ಬಡರೋಗಿಯ ಜೀವ ಉಳಿಸಿದ ಪಡಿತರ ಚೀಟಿ!

7

ಬಡರೋಗಿಯ ಜೀವ ಉಳಿಸಿದ ಪಡಿತರ ಚೀಟಿ!

Published:
Updated:

ಚಿಂಚೋಳಿ: ಅರ್ಜಿ ಸಲ್ಲಿಸಿದ ತಕ್ಷಣ ಬಿಪಿಎಲ್‌ ಪಡಿತರ ಚೀಟಿ ದೊರೆಯುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡ ನೂತನ ಕ್ರಮದಿಂದ ತಾಲ್ಲೂಕಿನ ಹೊಸಳ್ಳಿ (ಎಚ್‌) ತಾಂಡಾದ ಮೋಹನ ರಾಠೋಡ ಅವರ ಜೀವ ಉಳಿದಿದೆ.

ಅಪೆಂಡಿಕ್ಸ್‌ನಿಂದ ಬಳಲುತ್ತಿದ್ದ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿತ್ತು. ಶಸ್ತ್ರ ಚಿಕಿತ್ಸೆ ನಡೆಸಬೇಕು, ಇಲ್ಲದೇ ಹೋದರೆ ಅದು ಒಡೆದು ಜೀವಕ್ಕೆ ಅಪಾಯ ತರುತ್ತದೆ ಎಂದು ವೈದ್ಯರು ತಿಳಿಸಿದ್ದರು.

ಚಂದಾಪುರಕ್ಕೆ ಅಳಿಯನ ಮದುವೆಗೆ ಹೋಗಿದ್ದ ಮೋಹನ ಅವರು ನೋವಿನಿಂದ ಬಳಲಿದರು. ನಂತರ ತಾಲ್ಲೂಕು ಆಸ್ಪತ್ರೆಯ ಡಾ.ಸಂತೋಷ ಪಾಟೀಲ ಅವರ ಬಳಿ ಗುರುವಾರ ಚಿಕಿತ್ಸೆಗೆ ಬಂದಾಗ, ಸ್ಕ್ಯಾನಿಂಗ್‌ ವರದಿ ಆಧರಿಸಿ ತಕ್ಷಣ ಕಲಬುರ್ಗಿಗೆ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದರು.

ಬಡವರಾಗಿರುವ ಅವರ ಬಳಿ ಪಡಿತರ ಚೀಟಿ ಇರಲಿಲ್ಲ. ಆಗ ಮೋಹನ ಅವರನ್ನು ಆಂಬುಲೆನ್ಸ್‌ನಲ್ಲಿಯೇ ಮಲಗಿಸಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದೊಂದಿಗೆ ಆಧಾರ್‌ ಕಾರ್ಡ್‌ ಲಗತ್ತಿಸಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದರು. ಆಗ ಅರ್ಜಿ ಸಲ್ಲಿಸಿದ ತಕ್ಷಣ ಪಡಿತರ ಚೀಟಿ ಬಂದಿದೆ. ಇದರಿಂದ ಕಲಬುರ್ಗಿಯ ಇಎಸ್‌ಐಸಿ ಆಸ್ಪತ್ರೆಯಲ್ಲಿ ದಾಖಲಾಗಿ ಉಚಿತ ಶಸ್ತ್ರ ಚಿಕಿತ್ಸೆ ಪಡೆದಿದ್ದಾರೆ.

‘ಅಪೆಂಡಿಕ್ಸ್‌ ಒಡೆದಿದೆ ಎಂದು ಹೇಳಿ ವೈದ್ಯರು ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳುವವರೆಗೆ ರೋಗಿಯ ಜೀವದ ಖಾತ್ರಿ ನೀಡಲಿಲ್ಲ. ನಮ್ಮ ಅನುಮತಿಯ ಮೇರೆಗೆ ಅವರು ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿದರು. ಮೋಹನ ಈಗ ಅಪಾಯದಿಂದ ಪಾರಾಗಿದ್ದಾರೆ’ ಎಂದು ಪುರಸಭೆ ಸದಸ್ಯ ರಾಜು ಪವಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry