ಶ್ರೀದೇವಿ ಸ್ಥಾನಕ್ಕೆ ಮಾಧುರಿ ದೀಕ್ಷಿತ್

7

ಶ್ರೀದೇವಿ ಸ್ಥಾನಕ್ಕೆ ಮಾಧುರಿ ದೀಕ್ಷಿತ್

Published:
Updated:
ಶ್ರೀದೇವಿ ಸ್ಥಾನಕ್ಕೆ ಮಾಧುರಿ ದೀಕ್ಷಿತ್

ಮಾಧುರಿ ದೀಕ್ಷಿತ್‌ ಹೊಸ ಚಿತ್ರವೊಂದಕ್ಕೆ ಬಣ್ಣ ಹಚ್ಚಲಿರುವುದು ಈಗ ಪಕ್ಕಾ ಆಗಿದೆ. ಬಹುಭಾಷಾ ನಟಿ ಶ್ರೀದೇವಿ ನಿಧನದಿಂದ ಖಾಲಿಯಾಗಿದ್ದ ಸ್ಥಾನವನ್ನು ಮಾಧುರಿ ತುಂಬಲಿದ್ದಾರೆ ಎಂಬ ವಿಷಯವನ್ನು ಶ್ರೀದೇವಿ ಮಗಳು ಜಾಹ್ನವಿ ಟ್ವಿಟರ್‌ನಲ್ಲಿ ಪ್ರಕಟಿಸಿ ಕೆಲವೇ ಹೊತ್ತಿನಲ್ಲಿ ನಿರ್ಮಾಪಕ ಕರಣ್‌ ಜೋಹರ್‌ ‘ಈ ಸುದ್ದಿ ನಿಜ’ ಎಂದು ಖಚಿತಪಡಿಸಿದ್ದಾರೆ.

ಅಭಿಷೇಕ್‌ ವರ್ಮನ್‌ ನಿರ್ದೇಶನದ ಈ ಚಿತ್ರದ ಶೀರ್ಷಿಕೆ ‘ಶಿಧಾತ್‌’ ಎಂಬ ಗುಲ್ಲೆದ್ದಿತ್ತು. ಆದರೆ, ‘ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ, ಆದರೆ ಶಿಧಾತ್‌ ಅಂತೂ ಅಲ್ಲ’ ಎಂದು ಕರಣ್‌ ತಮ್ಮ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಏಪ್ರಿಲ್‌ ಎರಡನೇ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂದೂ ಅವರು ತಿಳಿಸಿದ್ದಾರೆ. ಆಲಿಯಾ ಭಟ್‌, ವರುಣ್‌ ಧವನ್‌, ಸಂಜಯ್‌ ದತ್‌ , ಸೋನಾಕ್ಷಿ ಸಿನ್ಹಾ ಮತ್ತು ಆದಿತ್ಯ ರಾಯ್‌ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ, ಸಂಜಯ್‌ ದತ್‌ ಮತ್ತು ಮಾಧುರಿ ನಡುವಿನ ಹಳೆಯ ನಂಟು, ಈ ಚಿತ್ರದಿಂದಾಗಿ ಮತ್ತೆ ಬಿಸಿ ಚರ್ಚೆಯ ವಸ್ತುವಾಗಿದೆ. ಹೌದು, 90ರ ದಶಕದಲ್ಲಿ ಬಾಲಿವುಡ್‌ನ ನೆಚ್ಚಿನ ಯುವ ಜೋಡಿಯಾಗಿದ್ದ ಸಂಜೂ ಭಾಯ್‌ ಮತ್ತು ಮಾಧುರಿ ನಡುವಿನ ಪ್ರೀತಿ, ಪ್ರೇಮ, ಪ್ರಣಯ ಗುಟ್ಟಾಗಿಯೇನೂ ಉಳಿದಿರಲಿಲ್ಲ. ಅವರಿಬ್ಬರೂ ಮದುವೆಯಾಗುತ್ತಾರೆ ಎಂದೇ ಇಬ್ಬರ ಸಮೀಪವರ್ತಿಗಳು ನಂಬಿದ್ದರು. ಮಾಧುರಿ ಅವರನ್ನು ಮದುವೆಯಾಗುವ ಉದ್ದೇಶದಿಂದ ಸಂಜೂ ಭಾಯ್‌ ತಮ್ಮ ಪತ್ನಿ ರಿಚಾಗೆ ವಿಚ್ಛೇದನ ನೀಡುತ್ತಾರೆ ಎಂದೂ ಗುಲ್ಲೆದ್ದಿತ್ತು.

ಈ ಜೋಡಿ ಅಭಿನಯಿಸಿದ್ದ ‘ಸಾಜನ್‌’ ಚಿತ್ರ ಗೆದ್ದಾಗ ಚಿತ್ರದ ಬಗ್ಗೆ ಮಾತನಾಡಿದ್ದಕ್ಕಿಂತ ಹೆಚ್ಚಾಗಿ ಮಾಧುರಿ–ಸಂಜಯ್‌ ಒಡನಾಟದ ಬಗ್ಗೆಯೇ ಹೆಚ್ಚು ಸುದ್ದಿಯಾಗಿತ್ತು. 1992ರಲ್ಲಿ ಸುಭಾಷ್‌ ಘಾಯ್‌ ನಿರ್ದೇಶನದ ‘ಖಳನಾಯಕ್‌’ ಚಿತ್ರೀಕರಣದ ವೇಳೆ ಇವರಿಬ್ಬರ ನಡುವಿನ ನಂಟು ಇನ್ನೂ ಗಟ್ಟಿಯಾಗಿತ್ತು. ಇದೇ ವೇಳೆ ಸಂದರ್ಶನಗಳಲ್ಲಿ ಸಂಜಯ್‌ ಬಗ್ಗೆ ಮಾಧುರಿ ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸುತ್ತಿದ್ದರು. ಇದೀಗ, ಕರಣ್‌ ಜೋಹರ್‌ ಚಿತ್ರದಲ್ಲಿ ಹಳೆಯ ಜೋಡಿ ಮತ್ತೆ ತೆರೆಯಲ್ಲಿ ಒಂದಾಗಲಿರುವುದು ಎಲ್ಲರ ಹುಬ್ಬುಗಳು ಮೇಲೇರುವಂತೆ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry