ಶುಕ್ರವಾರ, ಡಿಸೆಂಬರ್ 13, 2019
19 °C

ಕುಂಬಾರನ ಜೀವನ ಚಕ್ರ...

ಕೆ.ಎಸ್.ರಾಜಾರಾಮ್ Updated:

ಅಕ್ಷರ ಗಾತ್ರ : | |

ಕುಂಬಾರನ ಜೀವನ ಚಕ್ರ...

ಬೇಸಿಗೆ ಬಂತು, ಕುಂಬಾರನ ಕೈಚಳಕಕ್ಕೆ ಬೇಡಿಕೆಯೂ ಬಂತು. ಅನಾದಿ ಕಾಲದಿಂದಲೂ ಮಾನವನ ಜೀವನಕ್ಕೆ ಅಂಟಿಕೊಂಡೇ ಸಾಗಿ ಬಂದು ಮೋಡಿ ಮಾಡುವ ಈ ಶ್ರಮಜೀವಿ ಜಗತ್ತಿನಾದ್ಯಂತ ಎಂದೆಂದೂ ಮಾನ್ಯನೇ. ನೂರಕ್ಕೆ ನೂರರಷ್ಟು ಪರಿಸರ ಪಾಲಕ. ಯಾವುದೇ ದುಬಾರಿ ಅನಿಲ, ವಿದ್ಯುತ್ ಶಕ್ತಿ ವ್ಯಯಮಾಡದೇ, ಅನರ್ಘ್ಯವಾದ ಕಚ್ಚಾ ವಸ್ತುವನ್ನೂ ಬಳಸದೇ ಕಾಲಡಿಗಿನ ಭೂಮಿಯ ಮಣ್ಣನ್ನೇ ಅಗೆದು ಹದಮಾಡಿ ಜನೋಪಯೋಗಿ ಮಡಕೆ, ಬಿಂದಿಗೆ, ಹೂಜೆ, ಕುಂಡ ತಯಾರಿಸುವ ಇವ ವಿಶ್ವಕರ್ಮನೇ!

ಅಂತಹ ಒಬ್ಬ ಕುಂಬಾರನ ಮೋಡಿಯನ್ನು ಇತ್ತೀಚಿನ ಒಂದು ಮುಂಜಾನೆ ಕ್ಯಾಮೆರಾದಲ್ಲಿ ಮಹಾನಗರಿ ಬಳಿಯ ನಂದಿ ಗ್ರಾಮದಲ್ಲಿ ಸೆರೆಹಿಡಿದಿರುವವರು, ಹೊಸಕೋಟೆಯ ನಿವಾಸಿ ಕೆ. ಸುರೇಶ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಸುರೇಶ್‌, ಚಿಕ್ಕ ವಯಸ್ಸಿನಲೇ ಫಿಲ್ಮ್ ಕ್ಯಾಮೆರಾ ಬಳಸಿ ಫೋಟೊ ತೆಗೆಯುವುದನ್ನು ರೂಢಿಮಾಡಿಕೊಂಡವರು. ಇತ್ತೀಚೆಗೆ ಡಿಜಿಟಲ್ ಕ್ಯಾಮೆರಾದ ಮೂಲಕ ವನ್ಯಜೀವಿ, ಪಕ್ಷಿಗಳು, ಪ್ರಕೃತಿ, ಜನಜೀವನ, ಫೋಟೋ ಜರ್ನಲಿಸಂ ಇತ್ಯಾದಿ ವಿಭಾಗಗಳಲ್ಲಿ ತಮ್ಮ ನೆಚ್ಚಿನ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ‌

ಇಲ್ಲಿ ಅವರು ಬಳಸಿರುವ ಕ್ಯಾಮೆರಾ, ನಿಕಾನ್ D 5200, ಜೊತೆಗೆ 18- 55 ಎಂ.ಎಂ. ಕಿಟ್ ಲೆನ್ಸ್‌ನಲ್ಲಿನ ವೈಡ್ ಆ್ಯಂಗಲ್ ಅಳವಡಿಸಿದ್ದು ಇತರ ವಿವರಗಳು ಇಂತಿವೆ. ಅಪರ್ಚರ್ F 4.18 ಎಂ.ಎಂ., ಶಟರ್ ವೇಗ 1/25 ಸೆಕೆಂಡ್ ಮತ್ತು ಐ.ಎಸ್.ಒ 100, ಟ್ರೈಪಾಡ್ ಮತ್ತು ಫ್ಲಾಶ್ ಬಳಕೆಯಾಗಿಲ್ಲ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:

* ಕ್ಯಾಮೆರಾದ ತಾಂತ್ರಿಕ ಹಿಡಿತಗಳೆಲ್ಲವೂ ಇಲ್ಲಿ ವಸ್ತು, ಹಿನ್ನೆಲೆ, ಮುನ್ನೆಲೆ ಇತ್ಯಾದಿಯ ಸಂದರ್ಭಕ್ಕೆ ಅನುಗುಣವಾಗಿ ಸಮರ್ಪಕವಾಗಿವೆ.

* ಸುರೇಶ್ ಅವರ ಪರಿಣಿತಿಯ ದೆಸೆಯಿಂದ, 1/25 ಸೆಕೆಂಡ್‌ನಷ್ಟು ನಿಧಾನಗತಿಯ ಶಟರ್ ವೇಗದಲ್ಲಿಯೂ, ಕುಂಬಾರನ ಕೈಗಳ ಚಲನೆ ಮತ್ತು ಇತರ ದೃಶ್ಯಗಳು ಕಿಂಚಿತ್ತೂ ಶೇಕ್ ಆಗದಿರುವುದು ಸಾದ್ಯವಾಗಿದೆ. ಈ ಬಗೆಯ ನಿಧಾನ ಗತಿಯ ಸಂದರ್ಭದಲ್ಲಿ, ಕ್ಯಾಮೆರಾ ಶೇಕ್ ತಡೆಯಲು, ಟ್ರೈಪಾಡ್ ಬಳಸುವುದು ಸಮಂಜಸವೇ.

* ನಿಧಾನ ಗತಿಯ ಕವಾಟ ವೇಗ (ಶಟರ್ ಸ್ಪೀಡ್) ಈ ಬಗೆಯ ತಿರುಗುವ ಚಕ್ರದ ಗತಿಯನ್ನು ತಿರುಗುತ್ತಿದ್ದಂತೆಯೇ ರೂಪಿಸುವಲ್ಲಿ ಅತಿ ಅವಶ್ಯಕ ಹೌದು.

* ಟ್ರೈಪಾಡ್ ಬಳಸದಿದ್ದಲ್ಲಿ, ಹ್ಯಾಂಡ್ ಶೇಕ್‌ನ ದೆಸೆಯಿಂದ ಸ್ಥಿರವಾಗಿರುವ ಇತರ ಎಲ್ಲ ವಸ್ತುಗಳು (ಸ್ಟಿಲ್ ಆಗಿದ್ದವೂ ಕೂಡ) ಚೌಕಟ್ಟಿನಲ್ಲಿ ಸ್ವಲ್ಪ ಅಲುಗಾಡಿ ಬಿಡುವ ಸಾಧ್ಯತೆಯೇ ಹೆಚ್ಚು.

* ಕುಂಬಾರನ ಕಾಯಕದ ಸೂಕ್ಷ್ಮತೆಯೊಂದಿಗೆ, ಸುತ್ತೆಲ್ಲ ಹಸಿ-ಒಣಗಲು ಜೋಡಿಸಿಟ್ಟ ಸತತವಾಗಿ ತಯಾರಿಸಿದ ಕುಂಡಗಳ ಹರಿವು ಅವನ ಅನವರತ ಶ್ರಮದ ಸಂಕೇತವಾಗಿ ನೋಡುಗನ ಕಣ್ಣು ಮತ್ತು ಮನಸಿಗೆ ಅನನ್ಯವಾದ ಭಾವ ಮೂಡಿಸುವಲ್ಲಿ ಸಹಕಾರಿಯಾಗಿದೆ.

* ಕುಂಬಾರನ ಆಚೀಚೆ ಸಾಕಷ್ಟು ದೃಶ್ಯವನ್ನೂ ದಾಖಲಿಸಲು ವಿಸ್ತಾರ ಗ್ರಹಣ ಮಸೂರದ (ವೈಡ್ ಆ್ಯಂಗಲ್ ಲೆನ್ಸ್) ಬಳಕೆ ಇಲ್ಲಿ ಛಾಯಾಚಿತ್ರಕಾರರ ಜಾಣ್ಮೆಗೆ ಮಾದರಿಯಾಗಿದೆ.

* ಉತ್ತಮವಾದ ವಿಸ್ತಾರ ಗ್ರಹಣ ಮಸೂರದ ಉಪಯೋಗ ಇನ್ನೊಂದು ವಿಷಯದಲ್ಲಿ ಸಹಕಾರಿ. ಅದೆಂದರೆ, ವಲಯ ಸಂಗಮದ (ಜೋನ್ ಫೋಕಸಿಂಗ್‌) ಅವಶ್ಯಕತೆಗೆ. ಈ ದೃಶ್ಯದಲ್ಲಿ ಎಡ ತುದಿಯಿಂದ ಬಲದ ಅಂಚಿನವರೆಗೂ ಜೋಡಿಸಿಟ್ಟಿರುವ ಮಣ್ಣಿನ ಕುಂಡಗಳು (ಪ್ರಾಡಕ್ಟ್ಸ್) ಓರೆಯಿಂದ ಬೀಳುತ್ತಿರುವ ಮುಂಜಾನೆಯ ಬೆಳಕಿನ ದೆಸೆಯಿಂದ ರೂಪಿಕೆಯನ್ನು (ಪ್ಯಾಟ್ರನ್) ಉಂಟುಮಾಡಿ ಎಲ್ಲ ಸೂಕ್ಷ್ಮ ಭಾಗಗಳನ್ನೂ ಸ್ಫುಟಗೊಳಿಸಿ (ಫೈನ್- ಫೋಕಸ್), ಅಂತೆಯೇ ಹಿಂಬದಿಯ ಗೋಡೆಯ ಮೇಲೆಲ್ಲಾ ಸಹಜವಾಗಿಯೇ ಮೂಡಿರುವ ಕುಂಬಾರನ ಅಂಗೈ ಗುರುತುಗಳನ್ನೂ ಸಾಂದರ್ಭಿಕವಾಗಿ ತೋರಿಸುತ್ತಾ ಇಡೀ ಚೌಕಟ್ಟಿಗೇ ಮೆರಗನ್ನು ನೀಡಿವೆ.

* ಕಲಾತ್ಮಕವಾಗಿ, ಇದೊಂದು ಉತ್ತಮ ಸಂಯೋಜನೆಯ ದೃಶ್ಯ. ಚೌಕಟ್ಟಿನ ಪ್ರವೇಶ ಬಿಂದುವಾದ (ಎಂಟ್ರಿ ಪಾಯಿಂಟ್- ಮುಖ್ಯವಸ್ತು), ಕುಂಬಾರನ  ಕೈಗಳ ಮಾಟ ಮತ್ತು ಅದಕ್ಕೆ ಹೊಂದಿ ರೂಪಾಂತರಗೊಳ್ಳುತ್ತಿರುವ ಹಸಿ ಮಣ್ಣು. ಈ ಭಾಗವು ಚೌಕಟ್ಟಿನ ಎಡಬದಿಯ ಒಂದು ಮೂರಾಂಶದಲ್ಲಿದೆ. ಬಲಭಾಗದ ಅಂಚಿನವರೆಗೂ ನೆಲದ ಮೇಲೆ ಜೋಡಿಸಿಟ್ಟಿರುವ ಕುಂಡಗಳು ಚಿತ್ರಕ್ಕೆ ಸಮತೋಲನ (ಬ್ಯಾಲೆನ್ಸ್) ನೀಡಿವೆ.

* ವರ್ತುಲ ರೇಖಾ ಸಂಯೋಜನೆಗೆ (ಸರ್ಕಲರ್ ಕಾಂಪೋಸಿಷನ್‌) ಇದೊಂದು ಉತ್ತಮ ಮಾದರಿಯೂ ಹೌದು.

* ಇಲ್ಲಿ ನೋಡುಗನ ಕಣ್ಣ ಚೌಕಟ್ಟಿನ ಎಲ್ಲ ಭಾಗಗಳನ್ನೂ ಒಂದೊಂದಾಗಿ ನೋಡುತ್ತಲೇ ಸುತ್ತಬಹುದಾದ ಅನುಭವ ಪಡೆಯುವುದು ಗಮನಾರ್ಹ. ರೂಪಾಂತರಗೊಳ್ಳುತ್ತಿರುವ ಮಣ್ಣನ್ನು ಗಮನಿಸಿದ ನೋಡುಗನ ಕಣ್ಣು ಅಲ್ಲಿಂದ ಎಡದಂಚಿಗೆ ಜಾರಿ, ಅಲ್ಲಿ ಮತ್ತೊಂದು ಚಕ್ರದ ಮೇಲೆ ಓರೆಯಾಗಿ ಸರಿದಿಟ್ಟ ದಬ್ಬೆಗಳ ಹೊರೆಯ ಮೇಲೆ ಸಾಗಿ ಹಾಗೆಯೇ ಲಂಬವಾಗಿ ಕಾಣಿಸುವ ಗೋಡೆಯಂಚಿನ ಮತ್ತು ಬಾಗಿಲುಗಳ ಪಟ್ಟಿಗಳನ್ನು ಚೌಕಟ್ಟಿನ ಬಲದಂಚಿನವರೆಗೂ ದಾಟುತ್ತಾ, ಕೆಳಗಿನ ನೆಲದಮೇಲೆ ಜೋಡಿಸಿರುವ ಕುಂಡಗಳ ಮೇಲಂಚನ್ನು ಒಂದೊಂದಾಗಿ ಸವರುತ್ತಾ, ಎಡಬದಿಗೆ ಸಾಗಿ, ತಿರುಗುತ್ತಿರುವ ಬುಡದ ಗಾಲಿಯ ಚಲನೆಯನ್ನೂ ಗಮನಿಸಿ , ಪುನಃ ಕುಂಬಾರನ ಕೈ ಕಸರತ್ತಿನೆಡೆಗೇ ನಾಟುವುದು ಈ ಸಂಯೋಜನೆಯ ವೈಶಿಷ್ಟ್ಯ.

ಪ್ರತಿಕ್ರಿಯಿಸಿ (+)