7

ಧನಲಕ್ಷ್ಮಿ ಎನ್ನುವ ಮಾಹಿತಿಲಕ್ಷ್ಮಿ

Published:
Updated:
ಧನಲಕ್ಷ್ಮಿ ಎನ್ನುವ ಮಾಹಿತಿಲಕ್ಷ್ಮಿ

ಮಹಿಳಾ ಪ್ರಾತಿನಿಧ್ಯ ಎನ್ನುವುದು ರಾಜಕಾರಣ, ಉದ್ಯೋಗ ಕ್ಷೇತ್ರಕ್ಕಷ್ಟೇ ಸೀಮಿತವಾದುದಲ್ಲ; ಮಾಹಿತಿಗೆ ಸಂಬಂಧಿಸಿದಂತೆಯೂ ಮಹಿಳೆ ಹಿನ್ನೆಲೆಯಲ್ಲಿರುವುದೇ ಹೆಚ್ಚು. ಆನ್‍ಲೈನ್‍ ಮಾಹಿತಿಕೋಶವಾದ 'ವಿಕಿಪೀಡಿಯಾ' ತೆರೆದು ನೋಡಿದರೆ, ಮಹಿಳಾ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯ ಕೊರತೆ ಎದ್ದು ಕಾಣಿಸುತ್ತದೆ.

ವಿಕಿಪೀಡಿಯಾದಲ್ಲಿ ಮಹಿಳಾ ಹೆಜ್ಜೆಗಳನ್ನು ಸಶಕ್ತಗೊಳಿಸುವ ಪ್ರಯತ್ನವೊಂದು ಮಂಗಳೂರಿನಲ್ಲಿ ಸದ್ದಿಲ್ಲದೆ ಪ್ರಾರಂಭವಾಗಿದೆ. ಈ ‘ವಿಕಿ ಸಂಪಾದನೋತ್ಸವ’ಗಳ ಹಿಂದಿರುವುದು ಧನಲಕ್ಷ್ಮಿ.

ಸಕಲೇಶಪುರದ ಧನಲಕ್ಷ್ಮಿ ಕಾಲೇಜು ಶಿಕ್ಷಣಕ್ಕೆಂದು ಮಂಗಳೂರಿಗೆ ಬಂದು ಕರಾವಳಿಯೊಂದಿಗೆ ನಂಟು ಬೆಳೆಸಿಕೊಂಡಿರುವ ಯುವತಿ. ಸೇಂಟ್‌ ಆಗ್ನೆಸ್‌ ಕಾಲೇಜಿನಲ್ಲಿ ಬಿ.ಕಾಂ. ಮುಗಿಸಿ, ಇದೀಗ ಬೆಂಗಳೂರಿನ ಕಂಪನಿಯೊಂದರಲ್ಲಿ ಆರ್ಥಿಕ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದರೂ ಮಂಗಳೂರಿನೊಂದಿಗಿನ ನಂಟು ಕಡಿದುಕೊಂಡಿಲ್ಲ. ಸೇಂಟ್‌ ಆಗ್ನೆಸ್‌ ಕಾಲೇಜಿನಲ್ಲಿದ್ದಾಗ ವಿಕಿಪೀಡಿಯಾಗೆ ಲೇಖನಗಳನ್ನು ಅಪ್‌ಲೋಡ್‌ ಮಾಡುವ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದ್ದ ಅವರು, ಈಗಲೂ ದಕ್ಷಿಣ ಕನ್ನಡದ ಕಾಲೇಜುಗಳಲ್ಲಿ ವಿಕಿ ಸಂಪಾದನೋತ್ಸವಗಳನ್ನು ನಡೆಸುತ್ತಿದ್ದಾರೆ.

ಚಂಡೀಗಢದಲ್ಲಿ ನಡೆದ ‘ವಿಕಿ ಕಾನ್ಫರೆನ್ಸ್‌ ಇಂಡಿಯಾ–2016’ರಲ್ಲಿ ಧನಲಕ್ಷ್ಮಿ ಭಾಗವಹಿಸಿದ್ದರು. ಅಲ್ಲಿ, 2011ರಲ್ಲಿ ನಡೆದ ಸಮೀಕ್ಷೆಯೊಂದು ಅವರ ಗಮನ ಸೆಳೆಯಿತು. ವಿಕಿ ಮೀಡಿಯಾ ಫೌಂಡೇಶನ್‌ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಿವ್‌ ಗಾರ್ಡನರ್‌ ಅವರ ಬ್ಲಾಗ್‌ನಲ್ಲಿ ಉಲ್ಲೇಖವಾದ ಆ ಸಮೀಕ್ಷೆಯ ಪ್ರಕಾರ - ವಿಕಿಪೀಡಿಯಾದಲ್ಲಿ ಶೇ 8ರಿಂದ 16ರಷ್ಟು ಮಹಿಳಾ ಪ್ರಾತಿನಿಧ್ಯ ಇದೆ. ಅಂದರೆ, ಮಹಿಳೆಯರ ಸಹಭಾಗಿತ್ವ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಲೇಖನಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿವೆ. ಇದು ಧನಲಕ್ಷ್ಮಿ ಅವರಿಗೆ ಅಚ್ಚರಿ ಎನ್ನಿಸಿತು.

‘ಮಹಿಳಾ ಕಾಲೇಜಿನಲ್ಲಿಯೇ ಕಲಿಯುತ್ತಿದ್ದ ನಾನು, ಮಹಿಳಾ ವಿಚಾರಗಳನ್ನೇ ಇಟ್ಟುಕೊಂಡು ಕಾರ್ಯಾಗಾರ ನಡೆಸುವ ಮೂಲಕ ಈ ಅಂತರವನ್ನು ಕಡಿಮೆ ಮಾಡ ಬಹುದು ಎನ್ನಿಸಿತು. ಆಗ ಯು.ಬಿ. ಪವನಜ ಅವರನ್ನು ಸಂಪರ್ಕಿಸಿದೆ. ಅವರ ಮಾರ್ಗದರ್ಶನದಲ್ಲಿ ಕಾಲೇಜು ಗಳಲ್ಲಿ ಸಂಪಾದನೋತ್ಸವಗಳನ್ನು ಮಾಡಿ, ವಿಕಿಪೀಡಿಯಾಕ್ಕೆ ಲೇಖನಗಳನ್ನು ಅಪ್‌ಲೋಡ್‌ ಮಾಡುವ ಅರಿವು ಮೂಡಿಸಿದೆವು. ರಾಮಕೃಷ್ಣ ಪಿಯು ಕಾಲೇಜು ಪ್ರಾಂಶುಪಾಲರಾದ ಡಾ. ಕಿಶೋರ್‌ ಕುಮಾರ್‌ ರೈ ಕೂಡ ಸಹಕರಿಸಿದರು. ಬಳಿಕ ವಿಕಿವುಮೆನ್‌ ಮಂಗಳೂರು (wikiwomenmangaluru) ಪುಟ ಪ್ರಾರಂಭಿಸಿದೆವು’- ಹೀಗೆ ತಮ್ಮ ಪಯಣವನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಕಳೆದ ವರ್ಷವಷ್ಟೇ ಪದವಿ ಮುಗಿಸಿ, ಈಗ ಉದ್ಯೋಗದಲ್ಲಿರುವ ಅವರು ವಾರಾಂತ್ಯದ ರಜೆಯಲ್ಲಿ ಬೆಂಗಳೂರಿಂದ ಮಂಗಳೂರಿಗೆ ಬಂದು ಸಂಪಾದನೋತ್ಸವ ಆಯೋಜನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕನ್ನಡದಲ್ಲಿಯೇ ಅಪ್‌ಲೋಡ್‌ ಮಾಡಬೇಕು ಎನ್ನುವ ಉತ್ಸಾಹಕ್ಕೇನು ಕಾರಣ ಎಂದು ಕೇಳಿದರೆ - ‘ಅದಕ್ಕೆಲ್ಲ ನನ್ನ ತಂಗಿ ಪಲ್ಲವಿ ಕಾರಣ’ ಎನ್ನುತ್ತಾರೆ. ‘ಕನ್ನಡದಲ್ಲಿ ಮಾಹಿತಿಗಾಗಿ ಹುಡುಕಿದರೆ, ವಿಕಿಪೀಡಿಯಾದಲ್ಲಿ ಎರಡೋ ಮೂರೋ ಪ್ಯಾರಾಗಳಷ್ಟೇ ಮಾಹಿತಿ ದೊರೆಯುತ್ತದೆ. ನನ್ನ ಮಾತೃಭಾಷೆ ಕನ್ನಡ. ಓದಿದ್ದು ಆಂಗ್ಲ ಮಾಧ್ಯಮದಲ್ಲಿ. ನಾನು ಮೊದಲು ಕನ್ನಡದಲ್ಲಿ ಅಪ್‌ಲೋಡ್‌ ಮಾಡಿದ ಲೇಖನ ಕ್ಲೋರಿನ್‌ಗೆ ಸಂಬಂಧಿಸಿದ್ದು. ಅದಕ್ಕಾಗಿ ಏಳು ಪುಸ್ತಕಗಳನ್ನು ಓದಿ ಮತ್ತೆ ಮತ್ತೆ ಮನನ ಮಾಡಿಕೊಂಡಿದ್ದೇನೆ. ವಿಕಿಪೀಡಿಯಾಗೆ ಅಪ್‌ಲೋಡ್‌ ಮಾಡುವ ಹವ್ಯಾಸ ನಮ್ಮನ್ನು ವೈಯಕ್ತಿಕವಾಗಿಯೂ ಬೆಳೆಸುತ್ತದೆ’ ಎನ್ನುತ್ತಾರೆ.

ಆನ್‌ಲೈನ್‌ನಲ್ಲಿ ಮಹಿಳೆಯರ ಸಮಸ್ಯೆ-ಸಂದಿಗ್ಧಗಳು ಹಾಗೂ ಸಾಧಕಿಯರ ಕುರಿತು ಮಾಹಿತಿಯ ಕೊರತೆಯಿದೆ. ಮಹಿಳೆಯರ ಸಹಭಾಗಿತ್ವವೂ ಕಡಿಮೆ ಇದೆ. ಮನೆಯಲ್ಲಿಯೇ ಇರುವ ಮಹಿಳೆಯರು ಈ ಹವ್ಯಾಸವನ್ನು ರೂಢಿಸಿಕೊಳ್ಳಬಹುದು ಎನ್ನುವ ಅವರು, ‘ತುಳು ವಿಕಿಪೀಡಿಯಾದಲ್ಲಿ ತೊಡಗಿಸಿಕೊಂಡಿರುವ ವಿನೋದ ಪ್ರಸಾದ್‌, ಕವಿತಾ ಗಣೇಶ್‌, ಶೈಲಜಾ, ಯಶೋದಾ ಮೋಹನ್‌, ಡಾ. ಸರಸ್ವತಿ ಅವರು ಈ ವಿಕಿ ಕಾರ್ಯಾಗಾರಗಳಲ್ಲಿ ನಮ್ಮ ಜೊತೆಗಿದ್ದಾರೆ’ ಎಂದು ನೆನಪಿಸಿಕೊಳ್ಳುತ್ತಾರೆ.

ಇತ್ತೀಚೆಗೆ ಧನಲಕ್ಷ್ಮೀ ಅವರ ನೇತೃತ್ವದಲ್ಲಿ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ‘ಮಹಿಳೆ ಮತ್ತು ಕ್ರೀಡೆ’ ಎಂಬ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ವಿವಿಧ ಕಾಲೇಜು ವಿದ್ಯಾರ್ಥಿಗಳು ಮಹಿಳೆಯರ ಕುರಿತ ಲೇಖನಗಳನ್ನು ಅಪ್‌ಲೋಡ್‌ ಮಾಡುವು ದನ್ನು ಕಲಿತರು. ಹೆಚ್ಚು ಪ್ರಚಾರಕ್ಕೆ ಬಾರದ ಹರಿಯಾಣದ ಬಾಕ್ಸಿಂಗ್‌ ಪಟು ಕವಿತಾ ಚಹಲ್‌ ಕುರಿತ ಲೇಖನವನ್ನು ನಾಗೇಶ್‌ ಅವರು ಕನ್ನಡಕ್ಕೆ ಭಾಷಾಂತರಿಸಿ ಅಪ್‌ಲೋಡ್‌ ಮಾಡಿದರೆ, ಶ್ರದ್ಧಾ ಮಣಿಮುಂಡ ಅವರು ನಿಶಾ ಮಿಲ್ಲೆಟ್‌ ಕುರಿತ ಬರಹವನ್ನು ವಿಕಿಗೆ ಊಡಿಸಿದರು.

‘ಮಾಹಿತಿ ಪಡೆಯುವುದಷ್ಟೇ ಗೊತ್ತಿತ್ತು. ಈ ಕಾರ್ಯಾಗಾರದ ಮೂಲಕ ಇತರರಿಗೆ ಮಾಹಿತಿ ಯನ್ನು ಹಂಚಬೇಕು ಎನ್ನುವ ಅರಿವು ಮೂಡಿದೆ’ ಎನ್ನುತ್ತಾರೆ ಶ್ರದ್ಧಾ.

*

ಮಹಿಳೆಯರ ಸಮಸ್ಯೆ, ಸಂದಿಗ್ಧಗಳು ಹಾಗೂ ಸಾಧಕಿಯರ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿಯ ಕೊರತೆ ಇದೆ.

–ಧನಲಕ್ಷ್ಮಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry