7
ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣ

ಸ್ಮಿತ್, ವಾರ್ನರ್‌ಗೆ ‘ಡಬಲ್’ ಶಿಕ್ಷೆ

Published:
Updated:
ಸ್ಮಿತ್, ವಾರ್ನರ್‌ಗೆ ‘ಡಬಲ್’ ಶಿಕ್ಷೆ

ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ  ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐ‍ಪಿಎಲ್) ಟೂರ್ನಿಗಳಿಂದ ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ.

ತಂಡದ ಆಟಗಾರ ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಅವರಿಗೆ ಒಂಬತ್ತು ತಿಂಗಳುಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಈ ಮೂವರು ಆಟಗಾರರ ಶಿಕ್ಷೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಬುಧವಾರ ಪ್ರಕಟಿಸಿತು. ಅದರ ನಂತರ ಏಪ್ರಿಲ್‌ನಲ್ಲಿ ಆರಂಭವಾಗಲಿರುವ ಐಪಿಎಲ್‌ನಲ್ಲಿ ಆಡದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆದೇಶ ಹೊರಡಿಸಿತು.

ನಾಲ್ಕು ದಿನಗಳ ಹಿಂದೆ ಕೇಪ್‌ಟೌನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಬ್ಯಾಂಕ್ರಾಫ್ಟ್‌ ಚೆಂಡನ್ನು ವಿರೂಪಗೊಳಿಸಿದ್ದ ದೃಶ್ಯ ಟಿವಿಯಲ್ಲಿ ನೇರಪ್ರಸಾರವಾಗಿತ್ತು. ಚೆಂಡನ್ನು ವಿರೂಪಗೊಳಿಸುವುದು ತಂಡದ ಪೂರ್ವನಿಯೋಜಿತ ಯೋಜನೆಯಾಗಿತ್ತು ಎಂದು ಸ್ಮಿತ್ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದರು. ಆ ಮೂಲಕ ತಂಡದ ಉಪನಾಯಕ ಡೇವಿಡ್‌ ವಾರ್ನರ್ ಕೂಡ ಇದರಲ್ಲಿ ಭಾಗಿಯಾಗಿದ್ದು ಸಾಬೀತಾಗಿತ್ತು. ಮೂವರು ಆಟಗಾರರನ್ನು ತವರಿಗೆ ಮರಳಿ ಕರೆಸಿತ್ತು. ಪ್ರಕರಣದ ತನಿಖೆಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ರಚಿಸಿದ್ದ ಸಮಿತಿಯು ಬುಧವಾರ ವರದಿ ನೀಡಿತು.

ಸಿ.ಎ ತೀರ್ಪು ಹೊರಬಿದ್ದ ಕೂಡಲೇ ಬಿಸಿಸಿಐ ಕಾರ್ಯಪ್ರವೃತ್ತವಾಯಿತು. ರಾಜಸ್ಥಾನ್ ರಾಯಲ್ಸ್‌ ತಂಡದ ಸ್ಮಿತ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ವಾರ್ನರ್ ಅವರನ್ನು ಈ ಬಾರಿಯ ಐಪಿಎಲ್‌ನಲ್ಲಿ  ಆಡದಂತೆ ನಿಷೇಧ ಶಿಕ್ಷೆ ಪ್ರಕಟಿಸಿತು.

ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮ್ಯಾಟ್‌ ರೆನ್‌ಶಾ ಮುನ್ನಡೆಸುವರು.

ಮೇಲ್ಮನವಿ ಸಲ್ಲಿಸಲು ಅವಕಾಶ: ತಮ್ಮ ಮೇಲೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಏಳು ದಿನಗಳ ಗಡುವು ನೀಡಲಾಗಿದೆ.

ಮೂವರೂ ಆಟಗಾರರಿಗೆ ಸ್ಥಳೀಯ ಕ್ಲಬ್‌ಗಳಲ್ಲಿ ಆಡಲು ಅವಕಾಶ ನೀಡಲಾಗಿದೆ.

ಕ್ರಿಕೆಟ್‌ನ ಘನತೆಯನ್ನು ಕಾಪಾಡಲು ಇಂತಹ ಕ್ರಮ ಅಗತ್ಯವಾಗಿತ್ತು. ಈಪ್ರಕರಣವು ಉಳಿದ ಎಲ್ಲ ಆಟಗಾರರಿಗೂ ಪಾಠವಾಗಿದೆ.

–ಜೇಮ್ಸ್‌ ಸದರ್‌ಲೆಂಡ್,

ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಸಿಎ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry