ಶಾಸಕ ಸೇರಿದಂತೆ 21 ಆಕಾಂಕ್ಷಿಗಳಿಂದ ಅರ್ಜಿ

ಶುಕ್ರವಾರ, ಮಾರ್ಚ್ 22, 2019
31 °C
ವಿಜಯಪುರ ನಗರ ವಿಧಾನಸಭಾ ಕ್ಷೇತ್ರ; ಕಾಂಗ್ರೆಸ್‌ ಟಿಕೆಟ್‌ಗೆ ತೀವ್ರ ಪೈಪೋಟಿ

ಶಾಸಕ ಸೇರಿದಂತೆ 21 ಆಕಾಂಕ್ಷಿಗಳಿಂದ ಅರ್ಜಿ

Published:
Updated:
ಶಾಸಕ ಸೇರಿದಂತೆ 21 ಆಕಾಂಕ್ಷಿಗಳಿಂದ ಅರ್ಜಿ

ವಿಜಯಪುರ: ಜಿಲ್ಲಾ ಕೇಂದ್ರವನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿರುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಹಾಲಿ ಶಾಸಕರಿರುವ ರಾಜ್ಯದ ಯಾವೊಂದು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಈ ಪರಿ ಪೈಪೋಟಿ ನಡೆದಿಲ್ಲ. ನಗರದ ವಿವಿಧೆಡೆ ಕೆಲ ಆಕಾಂಕ್ಷಿಗಳು ಈಗಾಗಲೇ ಪ್ರಚಾರ ರ‍್ಯಾಲಿ ನಡೆಸುತ್ತಿದ್ದಾರೆ. ಹಲವರು ಪ್ರಮುಖ ಸ್ಥಳಗಳಲ್ಲಿ ಫ್ಲೆಕ್ಸ್‌ ಹಾಕಿರುವುದು ವಿಶೇಷ.

ಶತಾಯಗತಾಯ ಹಾಲಿ ಶಾಸಕ ಡಾ.ಮಕ್ಬೂಲ್‌ ಎಸ್‌ ಬಾಗವಾನಗೆ ಟಿಕೆಟ್‌ ತಪ್ಪಿಸಬೇಕು ಎಂದು ಪಣ ತೊಟ್ಟಿರುವ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಈಗಾಗಲೇ ಒಂದಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಶಾಸಕರ ವಿರುದ್ಧ ಎಐಸಿಸಿ ಅಗ್ರೇಸರನವರೆಗೂ ದೂರು ಹೊತ್ತೊಯ್ದಿದ್ದಾರೆ.

ಫೆಬ್ರುವರಿ ಅಂತ್ಯದಿಂದ ಮಾರ್ಚ್‌ 15ರವರೆಗೂ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಬಯಸಿ 21 ಆಕಾಂಕ್ಷಿಗಳು ತಲಾ ₹ 25000 ಶುಲ್ಕ ಪಾವತಿಸಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ ಎಲ್ಲರೂ ಮುಸ್ಲಿಂ ಸಮುದಾಯದ ಆಕಾಂಕ್ಷಿಗಳಾಗಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಅರ್ಜಿ ಸಲ್ಲಿಸಿದವರ ವಿವರ:  ಹಾಲಿ ಶಾಸಕ ಡಾ.ಮಕ್ಬೂಲ್‌ ಬಾಗವಾನ, ವಿಜಯಪುರ ಮಹಾನಗರ ಪಾಲಿಕೆ ಸದಸ್ಯರಾದ ಸಜ್ಜಾದೆ ಪೀರಾ ಮುಶ್ರೀಫ್‌ (ಮಾಜಿ ಮೇಯರ್‌), ಅಬ್ದುಲ್‌ ರಜಾಕ್‌ ಹೊರ್ತಿ, ರವೂಫ್‌ ಶೇಖ್‌, ಈ ಹಿಂದಿನ ನಗರಸಭೆಯ ಮಾಜಿ ಉಪಾಧ್ಯಕ್ಷ ಅನ್ವರ್‌ ಜಮಾದಾರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಅಪ್ಸರಾಬೇಗಂ ಚಪ್ಪರಬಂದ್‌ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದಿನ ಚುನಾವಣೆಯಲ್ಲಿ ಸ್ವಲ್ಪರದಲ್ಲಿಯೇ ಟಿಕೆಟ್‌ ತಪ್ಪಿಸಿಕೊಂಡಿದ್ದ ವ್ಯಾಪಾರಿ ಅಬ್ದುಲ್‌ ಕರೀಂ ಬಾಗವಾನ ಈ ಬಾರಿ ಪ್ರಬಲ ಆಕಾಂಕ್ಷಿಯಾಗಿ ಟಿಕೆಟ್‌ಗೆ ಅರ್ಜಿ ಹಾಕಿದ್ದಾರೆ.

ಮಾಜಿ ಸಚಿವ ದಿ ಎಂ.ಎಲ್‌.ಉಸ್ತಾದ್‌ ಪುತ್ರಿ, ಕೆಪಿಸಿಸಿ ಕಾರ್ಯದರ್ಶಿ ರುಕ್ಸಾನಾ ಉಸ್ತಾದ್‌, ಹಾಸಿಂಪೀರ ವಾಲೀಕಾರ ಪದಾಧಿಕಾರಿಗಳ ಕೋಟಾ

ದಡಿ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಶಾಸಕ ಡಾ.ಮಕ್ಬೂಲ್‌ ಬಾಗವಾನ ಸಹೋದರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಾವೀದ ಬಾಗವಾನ, ಜಿಲ್ಲಾ ಕಾಂಗ್ರೆಸ್‌ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಮಹಮದ್‌ ರಫಿಕ್‌ ಟಪಾಲ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಮೀರ್‌ ಅಹಮದ್‌ ಬಾಗಲಕೋಟ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಎಂ.ಎಂ.ಸುತಾರ, ಚಾಂದಸಾಬ್‌ ಗಡಗಲಾವ ಸಹ ಪದಾಧಿಕಾರಿಗಳ ಕೋಟಾದಡಿಯೇ ಕೆಪಿಸಿಸಿಗೆ ಅರ್ಜಿ ನೀಡಿದ್ದಾರೆ.

ಮಾಜಿ ಸಚಿವ ದಿ ಎಂ.ಎಲ್‌.ಉಸ್ತಾದ್‌ ಪುತ್ರ ಸಲೀಂ ಉಸ್ತಾದ್‌ ಸಹ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದು, ಮುಖಂಡರಾದ ಜಾವೀದ ಜಮಾದಾರ, ಐ.ಎಂ.ಇಂಡಿಕರ, ಸಿ.ಎಸ್‌.ಇನಾಂದಾರ, ಶಬ್ಬೀರ್ ಡಾಲಾಯತ್‌, ಹಮೀದ್‌ ಮುಶ್ರೀಫ್‌, ಯುವ ಕಾಂಗ್ರೆಸ್‌ನಿಂದ ಇಕ್ಲಾಸ್ ಸುನ್ನೇವಾಲೆ ಕಾಂಗ್ರೆಸ್‌ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಬಾಗವಾನ ಆಟ ಬಲ್ಲವರ‍್ಯಾರು?’

ಟಿಕೆಟ್‌ ಬಯಸಿ 21 ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಕೋಟಾ. ಎಲ್ಲರೂ ಮುಸ್ಲಿಮರೇ. ಬಹುತೇಕರಿಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರೇ ಗಾಡ್‌ಫಾದರ್‌. ತಮ್ಮ ಬಳಿ ಬಂದ ಎಲ್ಲರಿಗೂ ಮಂದಹಾಸ ಬೀರಿ, ಪ್ರಯತ್ನ ಪಡಿ ಎಂದು ಸಚಿವ ಪಾಟೀಲ ಬೆನ್ನು ತಟ್ಟಿ ಕಳುಹಿಸಿದ್ದಾರೆ’ ಎಂದು ಸಚಿವರ ಆಪ್ತ ವಲಯ ತಿಳಿಸಿದೆ.

‘ಹಾಲಿ ಶಾಸಕ ಬಾಗವಾನ ಇದೀಗ ಚಾಣಾಕ್ಷರಾಗಿದ್ದಾರೆ. ಯಾವ ಸಂದರ್ಭ ಯಾವ ಪಟ್ಟು ಪ್ರಯೋಗಿಸಬೇಕು ಎಂಬುದನ್ನು ಕರಗತ ಮಾಡಿಕೊಂಡಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಈಗಾಗಲೇ ತನ್ನ ಸಹೋದರನನ್ನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷನನ್ನಾಗಿ ಮಾಡಿಕೊಂಡಿದ್ದರು. ಇದೀಗ ಟಿಕೆಟ್‌ಗೆ ಅರ್ಜಿ ಹಾಕಿಸಿದ್ದಾರೆ. ಬಾಗವಾನ ಆಟ ಬಲ್ಲವರ‍್ಯಾರು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

‘ಬಾಗವಾನ ವಿರುದ್ಧ ಚುನಾವಣಾ ಹೊಸ್ತಿಲಲ್ಲಿ ಅಸಮಾಧಾನ ಹೆಚ್ಚಿದೆ. ಟಿಕೆಟ್‌ ಬೇಡಿರುವವರ ಸಂಖ್ಯೆಯೂ ಸಾಕಷ್ಟಾಗಿದೆ. ಹೈಕಮಾಂಡ್‌ ಎಲ್ಲವನ್ನೂ ಪರಿಗಣಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಪಕ್ಷದ ನಿರ್ಧಾರಕ್ಕೆ ನಾವು ಬದ್ಧ’ ಎಂದು ಹಿರಿಯರೊಬ್ಬರು ಹೇಳಿದರು.

*

ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ಕುದುರೆಯಾಗಿರುವುದರಿಂದ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಯಾರಿಗೆ ಟಿಕೆಟ್‌ ಸಿಕ್ಕರೂ ಪಕ್ಷದ ಗೆಲುವಿಗೆ ದುಡಿಯುತ್ತೇನೆ.

–ಡಾ.ಮಕ್ಬೂಲ್‌ ಎಸ್‌.ಬಾಗವಾನ, ವಿಜಯಪುರ ನಗರ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry