ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲುವೇಷಧಾರಿಗಳ ವೇಷ ಬದಲಿಸಿದ ಲಕ್ಷ್ಮಿ

Last Updated 8 ಮಾರ್ಚ್ 2018, 6:05 IST
ಅಕ್ಷರ ಗಾತ್ರ

ತುಮಕೂರು: ಹಗಲುವೇಷವೇ ಅವರ ಕಾಯಕ. ಬಗೆ ಬಗೆಯ ವೇಷ ಧರಿಸಿ ಮಕ್ಕಳಿಗೂ ವೇಷ ಹಾಕಿ ಬೀದಿ ಬೀದಿ ಸಾಗಿ ಭಿಕ್ಷೆ ಬೇಡುವುದು ವೃತ್ತಿ. ಇಂಥವರ ಬಾಳಲ್ಲಿ ನಗು ತಂದವರು ಉಡುಪಿಯ ಕಲ್ಯಾಣಪುರದ ಸಂತೆಕಟ್ಟೆಯ ಲಕ್ಷ್ಮಿ.

ಹಗಲುವೇಷಧಾರಿಗಳು ಈಗ ತಮ್ಮ ವೇಷಗಳನ್ನು ಕಳಚಿಟ್ಟಿದ್ದಾರೆ. ಬದುಕು ಕಟ್ಟಿಕೊಳ್ಳಲು ವ್ಯಾಪಾರ ಹಿಡಿದಿದ್ದಾರೆ. ಇವರ ಮಕ್ಕಳು ಬೀದಿ ತಿರುಗುತ್ತಿಲ್ಲ. ಒಗೆದ, ಸ್ವಚ್ಛ ಬಟ್ಟೆಗಳನ್ನು ತೊಟ್ಟು, ಪಾಟಿ ಚೀಲ ನೇತಾಕಿಕೊಂಡು ಶಾಲೆಗಳಲ್ಲಿ ಅ, ಆ, ಇ, ಈ ಕಲಿಯ ತೊಡಗಿದ್ದಾರೆ. ಕೆಲವು ಮಕ್ಕಳು ಇಂಗ್ಲಿಷ್‌ ಬರವಣಿಗೆಲ್ಲೂ ಸೈ ಎನಿಸಿಕೊಂಡಿದ್ದಾರೆ. ಇಂಗ್ಲಿಷ್‌ ಓದುವುದು ಸಹ ಅವರಿಗೆ ಸಲೀಸು.

ಲಕ್ಷ್ಮಿ ಅವರು ಉಡುಪಿಯವರಾದರೂ ಬದುಕು ಕಟ್ಟಿಕೊಂಡಿರುವುದು ತುಮಕೂರಿನಲ್ಲಿ. ಗುಬ್ಬಿ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಸಮಾಲೋಚಕಿಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಸಮಾಜ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

‘ಸಮಾಜಕ್ಕೆ ಏನಾದರೂ ಮಾಡಬೇಕೆಂಬ ತುಡಿತ ಓದುವಾಗಿನಿಂದಲೂ ಇತ್ತು. ಯಾರಿಗಾಗಿ ಕೆಲಸ ಮಾಡಬೇಕು ಎಂಬ ಬಗ್ಗೆ ತುಂಬಾ ಚಿಂತಿಸಿದೆ. ಯಾರೂ ಕೈ ಹಿಡಿಯದ ಅಲೆಮಾರಿಗಳಿಗೆ ದಾರಿದೀಪ ಆಗಬೇಕೆನಿಸಿತು. ಪತಿ ಲೋಕರಾಜ ಅರಸು ಹಾಗೂ ಅವರ ಸ್ನೇಹಿತರೆಲ್ಲ ನನ್ನ ನೆರವಿಗೆ ಬಂದರು. ಮಡಿಲು ಸೇವಾ ಟ್ರಸ್ಟ್ ಆರಂಭಿಸಿದೆವು’ ಎಂದು ಲಕ್ಷ್ಮಿ ತಮ್ಮ ಕಥೆ ಆರಂಭಿಸಿದರು.

’ಅಲೆಮಾರಿ ಬುಡಕಟ್ಟು ಸಮಾಜ ಹಾಗೂ ಅವರ ಮಕ್ಕಳಿಗಾಗಿ ಕೆಲಸ ಮಾಡುವುದಿದೆಯಲ್ಲ ಅದರಂಥ ಖುಷಿ ಬೇರೊಂದಿಲ್ಲ. ಅವರನ್ನು ಮುಖ್ಯವಾಹಿನಿಗೆ ತರುವಾಗ ಕಷ್ಟಪಟ್ಟೆವು. ಅವರು ಮೊದಲು ನನ್ನನ್ನು ನಂಬಲೇ ಇಲ್ಲ. ಆದರೂ ಪದೇಪದೇ ಅವರ ಬಳಿಗೆ ಹೋಗ ತೊಡಗಿದೆ. ಅವರ ಕಷ್ಷಸುಖಗಳಿಗೆ ನೆರವಾಗ ತೊಡಗಿದೆ. ಆಗ ನನ್ನ ಮೇಲೆ ನಂಬಿಕೆ ಇಟ್ಟರು. ನಾನು ಹಾಗೂ ನನ್ನ ಪತಿ ಅವರ ಕುಟುಂಬದಲ್ಲಿ ಒಬ್ಬರಂತಾಗಿದ್ದೇವೆ’ ಎಂದು ಹೇಳುವಾಗ ಅವರ ಮುಖದಲ್ಲಿ ಮಂದಹಾಸದ ನಗು ಇಣುಕಿತು.

’ಮೊದಲು ಗುಬ್ಬಿ ತಾಲ್ಲೂಕಿನ ಬಿಲ್ಲೋಪಾಳ್ಯದಲ್ಲಿ ಹಂದಿ ಜೋಗಿಗಳನ್ನು ಹುಡುಕಿದೆವು. ಇವರು ದೇವರ ಚಿತ್ರ ಹಾಕಿಕೊಂಡು ಭಿಕ್ಷಾಟನೆ ಮಾಡುತ್ತಾರೆ. ಮಕ್ಕಳನ್ನು ಭಿಕ್ಷಾಟನೆ ಕಳುಹಿಸುತ್ತಾರೆ. ಈ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರೇರೇಪಿಸಿದ್ದೆವು. ಅವರಿಗೆ ಆಪ್ತ ಸಮಾಲೋಚನೆ ನಡೆಸಿದೆವು. ’ಅಕ್ಷರ ಮಡಿಲು’ ಎಂಬ ಕಾರ್ಯಕ್ರಮ ರೂಪಿಸಿದೆವು. ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡೆವು. ಬುಕ್‌, ಬ್ಯಾಗ್ ಕೊಡಲು ಶುರು ಮಾಡಿದೆವು. ಆದರೂ ಹಂದಿ ಜೋಗಿಗಳ ಮಕ್ಕಳು ಶಾಲೆಗೆ ಹೋಗಲಿಲ್ಲ, ಹೋದವರು ಸಹ ಅರ್ಧದಲ್ಲೇ ಶಾಲೆ ಬಿಟ್ಟರು’ ಎಂದು ನೋವಿನಿಂದ ಹೇಳಿದರು.

’ಹಂದಿ ಜೋಗಿಗಳ ಬದುಕು ಬದಲಾಯಿಸಲು ಮಾಡಿದ ಯತ್ನ ಫಲಗೂಡಲಿಲ್ಲ. ಆಗ ಅಲ್ಲೇ ಇದ್ದ ಬುಡ್ಗ ಜಂಗಮರತ್ತ ನಮ್ಮ ಚಿತ್ತ ಹರಿಯಿತು. ಹಗಲು ವೇಷಾಧಾರಿಗಳಾದ  32 ಕುಟುಂಬಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದವು. 20 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.  1ರಿಂದ 5 ನೇ ತರಗತಿ ಓದುತ್ತಿದ್ದಾರೆ. ಅಂಗನವಾಡಿಯಲ್ಲಿ 5 ಮಕ್ಕಳು ಕಲಿಯುತ್ತಿದ್ದಾರೆ. ಯಾರೂ ಅರ್ಧದಲ್ಲಿ ಶಾಲೆ ಬಿಟ್ಟಿಲ್ಲ’ ಎಂದರು.

ಲಕ್ಷ್ಮಿ ಅವರು ಕಲಿತ ಎಲ್ಲ ವಿದ್ಯೆಯನ್ನು ಬಳಿಸಿ ಬುಡ್ಗ ಜಂಗಮರು ಹಗಲು ವೇಷ ಹಾಕಿಕೊಂಡು ಭಿಕ್ಷಾಟನೆ ಮಾಡುವುದನ್ನು ಬಿಡಿಸಿದ್ದಾರೆ. ಬಲ್ಬ್‌, ಪ್ಲಾಸ್ಟಿಕ್ ಪಾತ್ರೆ,  ಬಿಂದಿಗೆ ವ್ಯಾಪಾರ ಮಾಡಿ ಬದುಕುವುದನ್ನು ಕಲಿಸಿದ್ದಾರೆ. ಎಲ್ಲ ಕುಟುಂಬಗಳು ವ್ಯಾಪಾರ ಮಾಡುತ್ತಿವೆ. ಯಾರೊಬ್ಬರು ಕುಡಿಯುತ್ತಿಲ್ಲ. ಬೀಡಿ ಸಹ ಸೇದುವುದಿಲ್ಲ. ಸಂಜೆ ಆಗುತ್ತಿದ್ದಂತೆ ಮನೆಗೆ ಬರುತ್ತಾರೆ. ಬಿಡಾರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಕಲಿಸಿದ್ದಾರೆ. ಅವರ ಬದುಕೀಗ ಬದಲಾಗಿದೆ.

ಶಾಲೆಯ ಬೇರೆ ಮಕ್ಕಳಿಗಿಂತ ಓದಿನಲ್ಲಿ ಈ ಮಕ್ಕಳು ಹಿಂದೆ ಉಳಿಯಬಾರದೆಂಬ ಉದ್ದೇಶದಿಂದ ಪ್ರತಿದಿನ ಸಂಜೆ ಆ ಮಕ್ಕಳಿಗೆ ಲಕ್ಷ್ಮಿ ಪಾಠ ಮಾಡುತ್ತಿದ್ದಾರೆ. ಶನಿವಾರ, ಭಾನುವಾರ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಒಂದು ಬಿಡಾರ ಕಟ್ಟಿದ್ದಾರೆ. ಮಕ್ಕಳ ಮಕ್ಕಳ ಹಕ್ಕು, ಪೊಕ್ಸೊ ಕಾಯ್ದೆ ಬಗ್ಗೆ ಈ ಮಕ್ಕಳಿಗೆ, ಇಲ್ಲಿನ ಜನರಿಗೆ ಜಾಗೃತಿ ಮೂಡಿಸಿದ್ದಾರೆ.

ಟ್ರಸ್ಟ್‌ ನಡೆಸಿದ ಪ್ರಯತ್ನದ ಫಲವಾಗಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಈ ಎಲ್ಲ ಕುಟುಂಬಕ್ಕೆ ಸಾತೇನಹಳ್ಳಿಯಲ್ಲಿ ಭೂಮಿ ಮಂಜೂರು ಮಾಡಿದ್ದಾರೆ. ಕೆಲವೇ ತಿಂಗಳಲ್ಲಿ ಎಲ್ಲರಿಗೂ ನಿವೇಶನ ಸಿಗಲಿದೆ.

ತೆಲುಗಿನ ಮರುಗ ಭಾಷೆ ಈ ಜನರ ಮನೆ ಭಾಷೆ. ಈಗ ಕನ್ನಡವನ್ನು ಕಲಿತಿದ್ದಾರೆ. ಎಲ್ಲವನ್ನೂ ಕನ್ನಡದಲ್ಲೇ ವ್ಯವಹರಿಸುತ್ತಾರೆ. ಎಲ್ಲರೂ ಸೇರಿಕೊಂಡು ಈಚೆಗೆ ಕನ್ನಡ ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ್ದಾರೆ.

ಕುಣಿಗಲ್‌ನಲ್ಲಿ ದಯಾ ಸ್ಪರ್ಶ ಸಂಸ್ಥೆ ಆಯೋಜಿಸಿದ್ದ ಕಲರವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಇಲ್ಲಿನ ಮಕ್ಕಳು ಪ್ರಶಸ್ತಿ ಪಡೆದು ಬಂದಿದ್ದಾರೆ. ಈ ಮಕ್ಕಳಿಗೆ ಚಿತ್ರನಟ ಚೇತನ್‌ ಶಹಬ್ಬಾಸ್‌ ಹೇಳಿ ಹೋಗಿದ್ದಾರೆ.

ಮೊದಲು ಈ ಭಾಗದಲ್ಲಿ ಯಾವುದೇ ಕಳ್ಳತನ ನಡೆದರೂ ಪೊಲೀಸರು ಸಂಶಯದಿಂದ ಬಿಡಾರದ ಬಳಿ ಸುಳಿದಾಡುತ್ತಿದ್ದರು.  ಸುಖಾಸುಮ್ಮನೇ ವಿಚಾರಣೆ ನಡೆಸುತ್ತಿದ್ದರು. ಈಗ ಪೊಲೀಸರು ಬರುತ್ತಿಲ್ಲ. ಆಧಾರ್ ಕಾರ್ಡ್‌, ಚುನಾವಣಾ ಗುರುತಿನ ಚೀಟಿಯೂ ಸಿಕ್ಕಿದೆ. ಇದಕ್ಕೆಲ್ಲ ಲಕ್ಷ್ಮಿ ಮೇಡಂ ಕಾರಣ ಎಂದು ಹಿರಿಹಿರಿ ಹಿಗ್ಗುತ್ತಾರೆ ಹಗಲುವೇಷ ಕಳಚಿಟ್ಟ ಬುಡ್ಗ ಜಂಗಮರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT