‘ಜೆಡಿಎಸ್‌– ಬಿಎಸ್‌ಪಿ ಮೈತ್ರಿ ಹಿಂದೆ ಬಿಜೆಪಿ ಕೈವಾಡ’

7

‘ಜೆಡಿಎಸ್‌– ಬಿಎಸ್‌ಪಿ ಮೈತ್ರಿ ಹಿಂದೆ ಬಿಜೆಪಿ ಕೈವಾಡ’

ಡಿ.ಉಮಾಪತಿ
Published:
Updated:
‘ಜೆಡಿಎಸ್‌– ಬಿಎಸ್‌ಪಿ ಮೈತ್ರಿ ಹಿಂದೆ ಬಿಜೆಪಿ ಕೈವಾಡ’

ಕೇರಳದ ಲೋಕಸಭಾ ಸದಸ್ಯ ಕೆ.ಸಿ.ವೇಣುಗೋಪಾಲ್ ಅವರಿಗೆ ಕರ್ನಾಟಕ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ಒಪ್ಪಿಸಿ ವರ್ಷವೂ ಉರುಳಿಲ್ಲ. ರಾಹುಲ್ ಗಾಂಧಿ ವಿಶ್ವಾಸಿ ಎನ್ನಲಾಗಿರುವ ವೇಣುಗೋಪಾಲ್, ಮೊದಲ ದಿನದಿಂದಲೇ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಪರಿಶ್ರಮ ವಹಿಸಿದ್ದಾರೆ. ಮತಗಟ್ಟೆ ಹಂತಕ್ಕೆ ಪ್ರವಾಸ ಮಾಡಿದ ಮೊದಲ ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂಬ ಮಾತಿದೆ. ಇತ್ತೀಚಿನ ದಶಕಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಈ ಬಗೆಯ ಸಾಂಸ್ಥಿಕ ಸಕ್ರಿಯತೆ ಕಂಡಿಲ್ಲ. ‘ಮತಗಟ್ಟೆಯ ಹಂತದವರೆಗಿನ ನಮ್ಮ ಈ ಮೈಕ್ರೊ ಪ್ಲ್ಯಾನಿಂಗ್ ಹೆಚ್ಚು ಮತಗಳನ್ನು ಗಳಿಸಿಕೊಡಲಿದೆ’ ಎನ್ನುತ್ತಾರೆ ವೇಣುಗೋಪಾಲ್‌. ಅವರ ಜೊತೆ ‘ಪ್ರಜಾವಾಣಿ’ ಪ್ರಶ್ನೋತ್ತರ:

* ಕರ್ನಾಟಕದ ಜನರ ರಾಜಕೀಯ ನಡವಳಿಕೆ ಇತರ ರಾಜ್ಯಗಳಿಗಿಂತ ಹೇಗೆ ಭಿನ್ನ?

ಕರ್ನಾಟಕದ ಜನ ಬಹಳ ಪ್ರಬುದ್ಧರು. ಕೋಮುವಾದ ಇಲ್ಲಿ ನಡೆಯುವುದಿಲ್ಲ. ಅವರನ್ನು ತಪ್ಪುದಾರಿಗೆ ಎಳೆಯುವುದು ಸಾಧ್ಯವಿಲ್ಲ. ಬಿಜೆಪಿ ನಿರೀಕ್ಷಿಸುತ್ತಿರುವ ಕೋಮು ಆಧಾರಿತ ಧ್ರುವೀಕರಣ ಕರ್ನಾಟಕದಲ್ಲಿ ಆಗುವುದಿಲ್ಲ. ಕರಾವಳಿ ಜಿಲ್ಲೆಗಳೂ ಸೇರಿದಂತೆ ಒಟ್ಟಾರೆ ಕಾಂಗ್ರೆಸ್ ಪರ ವಾತಾವರಣ ಇದೆ.

* ಕರ್ನಾಟಕದಲ್ಲಿ ಮತ್ತೆ ಆರಿಸಿಬರುವ ನಿಮ್ಮ ವಿಶ್ವಾಸಕ್ಕೆ ಕಾರಣಗಳೇನು?

ಎರಡು ಸಂಗತಿಗಳಿವೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಬೇರುಮಟ್ಟ ತಲುಪಿವೆ. ಹಿಂದಿನ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿ ಚುನಾವಣೆಗಳಲ್ಲಿ ಮೋದಿ ಆಶೋತ್ತರಗಳ ಕೇಂದ್ರವಾಗಿದ್ದರು. ಜನ ತಮ್ಮ ಬದುಕು ಬದಲಾಗಲಿದೆ ಎಂದು ನಂಬಿದ್ದರು. ಅವರ ನಿರೀಕ್ಷೆಗಳು ಹುಸಿಯಾಗಿವೆ. ಜನಕ್ಕೆ ಗೊತ್ತಾಗತೊಡಗಿದೆ. ಈ ನಡುವೆ ದೇಶದಾದ್ಯಂತ ಕಾಂಗ್ರೆಸ್ ಮರಳುತ್ತಿರುವ ಸೂಚನೆಗಳು ಮೂಡಿವೆ.

* ಮಾಯಾವತಿ ಅವರ ಬಿಎಸ್‌ಪಿ ಮತ್ತು ಜಾತ್ಯತೀತ ಜನತಾದಳದ ನಡುವಣ ಮೈತ್ರಿ ಕಾಂಗ್ರೆಸ್ ಮತಗಳನ್ನು ಕಸಿಯುವುದಿಲ್ಲವೇ?

ಈ ಮೈತ್ರಿಯ ಹಿಂದೆ ಬಿಜೆಪಿಯ ತಂತ್ರವಿದೆ. ಕಾಂಗ್ರೆಸ್ ಪಾಲಿನ ಸೆಕ್ಯುಲರ್ ಮತಗಳನ್ನು ಒಡೆಯಲು ಹಣ ಮತ್ತು ಅಧಿಕಾರ ಎರಡನ್ನೂ ಬಿಜೆಪಿ ಧಾರಾಳವಾಗಿ ಬಳಸುತ್ತಿದೆ. ಮುಸ್ಲಿಂ ಮತಗಳ ದಿಕ್ಕುತಪ್ಪಿಸಲು ಹೈದರಾಬಾದ್ ಮೂಲದ ಮುಸ್ಲಿಂ ಪಕ್ಷವೊಂದನ್ನು ಮತ್ತು ಮಹಿಳಾ ಪ್ರಧಾನ ಎಂದು ಹೇಳಿಕೊಳ್ಳುತ್ತಿರುವ ಮತ್ತೊಂದು ಪಾರ್ಟಿಯನ್ನು ಎತ್ತಿಕಟ್ಟಲಾಗುತ್ತಿದೆ. ಆದರೆ ದಲಿತರು ಮತ್ತು ಅಲ್ಪಸಂಖ್ಯಾತರು ಬಿಜೆಪಿಗಾಗಲೀ, ಜೆಡಿಎಸ್‌ಗಾಗಲೀ ಮತ ಹಾಕುವುದಿಲ್ಲ. ಬಿಎಸ್‌ಪಿ ತಾನೇ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಆಯಾ ಕ್ಷೇತ್ರದಲ್ಲಿ ಪ್ರಾಯಶಃ ಒಂದು-ಒಂದೂವರೆ ಸಾವಿರ ಮತಗಳನ್ನು ಗಳಿಸುತ್ತಿತ್ತು. ಈಗ ಜೆಡಿಎಸ್ ಜೊತೆ ಸೇರಿರುವ ಕಾರಣ ಅದೂ ಗಿಟ್ಟುವುದಿಲ್ಲ. ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ನೇರ ಹೋರಾಟ. ಜೆಡಿಎಸ್‌ಗೆ ಹೆಚ್ಚು ಸೀಟುಗಳು ಸಿಗುವುದಿಲ್ಲ. ಹಳೆಯ ಮೈಸೂರು ಪ್ರದೇಶದಲ್ಲಿ ದೇವೇಗೌಡರಿಗೆ ಬೆಂಬಲದ ನೆಲೆ ಇದೆ. ಅದನ್ನು ಅಲ್ಲಗಳೆಯುತ್ತಿಲ್ಲ.

ಕಾಂಗ್ರೆಸ್ಸೇತರ ಪಕ್ಷಗಳನ್ನು ಬಲಪಡಿಸಿ ಪ್ರತಿಪಕ್ಷವನ್ನು ದುರ್ಬಲಗೊಳಿಸುವುದು ಬಿಜೆಪಿಯ ತಂತ್ರ. ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ಹೂಡಿದ್ದು ಇದೇ ತಂತ್ರವನ್ನು. ಆದರೆ ಕರ್ನಾಟಕದ ಜನರಿಗೆ ಈ ಹುನ್ನಾರ ಅರ್ಥ ಆಗಿದೆ.

* 1984ರ ನಂತರ ರಾಜ್ಯದಲ್ಲಿ ಯಾವ ಪಕ್ಷಕ್ಕೂ ಸತತ ಎರಡನೆಯ ಬಾರಿ ಬಹುಮತ ಸಿಕ್ಕಿಲ್ಲವಲ್ಲ?

ಈ ಸಲ ಈ ದಾಖಲೆಯನ್ನು ನಾವು ಮುರಿಯಲಿದ್ದೇವೆ. ವಾತಾವರಣ ಬಹಳ ಚೆನ್ನಾಗಿದೆ. ಕಾಂಗ್ರೆಸ್‌ಗೆ ಅನುಕೂಲಕರವಾಗಿದೆ.

* ನಿಮ್ಮ ಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗಿಂತ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ, ಆದರೆ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ರಚಿಸಲಿವೆ ಎಂಬ ಮಾತಿದೆ, ಸರಿಯೇ?

ನೋ ನೋ ನೋ.... ಯಾರು ಹಾಗೆ ಹೇಳುತ್ತಾರೆ... ಯಾರು, ನೀವು ಹೇಳುತ್ತೀರಾ? ಬಿಜೆಪಿ ತಿಪ್ಪರಲಾಗ ಹಾಕಿದರೂ ಸರ್ಕಾರ ರಚಿಸುವುದು ಕಾಂಗ್ರೆಸ್ಸೇ. ಅದೂ ನಮ್ಮದೇ ಬಲದ ಮೇಲೆ. ರಾಹುಲ್‌ಜೀ ಅವರ ಮುಂದಿನ ಸುತ್ತಿನ ಕರ್ನಾಟಕ ಪ್ರವಾಸಕ್ಕೆ ನೀವು ಬಂದು ಕಣ್ಣಾರೆ ನೋಡಿ. ನಾನು ಖುದ್ದು ಎಷ್ಟೊಂದು ಚುನಾವಣೆಗಳನ್ನ ಫೈಟ್ ಮಾಡಿದ್ದೇನೆ, ನೋಡಿದ್ದೇನೆ. ಆದರೆ ಕಾಂಗ್ರೆಸ್ ಅಧ್ಯಕ್ಷರ ಕಲಬುರ್ಗಿ ಮತ್ತು ಮುಂಬೈ ಕರ್ನಾಟಕ ಪ್ರವಾಸದಲ್ಲಿ ವಿಶೇಷವಾಗಿ ಯುವಜನ ಮತ್ತು ಮಹಿಳೆಯರ ಪ್ರತಿಕ್ರಿಯೆ ಅದ್ಭುತವಾಗಿತ್ತು. ನಾವೇ ನಿರೀಕ್ಷಿಸಿರಲಿಲ್ಲ, ಈ ಪ್ರವಾಸದ ಕೊನೆಯ ಸಭೆ ಮೊನ್ನೆ ಹುಬ್ಬಳ್ಳಿಯಲ್ಲಿ ಸಮಾವೇಶಗೊಂಡಾಗ ರಾತ್ರಿ 10.30. ಒಂದು ಲಕ್ಷ ಜನ ಸೇರಿದ್ದರು.

* ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಲೇ ಇಲ್ಲವೇ? ಐದು ವರ್ಷ ಆಳಿರುವ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಭಾವನೆ ಇರುವುದು ಸ್ವಾಭಾವಿಕ ಅಲ್ಲವೇ?

ಇದ್ದೀತು ಅಷ್ಟಿಷ್ಟು, ಅಲ್ಲಲ್ಲಿ ವ್ಯಕ್ತಿಗಳ ವಿರುದ್ಧ ಇರಬಹುದು. ಆದರೆ, ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಭಾವನೆ ಇಲ್ಲ.

* ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲ ಆಗಿಸಿದೆ, ಹಲ್ಲು ಕಿತ್ತ ಹಾವಾಗಿಸಿದೆ ಎಂಬ ಟೀಕೆಯಿದೆ. ಲೋಕಾಯುಕ್ತದ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಶಾಖೆಯನ್ನು ರದ್ದು ಮಾಡಿ, ಮುಖ್ಯಮಂತ್ರಿಗೆ ವರದಿ ಮಾಡಿಕೊಳ್ಳುವ ಭ್ರಷ್ಟಾಚಾರ ನಿಗ್ರಹ ದಳವನ್ನು ಪ್ರತ್ಯೇಕವಾಗಿ ರಚಿಸಿದ್ದು ನಿಮಗೆ ಸರಿ ಕಾಣುತ್ತದೆಯೇ?

ಹಾಗೆಲ್ಲ ದುರ್ಬಲಗೊಳಿಸುವುದು ಹೇಗೆ ಸಾಧ್ಯ? ವಿವರ ನನಗೆ ಗೊತ್ತಿಲ್ಲ. ಕೇಂದ್ರದಲ್ಲಿ ಲೋಕಪಾಲ ತಂದಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಲ್ಲವೇ? ನಾಲ್ಕು ವರ್ಷಗಳಿಂದ ಮೋದಿ ಆಡಳಿತದಲ್ಲಿ ಲೋಕಪಾಲದ ಸುದ್ದಿಯೇ ಇಲ್ಲ. ನಾವು ಮಸೂದೆ ತಂದಿದ್ದೆವು. ಒಂದು ತಿದ್ದುಪಡಿ ಬೇಕಿತ್ತು ಅಷ್ಟೆ. ನೀವು ಮೀಡಿಯಾದವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಯಾಕೆ ಸ್ವಾಮಿ?

* ‘ಅಸ್ಪೃಶ್ಯ’ ದಲಿತ ಒಳಪಂಗಡಗಳಿಗೆ ನ್ಯಾಯ ಒದಗಿಸುವ ಕುರಿತು ನ್ಯಾಯಮೂರ್ತಿ ಸದಾಶಿವ ಅವರ ಒಳಮೀಸಲಾತಿ ಕುರಿತ ವರದಿ ಜಾರಿ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಲಂಬಾಣಿ, ಬೋವಿ, ಕೊರಮ ಕೊರಚ ಮುಂತಾದ ಸೃಶ್ಯ ಪರಿಶಿಷ್ಟ ಜಾತಿಗಳನ್ನು ಪಟ್ಟಿಯಿಂದ ಕೈ ಬಿಟ್ಟರೆ ಉಂಟಾಗುವ ವೋಟುಗಳ ನಷ್ಟವನ್ನು ಹೇಗೆ ತುಂಬಿಸಿಕೊಳ್ಳುವಿರಿ?

ಮೀಸಲಾತಿ ಅಗತ್ಯವಿರುವ ಮತ್ತು ಅರ್ಹತೆಯಿರುವ ಯಾವ ಜಾತಿಗಳನ್ನೂ ಪಟ್ಟಿಯಿಂದ ಕೈ ಬಿಡುವುದಿಲ್ಲ.

* ವಿವಾದಗ್ರಸ್ತ ಎತ್ತಿನಹೊಳೆ (ನೇತ್ರಾವತಿ ತಿರುವು) ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿ ಉಂಟು ಮಾಡುವ ಈ ಯೋಜನೆ ಕರಾವಳಿಯ ಎರಡು ಜಿಲ್ಲೆಗಳ ಜನರ ವಿರೋಧವನ್ನು ಎದುರಿಸಿದೆ. ನಿಮ್ಮ ಅಭಿಪ್ರಾಯವೇನು?

ಈಗಾಗಲೇ ಈ ಯೋಜನೆ ಜಾರಿಯ ಹಂತದಲ್ಲಿದೆಯೇನು? ಆದರೆ, ನಮ್ಮ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಪರಿಸರಕ್ಕೆ ಹಾನಿ ಉಂಟು ಮಾಡಕೂಡದು ಎಂಬ ನಿಲುವಿನವರು.

* ಕಾವೇರಿ, ಮಹದಾಯಿ ನೀರು ಹಂಚಿಕೆಯಿರಬಹುದು, ಹಿಂದಿ ಹೇರಿಕೆ ಇರಬಹುದು, ರೈಲ್ವೆ ಮೂಲಸೌಲಭ್ಯ ಸುಧಾರಣೆಯೇ ಇದ್ದೀತು. ರಾಜ್ಯದ ಹಿತ ಕಾಯುವಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂಬ ಅಸಮಾಧಾನ ಕನ್ನಡಿಗರಲ್ಲಿ ನೆಲೆಯೂರತೊಡಗಿದೆ. ಹೇಗೆ ಪ್ರತಿಕ್ರಿಯಿಸುವಿರಿ?

ಮುಖ್ಯಮಂತ್ರಿ ಸಿದ್ದರಾಮಯ್ಯ ಹೋರಾಟಗಾರರು. ನಮ್ಮ ಜಲಸಂಪನ್ಮೂಲ ಮಂತ್ರಿ ಎಂ.ಬಿ.ಪಾಟೀಲ್‌ ಖುದ್ದು ಸುಪ್ರೀಂ ಕೋರ್ಟ್ ವಿಚಾರಣೆಗೆ ಹಾಜರಾಗಿ ಅತೀವ ಕಾಳಜಿ ತೋರಿದ್ದೂ ಇತ್ತೀಚಿನ ಕಾವೇರಿ ತೀರ್ಪಿನಲ್ಲಿ ಕರ್ನಾಟಕಕ್ಕೆ ಹೆಚ್ಚು ನೀರು ದೊರೆಯಲು ಕಾರಣವಾಯಿತು. ರಾಷ್ಟ್ರೀಯ ಪಕ್ಷವಾಗಿ ಗೋವಾದ ಹಿತವನ್ನೂ ಕಾಂಗ್ರೆಸ್ ಬಯಸುವುದು ಹೌದು. ಆದರೆ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಎಂಬ ನೀತಿಯನ್ನು ನಾವು ಎತ್ತಿ ಹಿಡಿಯುತ್ತೇವೆ. ಕಾಂಗ್ರೆಸ್ ಅಧ್ಯಕ್ಷರೂ ಈ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿಂದೆ, ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಮಧ್ಯಸ್ಥಿಕೆ ವಹಿಸಿ ಚೆನ್ನೈಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಕೊಡಿಸಿದ ದಾರಿಯನ್ನು ಈಗಿನ ಪ್ರಧಾನಿ ಅನುಸರಿಸಬೇಕು. ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಾತಾಡಬೇಕು. ಕರ್ನಾಟಕ ನಮ್ಮ ಪಕ್ಷದ ಪಾಲಿನ ಬೆನ್ನೆಲುಬು. ಈ ರಾಜ್ಯದ ಕುರಿತು ಕಾಂಗ್ರೆಸ್ ಹೈಕಮಾಂಡ್‌ಗೆ ವಿಶೇಷ ಮಮತೆ. ಕಷ್ಟಕಾಲದಲ್ಲಿ ಇಂದಿರಾ ಗಾಂಧಿ ಅವರನ್ನು ಚಿಕ್ಕಮಗಳೂರಿನಿಂದ ಲೋಕಸಭೆಗೆ ಆರಿಸಿ ಕಳಿಸಿದ ರಾಜ್ಯವಿದು. ಈಗಲೂ ದೇಶದಾದ್ಯಂತ ‘ಕಾಂಗ್ರೆಸ್ ಪುನರಾಗಮನ’ದ ಆರಂಭ ಕರ್ನಾಟಕದಿಂದಲೇ ಆಗಲಿದೆ.

* ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಯಾಕೆ ಸೋಲಬೇಕೆಂದು ಬಯಸುವಿರಿ, ಅಧಿಕಾರ ಹಿಡಿಯುವ ಆಸೆ ಅಷ್ಟೇ ಅಲ್ಲವೇ?

ಮೋದಿ ನೇತೃತ್ವದ ಸರ್ಕಾರ ಕೇವಲ ನಾಟಕದ ಸರ್ಕಾರ. ರೈತರ ಸ್ಥಿತಿ ಶೋಚನೀಯ, ನಿರುದ್ಯೋಗ ತಾಂಡವ ಆಡಿದೆ, ಯುವಜನರು ಭ್ರಮನಿರಸನ  ಹೊಂದಿದ್ದಾರೆ. ಹಿಂದೂ- ಮುಸ್ಲಿಂ ಕೋಮು ಭಾವನೆ ಬಿತ್ತಿ ದೇಶವನ್ನು ಒಡೆಯಲಾಗುತ್ತಿದೆ. ರಾಜ್ಯದ ರೈತರ ಸಾಲ ಮನ್ನಾ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಹಕರಿಸಲಿಲ್ಲ.

* ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರಾ?

ಸಿದ್ದರಾಮಯ್ಯ ಸದ್ಯಕ್ಕೆ ವಿಧಾನಸಭಾ ಚುನಾವಣೆ ಸಮರದ ನಾಯಕತ್ವ ವಹಿಸಿದ್ದಾರೆ. ಚುನಾವಣೆ ನಂತರ ಶಾಸಕಾಂಗ ಪಕ್ಷದೊಂದಿಗೆ ಸಮಾಲೋಚಿಸಿ ನಾಯಕನ ಆಯ್ಕೆ ಮಾಡಲಿದೆ ಹೈಕಮಾಂಡ್. ಈ ವಿಷಯವನ್ನು ಸಂದೇಹಕ್ಕೆ ಎಡೆಯಿಲ್ಲದಂತೆ ವರಿಷ್ಠ ಮಂಡಳಿ ಸ್ಪಷ್ಟಗೊಳಿಸಿದೆ.

* ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರ ನಡುವಿನ ವೈಮನಸ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಮೇಲೆ ಅಡ್ಡಪರಿಣಾಮ ಬೀರುವ ವರದಿಗಳಿವೆ?

ವೈಮನಸ್ಯದ ಈ ಮಾತಿನಲ್ಲಿ ಸತ್ಯಾಂಶ ಇಲ್ಲ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.

ಮುಖ್ಯಾಂಶಗಳು

* ಅರ್ಹತೆಯಿರುವ ಯಾವ ಜಾತಿಗಳನ್ನೂ ಮೀಸಲಾತಿಯಿಂದ ಕೈ ಬಿಡುವುದಿಲ್ಲ

* ಕಾಂಗ್ರೆಸ್ ಪಕ್ಷದ ಬೆನ್ನೆಲುಬು ಕರ್ನಾಟಕ

* ರಾಜ್ಯದ ರೈತರ ಸಾಲ ಮನ್ನಾ ಮಾಡಲು ಮೋದಿ ಸಹಕರಿಸಲಿಲ್ಲ

* ಬಿಜೆಪಿ ತಿಪ್ಪರಲಾಗ ಹಾಕಿದರೂ ಸರ್ಕಾರ ರಚಿಸುವುದು ಕಾಂಗ್ರೆಸ್ಸೇ

* ಮೈಸೂರು ಸೀಮೆಯಲ್ಲಿ ದೇವೇಗೌಡರಿಗೆ ಬೆಂಬಲ ಇರೋದು ಹೌದು

* ಲೋಕಪಾಲ್ ಕುರಿತು ಮೋದಿ ಯಾಕೆ ಮೌನಿ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry