ರಾಮಮಂದಿರ ನಿರ್ಮಾಣ ವಿವಾದ ರವಿಶಂಕರ್ ವಿರುದ್ಧ ಒವೈಸಿ ವಾಗ್ದಾಳಿ

ನವದೆಹಲಿ: ಇಸ್ಲಾಂ ಪ್ರಕಾರ ವಿವಾದಿತ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸುವಂತಿಲ್ಲ. ಹೀಗಾಗಿ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀಶ್ರೀ ರವಿಶಂಕರ್ ನೀಡಿರುವ ಹೇಳಿಕೆಯನ್ನು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಟೀಕಿಸಿದ್ದಾರೆ.
ರವಿಶಂಕರ್ ಅವರು ಮಂಗಳವಾರ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ‘ಸುಪ್ರೀಂ ಕೋರ್ಟ್ ತೀರ್ಪಿನಿಂದ ವಿವಾದ ಬಗೆ
ಹರಿಯುವುದಿಲ್ಲ. ಮಂದಿರ ನಿರ್ಮಾಣದ ವಿರುದ್ಧವಾಗಿ ತೀರ್ಪು ನೀಡಿದರೆ ರಕ್ತಪಾತವಾಗುತ್ತದೆ. ಬಹುಸಂಖ್ಯಾತ ಹಿಂದೂಗಳು ಮುಸ್ಲಿಮರ ವಿರುದ್ಧ ಅಸಮಾಧಾನಗೊಳ್ಳುತ್ತಾರೆ. ವಿವಾದದ ತೀರ್ಪು ಒಂದು ಸಮುದಾಯದ ಪರವಾಗಿ ಬರದಿದ್ದರೆ, ಭಾರತವು ಸಿರಿಯಾದಂತೆ ಆಗಲಿದೆ’ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ, ಒವೈಸಿ ‘ಅಯೋಧ್ಯೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು, ಮಾರ್ಚ್ 14ರಂದು ವಿಚಾರಣೆ ನಡೆಯಲಿದೆ. ಅದಕ್ಕೂ ಮೊದಲೇ ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ. ‘ಅವರು ಶಾಂತಿದೂತ ಅಲ್ಲ. ಅವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಚ್ಛೆ ಇದ್ದರೆ ಸುಗ್ರೀವಾಜ್ಞೆ ಹೊರಡಿಸಲಿ (ಮುಂಬೈ ವರದಿ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಬಿಜೆಪಿ ಇಚ್ಛಿಸಿದಲ್ಲಿ, ಸುಗ್ರೀವಾಜ್ಞೆ ಹೊರಡಿಸಿ, 24 ಗಂಟೆಗಳಲ್ಲಿ ನಿರ್ಮಾಣ ಕಾರ್ಯ ಆರಂಭಿಸಲಿ ಎಂದು ಶಿವಸೇನೆ ಆಗ್ರಹಿಸಿದೆ.
ಇದೇ ಸಂದರ್ಭದಲ್ಲಿ, ವಿವಾದ ಕುರಿತು ಮಧ್ಯಸ್ಥಿಕೆ ವಹಿಸುತ್ತಿರುವ ಶ್ರೀಶ್ರೀ ರವಿಶಂಕರ್ ಅವರನ್ನು ಟೀಕಿಸಿದ್ದು, ‘ಬೆದರಿಕೆ ಒಡ್ಡಿರುವ ಕುರಿತು ಮತ್ತು ಭಾರತವು ಸಿರಿಯಾದಂತೆ ಆಗಲಿದೆ ಎಂಬ ಹೇಳಿಕೆ ಕುರಿತು ತನಿಖೆ ನಡೆಯಬೇಕು. ಸಂಘರ್ಷ ಸೃಷ್ಟಿಸಲು ಅಥವಾ ಭಯೋತ್ಪಾದಕ ಸಂಘಟನೆ ಐಎಸ್ ಅನ್ನು ವಿವಾದದಲ್ಲಿ ಎಳೆದು ತರುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರಲು ಪ್ರಯತ್ನಿಸಿದ್ದಾರೆ’ ಎಂದು ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಆರೋಪಿಸಿದೆ.
‘ಕೋರ್ಟ್‌ನಲ್ಲಿ ವಿವಾದ ಬಗೆಹರಿಯುವುದಿಲ್ಲ ಎಂದು ಹೇಳುವ ಇಂತಹ ಗುರು ಯಾರಿಗೂ ಬೇಡ. ಇವರು ಶಾಂತಿದೂತ ಅಲ್ಲ. ಸಂವಿಧಾನ ವಿರೋಧಿ’ ಎಂದು ಉಲ್ಲೇಖಿಸಲಾಗಿದೆ.
ಆದೇಶಕ್ಕೆ ಬದ್ಧ ಎಐಎಂಪಿಎಲ್‌ಬಿ
ಲಖನೌ: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಶ್ರೀ ಶ್ರೀ ರವಿಶಂಕರ್ ನೀಡಿರುವ ಹೇಳಿಕೆಗೆ ಎಐಎಂಪಿಎಲ್‌ಬಿ ಆಕ್ಷೇಪ ವ್ಯಕ್ತಪಡಿಸಿದ್ದು, ವಿವಾದ ಸಂಬಂಧ ಕೋರ್ಟ್ ನೀಡುವ ಆದೇಶಕ್ಕೆ ಬದ್ಧರಾಗಿರುತ್ತೇವೆ ಎಂದು ತಿಳಿಸಿದೆ.
‘ಮಸ್ಲಿಮರು ವಿವಾದದಿಂದ ದೂರ ಸರಿಯಬೇಕು ಎಂದು ರವಿಶಂಕರ್ ಹೇಳುವ ಮೂಲಕ ದೇಶದ ಯೋಗಕ್ಷೇಮದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ’ ಎಂದು ಎಐಎಂಪಿಎಲ್‌ಬಿಯ ಪ್ರಧಾನ ಕಾರ್ಯದರ್ಶಿ ಮೌಲಾನ ವಾಲಿ ರೆಹಮಾನಿ ಆರೋಪಿಸಿದ್ದಾರೆ.
ಮಂಗಳವಾರ ಕಳುಹಿಸಿರುವ ಪತ್ರದಲ್ಲಿ ರವಿಶಂಕರ್ ‘ಅಯೋಧ್ಯೆ ಭೂ ಪ್ರದೇಶದಲ್ಲಿ ಹಿಂದೂಗಳಿಗೆ ಒಂದು ಎಕರೆ ಭೂಮಿ ದಾನ ಮಾಡಿದರೆ, ಹಿಂದೂಗಳು ಐದು ಎಕರೆ ಭೂಪ್ರದೇಶವನ್ನು ಮಸೀದಿ ನಿರ್ಮಿಸಲು ನೀಡುತ್ತಾರೆ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.