ಮಸಾಲೆಯವರು

7

ಮಸಾಲೆಯವರು

Published:
Updated:
ಮಸಾಲೆಯವರು

ಕಂಠ ಮುರಿದ ಪಾತ್ರೆಯೊಳಗೆ

ಕೈಯಾಡಿಸುತ

ಮಸಾಲೆಯ ಸೌಟು ಬಡಿಯುತಿದ್ದರೆ

ಇಡೀ ಸರ್ಕಲ್ಲೇ ನಡುಗುತಿತ್ತು

ಪ್ರತಿ ಸಂಜೆಗೆ

 

ಅವಲಕ್ಕಿ ಮಂಡಕ್ಕಿ ಜೊಳ್ಳುಪುಡಿ

ಯಾವುದೊಂದೂ ತಿಳಿಯುತ್ತಿರಲಿಲ್ಲ

ಇವನ ಮಸಾಲೆಯ ಬಣ್ಣಕೆ!

ಹಳಸಲೋ ಮುಗ್ಗಲೋ ಎಳಸೋ

ಘಮಘಮಿಸುತಿತ್ತು ಒಟ್ಟಿನಲಿ

ತಾಜಾ ತಾಜಾ ಧೂಮವೆಬ್ಬಿಸಿ!

ಮರುಳಾಗಿ ಬಿಟ್ಟಿದ್ದರು ಜನ

ಮತ್ತೇರಿಸುವ ಮಸಾಲೆಯ ಗುಂಗಿಗೆ

ಸಂಜೆಯ ಮಬ್ಬಲಿ ಇವರಿಗೂ ಬೇಕಿತ್ತು

‘ಮಸಾಲೆ ಸ್ವಲ್ಪ ಹೆಚ್ಚಿರಲಿ...’

ಎಂದೇ ಕೇಳುವರು!

ಸರೀಕರಿಗೆ ಹೊಟ್ಟೆಯುರಿ

‘ಛೇ, ಒಂದು ಕರೀಪಾತ್ರೆ‌

ಮೋಟು ಸೌಟಿಟ್ಟುಕೊಂಡೇ ಮರುಳು

ಮಾಡುತ್ತಿರುವನಲ್ಲ!’

ಕೈಕೈ ಹಿಸುಕಿಕೊಳ್ಳುತ್ತಲೇ ತಿಂಡಿ ಪಡೆದು

ಹುಡುಕುತಿದ್ದರು ರಹಸ್ಯವನು! ಅಲ್ಲೇನಿದೆ?

 

ಕೊಳೆತೆರಡು ಈರುಳ್ಳಿ ಎಸಳು,

ಚಿಟಿಕೆ ಅರಶಿನ, ಸೀಕಲು ಬೆಳ್ಳುಳ್ಳಿ...

‘ಭಗವಂತಾs ಇಲ್ಲೂ ಮೋಸ?’

ಅದ್ಯಾವ ರಸವೂ ಸಿಕ್ಕದೆ

ಕೈ ತೊಳೆದು ಹೋಗುತ್ತಿದ್ದರು ನಿತ್ಯ!

 

ಮಸಾಲೆಯವಗೆ ಸಂಭ್ರಮ

ಮೂಡಿತೆರಡು ಕೊಂಬು

ಸೌಟಿನ ಬಡಿತ, ಹುಂಚಿ ಹುಳಿ

ಸೇರಿ ಗದೆ ಚಕ್ರಗಳೂ

ಕಾರ್ಬನ್ನಿನದೇ ವಜ್ರ

ಇದ್ದಿಲು ಮಸಿಯ ಶ್ರಮವೆಂದು

ಬಳಿದುಕೊಂಡದ್ದು ಯಶಸ್ಸಿನ ಗುಟ್ಟು

ಇದು ರಟ್ಟಾಗಿ ಎದ್ದಿತೊಂದು

ಇಸ್ತ್ರೀ ಮಾಡಿಟ್ಟಂದದ ಬಂಗಲೆ

ಪಕ್ಕದಲೆ!

ಪೀನಮಸೂರದಡಿಯಿಟ್ಟ

ಅವೇ ತಿಂಡಿಗಳೆಲ್ಲವೀಗ

ಇನ್ನಷ್ಟು ಝಗಮಗ!

 

ತಾನೇ ಮಸಾಲೆಯಾಗಿದ್ದನು

ತಿಳಿಯಲು ಇವನಿಗೆ ಹೆಚ್ಚು

ಹೊತ್ತೇನಾಗಲಿಲ್ಲ!

ವಿಷದ ಸರಪಣಿಯಿದು!?

‘ಜನರ ದನಿ ನಾವೆ’ನ್ನುತ

ನಮ್ಮ ಗೋಣ ಹಿಸುಕುತಿಹರು

ನಾಲ್ಕನೆಯ ಅಂಗವೆಂದು ಸಾರುತ

ಘರ್ಜಿಸುತಿಹರು ಜೋಕೆ!

ಸುದ್ದಿಯಾಗುತ ತಾವೆ!!

ಚಪ್ಪರಿಸುವ ಗಿರಾಕಿ ನಾವಿರುವವರೆಗೆ!?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry