ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಿಗೆ ತಿರುಗುಬಾಣ!

Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಆರು ತಿಂಗಳಿಗೊಬ್ಬರಂತೆ ಉಸ್ತುವಾರಿ ಕಾರ್ಯದರ್ಶಿ ಬದಲಾಗುತ್ತಾ ಬಂದಿದ್ದಾರೆ. ಇತ್ತೀಚೆಗೆ ಹೆಚ್ಚುವರಿಯಾಗಿ ಯಾದಗಿರಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಪಡೆದ, ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್ ಅವರು ಯಾವುದೇ ಮುನ್ಸೂಚನೆ ನೀಡದೆ, ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂಬ ಸುದ್ದಿ ಮಾಧ್ಯಮದವರ ಕಿವಿಗೆ ಬಿದ್ದಿತು.

ಅಪರೂಪಕ್ಕೆ ಜಿಲ್ಲೆಗೆ ಬಂದ ಅಧಿಕಾರಿ, ಪ್ರಗತಿ ಪರಿಶೀಲನಾ ಸಭೆ ನಡೆಸುವುದನ್ನು ಬಿಟ್ಟು ನೇರವಾಗಿ ನಗರದ ಲುಂಬಿನಿ ವನಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸುತ್ತಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಪತ್ರಕರ್ತರು ಎದ್ದುಬಿದ್ದು ಲುಂಬಿನಿ ವನದತ್ತ ದೌಡಾಯಿಸಿದರು.

‘... ಎಷ್ಟು ಬರೆದ್ರೂ ಈ ಉದ್ಯಾನ ನಿರ್ವಹಣೆಮಾತ್ರ ಚುರುಕಾಗ್ತಿಲ್ಲ ಯಾಕೆ’ ಎಂದು ಪತ್ರಕರ್ತರು ಮಾಮೂಲಿ ಸ್ಟೈಲಿನಲ್ಲಿ ಅಧಿಕಾರಿಗೆ ಪ್ರಶ್ನೆ ಎಸೆದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಂದ ಉದ್ಯಾನದ ಬಗ್ಗೆ ಒಂದಿಷ್ಟು ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ‘ನೋಡ್ರಿ... ಉದ್ಯಾನ ನಿರ್ಮಿಸೋದಷ್ಟೇ ನಮ್‌ ಕೆಲ್ಸ. ನಿರ್ವಹಣೆ ಏನಿದ್ರೂ ಸ್ಥಳೀಯ ಸಂಸ್ಥೆಗಳಿಗೆ ಬಿಟ್ಟದ್ದು’ ಎಂದರು.

‘ಅಲ್ಲ ಸರ್... ಟೆಂಪ್ರೇಚರ‍್ರು 45 ಡಿಗ್ರಿ ದಾಟಿದಾಗ ಜನರಿಗೆ ಈ ಉದ್ಯಾನವೇ ಗತಿ. ನೀವೇ ಹೀಂಗಂದ್ರೆ ಹೆಂಗೆ ಸರ್... ಉದ್ಯಾನದಲ್ಲಿ ಸ್ವಲ್ಪನೂ ಹಸಿರಿಲ್ಲ ನೀವೇ ನೋಡ್ರಿ’ ಎಂದು ಪತ್ರಕರ್ತರು ಇನ್ನೊಂದು ಪ್ರಶ್ನೆ ಎಸೆದರು.

‘ಹಾಗಾದ್ರೆ ಒಂದ್‌ ಕೆಲ್ಸ ಮಾಡ್ರಿ... ಪ್ರತಿ ವರ್ಷ ನೀವ್‌ ಒಂದ್‌ ಲಕ್ಷ, ಅವ್ರು ಐವತ್ತು ಸಾವಿರ ಕೊಡ್ರಿ. ನಿರ್ವಹಣೆ ಮಾಡೋಣ’ ಎಂದು ಅಧಿಕಾರಿ ಬಿಟ್ಟ ಬಾಣಕ್ಕೆ ಪತ್ರಕರ್ತರು ದಿಕ್ಕಾಪಾಲಾಗಿದ್ದರು!
–ಮಲ್ಲೇಶ್‌ ನಾಯಕನಹಟ್ಟಿ‌

*
ನೀವು ಲಿಂಗಾಯತರೇ ಇರಬೇಕು!
ಬೆಂಗಳೂರು: ನಗರದ ಹೃದಯ ಭಾಗ ಮೆಜೆಸ್ಟಿಕ್‌ಗೆ ಕೂಗಳತೆ ದೂರದಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದಲ್ಲಿ, ಮಠದ ಟ್ರಸ್ಟ್ ವತಿಯಿಂದ ಸರ್ಪಭೂಷಣ ಶಿವಯೋಗಿಗಳ ಜಯಂತಿ ಮತ್ತು ಅಲ್ಲಮಪ್ರಭು ಜಯಂತಿ ಆಯೋಜನೆಯಾಗಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ‌ಟ್ರಸ್ಟ್‌ನ ಧರ್ಮದರ್ಶಿ ಬಿ.ಎಸ್‌. ಪರಮಶಿವಯ್ಯ, ‘ವೀರಶೈವರು ಮತ್ತು ಲಿಂಗಾಯತರ ಒಗ್ಗಟ್ಟು ಒಡೆಯುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಅವರು ಅಯೋಗ್ಯ ಮುಖ್ಯಮಂತ್ರಿ, ಸಿದ್ದರಾಮಯ್ಯ ಅಲ್ಲ, ನಿದ್ದೆರಾಮಯ್ಯ. ಇವರ ಜತೆ ಸೇರಿಕೊಂಡು ಕೆಲವು ಸ್ವಾಮೀಜಿಗಳೂ ಧರ್ಮ ಒಡೆಯಲು ಬೇಲಿ ಹಾರಿಹೋಗಿದ್ದಾರೆ...’ ಎಂದು ವಾಚಾಮಗೋಚರವಾಗಿ ವಾಗ್ದಾಳಿ ಮಾಡಿದರು!

‘ವೀರಶೈವರು ಮತ್ತು ಲಿಂಗಾಯತರು ನಾವೆಲ್ಲರೂ ಒಂದೇ. ನಮ್ಮಲ್ಲಿ ಭೇದಭಾವವಿಲ್ಲ. ಒಗ್ಗಟ್ಟಿನಿಂದ ಬಾಳ್ವೆ ಮಾಡಿಕೊಂಡು ಬಂದಿದ್ದೇವೆ...’ ಎಂದು ಒಗ್ಗಟ್ಟಿನ ಮಂತ್ರವನ್ನೂ ಪರಮಶಿವಯ್ಯ ಜಪಿಸಿದರು.

ಇದಾಗಿ, ‘ಈ ನಿದ್ದೆರಾಮಯ್ಯ ಅವರು ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿ ಪತ್ರ ಬರೆದಿದ್ದಾರೆ’ ಎಂದಾಗ, ಸಭಿಕರ ಸಾಲಿನಲ್ಲಿದ್ದ ಕೆಲವರು ಕರತಾಡನ ಮಾಡಿದರು!

‘ಏನ್ರಿ... ಇದಕ್ಕೂ ಚಪ್ಪಾಳೆ ತಟ್ಟುತ್ತೀರಲ್ಲ, ನಾವು ಅದನ್ನು ಖಂಡಿಸಬೇಕು... ಓಹ್‌ ಬಹುಶಃ ನೀವು ಲಿಂಗಾಯತರೇ ಇರಬೇಕು ಅದಕ್ಕೆ ಚಪ್ಪಾಳೆ ತಟ್ಟುತ್ತಿದ್ದೀರಿ!’ ಎಂದು ಪರಮಶಿವಮಯ್ಯ ಮೂದಲಿಸುವಂತೆ ಪ್ರಶ್ನಿಸಿದರು. ಸಭಿಕರಲ್ಲಿದ್ದ ಕೆಲವರು ‘ಇನ್ನೂ ಮಾನ್ಯತೆ ಸಿಕ್ಕಿಲ್ಲ’ ಅಂದರು. ‘ಕೊಡ್ತಾರೆ ಇರಿ, ಕಾಯ್ತಿರಿ’ ಎಂದು ಪರಮಶಿವಯ್ಯ ತಮ್ಮ ಬೇಸರ ನುಂಗಿಕೊಂಡರು.

‘ಇಷ್ಟೊತ್ತು ನಾವೆಲ್ಲರೂ ಒಂದೇ ಎಂದು ಭಾಷಣ ಬಿಗಿದ ಬಾಯಲ್ಲಿ ‘ನೀವು ಲಿಂಗಾಯತರಾ?’ ಎನ್ನುವ ಮಾತು ಬಂತು. ಒಳಗಿದ್ದದ್ದು ಹೊರಗೆ ಬರಲೇಬೇಕಲ್ಲವೇ’ ಎಂದು ಸಭಿಕರೊಬ್ಬರು ಮೆಲುದನಿಯಲ್ಲಿ ತಿವಿದದ್ದು ವೇದಿಕೆ ಮೇಲಿದ್ದವರಿಗೆ ಕೇಳಿಸಲಿಲ್ಲ!
–ಕೆ.ಎಂ.ಸಂತೋಷ್‌ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT