ಕುಡಿವ ನೀರಿಗೆ ತಪ್ಪದ ಅಲೆದಾಟ

7
ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರ ಕೊರತೆ: ಸಿ.ಸಿ ರಸ್ತೆ ನಿರ್ಮಾಣಕ್ಕೆ ಒತ್ತಾಯ

ಕುಡಿವ ನೀರಿಗೆ ತಪ್ಪದ ಅಲೆದಾಟ

Published:
Updated:
ಕುಡಿವ ನೀರಿಗೆ ತಪ್ಪದ ಅಲೆದಾಟ

ತಾವರಗೇರಾ: ಮೂಲ ಸೌಲಭ್ಯಗಳಿಂದ ಮೆಣೇಧಾಳ ವಂಚಿತವಾಗಿದೆ. ಗ್ರಾಮದಲ್ಲಿ ಇತ್ತಿಚೆಗೆ ನಿರ್ಮಿಸಿರುವ ಚರಂಡಿಯಲ್ಲಿ ಹೂಳು ತುಂಬಿದೆ. ಕೆಲವು ಓಣಿಯಲ್ಲಿ ಕುಡಿವ ನೀರಿನ ಅಭಾವ ತಲೆದೋರಿದೆ. ಸಮಸ್ಯೆಗಳ ನಡುವೆ ಜನಜೀವನ ಸಾಗಿದೆ.

2 ವರ್ಷದ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿಹೊಂಡ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕೆಲಸ ಮಾಡಿದ ಕೆಲವರಿಗೆ ಇನ್ನೂ ಕೂಲಿ ಪಾವತಿಯಾಗಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮೇಲಾಧಿಕಾರಿಗಳ ಭೇಟಿ ಮಾಡಿದರು ಪ್ರಯೋಜನವಾಗಿಲ್ಲ.

‘ಕೂಲಿ ಹಣ ಪಾವತಿ ಮಾಡದ ಸರ್ಕಾರಿ ಅಧಿಕಾರಿಗಳು ಹಣವನ್ನು ನುಂಗಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಮತ್ತೆ ಕೂಲಿ ಕೆಲಸ ಆರಂಭಿ ಸಿದ್ದು, ದುಡಿವ ಕೈಗಳಿಗೆ ಸಮರ್ಪಕ ಕೂಲಿ ನೀಡುತ್ತಿಲ್ಲ’ ಎಂದು ಗ್ರಾಮದ ಕೂಲಿಕಾರ ಮಲ್ಲಪ್ಪ ಮ್ಯಾಗಲಮನಿ ಹೇಳಿದರು.

ಸರ್ಕಾರಿ ಪ್ರೌಢಶಾಲೆ ಆರಂಭ ವಾಗಿ 6 ವರ್ಷ ಕಳೆದರೂ ಕೊಠಡಿಯ ಕಾಮಗಾರಿ ಮುಗಿದಿಲ್ಲ. ಮಂದಗತಿಯಲ್ಲಿ ಕಟ್ಟಡ ಕೆಲಸ ನಡೆದಿದೆ. ಬೊಧನೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳಲ್ಲಿ ಮಾಡಲಾಗುತ್ತಿದೆ. ಹಿಂದಿ ವಿಷಯ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಕುಂಟಿತವಾಗುತ್ತಿದೆ.

‘ಪ್ರೌಢಶಾಲೆಯಲ್ಲಿ ಉಸ್ತುವಾರಿ ಸಮಿತಿ ರಚನೆ ಮಾಡಿಲ್ಲ. ಶಾಲಾ ಅಭಿವೃದ್ಧಿ ಮತ್ತು ಕುಂದು–ಕೊರತೆಗಳ ಬಗ್ಗೆ ಕಾಳಜಿ ಕಡಿಮೆಯಾಗಿದೆ. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎನ್ನುತ್ತಾರೆ ಶರಣಪ್ಪ ಕುಂಬಾರ.

ಗ್ರಾಮದ ಕೆಲವು ಓಣಿಗಳಲ್ಲಿ ಕುಡಿವ ನೀರಿನ ಅಭಾವ ತಲೆದೋರಿದೆ. ಪ್ರತಿದಿನ ಸಮೀಪದ ನೀರಾವರಿ ತೋಟಗಳ ಕೊಳವೆಬಾವಿ ಹುಡುಕಿ ಹೋಗುವಂತಾಗಿದೆ. ಬೇಸಿಗೆ ಬಂದರೂ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತ ಗ್ರಾಮಸ್ಥರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮಕ್ಕೆ ಮುಂದಾಗುತ್ತಿಲ್ಲ.

‘ಮಹಿಳೆಯರು ಕೊಡ ಹಿಡಿದು ನೀರಿಗಾಗಿ ಅಲೆದಾಡುತ್ತಿದ್ದಾರೆ. ಕೈಪಂಪ್‌ ನೀರಿನಲ್ಲಿ ಪ್ಲೋರೈಡ ಅಂಶ ಇದ್ದು, ಕುಡಿಯಲು ಯೋಗ್ಯವಿಲ್ಲ’ ಎಂದು ಗ್ರಾಮದ ಕನಕಪ್ಪ ತಳವಾರ ಹೇಳಿದರು.

ಕೆಲವು ಓಣಿಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಉಪ ಆರೋಗ್ಯ ಕೆಂದ್ರದಲ್ಲಿ ಸುಸಜ್ಜಿತ ವ್ಯವಸ್ಥೆಗಳಿದ್ದರು ಸ್ವಚ್ಛತೆ ಇಲ್ಲದಾಗಿದೆ. ಕಾಪೌಂಡ್‌ಗೆ ಬಾಗಿಲು ಹಾಕಬೇಕಿದೆ. ಕೇಂದ್ರಕ್ಕೆ ಬರುವ ರೋಗಿಗಳಿಗೆ ಕುಡಿವ ನೀರು ಮತ್ತು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

**

ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಹಿನ್ನಡೆ ಆಗುತ್ತಿದೆ. ಶಾಲಾ ಉಸ್ತುವಾರಿ ಸಮಿತಿ ರಚನೆ ಮಾಡಿಲ್ಲ.

 ಶರಣಪ್ಪ ಕುಂಬಾರ, ಮೆಣೇಧಾಳ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry