ಸಂಸದರ ಎದುರೆ ಅಸಮಾಧಾನ

7
ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

ಸಂಸದರ ಎದುರೆ ಅಸಮಾಧಾನ

Published:
Updated:
ಸಂಸದರ ಎದುರೆ ಅಸಮಾಧಾನ

ಹೆಗ್ಗೆರೆ: ‘ವಿಧಾನಸಭೆಗೆ ಟಿಕೆಟ್‌ ನಿರಾಕರಿಸಿದ ಕಾರಣ ಅಧಿಕಾರದ ಆಸೆಗಾಗಿ ನೀವು ಬೇರೆ ಪಕ್ಷಕ್ಕೆ ಹೋಗಿ ಬಂದಿದ್ದೀರಿ. ಆದರೆ ನಾನು ಕಾಂಗ್ರೆಸ್‌ನಲ್ಲಿಯೇ ಇದ್ದು, ನಾಲ್ಕು ಚುನಾವಣೆಯಲ್ಲಿ ಗೆದ್ದಿದ್ದೇನೆ’ ಎಂದು ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು ಅವರು ವೇದಿಕೆಯ ಮೇಲಿದ್ದ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರಿಗೆ ಸವಾಲು ಹಾಕಿದರು.

ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಭಾನುವಾರ ಇಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನೀವೆಲ್ಲರೂ ಬೇರೆ ಬೇರೆ ಪಕ್ಷದಲ್ಲಿದ್ದಾಗ, ನಾವು ಭಿಕ್ಷೆ ಬೇಡಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿದ್ದೀವಿ. ಇವತ್ತು ಸ್ಥಳೀಯ ವ್ಯಕ್ತಿಗೆ ಟಿಕೆಟ್‌ ನೀಡುವುದನ್ನು ಬಿಟ್ಟು ಬೇರೆ ಕ್ಷೇತ್ರದಿಂದ ಬಂದವರಿಗೆ ಮಣೆ ಹಾಕುತ್ತಿದ್ದೀರಿ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಸಂಸದರನ್ನು ಪ್ರಶ್ನಿಸಿದರು.

’ನಿನ್ನೆ ಮೊನ್ನೆ ಬೇರೆ ಪಕ್ಷದಿಂದ ಬಂದಿರುವವರನ್ನು, ಸ್ಥಳೀಯರಲ್ಲದವರನ್ನು ಅಭ್ಯರ್ಥಿ ಎಂಬಂತೆ ಬಿಂಬಿಸಲಾಗುತ್ತಿದೆ. ಗ್ರಾಮಾಂತರದಲ್ಲಿ ಯಾರೂ ಗಂಡಸರೇ ಇಲ್ಲವಾ?’ ಎಂದು ಪ್ರಶ್ನಿಸಿದರು.

’ನಮಗೆ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಇಲ್ಲಿ ಬೇರೆ ಕ್ಷೇತ್ರದವರಿಗೆ ಟಿಕೆಟ್‌ ನೀಡಬಾರದು. ಬೇಕಾದರೆ ಅವರಿಗೆ ತುರುವೇಕೆರೆಗೆ ಟಿಕೆಟ್‌ ನೀಡಲಿ’ ಎಂದು ಹೇಳಿದರು.

’ಮುದ್ದಹನುಮೇಗೌಡರು, ಎಚ್‌.ನಿಂಗಪ್ಪ ಜೆಡಿಎಸ್‌ನಲ್ಲಿದಾಗಲೂ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಗೆಲವು ಸಾಧಿಸಿದ್ದೆವು. ಸಂಸದರು ಪಕ್ಷಕ್ಕೆ ಬಂದ ಮೇಲೆ ನಡೆದ ಚುನಾವಣೆಯಲ್ಲಿ ಕೇವಲ ಒಂದೇ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ’ ಎಂದು ಕಿಡಿಕಾರಿದಿರು.

ಮಾಜಿ ಶಾಸಕ ಎಚ್‌.ನಿಂಗಪ್ಪ ಮಾತನಾಡಿ, ‘ಮುದ್ದಹನುಮೇಗೌಡರು ಟಿಕೆಟ್ ಕೊಡುವುದಾಗಿ  ಭರವಸೆ ನೀಡಿ ನನ್ನನ್ನು ಕಾಂಗ್ರೆಸ್‌ಗೆ ಕರೆ ತಂದರು’ ಎಂದು ಹೇಳಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ಟಿಕೆಟ್‌ ಹಂಚಿಕೆಯಲ್ಲಿ ಹೊರಗಿನವರು, ಒಳಗಿನವರು ಎಂಬ ಭೇಧ ಭಾವವಿಲ್ಲ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವುದು ಪಕ್ಷದ ಉದ್ದೇಶವಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದೇ ಪಕ್ಷದ ವರಿಷ್ಠರ ತೀರ್ಮಾನವಾಗಿದೆ’ ಎಂದರು.

’ಅಕಾಂಕ್ಷಿಗಳು ಒಗ್ಗೂಡಿ ಒಮ್ಮತದ ಅಭ್ಯರ್ಥಿ ನೀಡಿದರೆ ಅವರಿಗೇನೆ ಟಿಕೆಟ್‌ ನೀಡುತ್ತೇವೆ. ಇಲ್ಲವೇ ಪಕ್ಷದ ಹೈಕಮಾಂಡ್ ತಮ್ಮ ಅಭಿಪ್ರಾಯ ತಿಳಿಸುತ್ತದೆ’ ಎಂದರು.

ಏಪ್ರಿಲ್ ಮೊದಲ ವಾರದಲ್ಲಿ ಜಿಲ್ಲೆಯ 11 ಕ್ಷೇತ್ರಗಳ ಟಿಕೆಟ್‌ ಹಂಚಿಕೆಯಾಗಲಿದೆ. ಪಕ್ಷದ ಹಿರಿಯರು ಸಾಧ್ಯವಾದಷ್ಟು ಯುವಜನರಿಗೆ ಟಿಕೆಟ್‌ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ಯುವಕರ ಕಡೆಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಗಮನಹರಿಸುತ್ತಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ‘ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷ ಬಲವಾಗಿದೆ. ಕಾರ್ಯಕರ್ತರನ್ನು ಸಂಘಟಿಸುವ ನಿಟ್ಟಿನಲ್ಲಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ, ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಗೆಲುವಿಗೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮುಖಂಡ ರಾಯಸಂದ್ರ ರವಿಕುಮಾರ್ ಮಾತನಾಡಿ, ‘ಕಳೆದ 20 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸುತ್ತಿರುವ ನಾನು ಗ್ರಾಮಾಂತರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್‌ಗಾಗಿ ನಾನು ಲಾಭಿ ಮಾಡುವುದಿಲ್ಲ. ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry