ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಣ್ಣಿಗೂ ಸಿಗದ ಸುಳಿವು

12 ಕಡೆಗಳಲ್ಲಿ ಕಣ್ಗಾವಲು, ಕಿಡಿಗೇಡಿಗಳ ಕೃತ್ಯ ಶಂಕೆ– ತಾಪಮಾನ ಏರಿಕೆ, ಗಾಳಿಯ ರಭಸಕ್ಕೆ ಕಾಳ್ಗಿಚ್ಚು ಹತೋಟಿಗೆ ತರಲು ಹರಸಾಹಸ
Last Updated 6 ಮಾರ್ಚ್ 2018, 11:39 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ದುಬಾರೆ ಹಾಗೂ ಆನೆಕಾಡು ಮೀಸಲು ಅರಣ್ಯದಲ್ಲಿ ಈಗ ಸ್ಮಶಾನ ಮೌನ. ಕಳೆದ ನಾಲ್ಕು ದಿನಗಳ ಹಿಂದೆ
ಬಿದ್ದಿದ್ದ ಬೆಂಕಿಯ ಪರಿಣಾಮ ಈಗ ಗೋಚರಿಸುತ್ತಿದೆ. ಹೊತ್ತಿ ಉರಿದಿದ್ದ ಅರಣ್ಯ ಪ್ರದೇಶದಲ್ಲಿ ಬರೀ ಬೂದಿ, ಬೆಂದು ಹೋಗಿರುವ ಮರಗಳು, ಬೆಂಕಿಗೆ ಆಹುತಿಯಾದ ಬಿದಿರು...

ಕಾಡಿನಲ್ಲಿ ಮತ್ತೆ ಗಾಳಿಯ ರಭಸಕ್ಕೆ ಯಾವ ಕ್ಷಣದಲ್ಲಾದರೂ ಬೆಂಕಿ ಕಾಣಿಸುವ ಆತಂಕ ಮನೆ ಮಾಡಿದೆ. ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆ ಆಗುತ್ತಿರುವುದು ಅರಣ್ಯ ಸಿಬ್ಬಂದಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ. ಕೊಡಗು ಜಿಲ್ಲೆಯ ವಿವಿಧ ಅರಣ್ಯ ಪ್ರದೇಶದಲ್ಲಿ ಒಂದುವಾರದಿಂದ ಬಿದ್ದ ಬೆಂಕಿಗೆ ನೂರಾರು ಎಕರೆ ಅರಣ್ಯ ನಾಶವಾಗಿದೆ.

ಕಿಡಿಗೇಡಿಗಳ ಚಾಣಾಕ್ಷ ನಡೆ!: ಬೇಸಿಗೆ ಅವಧಿಯಲ್ಲಿ ಅರಣ್ಯಕ್ಕೆ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿತ್ತು. ಕಳೆದ ವರ್ಷ ಒಂದುವಾರ ಅತ್ತೂರು ಅರಣ್ಯ ಪ್ರದೇಶ ಹೊತ್ತಿ ಉರಿದಿತ್ತು. ನೂರಾರು ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿತ್ತು. ಆ ದುರ್ಘಟನೆಯಿಂದ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ ಈ ವರ್ಷ ದುಬಾರೆ ಹಾಗೂ ಅತ್ತೂರು ಮೀಸಲು ಅರಣ್ಯದ 12 ಸೂಕ್ಷ್ಮ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿತ್ತು. ಜತೆಗೆ, ರಾಷ್ಟ್ರೀಯ ಹೆದ್ದಾರಿ ಆಸುಪಾಸಿನಲ್ಲೂ ಕ್ಯಾಮೆರಾ ಕಣ್ಗಾವಲಿತ್ತು. ಆದರೂ, ಕಿಡಿಗೇಡಿಗಳು ಕೃತ್ಯ ಮೆರೆದಿದ್ದಾರೆ. ಕ್ಯಾಮೆರಾ ಕಣ್ತತಪ್ಪಿಸಿ ಬೆಂಕಿಯಿಟ್ಟಿರುವ ಶಂಕೆ ವ್ಯಕ್ತವಾಗಿದೆ.

ಉತ್ತರ ಕೊಡಗಿನಲ್ಲೇ ಹೆಚ್ಚು: ಇತ್ತೀಚೆಗೆ ಕೊಡಗಿನ ಉತ್ತರ ಭಾಗದಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿದೆ. ಅದಕ್ಕೆ ನಾನಾ ಕಾರಣಗಳಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸುತ್ತಾರೆ.

‘ಎಲ್ಲ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗಿದೆ. ಮೇಲ್ನೋಟಕ್ಕೆ ಕಿಡಿಗೇಡಿಗಳ ಕೃತ್ಯವೆಂದು ಗೊತ್ತಾಗಿದೆ. ಆದರೆ, ಯಾವ ಕ್ಯಾಮೆರಾದಲ್ಲೂ ಆ ದೃಶ್ಯ ಸೆರೆಯಾಗಿಲ್ಲ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕಾದಿದೆ ಶಿಕ್ಷೆ: ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕೊಡಗಿನ ಪರಿಸರ ನಾಶವಾಗುತ್ತಿದೆ ಎಂಬ ಕೊರಗು ಎಲ್ಲೆಡೆ ಕೇಳಿಬರುತ್ತಿದೆ. ಕಾಡಾನೆಗಳಿಗೆ ಆಹಾರ ಸಿಗದೇ ಗ್ರಾಮಗಳತ್ತ ನುಗ್ಗುತ್ತಿವೆ. ಬರೀ ರೈತರು ಬೆಳೆದ ಬೆಳೆಗಳನ್ನು ಮಾತ್ರ ನಾಶ ಪಡಿಸುತ್ತಿಲ್ಲ. ಬದಲಿಗೆ, ಮನುಷ್ಯರ ಮೇಲೂ ದಾಳಿ ಮಾಡುತ್ತಿವೆ. ಅತ್ತೂರು ಮೀಸಲು ಅರಣ್ಯದಲ್ಲಿ ಕಾಡಾನೆಗಳಿವೆ. ಪದೇ ಪದೇ ಆ ಅರಣ್ಯಕ್ಕೆ ಬೆಂಕಿ ಬೀಳುತ್ತಿರುವ ಪರಿಣಾಮ ಕಾಡಾನೆಗಳಿಗೆ ಆಹಾರ ಇಲ್ಲದಾಗುತ್ತಿದೆ. ಕಳೆದ ವರ್ಷ ಬಿದ್ದ ಬೆಂಕಿಗೆಯಿಂದ ಪಾರಾಗುವಷ್ಟರಲ್ಲಿ ಮತ್ತೊಂದು ದುರಂತ ನಡೆದಿದೆ.

ಅರಣ್ಯಕ್ಕೆ ಬೆಂಕಿ ಕೊಡುವ ಅಪರಾಧಿಗಳಿಗೆ ಅರಣ್ಯ ಕಾಯ್ದೆ 24ರ ಅನ್ವಯ 1 ವರ್ಷ ಕಠಿಣ ಶಿಕ್ಷೆ ಹಾಗೂ ₹ 2 ಸಾವಿರ ದಂಡವಿದೆ. ಆದರೂ, ಕಿಡಿಗೇಡಿಗಳಿಗೆ ಆತಂಕವಿಲ್ಲ.

ಜಿಲ್ಲೆಗೆ ಹೊಂದಿಕೊಂಡಿರುವ ನಾಗರಹೊಳೆ ಮತ್ತಿತರ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಹಾಗೂ ಕಿಡಿಗೇಡಿಗಳ ಪತ್ತೆಗೆ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಈ ಪಡೆ ಬೇಸಿಗೆಯಲ್ಲಿ ಕಾರ್ಯಾಚರಣೆ ನಡೆಸುತ್ತದೆ ಎಂದು ಅಧಿಕಾರಿಗಳು
ಹೇಳುತ್ತಾರೆ.
****
ನೂರಾರು ಎಕರೆ ಅರಣ್ಯ ಪ್ರದೇಶವು ಭಸ್ಮ
ಕುಶಾಲನಗರ: ಉತ್ತರ ಕೊಡಗಿನ ಆನೆಕಾಡು, ಅತ್ತೂರು, ದುಬಾರೆ ಹಾಗೂ ಬಾಣಾವಾರ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ಪ್ರದೇಶವು ಭಸ್ಮವಾಗಿದೆ.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರಕ್ಕೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಕ್ಕೆ ಬಿದ್ದ ಬೆಂಕಿಯಿಂದ 40 ಎಕರೆಗೂ ಹೆಚ್ಚಿನ ಅರಣ್ಯ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ನಾಶವಾಗಿದೆ. ಅದೇ ರೀತಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಬಿ.ಎಂ ರಸ್ತೆಯ ಅಸುಪಾಸಿನಲ್ಲಿರುವ ಆನೆಕಾಡು ಹಾಗೂ ಅತ್ತೂರು ಮೀಸಲು ಅರಣ್ಯ ಪ್ರದೇಶದಲ್ಲಿಯೂ ಕಾಣಿಸಿಕೊಂಡ ಬೆಂಕಿಯ ಜ್ವಾಲೆಯಿಂದ
ನೂರಕ್ಕೂ ಹೆಚ್ಚಿನ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ಬಾಣಾವಾರ ವಲಯದ ತೇಗದ ತೋಪಿಗೆ ಬಿದ್ದ ಬೆಂಕಿಯಿಂದ 40 ಎಕರೆ ಅರಣ್ಯ ಸುಟ್ಟು ಹೋಗಿದೆ. ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ.

ಐದಾರು ದಿನಗಳಿಂದ ಒಂದಲ್ಲ ಒಂದು ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಬೆಂಕಿ ಬೀಳುತ್ತಿದ್ದು, ದಿಢೀರ್‌ ಆಗಿ ಕಾಣಿಸಿಕೊಂಡ ಬೆಂಕಿಯಿಂದ ಅರಣ್ಯ ಪ್ರದೇಶದಲ್ಲಿ ಒಣಗಿ ನಿಂತಿದ್ದ ಕುರುಚಲು ಗಿಡಗಳು, ಒಣಗಿದ ಮರಗಳು ಹಾಗೂ ಬಿದಿರು ಮೆಳೆಗಳು ಸುಟ್ಟು ಭಸ್ಮವಾಗಿವೆ.

ವನ್ಯಪ್ರಾಣಿಗಳು, ಪಕ್ಷಿ ಸಂಕುಲ ಕೂಡ ಬೆಂಕಿಯ ಜ್ವಾಲೆಗೆ ಸಿಲುಕಿ ನಾಶವಾಗಿವೆ. ಆನೆಕಾಡು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಅರಣ್ಯಕ್ಕೆ ಬಿದ್ದ ಬೆಂಕಿಯಿಂದ ರಕ್ಷಿಸಿಕೊಳ್ಳಲು ಅಲ್ಲಿಂದ ಕಾಲುಕಿತ್ತು ಕಣಿವೆ ವಲಯದ ಹೆಬ್ಬಾಲೆ ಅರಣ್ಯಕ್ಕೆ ಬಂದಿವೆ.

ಆನೆಕಾಡು, ಅತ್ತೂರು, ದುಬಾರೆ ಹಾಗೂ ಬಾಣಾವಾರ ಅರಣ್ಯ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿದ್ದ ಬೆಲೆಬಾಳುವ ಮರಗಳಾದ ತೇಗ, ಹೊನ್ನೆ, ಬೀಟೆ ಹಾಗೂ ಇನ್ನಿತರ ಜಾತಿಯ ಮರಗಳು ಕೂಡ ಕಾಳ್ಗಿಚ್ಚಿಗೆ ಸಿಲುಕಿ ಭಸ್ಮವಾಗಿವೆ.

ಜಿಂಕೆ, ಕಡವೆ, ಮೊಲ, ಕಾಡು ಹಂದಿ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಪ್ರಾಣಿಗಳು ಹಾಗೂ ಮರದ ಮೇಲೆ ಗೂಡು ಕಟ್ಟಿಕೊಂಡು ವಾಸವಾಗಿದ್ದ ಪಕ್ಷಿಗಳು ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿವೆ.

ಹಿಂದೆ ಕಾಡಿನಲ್ಲಿರುವ ಬಿದಿರಿನ ಮೆಳೆಗಳು ಗಾಳಿಯ ರಭಸಕ್ಕೆ ಪರಸ್ಪರ ಸ್ಪರ್ಶದಿಂದ ನೈಸರ್ಗಿಕವಾಗಿ ಕಾಡಿಗೆ ಬೆಂಕಿ ಬೀಳುತ್ತಿತ್ತು. ಮೊದಲು ಒಣಗಿದ ಬಿದಿರು ಮೆಳೆಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಗಾಳಿ ರಭಸದಿಂದ ಇತರೆ ಅರಣ್ಯ ಪ್ರದೇಶಕ್ಕೆ ವ್ಯಾಪಿಸುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ರಸ್ತೆ ಬದಿಯಲ್ಲಿರುವ ಅರಣ್ಯದಲ್ಲಿ ಹೆಚ್ಚಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ದುಬಾರೆ, ಆನೆಕಾಡು ಹಾಗೂ ಬಾಣಾವಾರ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚು ನೈಸರ್ಗಿಕವಾಗಿ ಅಲ್ಲ. ಯಾರೊ ಕಿಡಿಗೇಡಿಗಳ ಕೃತ್ಯವಾಗಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅರಣ್ ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಉರಿಯುತ್ತಿರುವ ಬೆಂಕಿಯ ಜ್ವಾಲೆಯನ್ನು ನಂದಿಸಲು ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿಗಳು ಹಾಗೂ ಕುಶಾಲನಗರ–ಗೋಣಿಕೊಪ್ಪಲು ವಿಭಾಗದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಕೆಲವು ಅರಣ್ಯ ಪ್ರದೇಶದೊಳಗೆ ಅಗ್ನಿಶಾಮಕ ವಾಹನ ತೆರಳಲು ರಸ್ತೆಯಿಲ್ಲದ ಕಾರಣ ಬೆಂಕಿಯನ್ನು ಬೇಗ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಬೆಂಕಿ ಕೆನ್ನಾಲಿಗೆಗೆ ಹೆಚ್ಚಿನ ಅರಣ್ಯ ಪ್ರದೇಶ ನಾಶವಾಗಿದೆ. ಜೊತೆಗೆ ಗಾಳಿಯು ರಭಸವಾಗಿ ಬೀಸುತ್ತಿದ್ದು ಬೆಂಕಿಯ ಜ್ವಾಲೆ ಹೆಚ್ಚಲು ಕಾರಣವಾಗಿದೆ. ಬೆಂಕಿಯನ್ನು ಹತೋಟಿಗೆ ತರುವಲ್ಲಿ ಸಿಬ್ಬಂದಿ ಯಶಸ್ವಿ ಆಗಿದ್ದಾರೆ. ಆದರೂ, ಅರಣ್ಯ ಪ್ರದೇಶದಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಹೊಗೆಯಾಡುತ್ತಿದೆ. ಕೆಲವು ದೊಡ್ಡ ಮರಗಳಿಗೆ ಬೆಂಕಿ ಹತ್ತಿರುವ ಹಿನ್ನೆಲೆಯಲ್ಲಿ ಈ ಮರಗಳಲ್ಲಿನ ಬೆಂಕಿ ಸಂಪೂರ್ಣ ಆರಿಲ್ಲ.

ಬೆಳಿಗ್ಗೆಯಿಂದ ಮಧ್ಯಾಹ್ನದ ತನಕವೂ ಶಾಂತವಾಗಿರುವ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿಯುತ್ತಿದೆ. ಬೇಸಿಗೆ ಅವಧಿಯಲ್ಲಿ ಕಾಳ್ಗಿಚ್ಚು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಅರಣ್ಯದಂಚಿನಲ್ಲಿ ಫೈರ್‌ಲೈನ್ (ಬೆಂಕಿ ನಿಯಂತ್ರಣ ರೇಖೆ) ನಿರ್ಮಾಣ ಮಾಡಿತ್ತು. ಒಣಗಿ ನಿಂತಿದ್ದ ಬಿದಿರ ಮೆಳೆಗಳನ್ನು ತೆರವುಗೊಳಿಸಲಾಗಿತ್ತು. ಇದರ ಜೊತೆಗೆ ಕಾಡಂಚಿನ ಜನರಿಗೆ ಬೆಂಕಿಯಿಂದ ಅರಣ್ಯ ರಕ್ಷಿಸುವ ಕುರಿತು ಜಾಗೃತಿ ಮೂಡಿಸಲಾಗಿತ್ತು. ಆದರೂ, ಕಿಡಿಗೇಡಿಗಳ ಕೃತ್ಯಕ್ಕೆ ಪ್ರತಿವರ್ಷ ನೂರಾರು ಎಕರೆ ಅರಣ್ಯ ಪ್ರದೇಶ ಹಾನಿಯಾಗುತ್ತಿದ್ದು, ಅಮೂಲ್ಯ ಅರಣ್ಯ ಸಂಪತ್ತು ನಾಶವಾಗಿ ಅಪಾರ ನಷ್ಟ ಉಂಟಾಗುತ್ತಿದೆ.

ರಘು ಹೆಬ್ಬಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT