ಉದ್ಯೋಗಂ ಸ್ತ್ರೀ ಲಕ್ಷಣಂ

7

ಉದ್ಯೋಗಂ ಸ್ತ್ರೀ ಲಕ್ಷಣಂ

Published:
Updated:
ಉದ್ಯೋಗಂ ಸ್ತ್ರೀ ಲಕ್ಷಣಂ

ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವಾಗ ಸಮಾಜದ ಎಲ್ಲಾ ಸ್ತರಗಳಲ್ಲಿ ಮಹಿಳೆಯ ಕಲ್ಯಾಣ ಮತ್ತು ಅವರ ಅಭಿವೃದ್ಧಿ ಬಗ್ಗೆ ಚಿಂತಿಸುವ ಅಗತ್ಯವಿದೆ. ಉದ್ಯೋಗಸೃಷ್ಟಿಯು ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಸ್ಥಾನವನ್ನು ಕಲ್ಪಿಸಬಹುದು. ಆದರೆ ಇದರಿಂದ ಅವರ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ ಎಂದು ಹೇಳಲಾಗುವುದಿಲ್ಲ.

ಉದ್ಯೋಗದ ಸ್ಥಳಗಳಲ್ಲಿ ಹೆಚ್ಚಿನ ವೇತನ ಪಡೆಯುವ ಸ್ಥಾನಗಳಲ್ಲಿ ಮಹಿಳೆಯರ ಪ್ರಮಾಣ ಕಡಿಮೆಯಿದೆ. ವೈಯಕ್ತಿಕ ಹಾಗೂ ಸಾಮಾಜಿಕ ಕಾರಣಗಳಿಂದಾಗಿ ಮಹಿಳೆಯರು ಹಿಂದೆ ಉಳಿದಿದ್ದಾರೆ. ಭಾರತದಲ್ಲಿ ಉದ್ಯೋಗಸ್ಥ ಪುರುಷರ ಅರ್ಧದಷ್ಟು ಮಾತ್ರವೇ ಮಹಿಳೆಯರಿದ್ದಾರೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸಲು ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.

ಉದ್ಯೋಗಸ್ಥ ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್‌ಗಳನ್ನು ಆರಂಭಿಸುವುದು, ಉದ್ಯೋಗಸ್ಥಳಗಳಲ್ಲಿ ಶಿಶುಗಳಿಗೆ ಪೋಷಣಾ ವ್ಯವಸ್ಥೆಯನ್ನು ಒದಗಿಸುವುದು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕಾರ್ಯಕ್ರಮಗಳನ್ನು (ಎಸ್‌ಟಿಇಪಿಯಂತಹ ಕಾರ್ಯಕ್ರಮ) ರೂಪಿಸುವುದು – ಇಂಥ ಕಾರ್ಯಗಳು ಹೆಚ್ಚು ನಡೆಯಬೇಕಿದೆ. ಇಂತಹ ಮಹಿಳೆಯರಿಗೆ ‘ನ್ಯಾಷನಲ್ ಮಿಶನ್ ಫಾರ್ ಎಂಪವರ್‌ಮೆಂಟ್ ಆಫ್ ವುಮೆನ್’ (ಎನ್‌ಎಂಇಡಬ್ಲ್ಯೂ) ಅಡಿಯಲ್ಲಿ ‘ಮೈಕ್ರೋ ಫೈನಾನ್ಸ್’ ಸೌಲಭ್ಯವನ್ನು ನೀಡಿ ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವತ್ತ ಯೋಚಿಸಬೇಕಿದೆ. ನಿಗಮ ಮಂಡಳಿಗಳಲ್ಲಿ ಕನಿಷ್ಠ ಓರ್ವ ಮಹಿಳಾ ನಿರ್ದೇಶಕರನ್ನು ನೇಮಕ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಆದರೆ, ದುರದೃಷ್ಟವಶಾತ್ ಬಹುತೇಕ ಸಂದರ್ಭದಲ್ಲಿ ಇದು ನಡೆದಿಲ್ಲ.

ಸರ್ಕಾರ 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ಕಾರ್ಯಕ್ರಮವನ್ನು ರೂಪಿಸಿದೆ. ಹೀಗಿದ್ದರೂ ಗಂಡುಮಕ್ಕಳಿಗೆ ಹೋಲಿಸಿದರೆ ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣ ಕುಸಿದಿದೆ. ಲೈಂಗಿಕ ಕಿರುಕುಳಕ್ಕೆ ತುತ್ತಾಗುತ್ತಾರೆ ಎಂಬ ಭೀತಿಯಿಂದಲೂ ತಮ್ಮ ಹೆಣ್ಣುಮಕ್ಕಳನ್ನು ಪ್ರೌಢಶಾಲೆಗಳಿಗೆ ಕಳುಹಿಸದ ಪೋಷಕರ ಸಂಖ್ಯೆಯೂ ಸಾಕಷ್ಟಿದೆ. ಇಂತಹ ಪರಿಸ್ಥಿತಿ ಹೆಚ್ಚಾಗಿ ಉತ್ತರ ಭಾರತದಲ್ಲಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳಿಂದಾಗಿ ಕಲಿಕೆಗೆ ಪೂರಕ ವಾತಾವರಣ ಇಲ್ಲದಿರುವುದರಿಂದ ಪದವಿಪೂರ್ವ ಮತ್ತು ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಪ್ರಮಾಣ ಕಡಿಮೆಯಿದೆ.

ಮಹಿಳೆಯರಿಗೆ ಉದ್ಯೋಗ ತರಬೇತಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನೂರಾರು ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ) ಮತ್ತು ಪಾಲಿಟೆಕ್ನಿಕ್‌ಗಳನ್ನು ಹೆಣ್ಣುಮಕ್ಕಳಿಗೆಂದೇ ಸ್ಥಾಪಿಸಿವೆ. ಆದರೆ ಇದರಿಂದ ಬರುತ್ತಿರುವ ಫಲಿತಾಂಶ ಮಾತ್ರ ಆಶಾದಾಯಕವಾಗಿಲ್ಲ.

ಮಹಿಳೆಯರಿಗಾಗಿ ಜಾರಿಗೆ ತಂದಿರುವ ಎಲ್ಲ ಉಪಕ್ರಮಗಳನ್ನು ಬಳಸಿಕೊಂಡು ಪ್ರಯೋಜನ ಪಡೆಯುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವ ಅಗತ್ಯವಿದೆ. ಮೂಲ ಶಿಕ್ಷಣ ಕೊಡುವುದರ ಜೊತೆಗೆ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಹಂತದಲ್ಲಿ ಮಹಿಳೆಯರಿಗೆ ವೃತ್ತಿಪರ ಕೋರ್ಸ್‌ಗಳ ಶಿಕ್ಷಣವನ್ನು ನೀಡಬೇಕಿದೆ.

ಈ ಮೂಲಕ ಅವರ ಭವಿಷ್ಯದ ವೃತ್ತಿಜೀವನಕ್ಕೆ ಸಹಕಾರಿಯಾಗಬೇಕಿದೆ. ಬ್ಯೂಟಿ ಅಂಡ್ ವೆಲ್‌ನೆಸ್, ಹೆಲ್ತ್ ಅಂಡ್ ನ್ಯೂಟ್ರೀಶಿಯನ್, ಟೇಲರಿಂಗ್, ಹ್ಯಾಂಡಿಕ್ರಾಫ್ಟ್, ಎಲೆಕ್ಟ್ರಾನಿಕ್ಸ್, ಜೆಮ್ಸ್ ಅಂಡ್ ಜ್ಯುವೆಲ್ಲರಿ, ಆತಿಥ್ಯ ಸೇರಿದಂತೆ ಉದ್ಯೋಗ ಅವಕಾಶಗಳು ಹೆಚ್ಚಿರುವ ಕ್ಷೇತ್ರಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಪರಿಚಯಿಸಬೇಕು.

ಈ ನಿಟ್ಟಿನಲ್ಲಿ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮತ್ತು ಪೂರ್ಣ ಶಿಕ್ಷಣವನ್ನು ಕೊಡಿಸುವಂತೆ ಪೋಷಕರನ್ನು ಮನವೊಲಿಸಬೇಕಾಗಿದೆ. 

ಲೇಖಕಿ ‘ಲೇಬರ್‌ನೆಟ್ ಸರ್ವೀಸಸ್’ ಸಹ-ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry