ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 144 ಕೇಂದ್ರ

ಸೋಮವಾರ, ಮಾರ್ಚ್ 25, 2019
26 °C
ಪೂರ್ವಭಾವಿ ಸಭೆ; ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 144 ಕೇಂದ್ರ

Published:
Updated:
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 144 ಕೇಂದ್ರ

ತುಮಕೂರು: ಮಾ.23ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ 37 ಸಾವಿರದ 41 ವಿದ್ಯಾರ್ಥಿಗಳು ಬರೆಯಲಿದ್ದಾರೆ. ಒಟ್ಟು 144 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಮಂಜುನಾಥ್ ತಿಳಿಸಿದರು.

ನಗರದಲ್ಲಿ ನಡೆದ ಪರೀಕ್ಷಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಶೈಕ್ಷಣಿಕ ಜಿಲ್ಲೆಯ 85 ಕೇಂದ್ರಗಳಲ್ಲಿ 23,818 ವಿದ್ಯಾರ್ಥಿಗಳು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 59 ಕೇಂದ್ರಗಳಲ್ಲಿ 13,223 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ತಿಳಿಸಿದರು.

ನಿಯೋಜಿತ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಗೊಂದಲಕ್ಕೆ ಅವಕಾಶ ಮಾಡಿಕೊಡದಂತೆ ಪರೀಕ್ಷೆ ನಡೆಯಲು ಶ್ರಮಿಸಬೇಕು ಎಂದು ಸೂಚಿಸಿದರು.

ಮಧುಗಿರಿ ಶಿಕ್ಷಣಾಧಿಕಾರಿ ಅಶ್ವತ್ಥ್ ನಾರಾಯಣ್ ಮಾತನಾಡಿ, ’ಅವ್ಯವಹಾರಗಳ ಬಗ್ಗೆ ನಿಗಾವಹಿಸಲು ಹಾಗೂ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಕೇಂದ್ರಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು‌’ ಎಂದು ತಿಳಿಸಿದರು.

ಆರೋಗ್ಯಾಧಿಕಾರಿ ಪ್ರಕಾಶ್ ಮಾತನಾಡಿ, ’ಬೇಸಿಗೆಯಾದ ಕಾರಣ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಕೇಂದ್ರದಲ್ಲಿ ತುರ್ತು ಚಿಕಿತ್ಸೆ ನೀಡಲು ಆರೋಗ್ಯ ಸಹಾಯಕಿಯರನ್ನು ನೇಮಿಸಲಾಗುವುದು. ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು’ ಎಂದು ತಿಳಿಸಿದರು.

ಅಧಿಕಾರಿ ಪ್ರಭುಸ್ವಾಮಿ ಮಾತನಾಡಿ, ’ಎಷ್ಟೇ ಉತ್ತಮವಾಗಿ ಪರೀಕ್ಷೆ ನಡೆಸಿದರೂ ಕೆಲ ಕಿಡಿಗೇಡಿಗಳು ಅನವಶ್ಯಕವಾಗಿ ಸಲ್ಲದ ವದಂತಿ ಹಬ್ಬಿಸಿ ಗೊಂದಲ ಸೃಷ್ಟಿಸುವರು. ಅಂತಹ ಸನ್ನಿವೇಶಗಳಿಗೆ ಅವಕಾಶ ನೀಡಬಾರದು. ವಿದ್ಯಾರ್ಥಿಗಳು ತಕ್ಷಣವೇ ಆತಂಕಗೊಳ್ಳಬಾರದು. ಈ ಬಗ್ಗೆ ಪರೀಕ್ಷಾ ಸಿಬ್ಬಂದಿ ಎಚ್ಚರದಿಂದ ಇರಬೇಕು’ ಎಂದರು.

ಶಿಕ್ಷಣಾಧಿಕಾರಿ ಎ.ಟಿ.ರಂಗದಾಸಪ್ಪ, ಪರೀಕ್ಷಾ ಪೂರ್ವ ತಯಾರಿ, ಪರೀಕ್ಷೆ ಬರೆಯುವ ಸಮಯ ಹಾಗೂ ಉತ್ತರ ಪತ್ರಿಕೆಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆಯಾಗುವ ಕಾರಣ ಸುದ್ದಿ ಮತ್ತು ಫೋಟೊಗಾಗಿ ಬರುವ ಮಾಧ್ಯಮ ಪ್ರತಿನಿಧಿಗಳಿಗೆ ಪರೀಕ್ಷಾ ಕೇಂದ್ರದ ಪ್ರವೇಶ ನಿಷೇಧಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಮುಖ್ಯ ಅಧೀಕ್ಷಕರು, ಉಪಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.

ಅಂಗವಿಕಲರಿಗೆ ಹೆಚ್ಚುವರಿ ಸಮಯ

ಅಂಗವಿಕಲರಿಗೆ ಈ ಬಾರಿ ಎಲ್ಲ ವಿದ್ಯಾರ್ಥಿಗಳಿಗಿಂತ 1 ಗಂಟೆ ಹೆಚ್ಚುವರಿ ಸಮಯ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಕೆಳಮಹಡಿಯಲ್ಲಿಯೇ ಕೊಠಡಿಗಳನ್ನು ನೀಡಬೇಕು. ಪರೀಕ್ಷಾ ಸಿಬ್ಬಂದಿಗೆ ವಿಶೇಷ ಗುರುತಿನ ಚೀಟಿಯನ್ನು ನೀಡಲಾಗಿದ್ದು, ಕಡ್ಡಾಯವಾಗಿ ಗುರುತಿನ ಚೀಟಿಯೊಂದಿಗೆ ಕೇಂದ್ರಕ್ಕೆ ಹಾಜರಾಗಬೇಕು ಎಂದು ಮಂಜುನಾಥ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry