‘ರಾಜರಥ’ದ ಪ್ರೀತಿಯ ಪಯಣ

7

‘ರಾಜರಥ’ದ ಪ್ರೀತಿಯ ಪಯಣ

Published:
Updated:
‘ರಾಜರಥ’ದ ಪ್ರೀತಿಯ ಪಯಣ

ಚಿತ್ರ: ರಾಜರಥ

ನಿರ್ಮಾಪಕರು: ಅಜಯ್‌ ರೆಡ್ಡಿ, ವಿಶು ದಾಕಪ್ಪಗಾರಿ, ಅಂಜು ವಲ್ಲಭನೇನಿ, ಸತೀಶ್‌ ಶಾಸ್ತ್ರಿ

ನಿರ್ದೇಶನ: ಅನೂಪ್‌ ಭಂಡಾರಿ

ತಾರಾಗಣ: ನಿರೂಪ್‌ ಭಂಡಾರಿ, ಆವಂತಿಕಾ ಶೆಟ್ಟಿ, ಆರ್ಯ, ರವಿಶಂಕರ್

ನೆಲ, ಭಾಷೆಯ ಚೌಕಟ್ಟು ಇಟ್ಟುಕೊಂಡು ಅದಕ್ಕೆ ಪ್ರೀತಿಯ ಹೂರಣ ಬೆರೆಸಿದ ಚಿತ್ರಗಳು ಹೊಸತೇನಲ್ಲ. ಒಂದಿಷ್ಟು ಹಾಸ್ಯ ಲೇಪಿಸಿ ಪ್ರೀತಿ ಮತ್ತು ಬದುಕು ಎರಡನ್ನೂ ‘ರಾಜರಥ’ದಲ್ಲಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅನೂಪ್‌ ಭಂಡಾರಿ. ಪ್ರೀತಿ, ಸಾಂಸ್ಕೃತಿಕ ಹೋರಾಟ, ಅದರ ಹಿಂದಿರುವ ಸತ್ಯಾಸತ್ಯತೆ ಮತ್ತು ಲಾಭಕೋರತನವನ್ನು ಒಂದು ಸೂತ್ರಕ್ಕೆ ಅಳವಡಿಸುವ ಪ್ರಯತ್ನ ಅವರದು.

ಆದರೆ, ಜನಪ್ರಿಯ ಸಿನಿಮಾಗಳ ಸಿದ್ಧಸೂತ್ರದ ಚೌಕಟ್ಟು ಮೀರಲು ಹಂಬಲಿಸುವ ಚಿತ್ರ ಕೊನೆಗೆ ಹಳೆಯದೇ ಹಾದಿಯಲ್ಲಿ ಸಾಗುತ್ತದೆ. ಕಾಲೇಜಿನಲ್ಲಿ ಮೊದಲ ದಿನವೇ ನೋಡಿದ ಹುಡುಗಿಯ ಪ್ರೀತಿಗಾಗಿ ಹಂಬಲಿಸುವ ನಾಯಕ, ಆಕೆಗೆ ಮತ್ತೊಬ್ಬನ ಮೇಲೆ ಮೋಹ, ನಾಯಕನ ಅಣ್ಣನ ದಿಕ್ಕುತ‍ಪ್ಪಿದ ಹೋರಾಟ– ಇಂತಹ ಪ್ರಸಂಗಗಳನ್ನು ಬಿಡಿ ಬಿಡಿಯಾಗಿ ಹೇಳುವುದು ಚೆನ್ನಾಗಿದೆ. ಆದರೆ, ಅವುಗಳನ್ನು ಒಟ್ಟುಗೂಡಿಸಿ ಹಿಡಿಯುವ ಜಾಡು ಸಾಕಷ್ಟು ಹಳೆಯದ್ದಾಗಿದೆ.

ಹೋರಾಟಗಾರರ ಸ್ವಾರ್ಥದಿಂದ ಆಗುವ ದುರಂತ, ನಾಯಕ ಮತ್ತು ನಾಯಕಿಯ ನಡುವೆ ಪ್ರೀತಿ ಅರಳಿಸುವುದಕ್ಕಾಗಿ ಬಸ್ಸನ್ನು ಬಳಸಿಕೊಂಡಿರುವುದು ತಂತ್ರದ ದೃಷ್ಟಿಯಿಂದ ಗಮನಸೆಳೆಯುತ್ತದೆ. ಆದರೆ, ಅಂತಿಮವಾಗಿ ಇದೊಂದು ತಾಂತ್ರಿಕ ಕಸರತ್ತಾಗಿಯಷ್ಟೇ ಉಳಿಯುತ್ತದೆ.

‘ರಾಜರಥ’ದ ಮಹತ್ವ ಇರುವುದು ರಾಜಕಾರಣಿಗಳ ಕುತಂತ್ರವನ್ನು ಕಣ್ಣಿಗೆ ಹಿಡಿಯುವುದರಲ್ಲಿ ಮತ್ತು ಸಾಮರಸ್ಯದ ಬದುಕಿನ ಅಗತ್ಯವನ್ನು ಪ್ರತಿಪಾದಿಸುವುದರಲ್ಲಿ. ಅಧಿಕಾರಸ್ಥರ ಷಡ್ಯಂತ್ರದಿಂದ ಜನಸಾಮಾನ್ಯರ ಬದುಕು ಹೇಗೆ ಸಂಕಷ್ಟದ ಕೂಪಕ್ಕೆ ನೂಕಲ್ಪಡುತ್ತದೆ ಎನ್ನುವ ಬಗ್ಗೆಯೂ ನಿರ್ದೇಶಕರು ಹೇಳಿದ್ದಾರೆ.

ಮೇಘಾ (ಆವಂತಿಕಾ ಶೆಟ್ಟಿ) ಮತ್ತು ಅಭಿ (ನಿರೂಪ್‌ ಭಂಡಾರಿ) ಎಂಜಿನಿಯರಿಂಗ್‌ ಓದುತ್ತಿರುತ್ತಾರೆ. ಮೊದಲ ನೋಟಕ್ಕೆ ಆಕೆಯ ಮೇಲೆ ಅಭಿಗೆ ಪ್ರೀತಿ ಅಂಕುರಿಸುತ್ತದೆ. ಅದನ್ನು ಹೇಳಲು ಅವನಿಗೆ ಅವಕಾಶ ಒದಗಿಬರುವುದಿಲ್ಲ. ಚೆನ್ನೈನಲ್ಲಿ ನಡೆಯುವ ಮದುವೆಗೆ ಆತ ಹೋಗಬೇಕಾಗುತ್ತದೆ. ಆಕೆಯೂ ಅವನು ಹೋಗುತ್ತಿರುವ ಬಸ್‌ ಏರುತ್ತಾಳೆ. ಅಭಿಗೆ ತನ್ನ ದೈನಂದಿನ ಬದುಕಿನಲ್ಲಿ ಎದುರಾದವರೆಲ್ಲರೂ ಅದೇ ಬಸ್ಸಿನಲ್ಲಿ ಪಯಣಿಸುತ್ತಾರೆ.  

ಕೋರ್ಟ್‌ ಆದೇಶದ ಅನ್ವಯ ಪೆರಿಯಂಪಳ್ಳಿ ಊರು ತಮಿಳುನಾಡಿಗೆ ಸೇರುತ್ತದೆ. ಇದರ ರಾಜಕೀಯ ಲಾಭ ಪಡೆಯಲು ಅಧಿಕಾರಸ್ಥರ ಗುಂಪೊಂದು ಹವಣಿಸುತ್ತದೆ. ಇದಕ್ಕಾಗಿ ದೊಂಬಿ ಎಬ್ಬಿಸುತ್ತಾರೆ. ನೂರಾರು ವಾಹನಗಳು ಬೆಂಕಿಗೆ ಆಹುತಿಯಾಗುತ್ತವೆ. ಜನರು ಜೀವ ಕಳೆದುಕೊಳ್ಳುತ್ತಾರೆ. ‘ರಾಜರಥ’ಕ್ಕೂ ಬೆಂಕಿ ಹಚ್ಚುತ್ತಾರೆ. ಮಗುವನ್ನು ಉಳಿಸಲು ಹೋದ ಅಭಿ ಮತ್ತು ಮೇಘಾ ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕುತ್ತಾರೆ. ಕೊನೆಗೆ ಅವರಿಬ್ಬರೂ ಏನಾಗುತ್ತಾರೆ ಎನ್ನುವುದೇ ಸಿನಿಮಾದ ಕಥಾವಸ್ತು.

ಪಾತ್ರವರ್ಗದ ಪೈಕಿ ವಿಶೇಷವಾಗಿ ಗಮನ ಸೆಳೆಯುವುದು ನಟರಾದ ರವಿಶಂಕರ್‌ ಮತ್ತು ಆರ್ಯ. ರವಿಶಂಕರ್‌ ತಮ್ಮ ಮ್ಯಾನರಿಸಂಗಳನ್ನು ಉಳಿಸಿಕೊಂಡೇ ಅಂಕಲ್‌ ಪಾತ್ರದಲ್ಲಿ ಪ್ರೇಕ್ಷಕರ ಮನಗೆಲ್ಲುತ್ತಾರೆ. ಕನ್ನಡ ಹೋರಾಟಗಾರನ ಪಾತ್ರದಲ್ಲಿ ಆರ್ಯ ಅವರದ್ದು ಅಚ್ಚುಕಟ್ಟಾದ ಅಭಿನಯ.

ರಾಜರಥಕ್ಕೆ ನಟ ಪುನೀತ್‌ ರಾಜ್‌ಕುಮಾರ್‌ ಧ್ವನಿ ನೀಡಿದ್ದಾರೆ. ‘ಬೆಂಕಿಯಲ್ಲಿ ಅರಳಿದ ಹೂವು' ಚಿತ್ರದ ‘ಮುಂದೆ ಬನ್ನಿ ಸ್ವಾಮಿ ಮುಂದೆ’ ಹಾಡು ವಿಶಿಷ್ಟ ರೀತಿಯಲ್ಲಿ ಬಳಕೆಯಾಗಿದೆ. ಉಳಿದಂತೆ ಯಾವ ಹಾಡುಗಳೂ ಮನಸಿನಲ್ಲಿ ಉಳಿಯುವುದಿಲ್ಲ. ವಿಲಿಯಂ ಡೇವಿಡ್‌ ಅವರ ಛಾಯಾಗ್ರಹಣ ಸೊಗಸಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry