4
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ವೈದ್ಯರ ಆಕ್ರೋಶ

ಎನ್‌ಎಂಸಿ ಮಸೂದೆ ವಿರೋಧಿಸಿ ವೈದ್ಯರ ಪ್ರತಿಭಟನೆ

Published:
Updated:
ಎನ್‌ಎಂಸಿ ಮಸೂದೆ ವಿರೋಧಿಸಿ ವೈದ್ಯರ ಪ್ರತಿಭಟನೆ

ಬಾಗಲಕೋಟೆ: ‘ಕೇಂದ್ರ ಸರ್ಕಾರದ ಉದ್ದೇಶಿತ ಎನ್‌ಎಂಸಿ ಮಸೂದೆ–2017 ಹಿಂಪಡೆಯಬೇಕು’ ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ವೈದ್ಯರು ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ವೈದ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

‘ಎನ್‌ಎಂಸಿ ಮಸೂದೆ ವೈದ್ಯಕೀಯ ಕ್ಷೇತ್ರಕ್ಕೆ ವಿರುದ್ಧವಾಗಿದೆ. ಈ ಮಸೂದೆ ಮಂಡನೆಯಿಂದ ವೈದ್ಯರು ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಅದರಲ್ಲಿನ ಕೆಲವು ಅಂಶಗಳು ವೈದ್ಯರ ಮೇಲಿರುವ ಸಮಾಜದ ನಂಬಿಕೆ ಅಲ್ಲಗಳೆಯುವಂತೆ ಮಾಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮಂಡನೆ ಮಾಡಬಾರದು’ ಎಂದು ಒತ್ತಾಯಿಸಿದರು.

ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶೇಖರ ಮಾನೆ ಮಾತನಾಡಿ, ‘ಮಸೂದೆ ಶ್ರೀಮಂತರ ಪರವಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ. ರೋಗಿಯ ಸುರಕ್ಷತೆಗೆ ಧಕ್ಕೆ ಬರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ವೈದ್ಯರ ವಿರೋಧದ ನಡುವೆಯು ಮಸೂದೆ ಮಂಡಿಸಿದಲ್ಲಿ ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಆಧುನಿಕ ವೈದ್ಯಕೀಯ ವೃತ್ತಿಯಲ್ಲಿ ಗುಣಮಟ್ಟದ ಕೌಶಲದ ಅವಶ್ಯಕತೆ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಅನುಗುಣವಾಗಿ ಉನ್ನತ ಮಟ್ಟದ ಜ್ಞಾನ, ಕೌಶಲವು ಹೆಚ್ಚಿನ ಸಂಕೀರ್ಣತೆಯಿಂದ ವೈದ್ಯಕೀಯ ವೃತ್ತಿಯು ಸ್ವಯಂ ನಿಯಂತ್ರಣಕ್ಕೆ ಅವಕಾಶ ಮಾಡಿಕೊಡುತ್ತದೆ. ಆದರೆ ಮಸೂದೆ ಇದರ ವಿರುದ್ಧವಾಗಿದೆ’ ಎಂದು ದೂರಿದರು.

ಈ ಮಸೂದೆಯು ಆಧುನಿಕ ವೈದ್ಯಕೀಯ ವೃತ್ತಿ ಮತ್ತು ಜನರ ಜೀವನಕ್ಕೆ ಮಾರಕವಾಗಿದೆ. ವೃತ್ತಿಯ ಪ್ರತಿಯೊಂದು ಕ್ಷೇತ್ರಕ್ಕೂ ನಷ್ಟವನ್ನುಂಟು ಮಾಡುವ ಸಾಧ್ಯತೆ ಇದೆ. ಇದೊಂದು ಆಘಾತಕಾರಿ ಬೆಳವಣಿಗೆಯಾಗಿದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು’ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಡಾ.ಶ್ರೀಕಾಂತ ತೆಲಸಂಗ, ಡಾ.ಪ್ರಮೋದ ಮಿರ್ಜಿ, ಡಾ.ಅರುಣ ಮಿಸ್ಕಿನ್, ಡಾ.ಸಿ.ಡಿ.ಕಲಬುರ್ಗಿ, ಡಾ.ಬಾಬು ರಾಜೇಂದ್ರ ನಾಯಕ, ಡಾ.ಆರ್‌.ಟಿ.ಪಾಟೀಲ, ಡಾ.ಸಿ.ಕೆ.ಪಾಟೀಲ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry