ಸಂತರ ಜತೆ ವಿಎಚ್‌ಪಿ ಗೋಪ್ಯ ಚರ್ಚೆ?

7
ಧರ್ಮ ಜಾಗರಣ ಸಮನ್ವಯ ಸಂತ ಸಮಾವೇಶ; ಹಿಂದೂ ಜಾಗೃತಿ ಚಿಂತನಾ ಸಭೆ ಇಂದು

ಸಂತರ ಜತೆ ವಿಎಚ್‌ಪಿ ಗೋಪ್ಯ ಚರ್ಚೆ?

Published:
Updated:

ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿ, ನಿರ್ಣಾಯಕ ನಿರ್ಧಾರ ಕೈಗೊಳ್ಳುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ, ಬಸವ ಜನ್ಮ ಭೂಮಿಯಲ್ಲಿ ವಿಶ್ವ ಹಿಂದೂ ಪರಿಷತ್‌ ಶುಕ್ರವಾರ (ಮಾರ್ಚ್‌ 30) ಸಂತರ ಸಮಾವೇಶ ಆಯೋಜಿಸಿದೆ.

ವಿಜಯಪುರ ಜಿಲ್ಲೆಯ ಎಲ್ಲೆಡೆಯಿಂದ 120ಕ್ಕೂ ಹೆಚ್ಚು ಸ್ವಾಮೀಜಿಗಳು ನಗರದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಭಾಗಿಯಾದರೆ, ನೆರೆಯ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಬೀಳಗಿ, ಬಾದಾಮಿ ತಾಲ್ಲೂಕುಗಳ 30ಕ್ಕೂ ಹೆಚ್ಚು ಸ್ವಾಮೀಜಿಗಳು ವಿಎಚ್‌ಪಿ ಆಯೋಜಿಸಿರುವ ಸಂತರ ಗೋಪ್ಯ ಸಭೆ, ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದು ಗೊತ್ತಾಗಿದೆ.

ಸಂತರ ಗೋಪ್ಯ ಸಭೆಯಲ್ಲಿ ಹಿಂದುತ್ವ ಕುರಿತಂತೆ ಪ್ರಮುಖ ಸ್ವಾಮೀಜಿಗಳು ಮುಕ್ತ ಚರ್ಚೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ನಡೆ ಅನುಸರಿಸಬೇಕು ಎಂಬುದರ ಕುರಿತು ಚಿಂತನೆ ನಡೆಸಿ, ಒಮ್ಮತದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರೀಯ ಸಂಘಟನಾ ಸಂಚಾಲಕ ಗೋಪಾಲ ಉಪಸ್ಥಿತರಿದ್ದು, ವಿಎಚ್‌ಪಿಯ ಆಶಯ, ಧ್ಯೇಯೋದ್ದೇಶವನ್ನು ಜಿಲ್ಲೆಯ ವಿವಿಧ ಮಠಾಧೀಶರಿಗೆ ವಿವರಿಸಲಿದ್ದಾರೆ ಎನ್ನಲಾಗಿದೆ.

‘ಇದೇ ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವ್ಯಕ್ತಪಡಿಸಬೇಕಾದ ನಿಲುವು, ಒಲವುಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ಸುಳಿವರಿತಿರುವ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಈಗಾಗಲೇ ತಾವು ನಡೆದುಕೊಳ್ಳುವ ಪ್ರಮುಖ ಮಠಗಳ ಮಠಾಧೀಶರ ಜತೆ ಗೋಪ್ಯ ಮಾತುಕತೆ ನಡೆಸಿ, ಅವಕಾಶ ಸಿಕ್ಕಾಗ, ನಮ್ಮ ವಿಧಾನಸಭಾ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿ ನಾನೇ ಎಂದು ವಿಎಚ್‌ಪಿ ಮುಖಂಡರಿಗೆ ತಿಳಿಸಿ ಎಂದು ದುಂಬಾಲು ಬಿದ್ದು, ಶ್ರೀಗಳ ಆಶೀರ್ವಚನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ವಿಎಚ್‌ಪಿಯ ಸಂತರ ಸಮಾವೇಶಕ್ಕೆ ನಮಗೆ ಆಹ್ವಾನ ಬಂದ ಬೆನ್ನಿಗೆ, ಮಠದ ಭಕ್ತರ ಒತ್ತಡವೂ ಹೆಚ್ಚಿದೆ. ಎಲ್ಲರೂ ಮನವೊಲಿಸಲು ಮುಂದಾಗಿದ್ದಾರೆ. ಎಂದೂ ಮಠದತ್ತ ಹೆಜ್ಜೆ ಹಾಕದವರು ಬಂದು ಹೋಗಿದ್ದಾರೆ. ಚರ್ಚೆಯ ನಡುವೆ ಅವಕಾಶ ಸಿಕ್ಕರೆ ಬಿಜೆಪಿಯಿಂದ ನನ್ನನ್ನೇ ಕಣಕ್ಕಿಳಿಸುವಂತೆ ಸಂದೇಶ ನೀಡಿ ಎಂದು ದುಂಬಾಲು ಬಿದ್ದಿದ್ದಾರೆ. ನಾವೂ ನೋಡೋಣ ಎಂದಷ್ಟೇ ಹೇಳಿದ್ದೇವೆ. ಸಭೆಗೆ ಹೋಗುವುದು ಇನ್ನೂ ಖಾತ್ರಿ ಮಾಡಿಕೊಂಡಿಲ್ಲ. ಒಂದು ವೇಳೆ ಗೋಪ್ಯ ಸಭೆಗೆ ಹಾಜರಾದರೆ ಅಲ್ಲಿ ನಡೆಯುವ ಚರ್ಚೆ, ವಾತಾವರಣವನ್ನು ಸೂಕ್ಷ್ಮವಾಗಿ ಅವಲೋಕಿಸಿ, ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೆಸರು ಬಹಿರಂಗ ಪಡಿಸಲಿಚ್ಚಿಸದ ಪ್ರಮುಖ ಮಠಾಧೀಶರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಜೆಪಿ ಟಿಕೆಟ್‌ಗಾಗಿ ಲಾಬಿ ನಡೆಸಲು ರಾಜಧಾನಿಗೆ ದೌಡಾಯಿಸಿದ್ದ ಆಕಾಂಕ್ಷಿಗಳು ಸಹ ಗುರುವಾರವೇ ಮರಳಿ, ಸಂತರ ಸಮಾವೇಶದ ಯಶಸ್ವಿಗೆ ಶ್ರಮಿಸಿದ್ದಾರೆ. ಮತ್ತೊಂದು ಸುತ್ತು ತಮ್ಮ ಗುರುಗಳನ್ನು ಭೇಟಿಯಾಗಿ, ಗೋಪ್ಯ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ನೋಡಿಕೊಳ್ಳುವ ಯತ್ನ ನಡೆಸಿದ್ದಾರೆ’ ಎಂಬುದು ತಿಳಿದು ಬಂದಿದೆ.

**

ಹಿಂದುತ್ವದ ಕುರಿತು ಜಾಗೃತಿ ಮೂಡಿಸಲು, ಮುಂದಿನ ನಡೆ ಕುರಿತು ಚರ್ಚಿಸಲು ಸಂತರ ಸಮಾವೇಶ ಆಯೋಜಿಸಲಾಗಿದೆ. ಸಂತರ ನಡುವೆಯಷ್ಟೇ ಚರ್ಚೆ ನಡೆಯಲಿದೆ.

–ಸುನೀಲ ಭೈರವಾಡಗಿ, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry