರ್ಮಿಕ ನಾಯಕತ್ವದತ್ತ ಒಲವು ಹೊಂದಿರುವ ರಾಜೇಶ್‌ ನಾಯಕ್‌ ದ್ವೇಷದ ಭಾಷಣ, ಕುತ್ಸಿತ ಹೇಳಿಕೆಗಳಿಂದ ದೂರ ಉಳಿದವರು. ಉಗ್ರ ಹೇಳಿಕೆಗಳ ನಾಯಕರನ್ನು ನಿಭಾಯಿಸುವುದೇ ಬಿಜೆಪಿಗೆ ಸದ್ಯದ ಸವಾಲಾಗಿರುವಾಗ, ಸಜ್ಜನಿಕೆಯ ರಾಜಕಾರಣಿಯ ಅವಶ್ಯಕತೆಯೂ ಪಕ್ಷಕ್ಕಿದೆ ಎಂಬ ಅರಿವು ಮುಖಂಡರಲ್ಲಿದೆ.

ಸಚಿವ ರೈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪಕ್ಷ ಬೂತ್‌ ಮಟ್ಟದ ಸಮಾವೇಶವನ್ನು ನಿರಂತರ ಆಯೋಜಿಸಿದ್ದು, ಸಚಿವ ಡಿ.ವಿ. ಸದಾನಂದ ಗೌಡರೂ ಆಸಕ್ತಿ ವಹಿಸಿದ್ದರು. ಕಳೆದ ವರ್ಷ ವಿವಿಧ ಸಂಘ ಸಂಸ್ಥೆಗಳು ನಡೆಸುವ ಕೆಸರುಗದ್ದೆಯ ಕಾರ್ಯಕ್ರಮಗಳು, ಕೃಷಿ ಪ್ರಧಾನ ಚಟುವಟಿಕೆಗಳು, ಧಾರ್ಮಿಕ ಸಮಾವೇಶಗಳಲ್ಲಿ ರಾಜೇಶ್‌ ನಾಯ್ಕ್‌ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ ಎಂಬ ಪಾದಯಾತ್ರೆಯನ್ನು ಜನವರಿ 14ರಿಂದ 26ರವರೆಗೆ ನಡೆಸಿ, ಚುನಾವಣಾ ಪೂರ್ವ ಅಭಿಯಾನವನ್ನೂ ನಡೆಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರ ಯಡವಟ್ಟು ಹೇಳಿಕೆಗಳು, ನಡೆಗಳೂ ಸ್ಥಳೀಯರಲ್ಲಿ ಅಸಮಾಧಾನ ಮಾಡಿಸಿರುವುದು ಬಿಜೆಪಿಗೆ ಪೂರಕವಾಗಿ ಪರಿಣಮಿಸುವ ಸಾಧ್ಯತೆಯೂ ಇಲ್ಲದಿಲ್ಲ. ಉದಾಹರಣೆಗೆ ಕಲ್ಲಡ್ಕ ಶ್ರೀರಾಮ ವಿದ್ಯಾಲಯಕ್ಕೆ ಬಿಸಿಯೂಟಕ್ಕಾಗಿ ಕೊಲ್ಲೂರು ದೇವಸ್ಥಾನದ ನೆರವು ನಿಂತ ಸಂದರ್ಭದ ಚರ್ಚೆಗಳು ಸಚಿವ ರಮಾನಾಥ ರೈ ಅವರ ವಿರುದ್ಧದ ಅಲೆಗಳನ್ನು ಸೃಷ್ಟಿ ಮಾಡಿವೆ. ಬಂಟ್ವಾಳ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರ ತವರು ಕ್ಷೇತ್ರ. ಜನಾರ್ದನ ಪೂಜಾರಿ ಅವರನ್ನು ಪಕ್ಷದಲ್ಲಿ ನಿರ್ಲಕ್ಷಿಸಿದ ಘಟನೆ ಬಿಲ್ಲವರಲ್ಲಿ ಬೇಸರ ಮೂಡಿಸಿದ್ದುಂಟು. ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸುವಂತೆ ಸಚಿವರು ಎಸ್ಪಿ ಅವರನ್ನು ಕುಳ್ಳಿರಿಸಿ ಬೈದಾಡಿದ ವಿಡಿಯೊ ಕೂಡ ವೈರಲ್‌ ಆಗಿ ಮುಜುಗರದ ಪರಿಸ್ಥಿತಿ ಸೃಷ್ಟಿಯಾಗಿತ್ತು.

***

ಬಿಜೆಪಿಗೂ ಇದೆ ನೆಲೆ

ಬಂಟ್ವಾಳ ವಿಧಾನ ಸಭೆ ಕ್ಷೇತ್ರದಲ್ಲಿ ಪ್ರಸ್ತುತ ಸಚಿವರಾಗಿರುವ ರಮಾನಾಥ ರೈ ಏಳು ಬಾರಿ ಕ್ಷೇತ್ರದಲ್ಲಿ ಚುನಾವಣೆ ಎದುರಿಸಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1985ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಬಳಿಕ ನಾಲ್ಕು ಬಾರಿ ಗೆಲುವಿನ ದಾರಿಯೇ ತುಳಿದಿದ್ದರು. 2004ರಲ್ಲಿ ಬಿಜೆಪಿಯ ನಾಗರಾಜ ಶೆಟ್ಟಿ ವಿರುದ್ಧ ಸೋಲು ಉಣ್ಣಬೇಕಾಯಿತು. ಮತ್ತೆ 2008 ಹಾಗೂ 213ರಲ್ಲಿ ವಿಜಯ ಸಾಧಿಸಿ ಕ್ಷೇತ್ರದ ಪ್ರಬಲ ನಾಯಕರಾಗಿ ಮೂಡಿಬಂದಿದ್ದಾರೆ. ಒಟ್ಟು 13 ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 10 ಬಾರಿ, ಬಿಜೆಪಿ ಎರಡು ಬಾರಿ, ಒಂದು ಬಾರಿ ಸಿಪಿಐ ಈ ಕ್ಷೇತ್ರವನ್ನು ಪ್ರತಿನಿಧಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry