‘ಶಾಸಕ ಜೀವರಾಜ್ ಶೃಂಗೇರಿ ಮಠಕ್ಕಿಂತ ದೊಡ್ಡವರೇ?’

7
ರಾಹುಲ್ ಗಾಂಧಿ ಶೃಂಗೇರಿ ಭೇಟಿ ಪ್ರಶ್ನಿಸಿದ ಶಾಸಕರಿಗೆ ಕಾಂಗ್ರೆಸ್ ತಿರುಗೇಟು

‘ಶಾಸಕ ಜೀವರಾಜ್ ಶೃಂಗೇರಿ ಮಠಕ್ಕಿಂತ ದೊಡ್ಡವರೇ?’

Published:
Updated:

ಕೊಪ್ಪ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶೃಂಗೇರಿ ಮಠಕ್ಕೆ ಭೇಟಿ ನೀಡುತ್ತಿರುವುದನ್ನು ಟೀಕಿಸಿರುವ ಶಾಸಕ ಡಿ.ಎನ್.ಜೀವರಾಜ್ ಹೇಳಿಕೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ತೀವ್ರವಾಗಿ ಖಂಡಿಸಿದ್ದು, ‘ಶಾರದಾಂಬೆಯ ದರ್ಶನ, ಗುರುಗಳ ಆಶೀರ್ವಾದ ಪಡೆಯಲು ಶಾಸಕರ ಅನುಮತಿ ಬೇಕೇ, ಅವರು ಶೃಂಗೇರಿ ಮಠಕ್ಕಿಂತಲೂ ದೊಡ್ಡವರೇ’ ಎಂದು ಪ್ರಶ್ನಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೃಂಗೇರಿಗೆ ರಾಹುಲ್ ಗಾಂಧಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಇದು ಅವರ ಖಾಸಗಿ ಕಾರ್ಯಕ್ರಮ. ಹಾಗಾಗಿ ಪಕ್ಷದಿಂದಲೂ ಹೆಚ್ಚಿನ ಪ್ರಚಾರ ನೀಡಿಲ್ಲ. ಆದರೆ ಇಲ್ಲಿನ ಶಾಸಕರು ‘ರಾಹುಲ್ ಗಾಂಧಿಯವರಿಗೆ ಶೃಂಗೇರಿಯಲ್ಲಿ ದೇವರ ಆಶೀರ್ವಾದ ಸಿಗುವುದಿಲ್ಲ, ಅವರ ಪಕ್ಷದ ಸೋಲು ಇಲ್ಲಿಂದಲೇ ಆರಂಭವಾಗಲಿದೆ’ ಎಂದು ಟೀಕಿಸಿದ್ದಾರೆ. ಜೀವರಾಜ್ ಈ ಕ್ಷೇತ್ರದ ಶಾಸಕರೇ ಹೊರತು ಶೃಂಗೇರಿ ಮಠಕ್ಕಿಂತ ಅಲ್ಲಿನ ಗುರು ಪರಂಪರೆಗಿಂತ ದೊಡ್ಡವರಲ್ಲ. ಯಾವ ಮಠ ಮಂದಿರಗಳಿಗೆ ಯಾರು, ಯಾವಾಗ ಭೇಟಿ ಮಾಡಬೇಕೆಂದು ನಿರ್ಧರಿಸುವ ಅಧಿಕಾರವನ್ನು ಅವರಿಗೆ ಜನ ಕೊಟ್ಟಿಲ್ಲ’ ಎಂದರು.

‘ಈ ಹಿಂದೆ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ಶೃಂಗೇರಿಗೆ ಭೇಟಿ ನೀಡಿದ್ದರು. ಆ ಪರಂಪರೆಯ ಭಾಗವಾಗಿ ಈಗಿನ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಶೃಂಗೇರಿ ಮಠಕ್ಕೆ ಭೇಟಿ ನೀಡಲಿದ್ದು, ಶಾರದಾಂಬೆಗೆ ಪೂಜೆ ಸಲ್ಲಿಸಿ, ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುವರು’ ಎಂದರು.

ಶೃಂಗೇರಿ ಮಠ ಜನಪರ ಕಾರ್ಯಕ್ರಮ, ಅನ್ನದಾನದಂತಹ ಸೇವಾ ಕಾರ್ಯಗಳ ಜೊತೆ ರಾಜ ಕಾರಣಕ್ಕೆ ಎಳ್ಳಷ್ಟೂ ಆಸ್ಪದ ನೀಡದ ಶುದ್ಧ ಅಧ್ಯಾತ್ಮ ಕೇಂದ್ರವಾಗಿದ್ದು, ದೇಶ ವಿದೇಶಗಳ ಭಕ್ತರ ಗೌರವಾದರಕ್ಕೆ ಪಾತ್ರವಾಗಿದೆ. ಶಾರದಾಂಬೆಯ ಮತ್ತು ಗುರುಗಳ ಆಶೀರ್ವಾದ ಪಡೆಯುವುದು ಪ್ರತಿಯೊಬ್ಬ ಭಕ್ತನ ಬಯಕೆ. ಅದರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಶಾಸಕರು ತಮ್ಮ ವಿಕೃತಿ ಪ್ರದರ್ಶಿಸಿದ್ದಾರೆ’ ಎಂದರು.

ವಕ್ತಾರ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ಇನೇಶ್, ಮುಖಂಡರಾದ ನುಗ್ಗಿ ಮಂಜುನಾಥ್, ನಾಗೇಶ್ ಅಮೀನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry