ಕುಣಿಯುವ ಗೆಜ್ಜೆಯ ಕಲಾ ಸಂವಾದ...

7

ಕುಣಿಯುವ ಗೆಜ್ಜೆಯ ಕಲಾ ಸಂವಾದ...

Published:
Updated:
ಕುಣಿಯುವ ಗೆಜ್ಜೆಯ ಕಲಾ ಸಂವಾದ...

ಇಳಿಸಂಜೆಯಲ್ಲಿ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನಿರೀಕ್ಷೆಗಳ ಮಹಾಪೂರ. ಸಿನಿತಾರೆ, ನೃತ್ಯ ಪ್ರವೀಣೆ ಶೋಭನಾ ಧನಂಜಯ್‌ ಅವರ ‘ಟ್ರಾನ್ಸ್‌, ಡಾನ್ಸಿಂಗ್‌ ಡ್ರಮ್ಸ್‌’ ನೃತ್ಯ ವೀಕ್ಷಿಸಲು ಅಲ್ಲಿ ನೂರಾರು ಮನಸುಗಳು ಕಾದಿದ್ದವು. ವೃದ್ಧರ ಹಾಗೂ ಅನಾಥ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವ ಸರ್ಕಾರೇತರ ಸಂಸ್ಥೆ ‘ವಿಶ್ರಾಂತಿ ಟ್ರಸ್ಟ್‌’ ದೇಣಿಗೆ ಸಂಗ್ರಹಿಸುವ ನಿಮಿತ್ತ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಿವಿಗೆ ಇಂಪು ನೀಡುವ ಸಂಗೀತ, ಕಣ್ಣಿಗೆ ತಂಪು ನೀಡುವ ಬೆಳಕಿನ ವಿನ್ಯಾಸದಲ್ಲಿ ತುಂಬಿದ್ದ ರಂಗಕ್ಕೆ ಶೋಭನಾ ಹೆಜ್ಜೆ ಇಡುತ್ತಿದ್ದಂತೆ ಚಪ್ಪಾಳೆಯ ಸುರಿಮಳೆಯಾಯಿತು. ಭರತನಾಟ್ಯದ ಹಸಿರು ದಿರಿಸು ತೊಟ್ಟಿದ್ದ ಅವರು ನೃತ್ಯದ ಹೆಜ್ಜೆ ಹಾಗೂ ಹಾವಭಾವದಿಂದಲೇ ಮೆಚ್ಚುಗೆ ಗಳಿಸಿದರು. ಶೋಭನಾ ನೃತ್ಯಕ್ಕೆ ದುಪ್ಪಟ್ಟು ಚೆಲುವು ನೀಡಿದ್ದು ಅವರೊಂದಿಗೆ ಹೆಜ್ಜೆ ಹಾಕಿದ ಸಹಕಲಾವಿದೆಯರು.

ಧ್ವನಿವರ್ಧಕದಲ್ಲಿ ಓಡುತ್ತಿದ್ದ ಹಾಡಿನ ಮೋಡಿಗೆ ವೇದಿಕೆಯಲ್ಲೇ ತಬಲಾ ಹಾಗೂ ಮೃದಂಗ ಸಾಥ್‌ ನೀಡುತ್ತಿದ್ದರು ಅನಂತ ಆರ್‌.ಕೃಷ್ಣನ್‌. ಬೆರಳಿನ ಬಿರುಸು ಚಲನೆಗೆ ಹೊಮ್ಮುತ್ತಿದ್ದ ಧ್ವನಿ ಕಿವಿಗೆ ಇಂಪಿನ ಎರಕ ಹೊಯ್ಯುತ್ತಿತ್ತು. ಚಪ್ಪಾಳೆಯ ಸುರಿಮಳೆಯೂ ಆಗಾಗ ಆಗುತ್ತಿತ್ತು. ಒಮ್ಮೆ ವಾದ್ಯ ಮತ್ತೊಮ್ಮೆ ನೃತ್ಯ ಮೋಡಿಗೆ ನಿರಂತರವಾಗಿ ಪ್ರೇಕ್ಷಕರ ಮನಸು ಅಣಿಯಾಗುತ್ತಿತ್ತು. ಭರತನಾಟ್ಯವಷ್ಟೇ ಅಲ್ಲ, ನೃತ್ಯದ ನಾನಾ ಶೈಲಿಯನ್ನು ಅಳವಡಿಸಿಕೊಂಡು ಕಲಾವಿದರು ನೃತ್ಯ ಮಾಡಿದ್ದು ವಿಶೇಷವಾಗಿತ್ತು.

ಮೊದಲಿಗೆ ಶಿವತಾಂಡವ ಕಥೆ ಅನಾವರಣಗೊಂಡಿತು. ಮುಂದಿನ ಭಾಗದಲ್ಲಿ ಕೃಷ್ಣ ಹಾಗೂ ರಾಧೆಯ ಅಪರಿಮಿತ ಪ್ರೀತಿ ವ್ಯಕ್ತವಾಯಿತು. ಬದುಕಿನ ಜಂಜಾಟಗಳನ್ನು ಕಂಡು ಸನ್ಯಾಸ ಮಾರ್ಗ ಹಿಡಿದ ಬುದ್ಧ, ರಂಗನಾಥ ಸ್ವಾಮಿಯ ಮೂರ್ತಿಯ ಮೇಲೆ ಪ್ರೇಮಾಂಕುರ ಹೊಂದುವ ಮೊಘಲ್‌ ಸಾಮ್ರಾಜ್ಯದ ರಾಣಿ, ಇಳಿಸಂಜೆಯ ರಸದೌತಣಕ್ಕೆ ಸಾಥ್‌ ನೀಡಿದರು. ನೃತ್ಯ ವಿಷಯ ವೈವಿಧ್ಯದಂತೆ ದಿರಿಸಿನಲ್ಲಿಯೂ ಇದ್ದ ವೈವಿಧ್ಯ ಕಣ್ಣಿಗೆ ಹಬ್ಬ ನೀಡಿತು.

ಪ್ರಪಂಚದಾದ್ಯಂತ ನಾನಾ ಧರ್ಮಗಳಿದ್ದರೂ ದೇವನೊಬ್ಬನೇ, ಅಹಂ ಬ್ರಹ್ಮಾಸ್ಮಿ ಎನ್ನುವ ಪರಿಕಲ್ಪನೆಯನ್ನು ನೃತ್ಯಗಳ ಮೂಲಕ ಬಿಂಬಿಸಲಾಯಿತು. ಏಸುಕ್ರಿಸ್ತನ ಜನನ, ಮರಣ, ಮರಣಾ ನಂತರ ಜನರಿಗೆ ಆತ ತೋರುವ ದಾರಿಯ ಕುರಿತಾದ ನೃತ್ಯ ಸಂದರ್ಭವನ್ನು ಮನತಟ್ಟುವಂತೆ ಕಟ್ಟಿಕೊಡಲಾಯಿತು. ವೇದಿಕೆಯ ಪಕ್ಕದಲ್ಲಿ ಪಿಯಾನೊ ಸಾಥ್‌ ನೀಡುತ್ತಿದ್ದ ಪೃಥ್ವಿ ಚಂದ್ರಶೇಖರನ್‌ ಹಾಗೂ ಮೃದಂಗ, ತಬಲಾ ಸಾಥ್‌ ನೀಡುತ್ತಿದ್ದ ಅನಂತ ಆರ್‌.ಕೃಷ್ಣನ್‌ ಕೂಡ ಈ ನೃತ್ಯ ಭಾಗದಲ್ಲಿ ಕಲಾವಿದರಾಗಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಮುಂದಿನ ಭಾಗದಲ್ಲಿ ಪ್ರೇಕ್ಷಕರು ಕಾಯುತ್ತಾ ಕುಳಿತಿದ್ದ ‘ಟ್ರಾನ್ಸ್‌, ಡಾನ್ಸಿಂಗ್‌ ಡ್ರಮ್ಸ್‌’‍ ಪ್ರಸ್ತುತಪಡಿಸಲಾಯಿತು. ವೇದಿಕೆಯ ಮೂರು ಭಾಗಗಳಲ್ಲಿ ಬೃಹತ್ತಾದ ಡ್ರಮ್ಸ್‌. ಕಲಾವಿದೆಯರ ಕೈಯಲ್ಲಿಯೂ ತಮಟೆಯನ್ನು ಪ್ರತಿನಿಧಿಸುವ ಪರಿಕರವಿತ್ತು. ಧ್ವನಿವರ್ಧಕದಲ್ಲಿ ಡೋಲಿನ ದನಿ ಬಿತ್ತರಗೊಳ್ಳುವುದಕ್ಕೂ ಕಲಾವಿದೆಯರು ವೇದಿಕೆಯಲ್ಲಿದ್ದ ಡೋಲನ್ನು ನುಡಿಸುವುದಕ್ಕೂ ಪಕ್ಕಾ ಹೋಲಿಕೆಯಾಗುತ್ತಿತ್ತು. ನೃತ್ಯಗಾರ್ತಿಯರೇ ಡೋಲು ನುಡಿಸುತ್ತಿದ್ದಾರೇನೊ ಎಂದು ಭಾಸವಾಗುವಷ್ಟು ನಿಖರವಾದ ಪೆಟ್ಟುಗಳಿಗೆ ಅವರು ಕೈಕುಣಿಸುತ್ತಿದ್ದರು. ಇದು ಅವರ ಅಭ್ಯಾಸ ಸೂಕ್ಷ್ಮತೆಗೆ ಕನ್ನಡಿ ಹಿಡಿದಂತಿತ್ತು.

ವಿಭಿನ್ನ ನೃತ್ಯ ಶೈಲಿಗಳೊಂದಿಗೆ ಸಂವಾದ ನಡೆಸುವಂತಿದ್ದ ಮುಂದಿನ ನೃತ್ಯ, ಪ್ರೇಕ್ಷಕರು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಲ್ಲದೆ ನಗೆಯ ಕಡಲಲ್ಲೂ ತೇಲಿಸಿತು. ಭರತನಾಟ್ಯ ಶೈಲಿಯಲ್ಲಿ ಶೋಭನಾ ನೃತ್ಯ ಮಾಡುತ್ತಿದ್ದರೆ ಆಗಾಗ ರಂಗಕ್ಕೆ ಬರುತ್ತಿದ್ದ ಸಹಕಲಾವಿದೆಯರು ಪಾಪ್‌, ಬೆಲ್ಲಿ, ಬಾಲಿವುಡ್‌ ಹೀಗೆ ಬೇರೆ ಬೇರೆ ಶೈಲಿಯ ನೃತ್ಯ ಮಾಡುತ್ತಿದ್ದರು. ಅದಕ್ಕೆ ಸವಾಲೊಡ್ಡುತ್ತಿದ್ದ ಶೋಭನಾ ಕೊನೆಗೆ ತಾನೂ ಅವರಂತೆ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಅಂದರೆ ಶೈಲಿ ಯಾವುದೇ ಆಗಿರಲಿ ಸಂಗೀತ, ನೃತ್ಯದ ಚೆಲುವಿಗೆ ಮಾರು ಹೋಗದವರಿಲ್ಲ ಎನ್ನುವಂತಿತ್ತು ಆ ಸಂವಾದ.

ಪ್ರಾರಂಭದಲ್ಲಿ ಪೇಲವ ಅನಿಸಿದ್ದ ಈ ನೃತ್ಯ ಕಾರ್ಯಕ್ರಮ ಕೊನೆಕೊನೆಗೆ ಬಿರುಸುಗೊಳ್ಳುತ್ತಾ ಪ್ರೇಕ್ಷಕರ ಮನಸೆಳೆಯಿತು. ಸಿನಿಮಾ ಹಾಗೂ ನೃತ್ಯ ಕ್ಷೇತ್ರದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿರುವ ಶೋಭನಾ ಅವರ ನೃತ್ಯತಂಡ ಎನ್ನುವ ಕಾರಣಕ್ಕೆ ನಿರೀಕ್ಷೆಯ ಮಹಾಪೂರ ಹೊತ್ತು ಬಂದಿದ್ದವರಿಗೆ ದಕ್ಕಿದ್ದು ಮಿಶ್ರಭಾವ.

**

ನನಗೆ ಈಗಲೂ ಕ್ಯಾಮೆರಾ ಕಾಣುತ್ತಿದೆ

ನೃತ್ಯದ ಮಧ್ಯೆಮಧ್ಯೆ ರಂಗದಿಂದಲೇ ಶೋಭನಾ ನುಡಿಯುತ್ತಿದ್ದ ಮಾತುಗಳಿವು. ಶೋಭನಾ ಎಂದಮೇಲೆ ನೃತ್ಯ ಚೆನ್ನಾಗಿಯೇ ಇರುತ್ತದೆ ಎನ್ನುವ ಖುಷಿಯಲ್ಲಿ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಳ್ಳುತ್ತಿದ್ದ ತಾತನಿಗೆ ವಿಡಿಯೊ ಮಾಡಬೇಡಿ ಎಂಬುದು ಮೊದಲ ಪಾಠವಾಯಿತು. ಕೊನೆಗೂ ನೃತ್ಯದ ಮಧ್ಯೆ ಎರಡು ಬಾರಿ ಪ್ರೇಕ್ಷಕರು ಹಿಡಿದಿದ್ದ ಕ್ಯಾಮೆರಾ ನನಗೆ ಕಾಣುತ್ತಿದೆ. ಆಫ್‌ ಮಾಡಿ ಎಂದು ಅಪ್ಪಣೆ ಮಾಡಿದರು. ಇದು ಕಲಾರಸಿಕರು ಕ್ಷಣಕಾಲ ಗುಸುಗುಸು ಮಾತನಾಡಲು ಕಾರಣವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry