ಕುರುಬ ಸಮುದಾಯದ ನಾಯಕರದ್ದೇ ಪಾರುಪತ್ಯ

7
ಹೊಸದುರ್ಗ ಕಾಂಗ್ರೆಸ್‌, ಪಕ್ಷೇತರರ ಪ್ರಾಬಲ್ಯದ ವಿಧಾನಸಭೆ ಚುನಾವಣೆ ಕ್ಷೇತ್ರ

ಕುರುಬ ಸಮುದಾಯದ ನಾಯಕರದ್ದೇ ಪಾರುಪತ್ಯ

Published:
Updated:
ಕುರುಬ ಸಮುದಾಯದ ನಾಯಕರದ್ದೇ ಪಾರುಪತ್ಯ

ಹೊಸದುರ್ಗ: ತಾಲ್ಲೂಕಿನ ವಿಧಾನಸಭೆ ಕ್ಷೇತ್ರದ ಚುನಾವಣೆಯ ಇತಿಹಾಸ ಬರೆಯದ ಬಿಜೆಪಿ ಈ ಬಾರಿ ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್‌ ಅವರಿಗೆ ಟಿಕೆಟ್‌ ಘೋಷಣೆ ಮಾಡಿರುವುದರಿಂದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೇ ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿ ತೀವ್ರವಾಗಿದೆ.

1947ರಿಂದ 1952ರ ವರೆಗಿನ ಮೈಸೂರಿನ ಮಹಾರಾಜದ ಕಾಲದಲ್ಲಿದ್ದ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಬಾಗೂರು ಗ್ರಾಮದ ಕುರುಬ ಸಮಾಜದ ತಿಮ್ಮಯ್ಯ ಅವರು ಕ್ರಾಂಗ್ರೆಸ್‌ನಿಂದ ಎಂಆರ್‌ಎ ಆಗಿ ತಾಲ್ಲೂಕಿನ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಿದ್ದರೆಂಬ ಕೀರ್ತಿಗೆ ಭಾಜನರಾಗಿದ್ದರು. ಕುರುಬ ಸಮುದಾಯದವರಿಂದ ಆರಂಭವಾದ ತಾಲ್ಲೂಕಿನ ಆಡಳಿತದಲ್ಲಿ ಹಲವು ವರ್ಷಗಳಲ್ಲಿ ಆದ ಅಧಿಕಾರದ ಬದಲಾವಣೆ ನಡುವೆಯೂ ಪ್ರಸ್ತುತ ಅದೇ ಸಮಾಜದ ಶಾಸಕ ಬಿ.ಜಿ.ಗೋವಿಂದಪ್ಪ ಅವರಿಂದ ಮುಂದುವರೆಯುತ್ತಿದೆ.

1952ರಿಂದ ಇದುವರೆಗೂ ನಡೆದ 14 ಸಾರ್ವತ್ರಿಕ ಚುನಾವಣೆಗಳಲ್ಲಿ 7 ಬಾರಿ ಕಾಂಗ್ರೆಸ್‌, 5 ಬಾರಿ ಪಕ್ಷೇತರ, ತಲಾ ಒಂದು ಬಾರಿ ಪಿ.ಎಸ್‌.ಪಿ ಹಾಗೂ ಜೆ.ಎನ್‌.ಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಅಭ್ಯರ್ಥಿಗಳೆಲ್ಲರ ಗೆಲುವಿನ ಮಾರ್ಗ ಗಮನಿಸಿದರೆ ಪಕ್ಷದ ವರ್ಚಸ್ಸಿಗಿಂತ ವ್ಯಕ್ತಿ ನಿಷ್ಠೆಯೇ ಎದ್ದು ಕಾಣುತ್ತಿದೆ.

ವೀರಶೈವ ಲಿಂಗಾಯಿತ ಸಮುದಾಯಕ್ಕೆ ಸೇರಿದ ಮೂರು ಮಂದಿ 4 ಸಲ, ಕುರುಬ ಸಮಾಜಕ್ಕೆ ಸೇರಿದ 5 ಮಂದಿ 7 ಬಾರಿ, ಸರ್ಪ ಒಕ್ಕಲಿಗ, ಜೈನರು, ಭೋವಿ ಜನಾಂಗಕ್ಕೆ ಸೇರಿದವರು ತಲಾ ಒಬ್ಬರು, ಒಂದು ಬಾರಿಗೆ ಶಾಸಕರಾಗಿದ್ದಾರೆ. ಉಳಿದಂತೆ ಇನ್ಯಾವುದೇ ಸಮುದಾಯದವರು ಚುನಾವಣೆಗೆ ಸ್ಪರ್ಧಿಸಿದ್ದರೂ ವಿಧಾನಸಭೆ ಸಭೆ ಸದಸ್ಯರಾಗಿ ಆಯ್ಕೆಯಾಗುವ ಭಾಗ್ಯ ಸಿಕ್ಕಿಲ್ಲ.

1952ರಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚಿಕ್ಕಯಗಟಿ ಜಿ.ಬಸಪ್ಪ ಅವರು ಪಕ್ಷೇತರ ಅಭ್ಯರ್ಥಿ ಚನ್ನಯ್ಯ ಒಡೆಯರ್‌ ವಿರುದ್ಧ ಗೆಲ್ಲುವ ಮೂಲಕ ಕ್ಷೇತ್ರದ ಪ್ರಥಮ ಶಾಸಕರಾಗಿ ಆಯ್ಕೆಯಾದರು. 1957ರಲ್ಲಿ ಪಕ್ಷೇತರ ಅಭ್ಯರ್ಥಿ ಬೆಲಗೂರಿನ ಬಿ.ಎಸ್‌.ಶಂಕರಪ್ಪ ಆಯ್ಕೆಯಾದರು. 1962ರಲ್ಲಿ ಪಿ.ಎಸ್‌.ಪಿಯ ಜಿ.ಟಿ.ರಂಗಪ್ಪ, ಕಾಂಗ್ರೆಸ್‌ನ ಎಸ್‌.ನಿಜಲಿಂಗಪ್ಪ(ಮುಖ್ಯಮಂತ್ರಿ ಅಭ್ಯರ್ಥಿ) ವಿರುದ್ಧ ಗೆಲುವು ಸಾಧಿಸುವ ಮೂಲಕ ಇತಿಹಾಸ ಬರೆದರು.

1967ರಲ್ಲಿ ಕಾಂಗ್ರೆಸ್‌ನ ಮಳಲಿ ಎಂ.ರಾಮಪ್ಪ, 1972ರಲ್ಲಿ ಕಾಂಗ್ರೆಸ್‌ನ ಎಂ.ಜಿ.ದಿಬ್ಬದ ಎಂ.ವಿ.ರುದ್ರಪ್ಪ, 1978ರಲ್ಲಿ ಕಾಂಗ್ರೆಸ್‌ನ ಬಾಗೂರಿನ ಕೆ.ವೆಂಕಟರಾಮಯ್ಯ, 1983ರಲ್ಲಿ ಜೆ.ಎನ್‌.ಪಿಯ ಚಿಕ್ಕಯಗಟಿ ಜಿ.ಬಸಪ್ಪ, 1985ರಲ್ಲಿ (ಉಪ ಚುನಾವಣೆ) ಕಾಂಗ್ರೆಸ್‌ನ ದೊಡ್ಡಗಟ್ಟದ ಜಿ.ರಾಮದಾಸ್‌, 1989ರಲ್ಲಿ ಪಕ್ಷೇತರ ಅಭ್ಯರ್ಥಿ ಪಟ್ಟಣದ ಇಲ್ಕಲ್‌ ವಿಜಯಕುಮಾರ್‌, 1994ರಲ್ಲಿ ಪಟ್ಟಣದ ಪಕ್ಷೇತರ ಅಭ್ಯರ್ಥಿ ಟಿ.ಎಚ್‌.ಬಸವರಾಜು, 1999ರಲ್ಲಿ ಪಕ್ಷೇತರ ಮತ್ತು 2004ರಲ್ಲಿ ಕಾಂಗ್ರೆಸ್‌ನಿಂದ ಬಿ.ಜಿ.ಗೋವಿಂದಪ್ಪ ಗೆಲುವು ಸಾಧಿಸಿದರು. ಆದರೆ, 2008ರಲ್ಲಿ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಡಿ.ಶೇಖರ್‌ ಅವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ಜಿ.ಗೋವಿಂದಪ್ಪ 1168ಮತಗಳ ಅಂತರದಲ್ಲಿ ಸೋಲುತ್ತಾರೆ. 2013ರಲ್ಲಿ ಕಾಂಗ್ರೆಸ್‌ನ ಬಿ.ಜಿ.ಗೋವಿಂದಪ್ಪ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಡಿ.ಶೇಖರ್‌ ವಿರುದ್ಧ 20,017 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಬಿ.ಜಿ.ಗೋವಿಂದಪ್ಪ 2008ರ ಚುನಾವಣೆಯಲ್ಲಿ ಸೋಲದಿದ್ದರೆ ಸತತ ನಾಲ್ಕು ಬಾರಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಕೀರ್ತಿ ಅವರಿಗೆ ಸಲ್ಲುತ್ತಿತು.

ಏಕೈಕ ಸಚಿವ ಸ್ಥಾನ ನೀಡಿದ ಕ್ಷೇತ್ರ: 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಬಿಜೆಪಿ ಸರ್ಕಾರ ರಚನೆಗೆ ಸಾಥ್‌ ನೀಡಿದ್ದರಿಂದ ಅವರಿಗೆ ಜವಳಿ, ಯುವಜನ ಸೇವೆ ಹಾಗೂ ಕ್ರೀಡೆ ಸಚಿವ ಸ್ಥಾನವನ್ನು ನೀಡಲಾಯಿತು. ಈ ಕ್ಷೇತ್ರದ ಪ್ರಥಮ ಸಚಿವ ಎಂಬ ಖ್ಯಾತಿಗೆ ಅವರು ಭಾಜನರಾದರು. ಮತ್ತ್ಯಾರು ಸಚಿವರಾಗುವ ಭಾಗ್ಯ ದೊರಕ್ಕಿಲ್ಲ.

ನೇರ ಹಣಾಹಣಿ: ಪ್ರಾಬಲ್ಯ ಸ್ಥಾಪಿಸಿರುವ ಕಾಂಗ್ರೆಸ್‌ ಶಾಸಕ ಬಿ.ಜಿ.ಗೋವಿಂದಪ್ಪ ಅವರನ್ನು ಸೋಲಿಸುವ ಅಭ್ಯರ್ಥಿ ಯಾರು ಇಲ್ಲವೆಂಬ ವಾತಾವರಣ   ಒಂದು ತಿಂಗಳ ಹಿಂದೆ ಕ್ಷೇತ್ರದಲ್ಲಿತ್ತು. ಆದರೆ, ಬಿಜೆಪಿ ಟಿಕೆಟ್‌ಗಾಗಿ ಬಾರಿ ಪೈಪೋಟಿ ನಡೆಸಿದ್ದ ಮೂರ್ನಾಲ್ಕು ಮಂದಿ ಮುಖಂಡರು ಒಟ್ಟಾಗಿ, ಹೊಂದಾಣಿಕೆ ಮಾಡಿಕೊಂಡು ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್‌ ಅವರಿಗೆ ಬಿಜೆಪಿ ಟಿಕೆಟ್‌ ಖಚಿತ ಪಡಿಸಿರುವುದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಉಂಟಾಗಲಿದೆ. ಈ ಎರಡು ಪಕ್ಷದ ಮುಖಂಡರು ತಮ್ಮ ಅಧಿಕಾರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಯನ್ನು ಜನರಿಗೆ ತಿಳಿಸಲು ಕ್ಷೇತ್ರದಲ್ಲೆಡೆ ವ್ಯಾಪಕ ಪ್ರಚಾರ ನಡೆಸಿದ್ದಾರೆ.

ಜೆಡಿಎಸ್‌ ಟಿಕೆಟ್‌ ಸ್ಪರ್ಧೆ: ಜೆಡಿಎಸ್‌ನಿಂದ ಟಿಕೆಟ್‌ ಇನ್ನೂ ಯಾರಿಗೂ ನಿಗದಿಯಾಗಿಲ್ಲ. ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷೆ ಮೀನಾಕ್ಷಿ ನಂದೀಶ್‌, ಪ್ರಧಾನ ಕಾರ್ಯದರ್ಶಿ ಎಂ.ಪಿ.ಶಂಕರ್‌, ಜಿಲ್ಲಾ ಉಪಾಧ್ಯಕ್ಷರಾಗಿ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಜಂತಿಕೊಳಲು ರಾಜಣ್ಣ, ಉದ್ಯಮಿ ಬಿ.ಕೆ.ನಾರಾಯಣಸ್ವಾಮಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆಕಾಂಕ್ಷಿಗಳು ಎಚ್‌.ಡಿ.ಕುಮಾರಸ್ವಾಮಿ ಅವರ ಆಡಳಿತದ ಸಾಧನೆಯನ್ನು ಕ್ಷೇತ್ರದೆಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ.

ಜೆಡಿಯುನಿಂದ ಸಂಪತ್‌ರಾಜು, ಹೊಸದುರ್ಗ ಸಮಾಜ ಸೇವಕ ಎ.ಆರ್‌.ಶಮಂತ್‌, ಎಂ.ಜಿ.ದಿಬ್ಬದ ಧನಂಜಯ, ಬನ್ಸಿಹಳ್ಳಿ ಜಂಗಮ ಸತೀಶ್‌, ಬಲ್ಲಾಳಸಮುದ್ರದ ಚಿದಾನಂದ್‌ ಪಕ್ಷೇತರರಾಗಿ ಸ್ಪರ್ಧಿಸಲು ಚುನಾವಣೆ ಅಖಾಡಕ್ಕಿಳಿದಿದ್ದಾರೆ. ಕ್ಷೇತದ ಮತದಾರರು ಯಾರ ಕೈಹಿಡಿಯಲಿದ್ದಾರೆ ಎಂದು ಕಾದು ನೋಡಬೇಕು.

**

ಹರಿಯದ ಭದ್ರೆ ನೀರು:

ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿಸುತ್ತೇನೆ ಎಂಬ ಉದ್ದೇಶ ಇಟ್ಟುಕೊಂಡು 1962ರಲ್ಲಿ ಕಾಂಗ್ರೆಸ್‌ನಿಂದ ಎಸ್‌.ನಿಜಲಿಂಗಪ್ಪ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಕ್ಷೇತ್ರದ ಜನರು ಅವರನ್ನು 5,709 ಮತಗಳ ಅಂತರದಲ್ಲಿ ಸೋಲಿಸಿದರು. ಅಂದಿನಿಂದ ಇಂದಿನ ವರೆಗೂ ಎಸ್‌.ನಿಜಲಿಂಗಪ್ಪ ಅವರ ಕನಸಿನ ನೀರಾವರಿ ಯೋಜನೆ ಯೋಜನೆ ಸಾಕಾರಗೊಂಡಿಲ್ಲ. ಐದು ದಶಕ ಕಳೆದರೂ ಬಯಲು ಸೀಮೆಯ ಭದ್ರೆ ಹರಿದಿಲ್ಲ ಎಂಬ ಕೊರಗು ತಾಲ್ಲೂಕಿನ ಜನರನ್ನು ಕಾಡುತ್ತಿದೆ.

ಗುಳೆ ಹೊರಟ ಜನರು: ಸತತ ಮಳೆ ಅಭಾವದಿಂದ ಅಂತರ್ಜಲ ಕುಸಿತವಾಗಿದ್ದು ತೋಟಗಳು ಒಣಗುತ್ತಿವೆ. ಇದರಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದು ತಾಲ್ಲೂಕಿನ ಜನರು ಉದ್ಯೋಗ ಅರಸಿ ಬೆಂಗಳೂರಿನತ್ತ ಗುಳೆ ಹೋಗುತ್ತಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಮೊದಲು ಭದ್ರೆ ನೀರು ಹರಿಸಬೇಕು. ಸ್ಥಳೀಯವಾಗಿ ಉದ್ಯೋಗ ಅವಕಾಶ ಕಲ್ಪಿಸುವಂತಹ ಬೃಹತ್‌ ಕಂಪನಿಗಳನ್ನು ಸ್ಥಾಪಿಸಬೇಕು ಎಂಬುದು ತಾಲ್ಲೂಕಿನ ಮತದಾರರ ಮನವಿ.

- ಎಸ್‌.ಸುರೇಶ್‌ ನೀರಗುಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry