ಸತ್ಯ ಕಂಡ ಜಗತ್ತು...

ಶನಿವಾರ, ಮಾರ್ಚ್ 23, 2019
28 °C

ಸತ್ಯ ಕಂಡ ಜಗತ್ತು...

Published:
Updated:
ಸತ್ಯ ಕಂಡ ಜಗತ್ತು...

ಚಿತ್ರಗಳು ನೆನಪುಗಳ ಪ್ರತಿಬಿಂಬ. ಇದೊಂದು ರೀತಿಯಲ್ಲಿ ದಾಖಲೆಯೂ ಹೌದು. ಆದರೆ ಅದು ಸೃಜನಾತ್ಮಕವಾಗಿ ಸೆರೆಯಾದರಷ್ಟೇ ವಿಶೇಷ ಎನಿಸಿಕೊಳ್ಳುತ್ತದೆ. ಹೀಗೆ ಆಕರ್ಷಕ ಎನಿಸುವ ಚಿತ್ರಗಳನ್ನು ಸೆರೆಹಿಡಿದು ಗುರುತಾದವರು ಛಾಯಾಗ್ರಾಹಕ ಸಿ.ಆರ್‌. ಸತ್ಯನಾರಾಯಣ.

ಕ್ಯಾಮೆರಾವನ್ನು ಕೈಯಲ್ಲಿ ಹಿಡಿದ ಇಪ್ಪತ್ತಾರು ವರ್ಷಗಳ ಪಯಣದಲ್ಲಿ ಇವರು, ಅತ್ಯದ್ಭುತ ಎಂಬಂತಹ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಇವರ ಚಿತ್ರಗಳಿಗೆ ದೇಶ ಮತ್ತು ಹಲವು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.

ಬೆಂಗಳೂರಿನವರೇ ಆದ ಇವರು ಎಲ್‌ಎಲ್‌ಬಿ ಪದವೀಧರರು. ಸ್ವಂತ ಉದ್ದಿಮೆ ನಡೆಸುತ್ತಾರೆ. ಹವ್ಯಾಸದ ಸಲುವಾಗಿ ಛಾಯಾಗ್ರಹಣದ ಮೊರೆ ಹೋಗಿದ್ದಾರೆ. ಮೊದಲ ಬಾರಿಗೆ ಇವರು ಕ್ಯಾಮೆರಾ ಹಿಡಿದಿದ್ದು 23ನೇ ವರ್ಷದಲ್ಲಿ. ನದಿಯ ದಡದಲ್ಲಿ ಮಹಿಳೆಯರ ಗುಂಪು ಹರಟೆ ಹೊಡೆಯುತ್ತಾ ಬಟ್ಟೆ ಒಗೆಯವುದು ಹಳ್ಳಿಗಳಲ್ಲಿ ಕಾಣುವ ಸಾಮಾನ್ಯ ದೃಶ್ಯ. ಇದೇ ಇವರು ತೆಗೆದ ಮೊದಲ ಚಿತ್ರ. ಮೊದಲ ಬಾರಿಯೇ ಪ್ರಶಸ್ತಿಯ ಗರಿ ಸಿಕ್ಕಿದ್ದು ಇವರ ಆಸಕ್ತಿಗೆ ಇಂಬು ದೊರಕಿತು. ಜೊತೆಗಿದ್ದ ಸ್ನೇಹಿತರ ಪ್ರೋತ್ಸಾಹವೂ ಇವರ ಆಸಕ್ತಿಗೆ ಮತ್ತಷ್ಟು ಪ್ರೋತ್ಸಾಹ ನೀಡಿತು. ಇವರ ಫೋಟೊಗ್ರಫಿ ಯಾನ ಆರಂಭವಾಗಿದ್ದು ಅಲ್ಲಿಂದಲೇ.

‘ಚಿಕ್ಕಂದಿನಿಂದಲೂ ಛಾಯಾಚಿತ್ರಗಳ ಬಗ್ಗೆ ಆಕರ್ಷಣೆ ಇತ್ತು. ವಿಶೇಷ ಎನಿಸುವ ಚಿತ್ರಗಳನ್ನು ಕಣ್ತುಂಬಿಕೊಳ್ಳುವಾಗ ಅದರ ಬಗ್ಗೆ ಕುತೂಹಲ ಮೂಡುತ್ತಿತ್ತು. ಆದರೆ ಕ್ಯಾಮೆರಾ ಹಿಡಿದು ಚಿತ್ರಕ್ಕಾಗಿ ಅಲೆದಾಡಲು ಆರಂಭಿಸಿದ್ದು, ಛಾಯಾಚಿತ್ರಗಾರರ ಒಡನಾಟ ಆರಂಭವಾದ ನಂತರವೇ’ ಎಂದು ತಮ್ಮ ಹವ್ಯಾಸ ಹಾದಿಯ ಬಗ್ಗೆ ತಿಳಿಸುತ್ತಾರೆ.

1992ರಲ್ಲಿ ಪತ್ನಿಯೊಂದಿಗೆ ಬದರಿ– ಕೇದಾರನಾಥಕ್ಕೆ ಹೋಗಿ ಚಿತ್ರ ತೆಗೆದಿದ್ದು ಇವರಿಗೆ ಹೆಚ್ಚು ಖುಷಿ ನೀಡಿದ ಸಂದರ್ಭ. ‘ಹಿಮಾಲಯಕ್ಕೆ ಹೋಗಿ ಚಿತ್ರ ತೆಗೆದವರು ಆ ಸಂದರ್ಭದಲ್ಲಿ ತೀರಾ ಕಡಿಮೆ. ಈ ಚಿತ್ರ ಹಲವು ಪ್ರದರ್ಶನ ಕಂಡು, ಪ್ರಶಂಸೆ ಗಳಿಸಿದ್ದು ಸಂತಸ ನೀಡಿತು’ ಎಂದು ಮಧುರ ಕ್ಷಣಗಳ ಮೆಲುಕು ಹಾಕುತ್ತಾರೆ.

ಇವರು ಪಿಕ್ಟೋರಿಯಲ್‌ ಮತ್ತು ವೈಲ್ಡ್‌ಲೈಫ್‌ ಫೋಟೊಗ್ರಫಿ ಎರಡನ್ನೂ ಮಾಡುತ್ತಾರೆ. ಪಿಕ್ಟೋರಿಯಲ್‌ ಫೋಟೊಗ್ರಫಿ ತಾಳ್ಮೆ ಮತ್ತು ಕ್ರಿಯಾಶೀಲತೆ ಬೇಡುತ್ತದೆ. ಈ ಶಾಖೆಯನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆ. ಹೀಗಾಗಿ ಇದು ಇಂದಿಗೂ ವಿಶೇಷವಾಗೇ ಉಳಿದುಕೊಂಡಿದೆ. ಪಿಕ್ಟೋರಿಯಲ್‌ ಫೋಟೊಗ್ರಫಿಯಲ್ಲಿ ಹದವಾದ ಬೆಳಕಿನ ಸಂಯೋಜನೆ ಮತ್ತು ಕಾಂಪೊಸಿಷನ್‌ ಮುಖ್ಯವಾದ ಅಂಶಗಳು. ಪಿಕ್ಟೋರಿಯಲ್ ಚಿತ್ರಗಳು ಪೇಂಟಿಂಗ್‌ಗಳು ನೀಡುವ ಅನುಭವ ನೀಡುತ್ತವೆ. ಒಂದು ಪೇಂಟಿಂಗ್‌ನಲ್ಲಿ ಇರುವ ಬಹುತೇಕ ಎಲ್ಲಾ ಅಂಶಗಳೂ ಪಿಕ್ಟೋರಿಯಲ್ ಛಾಯಾಚಿತ್ರಗಳಲ್ಲಿ ಇರುತ್ತವೆ. ಚಿತ್ರಗಳಲ್ಲಿ ಬಣ್ಣಗಳು ಕಣ್ಣಿಗೆ ರಾಚದಂತೆ ಬೆಳಕನ್ನು ಸಂಯೋಜಿಸುವ ಜಾಣ್ಮೆ ಇರಬೇಕು ಎನ್ನುತ್ತಾರೆ ಅವರು.

ಪ್ರಾರಂಭದಲ್ಲಿ ಪಿಕ್ಟೋರಿಯಲ್‌ ಛಾಯಾಗ್ರಹಣ ಮಾತ್ರವೇ ಮಾಡುತ್ತಿದ್ದ ಇವರು, ಒಮ್ಮೆ ಸ್ನೇಹಿತನೊಬ್ಬ ಕಾಡಿಗೆ ಹೋಗುತ್ತಿದ್ದೇನೆ ಜೊತೆಗೆ ಬಾ ಎಂದಾಗ ಒಪ್ಪಿಕೊಂಡು ಅವರ ಜೊತೆ ಹೋದರು. ಕಾಡಿನ ವಾತಾವರಣ, ಅನುಭವ ಇವರನ್ನು ವನ್ಯಜೀವಿ ಛಾಯಾಗ್ರಹಣದತ್ತ ಸೆಳೆಯಿತು.

ಅವಕಾಶ ಸಿಕ್ಕಾಗಲೆಲ್ಲ ಕಬಿನಿ, ಬಂಡಿಪುರ, ಬಿಳಿಗಿರಿರಂಗನಬೆಟ್ಟ, ಮಹಾರಾಷ್ಟ್ರದಲ್ಲಿ ಕಡೋಬಾ, ಮಧ್ಯಪ್ರದೇಶದಲ್ಲಿ ಕನ್ಹಾ, ಪೆಂಚ್‌, ಬಾಂದ್ವಗಡ್‌ ರಾಜಸ್ತಾನದಲ್ಲಿ, ಝಲಾನಾಕ್ಕೆ ಚಿತ್ರಗಳನ್ನು ಅರಸಿ ಹೋಗುತ್ತಾರೆ. ಆಫ್ರಿಕಾಗೂ ಹೋಗಿ ಚಿತ್ರ ತೆಗೆದಿದ್ದಾರೆ. ವನ್ಯಜೀವಿ ಛಾಯಾಚಿತ್ರಗಾರರ ನೆಚ್ಚಿನ ತಾಣ, ಪಕ್ಷಿ ಪ್ರಿಯರ ಸ್ವರ್ಗ ಎಂದೇ ಕರೆಸಿಕೊಳ್ಳುವ ಕೋಸ್ಟರಿಕಾಗೂ ಇತ್ತೀಚೆಗೆ ಇವರು ಇಪ್ಪತ್ತೈದು ದಿನಗಳ ಪ್ರವಾಸ ಬೆಳೆಸಿದ್ದರು.

‘ವನ್ಯಜೀವಿಗಳ ಚಿತ್ರ ತೆಗೆಯುವುದು ತಪಸ್ಸಿನ ತರಹ. ತಾಳ್ಮೆ ತುಂಬಾ ಇರಬೇಕು. ವಿಪರೀತ ಒತ್ತಡದ ನಡುವೆಯೂ ಫೋಟೊಗ್ರಫಿ ಹವ್ಯಾಸ ಚೈತನ್ಯಶೀಲರನ್ನಾಗಿಸುತ್ತದೆ. ಇಪ್ಪತ್ತು ವರ್ಷಗಳಿಂದ ಕಾಡಿಗೆ ಹೋಗುತ್ತಿದ್ದೇನೆ. ಎಂದೂ ಪ್ರಾಣಿಗಳಿಂದ ತೊಂದರೆಯಾಗಿಲ್ಲ. ಒಮ್ಮೆ ಜಾಂಬಿಯಾದ ನದಿಯಲ್ಲಿ ಬೋಟ್‌ನಲ್ಲಿ ಹೋಗುತ್ತಿದ್ದೆವು. ಅದು ಸಣ್ಣ ಬೋಟ್‌, ಅಲ್ಲಿ ನೀರಾನೆಗಳು ಹಿಂಡು, ಹಿಂಡಾಗಿರುತ್ತವೆ. ನಮ್ಮ ಬೋಟ್‌ಗೆ ಸಮೀಪದಲ್ಲಿಯೇ ನೀರಾನೆ ಇತ್ತು. ಅದನ್ನು ನೋಡಿದ ಡ್ರೈವರ್‌ ವೇಗವಾಗಿ ಬೋಟ್‌ ಚಲಾಯಿಸಿದ. ನಮಗೆ ಏನಾಗುತ್ತಿದೆ ಎಂದು ಒಂದು ಕ್ಷಣಕ್ಕೆ ತಿಳಿಯಲೇ ಇಲ್ಲ. ಸುಮಾರು ದೂರ ಹೋದ ಮೇಲೆ ನಿರಾನೆ ಅಟ್ಟಿಸಿಕೊಂಡು ಬರುತ್ತಿರುವುದು ತಿಳಿಯಿತು. ಸುಮಾರು ಒಂದು ಕಿ.ಮೀ. ಅದು ಹಿಂಬಾಲಿಸಿತ್ತು. ಇದು ಕಾಡಿನ ಅತಿ ಅಪಾಯಕಾರಿ ಪ್ರಾಣಿ’ ಎಂದು ವೃತ್ತಿಯ ರೋಚಕ ಕ್ಷಣಗಳನ್ನು ತಿಳಿಸುತ್ತಾರೆ.

‘ಛಾಯಾಚಿತ್ರಗಾರ ಚುರುಕಾಗಿರಬೇಕು. ಎಷ್ಟೋ ವೇಳೆ ಪಕ್ಕದಲ್ಲಿದ್ದವರಿಗೆ ಚಿತ್ರ ನಮಗೆ ಸಿಗುವುದಿಲ್ಲ. ಕಾಡಿಗೆ ಹೋಗಿ ಚಿತ್ರ ಸಿಗದೇ ವಾಪಸು ಬರುವ ಪರಿಸ್ಥಿತಿಯೂ ಎದುರಾಗುತ್ತದೆ. ಆದರೆ ಆ ಪಯಣದಲ್ಲಿ ಹಲವು ಅನುಭವಗಳು ಜೊತೆಯಾಗುತ್ತವೆ. ನಾವು ಪ್ರಾಣಿ ಪ್ರಂಪಚದ ಅರಿವು ಬೆಳೆಸಿಕೊಳ್ಳುವ ಜೊತೆಗೆ ಮುಂದಿನ ಪೀಳಿಗೆಗೂ ಇದರ ಬಗ್ಗೆ ಆಸಕ್ತಿ ಬೆಳೆಸುವ ಕೆಲಸ ಛಾಯಾಗ್ರಹಕರದ್ದು’ ಎನ್ನುತ್ತಾರೆ.

ನಿಕಾನ್‌ ಡಿ3ಎಸ್‌, 2 ಬಾಡಿ, 2 ಲೆನ್ಸ್‌, ಪ್ರೈಮ್‌ ಲೆನ್ಸ್‌, ಜೂಂ ಲೆನ್ಸನ್ನು ಇವರು ತೆಗೆದುಕೊಂಡು ಹೋಗುತ್ತಾರೆ.

***

ಪ್ರಶಸ್ತಿಗಳು

ವಿಶಾಖಪಟ್ಟಣದಲ್ಲಿ 2001ರಲ್ಲಿ ನಡೆದ ಮಾಸ್ಟರ್‌ ಫೋಟೊಗ್ರಾಫರ್‌ ಆಫ್‌ ದಿ ಇಯರ್‌ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ. ಆಸ್ಟ್ರೇಲಿಯಾದಲ್ಲಿ 2003ರಲ್ಲಿ ಎಫ್‌ಐಎಪಿ ನಡೆಸಿದ ಸ್ಪರ್ಧೆಯಲ್ಲಿ ಕಂಚು, 2004ರಲ್ಲಿ ಇದೇ ಸಂಸ್ಥೆ ನಡೆಸಿದ ಸ್ಪರ್ಧೆಯಲ್ಲಿ ಬೆಳ್ಳಿ. ಥೈವಾನ್‌ನಲ್ಲಿ 2004ರಲ್ಲಿ ನಡೆದ ‘ತೈಪೆ ಇಂಟರ್‌ನ್ಯಾಷನಲ್‌ ಸಲೊನ್‌ ಫೋಟೊಗ್ರಫಿ’ ಸ್ಪರ್ಧೆಯಲ್ಲಿ ಬಂಗಾರದ ಪದಕ, ‘ಫೋಟೊಗ್ರಫಿಕ್‌ ಸೊಸೈಟ್‌ ಆಫ್‌ ಅಮೆರಿಕ’ ದಿಂದ ಪ್ರಪಂಚದ ಮೂರನೇ ಅತ್ಯುನ್ನತ ಛಾಯಾಗ್ರಾಹಕ ಮನ್ನಣೆ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry