ಕೊಡಗಿನಲ್ಲಿ ಕಾಡಾನೆ ಸರಣಿ ಸಾವು

7

ಕೊಡಗಿನಲ್ಲಿ ಕಾಡಾನೆ ಸರಣಿ ಸಾವು

Published:
Updated:
ಕೊಡಗಿನಲ್ಲಿ ಕಾಡಾನೆ ಸರಣಿ ಸಾವು

ಮಡಿಕೇರಿ: ಕೊಡಗಿನಲ್ಲಿ ಕಾಡಾನೆಗಳ ಸರಣಿ ಸಾವು ಮುಂದುವರಿದಿದೆ. ಅರಣ್ಯ ಪ್ರದೇಶ ಬಿಟ್ಟು ಜಿಲ್ಲೆಯ ಕಾಫಿ ತೋಟಕ್ಕೆ ಬಂದಿದ್ದ ಒಟ್ಟು 23 ಆನೆಗಳು 2017ರ ಏಪ್ರಿಲ್‌ನಿಂದ 2018ರ ಮಾರ್ಚ್‌ ನಡುವೆ ಸಾವಿಗೀಡಾಗಿವೆ.

ಸಾವಿಗೆ ಗುಂಡೇಟು, ವಿದ್ಯುತ್‌ ತಂತಿ ಸ್ಪರ್ಶ, ನೀರು ಕುಡಿಯಲು ಹೋಗಿ ಕೆರೆ ಹಾಗೂ ಕೃಷಿ ಹೊಂಡದ ಕೆಸರಿನಲ್ಲಿ ಸಿಲುಕುವುದು ಪ್ರಮುಖ ಕಾರಣಗಳಾಗಿವೆ.

ಬೇಸಿಗೆಯಲ್ಲಿ ಆಹಾರ, ನೀರು ಹುಡುಕಿಕೊಂಡು ಕಾಡಾನೆಗಳು ನಾಡಿಗೆ ಲಗ್ಗೆಯಿಡುತ್ತಿದ್ದು ಜಿಲ್ಲೆಯಲ್ಲಿ ಆನೆ– ಮಾನವ ಸಂಘರ್ಷ ತೀವ್ರವಾಗಿದೆ. ಹದಿನೈದು ದಿನಗಳಲ್ಲಿ ಎರಡು ಆನೆಗಳ ಸಾವಿಗೆ ಗುಂಡೇಟು ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯ ವೇಳೆಯೂ ಇದು ದೃಢಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಕಾಫಿ ತೋಟಕ್ಕೆ ಆನೆಗಳು ಲಗ್ಗೆಯಿಟ್ಟು ಬೆಳೆನಷ್ಟ ಮಾಡುತ್ತಿರುವುದರಿಂದ ಬೆಳೆಗಾರರು ಬೇಸತ್ತು ಬಂದೂಕು ಪ್ರಯೋಗಕ್ಕೆ ಇಳಿದಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಮಾರ್ಚ್‌ 29ರಂದು ವಿರಾಜಪೇಟೆ ತಾಲ್ಲೂಕಿನ ಪಾಲಂಗಾಲದ ತೋಟದಲ್ಲಿ ಪತ್ತೆಯಾದ 30 ವರ್ಷದ ಗಂಡಾನೆ ಮೃತದೇಹದಲ್ಲಿ ಗುಂಡು ಪತ್ತೆಯಾಗಿದೆ. ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿದ್ದಾರೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.

ಮಾರ್ಚ್‌ 14ರಂದು ಶ್ರೀಮಂಗಲ ಸಮೀಪದ ನಾಲ್ಕೇರಿಯಲ್ಲಿ ಆಹಾರ ಹುಡುಕಿಕೊಂಡು ಕಾಫಿ ತೋಟಕ್ಕೆ ಬಂದಿದ್ದ ಮೂರು ಕಾಡಾನೆಗಳು ಮೃತಪಟ್ಟಿದ್ದವು. ಅದರಲ್ಲಿ 35 ವರ್ಷದ ಹೆಣ್ಣಾನೆಯ ದೇಹದ ಮೇಲೂ ಗುಂಡಿನ ಗುರುತುಗಳಿದ್ದವು. ಎರಡು ತಿಂಗಳ ಹಿಂದೆ ಅದರ ಮೇಲೆ ಗುಂಡು ಹಾರಿಸಿರುವ ಸಾಧ್ಯತೆಯಿದ್ದು, ಬಳಿಕ ನಿತ್ರಾಣಗೊಂಡು ಸತ್ತಿದೆ. ಎರಡು ವರ್ಷದ ಹಿಂದೆಯೂ ಎರಡು ಆನೆಗಳು ಗುಂಡೇಟಿನಿಂದಲೇ ಸತ್ತಿದ್ದವು.

ಜಿಲ್ಲೆಯಲ್ಲಿ ವಿರಾಜಪೇಟೆ ಹಾಗೂ ಮಡಿಕೇರಿ ಅರಣ್ಯ ವೃತ್ತಗಳಿವೆ. ದಕ್ಷಿಣ ಕೊಡಗಿನ ವ್ಯಾಪ್ತಿಗೆ ಬರುವ ವಿರಾಜಪೇಟೆಯು ಕಾಫಿ ತೋಟಗಳಿಂದ ಆವೃತ್ತವಾದ ಪ್ರದೇಶ. ಈ ವೃತ್ತದಲ್ಲಿಯೇ 18 ಆನೆಗಳು ಸತ್ತಿವೆ. ಮಡಿಕೇರಿ ವ್ಯಾಪ್ತಿಯಲ್ಲಿ ಐದು ಆನೆಗಳು ಮೃತಪಟ್ಟಿವೆ.

ಯಾವ ಕಾರಣಕ್ಕೆ ಎಷ್ಟು ಆನೆಗಳು?: ಗಾಳಿ, ಮಳೆಗೆ ತೋಟದಲ್ಲಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಆರು ಆನೆಗಳು ಸತ್ತರೆ, ಅನುಮಾನಾಸ್ಪದ ರೀತಿಯಲ್ಲಿ 2, ವಯೋಸಹಜ ಕಾರಣಕ್ಕೆ 2, ಗುಂಡೇಟಿನಿಂದ 2, ಮತ್ತಿತರ ಕಾರಣದಿಂದ 11 ಆನೆಗಳು ಮೃತಪಟ್ಟಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜೀವ ರಕ್ಷಣೆ ಅಥವಾ ಬೆಳೆ ರಕ್ಷಣೆಗಾಗಿ ಗುಂಡು ಹಾರಿಸಿರುವ ಸಾಧ್ಯತೆಯಿದೆ. ತನಿಖೆಯಿಂದ ನಿಖರವಾದ ಕಾರಣ ತಿಳಿಯಲಿದೆ ಎಂದೂ ಅವರು ಹೇಳುತ್ತಾರೆ.

ತೋಟದಾನೆಗಳು: ಕೊಡಗಿನ ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಆಹಾರದ ಕೊರತೆ ಎದುರಾಗಿದೆ. ಹೀಗಾಗಿ, ಹಲಸಿನ ಹಣ್ಣು, ಬಿದಿರು, ನೀರು ಹುಡುಕಿಕೊಂಡು ತೋಟಕ್ಕೆ ಬರುತ್ತಿವೆ. ಅರಣ್ಯಕ್ಕಿಂತ ಕಾಫಿ ತೋಟದಲ್ಲೇ ಹಸಿರು ನಳನಳಿಸುತ್ತಿದ್ದು ಅವು ತೋಟದಾನೆಗಳಾಗಿ ಬದಲಾಗಿವೆ.

ಜಿಲ್ಲೆಯಾದ್ಯಂತ 60ಕ್ಕೂ ಹೆಚ್ಚು ಆನೆಗಳು ತೋಟದಲ್ಲಿ ಬೀಡುಬಿಟ್ಟಿವೆ. ಅವುಗಳನ್ನು ಕಾಡಿಗೆ ಅಟ್ಟುವುದು ಇಲಾಖೆಗೆ ಸವಾಲಾಗಿದೆ. ತೋಟದಲ್ಲಿ ಬಾಳೆ, ಕಾಳುಮೆಣಸು, ಕಾಫಿ, ಏಲಕ್ಕಿ ಗಿಡಗಳನ್ನು ನಾಶಪಡಿಸುತ್ತಿರುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯುತ್‌ ಬೇಲಿ, ಆನೆ ಕಂದಕ, ರೈಲು ಹಳಿ ನಿರ್ಮಾಣ ಯಾವುದೂ ಪ್ರಯೋಜನಕ್ಕೆ ಬರುತ್ತಿಲ್ಲ.

ರೇಡಿಯೊ ಕಾಲರ್‌ ಅಳವಡಿಕೆ ಚುರುಕು

ಕಾಡಾನೆಗಳ ಚಲನವಲನ ಹಾಗೂ ಪತ್ತೆ ಕಾರ್ಯಕ್ಕಾಗಿ ಅರಣ್ಯ ಇಲಾಖೆಯು ‘ರೇಡಿಯೊ ಕಾಲರ್’ ಅಳವಡಿಕೆಗೆ ಮುಂದಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಈ ಪ್ರಯೋಗ ನಡೆದಿದೆ. ವಾರದಿಂದ ಈಚೆಗೆ ಸಿದ್ದಾಪುರ, ಚೆಟ್ಟಳ್ಳಿ, ಸುಂಟಿಕೊಪ್ಪದಲ್ಲಿ ಮೂರು ಹೆಣ್ಣಾನೆಗಳಿಗೆ ಈ ಉಪಕರಣ ಅಳವಡಿಸಲಾಗಿದೆ.

‘ಹೆಣ್ಣಾನೆಗಳು ಮಾತ್ರ ಗುಂಪಿನಲ್ಲಿ ವಾಸಿಸುತ್ತವೆ. ಮೊದಲಿಗೆ ಹೆಣ್ಣಾನೆಗಳನ್ನು ಗುರುತಿಸಿ ಸಾಕಾನೆಗಳ ಸಹಾಯದಿಂದ ರೇಡಿಯೊ ಕಾಲರ್ ಅಳವಡಿಸಲಾಗಿದೆ. ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ಸಂಗ್ರಹಿಸಿ, ನಾಡಿಗೆ ಆನೆಗಳು ಬಂದರೆ ಕಾಡಿಗಟ್ಟುತ್ತೇವೆ. ಇದು ಯಶಸ್ವಿಯೂ ಆಗಲಿದೆ’ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಮನುಷ್ಯರ ಪ್ರಾಣಕ್ಕೂ ಕುತ್ತು

ಈ ಸಂಘರ್ಷದಲ್ಲಿ ಆನೆಗಳು ಮಾತ್ರ ಸಾಯುತ್ತಿಲ್ಲ. ಕಾರ್ಮಿಕರು, ಬೆಳೆಗಾರರೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ 41 ಮಂದಿ ಆನೆ ದಾಳಿಗೆ ತುತ್ತಾಗಿದ್ದಾರೆ. ಸಾವನ್ನಪ್ಪಿದ ಕುಟುಂಬಸ್ಥರಿಗೆ ಒಟ್ಟು ₹1.28 ಕೋಟಿ ಪರಿಹಾರ ವಿತರಿಸಲಾಗಿದೆ. ಬೆಳೆ ನಷ್ಟಕ್ಕೆ ₹3.78 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry