‘ಪ್ರತ್ಯೇಕ ನಾಡಧ್ವಜಕ್ಕೆ ಅವಕಾಶ ಇಲ್ಲ’

ಸೋಮವಾರ, ಮಾರ್ಚ್ 25, 2019
31 °C

‘ಪ್ರತ್ಯೇಕ ನಾಡಧ್ವಜಕ್ಕೆ ಅವಕಾಶ ಇಲ್ಲ’

Published:
Updated:
‘ಪ್ರತ್ಯೇಕ ನಾಡಧ್ವಜಕ್ಕೆ ಅವಕಾಶ ಇಲ್ಲ’

ನವದೆಹಲಿ: ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಬಿಟ್ಟು ಬೇರೆ ಯಾವ ರಾಜ್ಯಕ್ಕೂ ಪ್ರತ್ಯೇಕ ನಾಡಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಪ್ರತ್ಯೇಕ ನಾಡಧ್ವಜ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಪ್ಪಿಗೆ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಭಾರತದ ಧ್ವಜ ಸಂಹಿತೆ ಮತ್ತು ಸರ್ಕಾರದ ಲಾಂಛನ (ದುರ್ಬಳಕೆ ತಡೆ) ಕಾಯ್ದೆಯಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಬಿಟ್ಟು ಬೇರೆ ಯಾವ ಧ್ವಜದ ಬಗ್ಗೆಯೂ ಪ್ರಸ್ತಾಪ ಇಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

‘ಸಂವಿಧಾನದ 370ನೇ ಕಲಂ ಅಡಿ ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ಧ್ವಜ ಹೊಂದಿದೆ. ಆದರೆ, ಬೇರೆ ರಾಜ್ಯಗಳಿಗೆ ಈ ಅವಕಾಶ ಇಲ್ಲ. ಆದರೆ ರಾಜ್ಯವೊಂದು ಪ್ರತ್ಯೇಕ ಧ್ವಜ ಹೊಂದಬಾರದು ಎಂಬ ನಿರ್ಬಂಧವೂ ಸಂವಿಧಾನದಲ್ಲಿ ಇಲ್ಲ.

ಮುಂದೆ ಎಲ್ಲ ರಾಜ್ಯಗಳೂ ಪ್ರತ್ಯೇಕ ಧ್ವಜಕ್ಕೆ ಬೇಡಿಕೆ ಸಲ್ಲಿಸಬಹುದು. ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಗಳು ತಮ್ಮದೇ ಪ್ರತ್ಯೇಕ ಧ್ವಜಕ್ಕಾಗಿ ಪಟ್ಟು ಹಿಡಿಯುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರತ್ಯೇಕ ನಾಡಧ್ವಜಕ್ಕಾಗಿ ಬೇಡಿಕೆ ಸಲ್ಲಿಸಿ ಕರ್ನಾಟಕ ಸರ್ಕಾರದಿಂದ ಈವರೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಹೀಗಾಗಿ ಆ ಬಗ್ಗೆ ಈಗಲೇ ಏನನ್ನಾದರೂ ಹೇಳುವುದು ದುಡುಕಿನ ಪ್ರತಿಕ್ರಿಯೆಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

‘ನಿರ್ಬಂಧ ಇಲ್ಲ’: ಪ್ರತ್ಯೇಕ ಧ್ವಜಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ, ನಿರ್ಬಂಧವೂ ಇಲ್ಲ. ಕಾನೂನು ಚೌಕಟ್ಟಿನೊಳಗೆ ಈ ವಿಷಯ ನಿಭಾಯಿಸಬೇಕಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

‘ಕರ್ನಾಟಕದಲ್ಲಿ ಬಳಸಲಾಗುತ್ತಿರುವ ನಾಡಧ್ವಜ ಕೇವಲ ಆ ರಾಜ್ಯದ ಜನರನ್ನು ಪ್ರತಿನಿಧಿಸುತ್ತದೆಯೇ ಹೊರತು ಸರ್ಕಾರವನ್ನಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾಡಧ್ವಜವನ್ನು ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯಂತಹ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಳಸುತ್ತಿಲ್ಲ. ರಾಜ್ಯೋತ್ಸವ ಸಮಾರಂಭಗಳಲ್ಲಿ ಮಾತ್ರ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry