ಮಾಹಿತಿ ಸೋರಿಕೆ: ಹೇಳಿಕೆ ಪಡೆದ ಚುನಾವಣಾ ಆಯೋಗ

7

ಮಾಹಿತಿ ಸೋರಿಕೆ: ಹೇಳಿಕೆ ಪಡೆದ ಚುನಾವಣಾ ಆಯೋಗ

Published:
Updated:

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕ ಅಧಿಕೃತ ಘೋಷಣೆಗೆ ಮೊದಲೇ ಮಾಹಿತಿ ಸೋರಿಕೆಯಾಗಿದ್ದ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ಸಮಿತಿ ಎರಡು ಖಾಸಗಿ ಸುದ್ದಿ ವಾಹಿನಿಗಳ ಹಾಗೂ ಬಿಜೆಪಿ, ಕಾಂಗ್ರೆಸ್‌ ಐ.ಟಿ. ಸೆಲ್‌ ಮುಖ್ಯಸ್ಥರ ಹೇಳಿಕೆ ಸಂಗ್ರಹಿಸಿದೆ.

ಬಿಜೆಪಿ ಐ.ಟಿ. ಸೆಲ್‌ನ ಮುಖ್ಯಸ್ಥ ಅಮಿತ್‌ ಮಾಳವಿಯಾ ಅವರಿಂದ ಮಂಗಳವಾರ ಸಂಜೆಯೇ ಹೇಳಿಕೆ ಪಡೆಯಲಾಗಿದೆ. ಖಾಸಗಿ ಸುದ್ದಿ ವಾಹಿನಿಗಳಾದ ಇಂಗ್ಲಿಷ್‌ನ ‘ಟೈಮ್ಸ್‌ ನೌ’ ಹಾಗೂ ಕನ್ನಡದ ‘ಸುವರ್ಣ ನ್ಯೂಸ್‌ ಚಾನಲ್‌’, ಕಾಂಗ್ರೆಸ್‌ನ ಐ.ಟಿ. ಸೆಲ್‌ನ ಶ್ರೀವತ್ಸ ಅವರ ಹೇಳಿಕೆಯನ್ನು ಬುಧವಾರ ಪಡೆಯಲಾಗಿದೆ.

‘ಸುದ್ದಿ ವಾಹಿನಿಗಳಲ್ಲಿ ಬಂದ ಬ್ರೇಕಿಂಗ್‌ ನ್ಯೂಸ್‌ ಆಧರಿಸಿ ಟ್ವೀಟ್‌ ಮಾಡಿದ್ದಾಗಿ ಮಾಳವಿಯಾ ಹಾಗೂ ಶ್ರೀವತ್ಸ ಹೇಳಿಕೆ ನೀಡಿದ್ದು, ರಾಷ್ಟ್ರೀಯ ವಾಹಿನಿಯ ಬ್ರೇಕಿಂಗ್‌ ಸುದ್ದಿ ಆಧರಿಸಿ ಸುದ್ದಿ ಪ್ರಸಾರ ಮಾಡಿದ್ದೇವೆ. ನಾವು ಮಾತ್ರವಲ್ಲ, ಕನ್ನಡದ ಇನ್ನೊಂದು ಸುದ್ದಿ ವಾಹಿನಿ ನಮಗಿಂತಲೂ ತುಸು ಮೊದಲೇ ಈ ಸುದ್ದಿಯನ್ನು ಪ್ರಸಾರ ಮಾಡಿದೆ ಎಂದು ಸುವರ್ಣ ನ್ಯೂಸ್‌ನ ಸಂಪಾದಕೀಯ ವಿಭಾಗದ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ’ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

‘ಕರ್ನಾಟಕ ಚುನಾವಣೆ ದಿನಾಂಕಕ್ಕೆ ಸಂಬಂಧಿಸಿದಂತೆ ನಾವು ಕೇವಲ ಮಾಹಿತಿ ಆಧರಿಸಿ ಸುದ್ದಿ ಪ್ರಸಾರ ಮಾಡಿದ್ದೇವೆ. ಆ ಸುದ್ದಿಯಲ್ಲಿ ಅರ್ಧದಷ್ಟು ಅಂಶ ಸತ್ಯಕ್ಕೆ ದೂರವಿತ್ತು. ಚುನಾವಣಾ ಆಯೋಗದಲ್ಲಿ ನಮಗೆ ಈ ಮಾಹಿತಿಯನ್ನು ಯಾರೂ ನೀಡಿಲ್ಲ’ ಎಂದು ಟೈಮ್ಸ್‌ ನೌ ವಾಹಿನಿಯ ಸುದ್ದಿ ವಿಭಾಗದ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳ ಕುರಿತು ಆರು ಜನ ಅಧಿಕಾರಿಗಳ ಸಮಿತಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ’ ಎಂದು ಆಯೋಗ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry