7
ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ವಿ.ವಿ.ಪ್ಯಾಟ್, ನೋಟಾ ಬಳಕೆ

ಮತದಾರರೂ ಹೆಚ್ಚು, ಮತಗಟ್ಟೆಗಳೂ ಹೆಚ್ಚು

Published:
Updated:
ಮತದಾರರೂ ಹೆಚ್ಚು, ಮತಗಟ್ಟೆಗಳೂ ಹೆಚ್ಚು

ದಾವಣಗೆರೆ: ಜಿಲ್ಲೆಯಲ್ಲಿ 2013ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದ್ದಲ್ಲಿ ಈ ಬಾರಿ 138 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸುಮಾರು 2 ಲಕ್ಷ ಮತದಾರರು ಹೆಚ್ಚುವರಿ ಸೇರ್ಪಡೆಯಾಗಿದ್ದರಿಂದ ಚುನಾವಣಾ ಆಯೋಗ ಮತಗಟ್ಟೆಗಳ ಸಂಖ್ಯೆಯಲ್ಲೂ ಹೆಚ್ಚಳ ಮಾಡಿದೆ.2013ರಲ್ಲಿ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, 14,61,714 ಮತದಾರರು ಇದ್ದರು. 1,808 ಮತಗಟ್ಟೆ ಸ್ಥಾಪಿಸಲಾಗಿತ್ತು. 2018ರಲ್ಲಿ 16,03,722 ಮತದಾರರಿದ್ದು, 1,946 ಮತಗಟ್ಟೆ ಸ್ಥಾಪಿಸಲಾಗಿದೆ. ಇವುಗಳಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಪರಿಸ್ಥಿತಿ ಪರಿಶೀಲಿಸಿ ಜಿಲ್ಲಾ ಚುನಾವಣಾ ವಿಭಾಗ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ.

ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ 12,500 ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಎಲ್ಲ ಮತಗಟ್ಟೆಗಳ ಜಿಯೋ ಕೋಆರ್ಡಿನೇಟ್ಸ್‌ ಅನ್ನು ಶೇಖರಿಸಲಾಗಿದ್ದು, ತಂತ್ರಾಂಶದಲ್ಲಿ ಸಂಗ್ರಹಿಸಲಾಗಿದೆ. ಅಲ್ಲದೇ ಪ್ರತಿ ಮತಗಟ್ಟೆಯ ಡಿಜಿಟಲ್ ಮ್ಯಾಪ್, ಕೀಮ್ಯಾಪ್, ಸೆಟ್‌ಲೈಟ್ ಮ್ಯಾಪ್ ಹಾಗೂ ನಕ್ಷೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊದಲ ಬಾರಿಗೆ ನೋಟಾ: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ‘ನೋಟಾ’ ಬಳಕೆಗೆ ಅವಕಾಶ ಇದೆ. 2014ರ ಲೋಕಸಭೆ ಚುನಾವಣೆಗೆ ನೋಟಾ ಬಳಸುವ ಅವಕಾಶವನ್ನು ಕೇಂದ್ರ ಚುನಾವಣಾ ಆಯೋಗ ಕಲ್ಪಿಸಿತ್ತು. NOTA (None Of The Above) ಅಂದರೆ ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ. ‘ನನ್ ಆಫ್ ದಿ ಅಬೌ’ ಎಂಬುದು ನೋಟಾದ ಪೂರ್ಣ ಅರ್ಥ. ಈ ಬಾರಿಯ ಚುನಾವಣೆಯಲ್ಲಿ ನೋಟಾ ಬಟನ್ ಅನ್ನು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ನೀಡಲಾಗುತ್ತಿದೆ. ಒಂದು ಮತ ಯಂತ್ರದಲ್ಲಿ 16 ಅಭ್ಯರ್ಥಿಗಳ ಹೆಸರು ಹಾಕಲು ಅವಕಾಶ ಇದೆ. ಆದರೆ, ಈ ಬಾರಿ ನೋಟಾ ಇರುವುದರಿಂದ ಹೆಚ್ಚುವರಿ ಮತ ಯಂತ್ರಗಳ ಜೋಡಣೆ ಮಾಡುವ ಸಾಧ್ಯತೆಯೂ ಹೆಚ್ಚಿದೆ. ಜಿಲ್ಲೆಯಲ್ಲಿ 2,968 ಬ್ಯಾಲೆಟ್ ಯುನಿಟ್, 2,498 ಕಂಟ್ರೋಲ್ ಯುನಿಟ್‌ಗಳು ಸಿದ್ಧಗೊಳಿಸಲಾಗಿದೆ ಎಂದು ಚುನಾವಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಬಾರಿಗೆ ವಿ.ವಿ.ಪ್ಯಾಟ್‌: ಈ ಚುನಾವಣೆಯಲ್ಲಿ ಮೊದಲ ಬಾರಿಗೆ ವಿ.ವಿ.ಪ್ಯಾಟ್‌ (ಮತ ಖಾತರಿ ಯಂತ್ರ) ಬಳಕೆ ಮಾಡಲಾಗುತ್ತಿದೆ. ವಿ.ವಿ.ಪ್ಯಾಟ್‌ ಮತದಾರರು ಚಲಾಯಿಸಿದ ಮತದ ಚಿತ್ರಣ ಪರದೆಯ ಮೇಲೆ 7 ಸೆಕೆಂಡ್‌ಗಳ ಕಾಲ ಮೂಡಿಬರಲಿದೆ. ಜಿಲ್ಲೆಗೆ 2,417 ವಿ.ವಿ ಪ್ಯಾಟ್‌ಗಳು ಬಂದಿದ್ದು, ಇವುಗಳನ್ನು ಮತ ಯಂತ್ರಗಳಿಗೆ ಜೋಡಿಸುವ ಕಾರ್ಯ ನಡೆದಿದೆ.

ಮಹಿಳಾ ಮತಗಟ್ಟೆಗಳು: ನಗರ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 4 ಹಾಗೂ ಗ್ರಾಮೀಣ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ

1 ಮತಗಟ್ಟೆಗಳಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಚುನಾವಣೆಯ ವಿಶೇಷತೆಗಳಲ್ಲಿ ಇದೂ ಒಂದು.

2013, 2018 ವಿಧಾನಸಭಾ ಕ್ಷೇತ್ರ ಮತಗಟ್ಟೆಗಳು ಮತಗಟ್ಟೆಗಳು

ಜಗಳೂರು 246 261

ಹರಪನಹಳ್ಳಿ 227 259

ಹರಿಹರ 220 239

ದಾವಣಗೆರೆ ಉತ್ತರ 225 245

ದಾವಣಗೆರೆ ದಕ್ಷಿಣ 200 211

ಮಾಯಕೊಂಡ 229 239

ಚನ್ನಗಿರಿ 234 249

ಹೊನ್ನಾಳಿ 227 243

ಒಟ್ಟು 1,808 1,946

**

ಇವಿಎಂ ಮತ್ತು ವಿ.ವಿ ಪ್ಯಾಟ್‌ಗಳ ಪರಿಶೀಲನೆ ಕಾರ್ಯ ಮುಗಿದಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು – ಡಿ.ಎಸ್‌.ರಮೇಶ್, ಜಿಲ್ಲಾ ಚುನಾವಣಾಧಿಕಾರಿ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry