ಶನಿವಾರ, ಜೂಲೈ 11, 2020
23 °C

ತಾರಸಿ ಮೇಲೆ ಕೈತೋಟ ಮಾಡಿ...

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

ತಾರಸಿ ಮೇಲೆ ಕೈತೋಟ ಮಾಡಿ...

ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳು ವಿಷಪೂರಿತವಾಗಿರುತ್ತವೆ. ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳ ಸಿಂಪಡಣೆಯಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಸಾವಯವ ಗೊಬ್ಬರ ಬಳಸಿ ತರಕಾರಿ, ಹಣ್ಣುಗಳನ್ನು ಬೆಳೆಯೋಣವೆಂದರೆ, ಜಾಗದ ಸಮಸ್ಯೆ ಎಂದು ಕೊರಗುವವರಿಗೆ ಮನೆಯ ತಾರಸಿಯ ಮೇಲೆಯೇ ಸುಲಭದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯಲು ಅನುವು ಮಾಡಿದೆ ‘ಮೈಡ್ರೀಮ್ ಗಾರ್ಡನ್‌’.

ತಾರಸಿ ತೋಟದಲ್ಲಿ ಆಸಕ್ತಿ ಹೊಂದಿದವರಿಗೆ ಅದರ ನಿರ್ವಹಣೆಯದ್ದೇ ಚಿಂತೆ. ಕುಂಡಗಳಿಗೆ ಆಗಾಗ ನೀರುಣಿಸಬೇಕು, ನೀರು ಹೆಚ್ಚಾದರೆ ಗಿಡಗಳು ಸಾಯುತ್ತವೆ. ಕುಂಡಗಳ ಮಣ್ಣನ್ನು ಆಗಾಗ್ಗೆ ಬದಲಾಯಿಸಬೇಕು ಹೀಗೆ ಅನೇಕ ಸಮಸ್ಯೆಗಳಿಗೆ ಈ ಸಂಸ್ಥೆ ಸಿದ್ಧ ಪಡಿಸಿರುವ ‘ಮ್ಯಾಜಿಕ್ ಪ್ಲಾಂಟರ್‌ ಬಾಕ್ಸ್‌’ ಪರಿಹಾರ ಒದಗಿಸಿದೆ.

ಗಿಡಗಳ ಬೇರಿಗೆ ಗಾಳಿಯ ಅವಶ್ಯಕತೆಯಿದೆ. ಬೇರಿನ ಸುತ್ತಮುತ್ತ ಗಾಳಿಯಾಡುತ್ತಿದ್ದರೆ ಗಿಡದ ಬೆಳವಣಿಗೆ ಉತ್ತಮವಾಗಿರುತ್ತದೆ. ಇದೇ ಅಂಶವನ್ನು ಗಮನದಲ್ಲಿಟ್ಟುಕೊಂಡು ಮ್ಯಾಜಿಕ್ ಬಾಕ್ಸ್ ವಿನ್ಯಾಸಗೊಳಿಸಲಾಗಿದೆ. ಕಬ್ಬಿಣದಲ್ಲಿ ತಯಾರಿಸಿರುವ ಈ ಬಾಕ್ಸ್ ಸುತ್ತಲೂ ರಂಧ್ರಗಳಿವೆ. ಬಾಕ್ಸ್‌ನ ಒಳಗೆ ಬಟ್ಟೆ ಮಾದರಿಯ ಪದರ ಹಾಕಲಾಗಿದೆ. ಪದರದ ಮೇಲ್ಭಾಗದಲ್ಲಿ ಮಣ್ಣು ತುಂಬಲಾಗಿರುತ್ತದೆ. ರಂಧ್ರಗಳಿಗೆ ಅಡ್ಡವಾಗಿರುವ ಬಟ್ಟೆ ನೀರನ್ನು ಹಿಡಿದಿಟ್ಟುಕೊಂಡು ಗಿಡಗಳಿಗೆ ತೇವಾಂಶ ನೀಡುತ್ತದೆ. ನೀರು ಹೊರಕ್ಕೆ ಹೋಗಲು ಬಿಡುವುದಿಲ್ಲ ಇದರಿಂದಾಗಿ ತಾರಸಿಯೂ ಕೆಸರಾಗುವುದಿಲ್ಲ. ರಂಧ್ರಗಳ ಮೂಲಕ ಗಿಡಗಳ ಬೇರುಗಳಿಗೆ ಅಗತ್ಯ ಪ್ರಮಾಣದ ಗಾಳಿಯೂ ಪೂರೈಕೆಯಾಗುತ್ತದೆ.

ಬೇಕಾದ ಗಾತ್ರ ಮತ್ತು ಆಕಾರದಲ್ಲಿ ಈ ಬಾಕ್ಸ್‌ಗಳು ಲಭ್ಯ. ಒಂದೇ ಬಾಕ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ತರಕಾರಿಗಳನ್ನು ಬೆಳೆಯಲು ಅವಕಾಶವಿದೆ. ತರಕಾರಿಗಾದರೆ, ಅಗಲವಾದ ಹಾಗೂ ಹಣ್ಣುಗಳಿಗೆ ಉದ್ದನೆಯ ಬಾಕ್ಸ್‌ ಲಭ್ಯ.

ಈ ಬಾಕ್ಸ್‌ಗಳಿಗೆ ತುಂಬುವ ಮಣ್ಣನ್ನು ಕೆಂಪು ಮಣ್ಣು, ಕೊಕೊ ಪಿಟ್‌, ಬೇವು ಮೊದಲಾದವುಗಳನ್ನು ಬಳಸಿ ಸಿದ್ಧಪಡಿಸಲಾಗುತ್ತದೆ. ಒಮ್ಮೆ ತುಂಬಿಸಿದ ಮಣ್ಣನ್ನು ನಾಲ್ಕು ವರ್ಷದವರೆಗೆ ಬದಲಾಯಿಸುವ ಅಗತ್ಯವಿರುವುದಿಲ್ಲ. ನಾಲ್ಕು ವರ್ಷ ತರಕಾರಿಗಳನ್ನು ಬೆಳೆದ ನಂತರ ಅದೇ ಮಣ್ಣಿಗೆ ಮತ್ತಷ್ಟು ಪೋಷಕಾಂಶಗಳನ್ನು ಸೇರಿಸಲಾಗುತ್ತದೆ. ಇದರಿಂದ ಈ ಮಣ್ಣು ಮರು ಬಳಕೆಗೆ ಯೋಗ್ಯವಾಗುತ್ತದೆ. 4 ವರ್ಷದವರೆಗೆ ಈ ಪ್ರಕ್ರಿಯೆ ಬಿಟ್ಟರೆ ಬೇರ‍್ಯಾವ ಗಮನಗಳನ್ನು ನೀಡುವ ಅಗತ್ಯವಿಲ್ಲ.

ತಾರಸಿಯಲ್ಲಿ ಜಾಗವಿರುವವರು ಮ್ಯಾಜಿಕ್ ಬಾಕ್ಸ್‌ಗಳನ್ನು ಇಡಬಹುದು. ತಾರಸಿಯಲ್ಲಿ ಸಾಕಷ್ಟು ಜಾಗವಿಲ್ಲವೆಂದರೆ, ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಬಾಕ್ಸ್‌ಗಳನ್ನು ಅಳವಡಿಸಿಕೊಳ್ಳಬಹುದು. ಬಾಕ್ಸ್‌ಗಳ ಜೊತೆಗೆ ಸ್ಟ್ಯಾಂಡ್‌ ಸಹ ಬರುತ್ತದೆ. ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು.

ಹೀಗೆ ಬೆಳೆಯುವ ತರಕಾರಿಗೆ ಹೆಚ್ಚು ನೀರಿನ ಅಗತ್ಯ ಇರುವುದಿಲ್ಲ. ನೀರು ಪೋಲಾಗದ ಕಾರಣ ಸ್ವಲ್ಪ ನೀರಿನಲ್ಲಿಯೂ ಸೊಂಪಾದ ಬೆಳೆ ಬೆಳೆಯಬಹುದು. ಒಮ್ಮೆ ಇದನ್ನು ಅಳವಡಿಸಿಕೊಂಡರೆ, ಮತ್ತೆ ಗೊಬ್ಬರ ಅಥವಾ ಮಣ್ಣನ್ನು ಪೂರಣ ಮಾಡುವ ಅಗತ್ಯವಿರುವುದಿಲ್ಲ.

ಮಾಹಿತಿಗೆ www.mydreamgarden.in ನೋಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.