ಕಾರವಾರ: ಲೈಂಗಿಕ ಅಲ್ಪಸಂಖ್ಯಾತರು ಮತದಾನದಿಂದ ದೂರ!

ಬುಧವಾರ, ಮಾರ್ಚ್ 20, 2019
31 °C
ಯೋಜನೆ ಫಲ ಪಡೆಯಲು ಹಿಂಜರಿಕೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸವಾಲಾದ ಕಾರ್ಯ

ಕಾರವಾರ: ಲೈಂಗಿಕ ಅಲ್ಪಸಂಖ್ಯಾತರು ಮತದಾನದಿಂದ ದೂರ!

Published:
Updated:
ಕಾರವಾರ: ಲೈಂಗಿಕ ಅಲ್ಪಸಂಖ್ಯಾತರು ಮತದಾನದಿಂದ ದೂರ!

ಕಾರವಾರ: ಈ ಬಾರಿಯ ಮತದಾರರ ಪಟ್ಟಿ ಅಂತಿಮವಾಗಿದ್ದು, ಜಿಲ್ಲೆಯಲ್ಲಿ 11.30 ಲಕ್ಷಕ್ಕೂ ಅಧಿಕ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಒಬ್ಬರೂ ಲೈಂಗಿಕ ಅಲ್ಪಸಂಖ್ಯಾತರು ನೋಂದಣಿ ಮಾಡಿಸಿಕೊಂಡಿಲ್ಲ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 15ರಿಂದ 20 ಮಂದಿ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಆದರೆ, ತಮ್ಮನ್ನು ಹಾಗೆಂದು ಗುರುತಿಸಿಕೊಳ್ಳಲು ಅವರು ಹಿಂಜರಿಯುತ್ತಿದ್ದಾರೆ. ಇದರಿಂದ ಸಂವಿಧಾನಾತ್ಮಕ ಹಕ್ಕು ಚಲಾವಣೆ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ.

‘ಅವರಿಗೆ ಸರ್ಕಾರ ನೀಡುವ ವಿಶೇಷ ಸೌಲಭ್ಯಗಳಿಂದಲೂ ವಂಚಿತರಾಗುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಾದರೂ ಹೆಸರು ನೋಂದಾಯಿಸಿದ್ದರೆ ನಮಗೆ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾಗುತ್ತಿತ್ತು’ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಜಾಗೃತಿ ಕಾರ್ಯಕ್ರಮ ಅಗತ್ಯ: ಲೈಂಗಿಕ ಅಲ್ಪಸಂಖ್ಯಾತರಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡುತ್ತಿದೆ. ಆದರೆ, ಅದಕ್ಕೆ ನಿರೀಕ್ಷೆ ಮಾಡಿದ ಮಟ್ಟಿನ ಸ್ಪಂದನೆ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಎನ್‌ಜಿಒ ಕೊರತೆ: ಲೈಂಗಿಕ ಅಲ್ಪಸಂಖ್ಯಾತರ ಪರ ಕೆಲಸ ಮಾಡುತ್ತಿರುವ ಶೈಲಾ ಶೆಟ್ಟಿ, ‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರೇತರ ಸಂಸ್ಥೆಗಳು ಲೈಂಗಿಕ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿವೆ. ಆದರೆ, ಜಿಲ್ಲೆಯಲ್ಲಿ ಅಂತಹ ಸಂಸ್ಥೆಗಳ ಕೊರತೆಯಿದೆ. ಸರ್ಕಾರದ ಯೋಜನೆಗಳು ತಲುಪಿಸುವ ವಿಚಾರದಲ್ಲಿ ಹಿನ್ನಡೆಗೆ ಕಾರಣವಾಗಿದೆ. ಲೈಂಗಿಕ ಅಲ್ಪಸಂಖ್ಯಾತರು ಒಂದೇ ಊರಿನಲ್ಲಿ ನಿರಂತರವಾಗಿ ಇರುವುದಿಲ್ಲ. ಹಾಗಾಗಿ, ಅವರನ್ನು ಪತ್ತೆಹಚ್ಚಿ ಮಾಹಿತಿ ನೀಡಲು, ಅರಿವು ಮೂಡಿಸಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ.

ಸರ್ಕಾರದಿಂದ ಹಲವು ಯೋಜನೆ

ಲೈಂಗಿಕ ಅಲ್ಪಸಂಖ್ಯಾತರ ಒಳಿತಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಶೇ 25ರಷ್ಟು ಸಹಾಯಧನ ಒಳಗೊಂಡಿರುವ ₹ 50 ಸಾವಿರದವರೆಗೆ ಬಡ್ಡಿ ರಹಿತ ಸಾಲ, ಉಚಿತ ಮನೆ ಹಾಗೂ ನಿವೇಶನ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಆದರೆ, ಬೇಸರದ ಸಂಗತಿಯೆಂದರೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಡುವ ಇಂತಹ ಯಾವುದೇ ಯೋಜನೆಗಳ ಉಪಯೋಗ ಮಾಡಿಕೊಳ್ಳಲು ಫಲಾನುಭವಿಗಳು ಮುಂದೆ ಬರುತ್ತಿಲ್ಲ.

‘ನಾವು ಲೈಂಗಿಕ ಅಲ್ಪಸಂಖ್ಯಾತರು ಎಂದು ಬಹಿರಂಗವಾಗಿ ಗುರುತಿಸಿಕೊಂಡರೆ ಸಮಾಜ ನಮ್ಮನ್ನು ಹೊರಗಿಡುತ್ತದೆ, ನಮ್ಮನ್ನು ನಿಕೃಷ್ಟವಾಗಿ ಕಾಣುತ್ತದೆ, ಎಲ್ಲರ ಜತೆಗೆ ಜೀವಿಸಲು ಸಾಧ್ಯವಿಲ್ಲ ಎಂಬ ಆತಂಕ ಅವರನ್ನು ಕಾಡುತ್ತಿದೆ. ಹೀಗಾಗಿ ಅವರ ಮಾಹಿತಿ ಪಡೆದುಕೊಳ್ಳಲು ಕಷ್ಟವಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry