ಸ್ನೇಹಿತರ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಿಸಿದೆ

7

ಸ್ನೇಹಿತರ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಿಸಿದೆ

Published:
Updated:
ಸ್ನೇಹಿತರ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಿಸಿದೆ

ಲಿಂಗಸುಗೂರು: ‘ನಾನು ಗುತ್ತಿಗೆ ಕೆಲಸ ಮಾಡಿಕೊಂಡು ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದೆ. ಸ್ನೇಹಿತರ ಒತ್ತಡದಿಂದ 2004ರಲ್ಲಿ ದೇವದುರ್ಗ ಮೀಸಲು ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋಲು ಅನುಭವಿಸಿದೆ. ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದ್ದು ಶಾಸಕನಾಗುವ ಹಂತಕ್ಕೆ ಎಳೆದುಕೊಂಡು ಹೋಯಿತು’ ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ ಅವರು ಮೊದಲ ಶಾಸಕನಾಗಿದ್ದ ನೆನಪನ್ನು ಬಿಚ್ಚಿಟ್ಟರು.

‘ನನಗೆ ರಾಜಕೀಯದ ಗಂಧ, ಗಾಳಿಯೂ ಇರಲಿಲ್ಲ. ನನಗೆ ರಾಜಕೀಯವಾಗಿ ಗಾಡ್‌ಫಾದರ್‌ ಇಲ್ಲ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸ್ಪರ್ಧಿಸಿದ ಅನುಭವ ಕೂಡ ಇರಲಿಲ್ಲ. ಆದರೆ, ಸ್ವಯಂ ನಿರ್ಣಯಗಳು, ಸ್ನೇಹಿತರ ಸಲಹೆ, ಸೂಚನೆಗಳಿಗೆ ಮನ್ನಣೆ ಕೊಟ್ಟಿದ್ದರಿಂದ 2008 ರಲ್ಲಿ ಮೊದಲ ಶಾಸಕನಾಗಲು ಸಾಧ್ಯವಾಯಿತು’ ಎಂದರು.

‘ಮೊದಲ ಸಲ ವಿಧಾನಸಭೆ ಚುನಾವಣೆಗೆ ದೇವದುರ್ಗದಲ್ಲಿ ನಿಂತು ಸೋತ ನಂತರದಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದೆ. 2008 ರಲ್ಲಿ ಲಿಂಗಸುಗೂರು ಪರಿಶಿಷ್ಟ ಪಂಗಡಕ್ಕೆ ಮೀಸಲಾಯಿತು. ಕಾಂಗ್ರೆಸ್‌ ಪಕ್ಷದೊಂದಿಗೆ ಗುರುತಿಸಿಕೊಂಡು ಲಿಂಗಸುಗೂರಿಗೆ ಬಂದೆ. ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಸಿಗದಿದ್ದಾಗ ಬಿಜೆಪಿಗೆ ಪಕ್ಷಾಂತರಗೊಂಡು ಸ್ಪರ್ಧಿಸಿ 19 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಮೊದಲ ಶಾಸಕನಾದೆ’ ಎಂದು ವಿವರಿಸಿದರು.

ಶಾಸಕನಾಗಿ ವಿಧಾನಮಂಡಲ ಅಧಿವೇಶನಕ್ಕೆ ಮೊದಲ ಸಲ ಹೋದಾಗ ದಿನಗಳನ್ನು ನೆನಪಿಸಿಕೊಂಡು‘ಶಾಸಕನಾಗಿ ಆಯ್ಕೆಯಾಗಿದ್ದು ಒಂದು ಹಂತವಾಯಿತು. ಯಾವ ಅನುಭವವೂ ಇಲ್ಲದೆ ಅಧಿವೇಶನಕ್ಕೆ ಹೋದಾಗ ಗೊಂದಲದಲ್ಲಿ ಮುಳುಗಿದ್ದು ನಿಜ. ಅಲ್ಲಿಯೂ ಕೂಡ ಯಾರಿಗೂ ಏನನ್ನೂ ಕೇಳದೆ, ಸ್ವ–ಅನುಭವ ಪಡೆದುಕೊಳ್ಳುವ ಮೂಲಕವೇ ಬೆಳೆದೆ’ ಎಂದರು.

‘ನಾನು ಶಾಸಕನಾಗಿದ್ದಕ್ಕೆ ನಮ್ಮ ಇಡೀ ಕುಟುಂಬ ಸಂತೋಷದಲ್ಲಿ ಮುಳುಗಿತ್ತು. ಈ ಮಧ್ಯೆ ತಾಯಿ ಹಾಗೂ ಹಿರಿಯ ಮಗಳ ಪತಿ ಅಗಲಿಕೆಯು ತುಂಬಾ ನೋವುಂಟು ಮಾಡಿತು. ಆದರೆ, ಸಹೋದರ ನಾಗಪ್ಪ ಅವರಿಗೆ ಕೃತಕ ಹೃದಯ ಜೋಡಣೆ ಮಾಡಿಸಿಕೊಂಡು ಬದುಕಿಸಿಕೊಂಡಿದ್ದು, ನನ್ನ ಬದುಕಿನ ಅತ್ಯಂತ ಹರ್ಷದ ಸಂಗತಿ’ ಎಂದು ಸಹೋದರರ ಬಗೆಗಿನ ತಮ್ಮ ಪ್ರೀತಿಯ ಬಗ್ಗೆ ಹೇಳುತ್ತಾ ಭಾವುಕರಾದರು.

ಜನಪರ ನಿಲುವಿನತ್ತ ಮಾತು ಬದಲಿಸಿ ‘ರಾಜಕೀಯ ಜೀವನದಲ್ಲಿ ಯಾವುದನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಅತಿಯಾದ ನೋವು, ಅತಿಯಾದ ದುಃಖ ಎನ್ನುವ ಸನ್ನಿವೇಶಗಳು ಬಂದಿಲ್ಲ. ಸಹೋದ ರರಾದ ನಾಗಪ್ಪ, ಕರಿಯಪ್ಪ ಲವ–ಕುಶರಂತೆ ಇದ್ದು ನನ್ನ ಈ ಬೆಳವಣಿಗೆಗೆ ಕಾರಣವಾಗಿದ್ದಾರೆ’ ಎಂದು ಹೇಳಿದರು.

**

ಎಸ್ಸೆಸ್ಸೆಲ್ಸಿ ಶಿಕ್ಷಣ

ಲಿಂಗಸುಗೂರು ತಾಲ್ಲೂಕು ಗೆಜ್ಜಲಗಟ್ಟಾ ಸ್ವಂತ ಗ್ರಾಮ. ತಾಯಿಯ ತವರು ಮನೆ ಪೈದೊಡ್ಡಿ ಗ್ರಾಮ. ದೇವದುರ್ಗದ ತಿಂಥಣಿ ಬಳಿ ಸೇತುವೆ ನಿರ್ಮಾಣದಲ್ಲಿ ಇವರ ತಾಯಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲೆ ಜನಸಿದ್ದರಿಂದ ‘ಮೌನೇಶ... ಮಾನಪ್ಪ’ ಎಂದು ಪಾಲಕರು ನಾಮಕರಣ ಮಾಡಿದರು.

ಅತ್ಯಂತ ಬಡ ಕುಟುಂಬ. ಸುರಪುರ ತಾಲ್ಲೂಕು ವಜ್ಜಲ ಗ್ರಾಮದ ಜೋಪಡಿಯಲ್ಲಿ ಸಂಕಷ್ಟದಲ್ಲಿ ಬದುಕು ಕಟ್ಟಿಕೊಂಡಿದ್ದರು. ಬಡತನ ಕಾರಣದಿಂದ ಎಸ್ಸೆಸ್ಸೆಲ್ಸಿವರೆಗೂ ಮಾತ್ರ ಅವರು ಓದಿದ್ದಾರೆ.

**

ಕ್ರಿಕೆಟ್‌ ಆಟ

ಗುತ್ತಿಗೆದಾರಿಕೆ, ರಾಜಕೀಯ ಜಂಜಾಟಗಳ ಮಧ್ಯೆ ಸಮಯ ಸಿಕ್ಕಾಗಲೆಲ್ಲ ಕಾರ್ಡ್‌್ಸ (ಇಸ್ಪೀಟ್‌) ಮತ್ತು ಕ್ರಿಕೆಟ್‌ ಆಡುವ ಹವ್ಯಾಸ ಇದೆ. ಈ ಎರಡು ಬಿಟ್ಟರೆ ಬೇರೆ ಯಾವ ದುಶ್ಚಟಗಳು, ಹವ್ಯಾಸಗಳು ಇಲ್ಲ ಎನ್ನುವ ಮಾತು ಮಾನಪ್ಪ ಅವರದು .

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry