ನನಗೆ ಸ್ವರ್ಗ ಪ್ರಾಪ್ತಿ: ಆರೋಪಿ

7
ಲೋಕಾಯುಕ್ತರ ಕೊಲೆಗೆ ಯತ್ನ ಪ್ರಕರಣ

ನನಗೆ ಸ್ವರ್ಗ ಪ್ರಾಪ್ತಿ: ಆರೋಪಿ

Published:
Updated:
ನನಗೆ ಸ್ವರ್ಗ ಪ್ರಾಪ್ತಿ: ಆರೋಪಿ

ಬೆಂಗಳೂರು: ‘ಲೋಕಾಯುಕ್ತರಿಗೆ ಚಾಕು ಇರಿದಿದ್ದಕ್ಕೆ ನಾನು ಪಶ್ಚಾತಾಪ ಪಡುವುದಿಲ್ಲ. ದೇವರು ನನ್ನ ಜತೆಗಿದ್ದಾನೆ. ನಾನು ಸತ್ತರೆ ಸ್ವರ್ಗ ಪ್ರಾಪ್ತಿ ನಿಶ್ಚಿತ’. ಹೀಗೆಂದು ಆರೋಪಿ ತೇಜ್‌ರಾಜ್‌ ಶರ್ಮಾ, ಸಿಸಿಬಿ ಪೊಲೀಸರಿಗೆ ಹೇಳಿದ್ದಾನೆ.

ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿರುವ ಆರೋಪಿಯ ವಿಚಾರಣೆ ನಡೆಸುತ್ತಿರುವ ಪೊಲೀಸರು, ಆತನ ಪ್ರತಿಯೊಂದು ಹೇಳಿಕೆಯನ್ನು ಚಿತ್ರೀಕರಣ ಮಾಡುತ್ತಿದ್ದಾರೆ.

‘ದೇವರಿಗೆ ಹೇಳಿಯೇ ನಾನು ಈ ಕೃತ್ಯ ಎಸಗಿದ್ದೇನೆ. ನೀವ್ಯಾರು ನನ್ನ ಜತೆಗೆ ಇಲ್ಲದಿದ್ದರೂ ಆ ದೇವರು ನನ್ನೊಂದಿಗೆ ಸದಾ ಇರುತ್ತಾನೆ. ಅವನು ಎಲ್ಲವನ್ನೂ ನೋಡುತ್ತಿದ್ದಾನೆ. ತಪ್ಪು ಮಾಡಿದ ಯಾರನ್ನೂ ಆತ ಕ್ಷಮಿಸುವುದಿಲ್ಲ. ಲೋಕಾಯುಕ್ತರಿಗೂ ನನ್ನಿಂದ ಶಿಕ್ಷೆ ಕೊಡಿಸಿದ್ದಾನೆ’ ಎಂದು ಆರೋಪಿ ಹೇಳುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಹೆಸರು ಹೇಳಲಿಚ್ಛಿಸದ ಸಿಸಿಬಿ ಅಧಿಕಾರಿಯೊಬ್ಬರು, ‘ಪ್ರಕರಣವು ಗಂಭೀರ ಸ್ವರೂಪದ್ದಾಗಿದೆ. ಆದರೆ, ಆರೋಪಿ ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾನೆ. ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದ್ದಾನೆ. ಎಷ್ಟೇ ವಿಚಾರಣೆ ನಡೆಸಿದರೂ ಬೇರೆ ಯಾವುದೇ ವಿಷಯ ಬಾಯ್ಬಿಡುತ್ತಿಲ್ಲ’ ಎಂದರು.

‘ಆರೋಪಿಯ ಪೂರ್ವಾಪರದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಆತನ ಕುಟುಂಬ ರಾಜಸ್ಥಾನದಲ್ಲಿದೆ. ಆದರೆ, ಅವರ‍್ಯಾರು ನಗರಕ್ಕೆ ಬರುತ್ತಿಲ್ಲ. ನಮ್ಮ ತಂಡವನ್ನೇ ಅಲ್ಲಿಗೇ ಕಳುಹಿಸಿದ್ದೇವೆ. ಸಂಬಂಧಿಕರಿಂದ ಏನಾದರೂ ಮಾಹಿತಿ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry