ಮಾನ್ವಿತಾಗೆ ಜಾಕ್‌ಪಾಟ್‌!

7

ಮಾನ್ವಿತಾಗೆ ಜಾಕ್‌ಪಾಟ್‌!

Published:
Updated:
ಮಾನ್ವಿತಾಗೆ ಜಾಕ್‌ಪಾಟ್‌!

‘ರಂಗೀಲಾ ಸಿನಿಮಾದಲ್ಲಿ ಊರ್ಮಿಳಾ ಅವರಲ್ಲಿ ಕಾಣಿಸಿದ ಸ್ಪಾರ್ಕ್‌, ಆ ಉತ್ಸಾಹವನ್ನು ನಾನು ಈವತ್ತು ಮತ್ತೆ ನೋಡಿದೆ. ತುಂಬಾ ದಿನಗಳ ನಂತರ ಇಷ್ಟು ಉತ್ಸಾಹದಿಂದ ನಟಿಸಿದ ಹುಡುಗಿಯನ್ನು ನೋಡುತ್ತಿದ್ದೇನೆ. ಈ ಚಿತ್ರದಿಂದ ನನಗೆ ಪ್ರತಿಭೆಯ ನಿಧಿಯೇ ಸಿಕ್ಕಂತಾಗಿದೆ...’

–ಹೀಗೆ ಹೇಳಿದ್ದು ಬೇರೆ ಯಾರೂ ಅಲ್ಲ, ಜನಪ್ರಿಯ ಮತ್ತು ಅಷ್ಟೇ ಪ್ರತಿಭಾವಂತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ (ಆರ್‌ಜಿವಿ). ಯಾರ ಬಗ್ಗೆ ಹೇಳಿದ್ದು ಅಂತೀರಾ? ‘ಟಗರು’ ಹುಡುಗಿ ಮಾನ್ವಿತಾ ಹರೀಶ್‌ ಬಗ್ಗೆ!

ಇಷ್ಟೇ ಅಲ್ಲ, ತಮ್ಮ ಮುಂದಿನ ಸಿನಿಮಾಕ್ಕೆ ಇವರೇ ನಾಯಕಿ ಎಂದೂ ಅವರು ಘೋಷಿಸಿಬಿಟ್ಟಿದ್ದಾರೆ! ಅಲ್ಲಿಗೆ ಮಾನ್ವಿತಾ ಕನಸಿನ ತಾರೆ ಆಕಾಶದಿಂದ ನೇರವಾಗಿ ಮನೆಯಂಗಳಕ್ಕೆ ಬಂದು ಬಿದ್ದಂತಾಗಿದೆ. ಆ ಹೊಳಪಿನ ನಕ್ಷತ್ರವನ್ನು ಎತ್ತಿ ಮುಡಿಗಿರಿಸಿಕೊಂಡಷ್ಟೇ ಸಂತಸದಲ್ಲಿ ಅವರು ತೇಲಾಡುತ್ತಿದ್ದಾರೆ.

‘ಆರ್‌ಜಿವಿ’ಗಾಗಿ ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿ ‘ಟಗರು’ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಮಧ್ಯಂತರದ ಹೊತ್ತಿಗಾಗಲೇ ಅವರು ‘ಯಾರೀ ಹುಡುಗಿ? ಅವರನ್ನು ಭೇಟಿಯಾಗಬೇಕು ನಾನು’ ಎಂದು ಕೇಳಲು ಆರಂಭಿಸಿದ್ದರಂತೆ. ಸಿನಿಮಾ ಮುಗಿದ ಮೇಲೆ ಮಾನ್ವಿತಾ ಅವರನ್ನು ಭೇಟಿಯಾಗಿ ಪ್ರಶಂಸನೆಯ ಸುರಿಮಳೆಯನ್ನೂ ಸುರಿಸಿದ್ದಾರೆ. ವರ್ಮ ಸುಮ್ಮನೆ ಬಂದು ಸಿನಿಮಾವನ್ನು ನೋಡಿ ಹೋಗುತ್ತಾರೆ ಎಂದುಕೊಂಡು ಹೆಚ್ಚಿಗೆ ನಿರೀಕ್ಷೆಯನ್ನೇನೂ ಇರಿಸಿಕೊಂಡಿರದ ಮಾನ್ವಿತಾ ಅವರಿಗೆ ವರ್ಮ ಅವರ ಹೊಗಳಿಕೆಯಿಂದ ಆದ ಪುಲಕ ಹೇಳತೀರದು. ಅದನ್ನು ಅವರು ವಿವರಿಸುವುದು ಹೀಗೆ.

‘ನಾನು ಚಿಕ್ಕವಳಿದ್ದಾಗಿನಿಂದಲೂ ರಂಗೀಲಾ ಸಿನಿಮಾದ ‘ಯಾಯಿರೇ..’ ಹಾಡಿಗೆ ಹುಚ್ಚೆದ್ದು ಕುಣಿಯುತ್ತಿದ್ದೆ. ಅಂಥ ಹಾಡಿನಲ್ಲಿ ಕುಣಿದ ಊರ್ಮಿಳಾ ಅವರಿಗೆ ನನ್ನನ್ನು ಹೋಲಿಸಿದ್ದು ತುಂಬಾ ಖುಷಿ ಕೊಟ್ಟಿದ್ದು. ಅದೂ ಯಾರೋ ಸಾಮಾನ್ಯರಲ್ಲ. ಆರ್‌ಜಿವಿ ಅವರಂಥ ಶ್ರೇಷ್ಠ ನಿರ್ದೇಶಕರಿಗೆ ನನ್ನ ನಟನೆ ಮೆಚ್ಚುಗೆಯಾಗಿದೆ ಎನ್ನುವುದಕ್ಕಿಂತ ಬೇರೆ ಸಂತೋಷ ಬೇಕೇ? ನನ್ನ ಭೇಟಿಯಾದಾಗಲೂ ‘ನಿನ್ನಲ್ಲಿ ಪ್ರತಿಭೆಯ ಮಿಂಚಿದೆ. ಅದ್ಭುತ ಎನರ್ಜಿಯಿದೆ. ಹತ್ತಾರು ವರ್ಷ ಅನುಭವ ಇರುವ ನಟಿಯ ಹಾಗೆ ಅಭಿನಯಿಸಿದ್ದೀಯಾ’ ಎಂದು ಬೆನ್ನುತಟ್ಟಿದರು. ಹಾಗೆಯೇ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡುವುದಾಗಿ ಹೇಳಿ ಅಡ್ವಾನ್ಸ್‌ ಕೂಡ ಕೊಟ್ಟು ಹೋದರು’ ಎಂದು ಅವರು ಉತ್ಸಾಹದಿಂದ ವಿವರಿಸುತ್ತಾರೆ.

ವರ್ಮ ತಮ್ಮ ನಿರ್ದೇಶನ ‘ಸೌತ್‌’ ಸಿನಿಮಾಗೆ ಮಾನ್ವಿತಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಚಿತ್ರದಲ್ಲಿ ಅಖಿಲ್‌ ಅಕ್ಕಿನೇನಿ ನಾಯಕನಾಗಿ ನಟಿಸುವ ಸಾಧ್ಯತೆಗಳಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry