ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಕತ್ತರಿಯಲ್ಲಿ ಬಿಎಫ್‌ಸಿ ತಂಡ

Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟೂರ್ನಿಯುದ್ದಕ್ಕೂ ಪಾರುಪತ್ಯ ಸಾಧಿಸಿದ್ದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಇಂಡಿ ಯನ್‌ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಅಂತಿಮ ಘಟ್ಟದಲ್ಲಿ ಅಡಕತ್ತರಿಗೆ ಸಿಲುಕಿದೆ.  ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿ ಈಗ ಈ ತಂಡದ್ದು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಎಫ್‌ಸಿ ಪುಣೆ ಸಿಟಿ ತಂಡವನ್ನು ಮಣಿಸದೇ ಇದ್ದರೆ ಸುನಿಲ್ ಚೆಟ್ರಿ ಬಳಗದ ಫೈನಲ್ ಕನಸು ಭಗ್ನಗೊಳ್ಳಲಿದೆ.

ಐಎಸ್‌ಎಲ್‌ಗೆ ಈ ಬಾರಿ ಪದಾರ್ಪಣೆ ಮಾಡಿದ ಬಿಎಫ್‌ಸಿ ಲೀಗ್ ಹಂತದ 18 ಪಂದ್ಯಗಳಲ್ಲಿ 13ರಲ್ಲಿ ಗೆದ್ದಿತ್ತು. ಕೇವಲ ನಾಲ್ಕರಲ್ಲಿ ಸೋತಿತ್ತು. ಆದರೆ ಮೊದಲ ಸೆಮಿಫೈನಲ್‌ನ ಮೊದಲ ಲೆಗ್‌ ಪಂದ್ಯದಲ್ಲಿ ಎಫ್‌ಸಿ ಪುಣೆ ಸಿಟಿಯನ್ನು ಮಣಿಸಲು ಆಗಲಿಲ್ಲ. ಪುಣೆಯಲ್ಲಿ ನಡೆದಿದ್ದ ಈ ಪಂದ್ಯ ಗೋಲುರಹಿತ ಡ್ರಾಗೊಂಡ ಕಾರಣ ಬಿಎಫ್‌ಸಿಗೆ ತವರಿನಲ್ಲಿ ಗೆಲುವು ಅನಿವಾರ್ಯ ಆಗಿದೆ.

ಈ ಬಾರಿಯ ಸೆಮಿಫೈನಲ್‌ನಲ್ಲಿ ‘ಅವೇ ಗೋಲ್‌’ ಪದ್ಧತಿ ಜಾರಿಗೆ ತರಲಾಗಿದೆ. ತವರಿನ ಹೊರಗೆ ಹೆಚ್ಚು ಗೋಲು ಗಳಿಸಿದ ತಂಡಕ್ಕೆ ಈ ಪದ್ಧತಿ ಅನುಕೂಲ. ಬಿಎಫ್‌ಸಿಗೆ ತವರಿನ ಹೊರಗಿನ ಮೊದಲ ಲೆಗ್‌ ಪಂದ್ಯದಲ್ಲಿ ಗೋಲು ಗಳಿಸಲು ಆಗಲಿಲ್ಲ. ಆದ್ದರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಪುಣೆ ತಂಡಕ್ಕೆ ಹೆಚ್ಚು ಅವಕಾಶವಿದೆ. ಭಾನುವಾರದ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಪುಣೆ ಫೈನಲ್‌ಗೆ ಲಗ್ಗೆ ಇರಿಸಲಿದೆ.

ಲೀಗ್ ಹಂತದ 18 ಪಂದ್ಯಗಳ ಪೈಕಿ ಒಂಬತ್ತನ್ನು ಮಾತ್ರ ಗೆದ್ದಿದ್ದ ಪುಣೆ ಆರು ಪಂದ್ಯಗಳಲ್ಲಿ ಸೋತಿತ್ತು.

ತವರಿನಲ್ಲಿ ಬಿಎಫ್‌ಸಿಗೆ ಬಲ: ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಬಿಎಫ್‌ಸಿ ತವರಿನಲ್ಲಿ ಪ್ರತಿ ಪಂದ್ಯದಲ್ಲೂ ಪಾರಮ್ಯ ಮೆರೆದಿದೆ. ಇಲ್ಲಿ ಆಡಿದ ಒಂಬತ್ತು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದಿರುವ ತಂಡ ಎರಡರಲ್ಲಿ ಮಾತ್ರ ಸೋತಿದೆ. ಫೆಬ್ರುವರಿಯಲ್ಲಿ ಇಲ್ಲಿ ಪುಣೆ ಸಿಟಿ ಎದುರು ನಡೆದ ಪಂದ್ಯ 1–1ರಲ್ಲಿ ಡ್ರಾ ಆಗಿತ್ತು. ತಂಡದ ಫಾರ್ವರ್ಡ್‌ ವಿಭಾಗಕ್ಕೆ ನಾಯಕ ಚೆಟ್ರಿ ಮತ್ತು ಮಿಕು ಪ್ರಮುಖ ಶಕ್ತಿ. ಲೀಗ್‌ನಲ್ಲಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಇವರು ಕ್ರಮವಾಗಿ ಎರಡು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಪುಣೆಯಲ್ಲಿ ಡಿಸೆಂಬರ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಬಿಎಫ್‌ಸಿ 3–1ರಿಂದ ಗೆದ್ದಿತ್ತು. ಆಗ ಮಿಕು ಮತ್ತು ಚೆಟ್ರಿ ಮಿಂಚಿದ್ದರು. ಅದೇ ಲಯದಲ್ಲಿ ಭಾನುವಾರ ಆಡಿದರೆ ತಂಡ ನಿರಾಯಾಸವಾಗಿ ಗೆಲ್ಲಬಹುದು.

ತಂಡದ ರಕ್ಷಣಾ ವಿಭಾಗಕ್ಕೆ ನಿಶುಕುಮಾರ್‌, ರಾಹುಲ್‌ ಭೆಕೆ, ಜಾಯನರ್‌ ಲೌರೆನ್ಸೊ, ಜಾನ್ ಜಾನ್ಸನ್‌ ಮತ್ತು ಹರ್ಮನ್‌ಜ್ಯೋತ್‌ ಸಿಂಗ್‌ ಖಾಬ್ರಾ ಬೆನ್ನೆಲುಬು. ಮಿಡ್‌ಫೀಲ್ಡರ್‌ಗಳಾದ ಆ್ಯಂಟೊನಿಯೊ ಡೊವ್ಯಾಲ್‌, ಎರಿಕ್‌ ಪಾರ್ಟಲು, ಡಿಮಾಸ್‌ ಡೆಲ್‌ಗಾಡೊ, ಲೆನಿ ರಾಡ್ರಿಗಸ್‌ ಕೂಡ ತವರಿನಲ್ಲಿ ಬೆಳಗುವ ವಿಶ್ವಾಸ ಹೊಂದಿದ್ದಾರೆ.

ಪುಣೆ ತಂಡದಲ್ಲೂ ಬಲಿಷ್ಠ ಆಟಗಾರರಿಗೆ ಕೊರತೆ ಇಲ್ಲ. ಮಾರ್ಸೆಲಿನೊ, ಎಮಿಲಿಯಾನೊ ಅಲ್ಫಾರೊ ಮತ್ತು ಡಿಯಾಗೊ ಕಾರ್ಲೊಸ್‌ ಈ ತಂಡದ ಆಧಾರವಾಗಿದ್ದಾರೆ. ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಎಮಿಲಿಯಾನೊ ಅಲ್ಫಾರೊ, ಮಾರ್ಸೆಲೊ ಪೆರೇರ ಮತ್ತು ಆದಿಲ್‌ ಖಾನ್‌ ಸ್ಥಾನ ಪಡೆದಿದ್ದಾರೆ. ರಕ್ಷಣಾ ವಿಭಾಗವೂ ಬಿಎಫ್‌ಸಿಗೆ ಸವಾಲಾಗುವ ಬಲವನ್ನು ಹೊಂದಿದೆ. ಲೀಗ್‌ನಲ್ಲಿ 42 ಗೋಲುಗಳನ್ನು ತಡೆದಿರುವ ವಿಶಾಲ್ ಕೇತ್ ಅವರ ಗೋಡೆಯನ್ನು ಕೆಡಹುವ ಸವಾಲು ಕೂಡ ಬಿಎಫ್‌ಸಿ ಮುಂದಿದೆ.

ರೋಮಾಂಚಕ ‘ಅವೇ ಗೋಲ್‌’ ಪದ್ಧತಿ

ಈ ಬಾರಿಯ ಐಎಸ್‌ಎಲ್‌ ಸೆಮಿಫೈನಲ್‌ ಪಂದ್ಯಗಳಲ್ಲಿ ತವರಿನ ಹೊರಗೆ ಗಳಿಸಿದ ಗೋಲುಗಳು ಫೈನಲ್‌ಗೆ ತಲುಪುವ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ‘ಅವೇ ಗೋಲ್‌’ ಎಂಬ ಈ ಹೊಸ ಪದ್ಧತಿ ಅಂತಿಮ ನಾಲ್ಕರ ಘಟ್ಟವನ್ನು ರೋಮಾಂಚಕಗೊಳಿಸಿದೆ.

ಎರಡನೇ ಲೆಗ್ ಪಂದ್ಯದ ಕೊನೆಯಲ್ಲಿ ಈ ಪದ್ಧತಿ ಮಹತ್ವ ಪಡೆಯಲಿದೆ. ಎರಡೂ ಲೆಗ್‌ಗಳಲ್ಲಿ (ತವರು ಮತ್ತು ಹೊರಗಿನ ಲೆಗ್‌) ಉಭಯ ತಂಡಗಳು ಗಳಿಸಿದ ಗೋಲುಗಳ ವ್ಯತ್ಯಾಸ ‘ಸೊನ್ನೆ’ ಆಗಿದ್ದರೆ ಈ ಪದ್ಧತಿ ಪ್ರಕಾರ ತವರಿನ ಹೊರಗೆ ಹೆಚ್ಚು ಗೋಲು ಗಳಿಸಿದ ತಂಡವನ್ನು ವಿಜಯಿ ಎಂದು ನಿರ್ಣಯಿಸಲಾಗುತ್ತದೆ.

ಉದಾಹರಣೆಗೆ ತವರಿನ ‘ಎ’ ತಂಡ ಹೊರಗೆ ಆಡಿದ ಪಂದ್ಯದಲ್ಲಿ ‘ಬಿ’ ತಂಡವನ್ನು 2–1ರಿಂದ ಮೊದಲ ಲೆಗ್‌ನಲ್ಲಿ ಮಣಿಸಿ, ತವರಿನ ‘ಬಿ’ ತಂಡ ಹೊರಗಿನ ‘ಎ’ ತಂಡವನ್ನು 3–2ರಿಂದ ಸೋಲಿಸಿದರೆ ಗೋಲು ವ್ಯತ್ಯಾಸ ಸೊನ್ನೆ (4–4) ಆಗುತ್ತದೆ. ಈ ಸಂದರ್ಭದಲ್ಲಿ ‘ಎ’ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಯಾಕೆಂದರೆ ಈ ತಂಡ ಹೊರಗಿನ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಿರುತ್ತದೆ.

ಎರಡೂ ತಂಡಗಳು ಹೊರಗಿನ ಪಂದ್ಯಗಳಲ್ಲಿ ಗಳಿಸಿದ ಗೋಲುಗಳ ಸಂಖ್ಯೆ ಸಮ ಆಗಿದ್ದು ಒಟ್ಟು ಗೋಲುಗಳ ಸಂಖ್ಯೆಯೂ ಸಮ ಆದರೆ ಹೆಚ್ಚುವರಿ ಅವಧಿ ಮೂಲಕ ಫಲಿತಾಂಶ ನಿರ್ಣಯಿಸಲಾಗುವುದು. ಈ ಸಂದರ್ಭದಲ್ಲೂ ಸಮ ಆದರೆ ಪೆನಾಲ್ಟಿ ಕಿಕ್ ಮೊರೆ ಹೋಗಲಾಗುವುದು.

***

ಪುಣೆ ವಿರುದ್ಧದ ತವರಿನ ಪಂದ್ಯ ಸವಾಲಿನದ್ದು. ಬಲಿಷ್ಠವಾಗಿರುವ ಆ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸುವ ಸಾಮರ್ಥ್ಯ ಬಿಎಫ್‌ಸಿಗೆ ಇದೆ ಎಂಬ ವಿಶ್ವಾಸ ನನಗಿದೆ.
– ಅಲ್ಬರ್ಟ್ ರೋಕಾ, ಬಿಎಫ್‌ಸಿಯ ಮುಖ್ಯ ಕೋಚ್‌

***

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT