ಕರ್ತವ್ಯನಿರತ ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಪ್ರಕರಣ, ಒಬ್ಬನ ಬಂಧನ

7

ಕರ್ತವ್ಯನಿರತ ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಪ್ರಕರಣ, ಒಬ್ಬನ ಬಂಧನ

Published:
Updated:

ಹೊಸಪೇಟೆ: ಇಲ್ಲಿನ ಪಾಂಡುರಂಗ ಕಾಲೊನಿಯಲ್ಲಿ ಭಾನುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿರುವುದನ್ನು ನೋಡಿ, ಅದನ್ನು ತಡೆಯಲು ಹೋಗಿದ್ದ ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ನಡೆಸಿದ ನಾಲ್ವರ ಪೈಕಿ ಒಬ್ಬನನ್ನು ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ವೀರೇಶ್‌ ಬಂಧಿತ. ದೇವೇಂದ್ರ ಪೂಜಾರಿ, ಹನುಮಂತಪ್ಪ ಪೂಜಾರಿ ಹಾಗೂ ಸೋಮಶೇಖರ್‌ ತಲೆಮರೆಸಿಕೊಂಡಿದ್ದಾರೆ.

‘ಭಾನುವಾರ ರಾತ್ರಿ 11ಗಂಟೆ ಸುಮಾರಿಗೆ ಮುಖ್ಯ ಪೇದೆ ಮಲ್ಲಿಕಾರ್ಜುನ ಅವರು ಗಸ್ತಿನಲ್ಲಿದ್ದರು. ಈ ವೇಳೆ ಪಾಂಡುರಂಗ ಕಾಲೊನಿಯ ಕಮಾನಿನ ಬಳಿ ಜಗಳ ನಡೆಯುತ್ತಿತ್ತು. ಅದನ್ನು ಕಂಡ ಮಲ್ಲಿಕಾರ್ಜುನ ಅವರು ಜನರನ್ನು ಮನೆಗೆ ಹೋಗುವಂತೆ ಹೇಳಿದ್ದಾರೆ. ಆಗ ವೀರೇಶ್‌, ದೇವೇಂದ್ರ ಪೂಜಾರಿ, ಆತನ ಸಹೋದರ ಹನುಮಂತಪ್ಪ ಪೂಜಾರಿ ಹಾಗೂ ಸೋಮಶೇಖರ್‌ ಅವರು ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿದ್ದಾರೆ. ಅವರ ಸಮವಸ್ತ್ರದ ಕೊರಳ ಪಟ್ಟಿಗೆ ಕೈ ಹಾಕಿ, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಅದನ್ನು ತಡೆಯಲು ಹೋದ ಗೃಹರಕ್ಷಕ ದಳ ಸಿಬ್ಬಂದಿ ರಾಮಕೃಷ್ಣ ಅವರಿಗೆ ನಿಂದಿಸಿ, ಎಳೆದಾಡಿದ್ದಾರೆ’ ಎಂದು ಡಿವೈಎಸ್ಪಿ ಕೆ. ಶಿವಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಕಾರಣಕ್ಕೆ ನಾಲ್ವರ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry