‘ಸಮಾಜ ಸುಧಾರಿಸುವ ಸಾಹಿತ್ಯ ರಚನೆಯಾಗಲಿ'

7
ಚೈತ್ರದ ಚಿಲುಮೆ ಯುಗಾದಿ ಕವಿಗೋಷ್ಠಿ

‘ಸಮಾಜ ಸುಧಾರಿಸುವ ಸಾಹಿತ್ಯ ರಚನೆಯಾಗಲಿ'

Published:
Updated:

ಮುಂಡರಗಿ: ‘ಸಾಹಿತ್ಯ ನಮ್ಮ ಬದುಕಿನ ಕೈಗನ್ನಡಿಯಾಗಿದ್ದು, ಜೀವನ ಹಾಗೂ ಸಾಹಿತ್ಯ ಒಂದಕ್ಕೊಂದು ಪೂರಕವಾಗಿವೆ. ಕವಿಗಳು ಹಾಗೂ ಸಾಹಿತಿಗಳು ತಮ್ಮ ಜೀವನಾನುಭವಗಳನ್ನು ಸುಂದರವಾಗಿ ಚಿತ್ರಿಸುವ ಮೂಲಕ ಉತ್ತಮ ಸಾಹಿತ್ಯವನ್ನು ರಚಿಸಬಲ್ಲರು’ ಎಂದು ಕವಯತ್ರಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಮೇಟಿ ತಿಳಿಸಿದರು.

ಯುಗಾದಿ ಹಬ್ಬದ ಪ್ರಯುಕ್ತ ತಾಲ್ಲೂಕಿನ ಮಹಾಗಣಪತಿ ಗ್ರಾಮೀಣ ಸಮಾಜ ಸೇವಾ ಸಂಸ್ಥೆಯು ಭಾನುವಾರ ಸ್ಥಳೀಯ ಬಸವರಾಜ ಸಜ್ಜನರ ಅವರ ಮನೆಯಲ್ಲಿ ಏರ್ಪಡಿಸಿದ್ದ ಚೈತ್ರದ ಚಿಲುಮೆ ಯುಗಾದಿ ಕವಿಗೋಷ್ಠಿಯಲ್ಲಿ ಬೇವು ಬೆಲ್ಲ ವಿತರಿಸಿ ಅವರು ಮಾತನಾಡಿದರು.

‘ಸಮಾಜದ ಹಲವು ಕ್ಷೇತ್ರಗಳು ಇಂದು ಕಲುಷಿತಗೊಳ್ಳುತ್ತಿದ್ದು, ಅದನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸಾಹಿತಿಗಳು ಶ್ರಮಿಸಬೇಕು. ಸಮಾಜವನ್ನು ಸುಧಾರಿಸುವ ಹಾಗೂ ಜನರಿಗೆ ಉಪಯೋಗವಾಗುವಂತಹ ಸಾಹಿತ್ಯ ರಚನೆಯಾಗಬೇಕಿದೆ’ ಎಂದು ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಎಂ.ಹೆಬ್ಬಾಳ ಮಾತನಾಡಿ, ‘ಇಂದಿನ ಮಕ್ಕಳು ಹಾಗೂ ಯುವಕರು ಸಾಹಿತ್ಯ ಓದುವುದನ್ನು ಕಡಿಮೆ ಮಾಡಿದ್ದಾರೆ. ಪುಸ್ತಕಗಳು ಇರಬೇಕಾದ ಸ್ಥಳವನ್ನು ಮೊಬೈಲುಗಳು ಆವರಿಸಿಕೊಂಡಿರುವುದು ದುರ್ದೈವದ ಸಂಗತಿಯಾಗಿದೆ’ ಎಂದು ವಿಷಾದಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಭಾಗ್ಯಲಕ್ಷ್ಮಿ ಇನಾಮತಿ ಮಾತನಾಡಿ, ‘ಮಹಿಳೆ ಹಾಗೂ ಮಕ್ಕಳಲ್ಲಿ ಅದ್ಭುತವಾದ ಕಲ್ಪನಾ ಶಕ್ತಿ ಇರುತ್ತದೆ. ಮಹಿಳೆಯರ ಭಾವ ಜಗತ್ತು ತುಂಬಾ ವಿಶಾಲವಾಗಿದ್ದು, ಪುರುಷರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬರೆಯುವ ಶಕ್ತಿ ಮಹಿಳೆಯರಿಗೆ ಒಲಿದಿರುತ್ತದೆ’ ಎಂದು ತಿಳಿಸಿದರು.

ಬಸವರಾಜ ಸಜ್ಜನರ ಹಾಗೂ ದಂಪತಿ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಕವಯತ್ರಿಯರಾದ ಶೋಭಾ ಮೇಟಿ, ಮಂಜುಳಾ ಇಟಗಿ, ಸುನಂದಾ ಹಂಚಿನಾಳ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ಜ್ಯೋತಿ ಜೋಷಿ, ಸಾವಿತ್ರಿ ಲಮಾಣಿ, ಲೀಲಾವತಿ ಉಮಚಗಿ, ಗಿರಿಜಾ ಕಡ್ಡಿ, ಕವಿಗಳಾದ ರವಿ ದೇವರಡ್ಡಿ, ಡಾ.ಕೆ.ಕೊಟ್ಟೂರಯ್ಯ, ಎಂ.ಎಸ್.ಶೀರನಹಳ್ಳಿ, ಆನಂದ ಕಾಕರಕಿ, ಅರ್ಪಿತ ಲಕ್ಕುಂಡಿ ಮೊದಲಾದವರು ಸ್ವರಚಿತ ಕವಿತೆ ವಾಚಿಸಿದರು. ಡಾ.ಕೆ.ಕೊಟ್ಟೂರಯ್ಯ, ಎಂ.ಎಸ್.ಶೀರನಹಳ್ಳಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry