7
ಕೌನ್ಸಿಲ್‌ ಸಭೆಯಲ್ಲಿ ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಅಭಿಮತ

60 ಹಳ್ಳಿಗಳಿಗೆ ಗುರುತ್ವಾಕರ್ಷಣೆ ಬಲದಿಂದ ನೀರು ಪೂರೈಕೆ

Published:
Updated:
60 ಹಳ್ಳಿಗಳಿಗೆ ಗುರುತ್ವಾಕರ್ಷಣೆ ಬಲದಿಂದ ನೀರು ಪೂರೈಕೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡ 110 ಹಳ್ಳಿಗಳ ಪೈಕಿ 60 ಹಳ್ಳಿಗಳಿಗೆ ಗುರುತ್ವಾಕರ್ಷಣೆ ಬಲದಿಂದಲೇ ಕಾವೇರಿ ನೀರು ಪೂರೈಸಬಹುದು ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಹೇಳಿದರು.

ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಪಾಲಿಕೆಯಲ್ಲಿ ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದರು.

‘ಈ ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಉದ್ದೇಶದಿಂದ 2017ರ ಸೆಪ್ಟೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 17 ಹಳ್ಳಿಗಳಿಗೆ ಕೊಳವೆಮಾರ್ಗವನ್ನು ನಿರ್ಮಿಸಲಾಗಿದೆ. ಉಳಿದ ಹಳ್ಳಿಗಳ ಕೊಳವೆ ಮಾರ್ಗ ಕಾಮಗಾರಿ 2019ರ ಮೇ ತಿಂಗಳಿಗೆ ಪೂರ್ಣಗೊಳ್ಳಲಿದೆ. ಈ 17 ಹಳ್ಳಿಗಳ ಸಾರ್ವಜನಿಕರು ನೀರಿನ ಸಂಪರ್ಕಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಅರ್ಜಿಗಳು ಬರುತ್ತಿದ್ದಂತೆ ಸಂಪರ್ಕ ನೀಡುತ್ತೇವೆ’ ಎಂದರು.

ನಗರವು ಕುಡಿಯುವ ನೀರಿಗೆ ಕಬಿನಿ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟೆಯನ್ನು ಅವಲಂಬಿಸಿದೆ. ಈಗ ಈ ಜಲಾಶಯಗಳಲ್ಲಿ 11 ಟಿಎಂಸಿ ಅಡಿ ನೀರು ಲಭ್ಯವಿದೆ. ಮುಂದಿನ ಜೂನ್‌ವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ, ವಿದ್ಯುತ್‌ ಕೈಕೊಟ್ಟರೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ’ ಎಂದು ಸ್ಪಷ್ಟಪಡಿಸಿದರು.

‘ಪ್ರತಿದಿನ 140 ಕೋಟಿ ಲೀಟರ್‌ ನೀರನ್ನು ಪಂಪ್‌ ಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಆದರೆ, ಸದ್ಯ 135 ಕೋಟಿ ಲೀಟರ್‌ ನೀರನ್ನು ಪಂಪ್‌ ಮಾಡುತ್ತಿದ್ದೇವೆ. ಈಗ ನೀರಿಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಹೆಚ್ಚುವರಿಯಾಗಿ 10 ಕೋಟಿಯಿಂದ 15 ಕೋಟಿ ಲೀಟರ್‌ ನೀರನ್ನು ಪೂರೈಸುತ್ತಿದ್ದೇವೆ’ ಎಂದರು.

ನಗರದಲ್ಲಿ ಈ ಹಿಂದೆ 14 ಕೊಳಚೆ ನೀರು ಶುದ್ಧೀಕರಣ ಘಟಕಗಳು (ಎಸ್‌ಟಿಪಿ) ಇದ್ದವು. ಅವುಗಳಲ್ಲಿ ಪ್ರತಿದಿನ 72.1 ಕೋಟಿ ಲೀಟರ್‌ ನೀರನ್ನು ಶುದ್ಧೀಕರಿಸಲಾಗುತ್ತಿತ್ತು. 2ನೇ ಹಂತದಲ್ಲಿ 10 ಎಸ್‌ಟಿಪಿಗಳನ್ನು ಅಳವಡಿಸಲಾಗಿದೆ. ಇವುಗಳ ಶುದ್ಧೀಕರಣ ಸಾಮರ್ಥ್ಯ 33.6 ಕೋಟಿ ಲೀಟರ್‌ ಇದೆ. ಉಳಿದ ಎಸ್‌ಟಿಪಿಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ಅವು ಕಾರ್ಯಾರಂಭ ಮಾಡಿದರೆ, ಪೂರ್ಣಪ್ರಮಾಣದ ಕೊಳಚೆ ನೀರನ್ನು ಶುದ್ಧೀಕರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

‘ಕಳೆದ ವರ್ಷ ನೀರು ಪೂರೈಸಲು ಖಾಸಗಿ ಟ್ಯಾಂಕರ್‌ಗಳ ಟೆಂಡರ್‌ ಕರೆದಿದ್ದೆವು. ಆದರೆ, 25 ಮಂದಿ ಮಾತ್ರ ಮುಂದೆ ಬಂದರು. ಹೀಗಾಗಿ, ಜಲಮಂಡಳಿ ಬಳಿ ಇರುವ 68 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗಿತ್ತು. ನಗರದ ಕೇಂದ್ರ ಭಾಗ ಹಾಗೂ ಸಿಎಂಸಿ ಪ್ರದೇಶದಲ್ಲಿ ಮಾತ್ರ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ’ ಎಂದರು.

‘ಕೊಳವೆಬಾವಿಗಳಿಗೆ ಬೇಕಾದ ಹೆಚ್ಚುವರಿ ಯಂತ್ರಗಳು ಹಾಗೂ ಪೈಪ್‌ಗಳನ್ನು ಇಟ್ಟುಕೊಂಡಿದ್ದೇವೆ. ಯಂತ್ರಗಳನ್ನು ಮೇಲೆತ್ತಲು ಬೇಕಾದ ಕ್ರೇನ್‌ಗಳ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇವೆ. ವಾಟರ್‌ಮೆನ್‌ಗಳು ಸರಿಯಾಗಿ ಕೆಲಸ ಮಾಡದಿದ್ದರೆ ಅಮಾನತು ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಒಳಚರಂಡಿ ಕರ ಪಾಲಿಕೆಗೆ ನೀಡಲಿ’

‘ನಗರದ ಎಸ್‌ಟಿಪಿಗಳಲ್ಲಿ ಸಂಸ್ಕರಿಸುವ ನೀರನ್ನು ಬತ್ತಿರುವ ಕೆರೆಗಳಿಗೆ ಹರಿಸಬೇಕು. 50 ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಎಸ್‌ಟಿಪಿ ಅಳವಡಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಬೇಕು. ಕೆಲವೆಡೆ ವಾಟರ್‌ಮೆನ್‌ಗಳು ಅಪಾರ್ಟ್‌ಮೆಂಟ್‌ಗಳಿಗೆ ಬೇಕಾದಷ್ಟು ನೀರು ಬಿಡುತ್ತಾರೆ. ಆದರೆ, ಕೊಳೆಗೇರಿಗಳು, ಬಡವರು ವಾಸಿಸುವ ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ರಾತ್ರಿ ಬದಲಿಗೆ ಬೆಳಿಗ್ಗೆ ನೀರು ಬಿಡಬೇಕು. ಜಲಮಂಡಳಿ ಸಂಗ್ರಹಿಸುವ ನೀರಿನ ಶುಲ್ಕದಲ್ಲಿ ಒಳಚರಂಡಿ ಕರವೂ ಇರುತ್ತದೆ. ಆದರೆ, ನಗರದ ಬಹುತೇಕ ಕಡೆ ಕೊಳಚೆ ನೀರು ರಾಜಕಾಲುವೆಗಳಲ್ಲಿ ಹರಿಯುತ್ತಿದೆ. ಹೀಗಾಗಿ, ಒಳಚರಂಡಿ ಕರವನ್ನು ಪಾಲಿಕೆಗೆ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು.

‘2,500 ಕೊಳವೆಬಾವಿ ಬತ್ತಿವೆ’

ಪಾಲಿಕೆಯ ಅಧೀನದಲ್ಲಿರುವ 9,000 ಕೊಳವೆಬಾವಿಗಳ ಪೈಕಿ ಸುಮಾರು 2,500 ಬೋರ್‌ವೆಲ್‌ಗಳು ಬತ್ತಿವೆ. ಕೆಲ ಕೊಳವೆಬಾವಿಗಳಲ್ಲಿ ನೀರು ಕಡಿಮೆ ಆಗಿದೆ ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ತಿಳಿಸಿದರು.

ಒಳಚರಂಡಿ ನಿರ್ಮಿಸಲು ಪಾಲಿಕೆಯು ಪ್ರತಿ ವಾರ್ಡ್‌ಗೆ ₹15 ಲಕ್ಷದಿಂದ ₹20 ಲಕ್ಷ ನೀಡುತ್ತಿದೆ. ಆದರೆ, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ರಸ್ತೆಗೆ ಡಾಂಬರು ಹಾಕಿದ ಬಳಿಕ ಪೈಪ್‌ ಅಳವಡಿಸಲು ರಸ್ತೆ ಕತ್ತರಿಸುತ್ತಾರೆ ಎಂದು ದೂರಿದರು.

ಕೆಲವೆಡೆ ಕೊಳವೆಬಾವಿ ಬತ್ತಿದ್ದರೂ ಆ ಭಾಗದ ಜನರಿಗೆ ₹50ರಿಂದ ₹100 ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು. ಒಂದೆರಡು ಮಹಡಿಗಳ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವವರು ಸ್ವಾಧೀನಾನುಭವ ಪತ್ರ (ಒ.ಸಿ) ನೀಡದ ಕಾರಣ ನೀರಿನ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಅದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಪಾಲಿಕೆಯ ಎಲ್ಲ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹ ಪದ್ಧತಿ ಅಳವಡಿಸಬೇಕು ಎಂದರು.

ಸದಸ್ಯರು ಬೆಳಕು ಚೆಲ್ಲಿದ ಸಮಸ್ಯೆಗಳು

* ಉಮೇಶ್‌ ಶೆಟ್ಟಿ: ಯಾವುದಾದರೂ ಒಂದು ಕಡೆ ಕಾವೇರಿ ಕೊಳವೆ ಮಾರ್ಗ ಹಾಳಾಗಿದ್ದರೆ ಇಡೀ ಬಡಾವಣೆಗೆ ನೀರು ಬಿಡುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಮಾರನೇ ದಿನ ನೀರು ಬಿಡಬೇಕು. ಆದರೆ, ಆ ಕೆಲಸವನ್ನು ಜಲಮಂಡಳಿ ಮಾಡುವುದಿಲ್ಲ. ಟ್ಯಾಂಕರ್‌ ಮಾಫಿಯಾ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು.

* ಕಟ್ಟೆ ಸತ್ಯನಾರಾಯಣ: ಜಲಮಂಡಳಿ 3,000 ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ಗಳನ್ನು ಖರೀದಿಸಬೇಕು. ವಾರ್ಡ್‌ಗಳ ನಿವಾಸಿಗಳಿಗೆ ನೀರು ಪೂರೈಸಬೇಕು.

* ವಾಜೀದ್‌: ಮನೋರಾಯನಪಾಳ್ಯದ 5,000 ಜನರಿಗೆ ಕಾವೇರಿ ನೀರು ಪೂರೈಸುತ್ತಿಲ್ಲ.

* ಆಂಜಿನಪ್ಪ: ಬೇಗೂರು ವಾರ್ಡ್‌ನಲ್ಲಿ ಕಾವೇರಿ ಕೊಳವೆ ಮಾರ್ಗ ಅಳವಡಿಸಿರುವ ಕಡೆ ನೀರನ್ನು ಬಿಡಬೇಕು.

* ರಮಿಳಾ ಉಮಾಶಂಕರ್‌: ಕೆಲ ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ಹೆಚ್ಚುವರಿ ಪೈಪ್‌ಗಳನ್ನು ಹಾಕಿಸಿಕೊಡಬೇಕು.‌

* ಗಂಗಮ್ಮ: ಶಕ್ತಿಗಣಪತಿನಗರ ವಾರ್ಡ್‌ನ ಎರಡು ಅಂಗನವಾಡಿಗಳಿಗೆ ಕೊಳಾಯಿ ಅಳವಡಿಸಿಕೊಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry