ಮಂಗಳವಾರ, ಜೂಲೈ 7, 2020
27 °C
ಸಾಮಾಜಿಕ ಜಾಲ ತಾಣ ಮೂಲಕ ಮಾಹಿತಿ ಸೋರಿಕೆ: ಪರಿಣತರ ಅಭಿಮತ

ದತ್ತಾಂಶ ಸುರಕ್ಷತೆಗೆ ಕಾನೂನೇ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ದತ್ತಾಂಶ ಸುರಕ್ಷತೆಗೆ ಕಾನೂನೇ ಇಲ್ಲ

ನವದೆಹಲಿ : ಭಾರತದಲ್ಲಿ ಅಂತರ್ಜಾಲ ಬಳಸುವವರ ಸಂಖ್ಯೆ 46.2 ಕೋಟಿ. ಚೀನಾ ಬಿಟ್ಟರೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬಳಕೆದಾರರಿರುವ ದೇಶ ಇದು. ಆದರೆ ದತ್ತಾಂಶ ಮತ್ತು ಖಾಸಗಿತನ ರಕ್ಷಣೆಯನ್ನು ಖಾತರಿಪಡಿಸುವಷ್ಟು ಗಟ್ಟಿಯಾದ ಕಾನೂನು ಇಲ್ಲಿ ಇಲ್ಲ ಎಂದು ಸೈಬರ್‌ ಸುರಕ್ಷತೆಯ ಪರಿಣತರು ಹೇಳುತ್ತಾರೆ.

ಬಳಕೆದಾರರ ಮಾಹಿತಿ ಕಳವು ರಾಜಕೀಯ ಬಣ್ಣ ಪಡೆದುಕೊಂಡಿದ್ದು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ನ ನಡುವೆ ಆರೋಪ–ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಮಾಹಿತಿ ಕಳವಿಗೆ ಸಂಬಂಧಿಸಿ ಇತ್ತೀಚೆಗೆ ಬಯಲಾದ ಹಲವು ವಿಚಾರಗಳು, ದೈನಂದಿನ ಸಾಮಾಜಿಕ ಜಾಲ ತಾಣ ಬಳಕೆ ಅಭ್ಯಾಸವನ್ನೇ ಮರುಪರಿಶೀಲಿಸಬೇಕಾದ ತುರ್ತನ್ನು ಬಳಕೆದಾರರಲ್ಲಿ ಸೃಷ್ಟಿಸಿದೆ.

ಬ್ರಿಟನ್‌ನ ಕೇಂಬ್ರಿಜ್‌ ಅನಲಿಟಿಕಾ (ಸಿಎ) ಎಂಬ ಕಂಪನಿಯು ಫೇಸ್‌ಬುಕ್‌ನ ಐದು ಕೋಟಿ ಬಳಕೆದಾರರ ಮಾಹಿತಿಯನ್ನು ಬಳಸಿಕೊಂಡು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಭಾವ ಬೀರಿದೆ ಎಂಬುದು ಮಾರ್ಚ್‌ ಮಧ್ಯಭಾಗದಲ್ಲಿ ಬಯಲಾಯಿತು. ಇದರೊಂದಿಗೆ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಬಗ್ಗೆ ಅಪನಂಬಿಕೆ ಮೂಡತೊಡಗಿತು.

ಕೇಂಬ್ರಿಜ್‌ ಅನಲಿಟಿಕಾ ಕಂಪನಿಯು ಭಾರತದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಯು ಸೇರಿ ಹಲವು ರಾಜಕೀಯ ಪಕ್ಷಗಳಿಗಾಗಿ ಕೆಲಸ ಮಾಡಿದೆ ಎಂದು ಈ ಕಂಪನಿಯ ಮಾಜಿ ಉದ್ಯೋಗಿ ಕ್ರಿಸ್ಪೊಫರ್‌ ವೈಲಿ ಹೇಳಿದ್ದಾರೆ. ಸಾಮಾಜಿಕ ಜಾಲ ತಾಣದ ದತ್ತಾಂಶದ ದುರ್ಬಳಕೆ ಭಾರತದಲ್ಲಿಯೂ ಆಗಿದೆ ಎಂಬ ಅನುಮಾನವನ್ನು ಈ ಹೇಳಿಕೆ ಹುಟ್ಟಿಸಿದೆ.

ಹೀಗಾಗಿ, ದತ್ತಾಂಶ ಕಳವು ಮತ್ತು ಖಾಸಗಿತನ ಉಲ್ಲಂಘನೆ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ. ಇದನ್ನು ತಡೆಯಲು ಭಾರತದಲ್ಲಿ ಇರುವ ಕಾನೂನುಗಳೇನು ಎಂಬುದರತ್ತರ ಗಮನ ಹರಿಸುವಂತೆ ಮಾಡಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲಕ್ಕೆ ಸಂಬಂಧಿಸಿದ ಸೈಬರ್‌ ಅಪರಾಧಗಳನ್ನು ತಡೆಯುವುದಕ್ಕಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು 2008 ಹಾಗೂ 2011ರ ತಿದ್ದುಪಡಿ ಕಾಯ್ದೆಗಳು ಭಾರತದಲ್ಲಿ ಇವೆ. ಆದರೆ ಇವು ಈ ಅಪರಾಧಗಳನ್ನು ತಡೆಯುವಷ್ಟು ಶಕ್ತವಾಗಿಲ್ಲ ಎಂದು ಸೈಬರ್‌ ಭದ್ರತಾ ಸಂಸ್ಥೆ ಅರ್ನೆಸ್ಟ್‌ ಆ್ಯಂಡ್‌ ಯಂಗ್‌ನ ಜಸ್‌ಪ್ರೀತ್‌ ಸಿಂಗ್‌ ಹೇಳುತ್ತಾರೆ.

ದತ್ತಾಂಶ ರಕ್ಷಣೆ ಮತ್ತು ಖಾಸಗಿತನ ಉಲ್ಲಂಘನೆ ತಡೆಗೆ ಪ್ರತ್ಯೇಕ ಕಾನೂನು ಭಾರತದಲ್ಲಿ ಇಲ್ಲ. ಹಾಗಾಗಿ, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಮೂರನೇ ಸಂಸ್ಥೆಗೆ ವರ್ಗಾಯಿಸುವುದು, ದೇಶದಾಚೆಗಿನ ಸಂಸ್ಥೆಗಳಿಗೆ ನೀಡುವುದು ಮತ್ತು ಮಾಹಿತಿ ಹಂಚಿಕೆಯ ವ್ಯವಸ್ಥೆಯ ಮೇಲೆ ನಿಗಾ ಇಡುವುದಕ್ಕೆ ವ್ಯವಸ್ಥೆ ಇಲ್ಲ ಎಂದು ಅವರು ಹೇಳುತ್ತಾರೆ.

ದತ್ತಾಂಶ ಕಳವು ಹಗರಣದ ತನಿಖೆ ನಡೆಸುವಂತೆ ವಿವಿಧ ದೇಶಗಳು ಆದೇಶ ನೀಡಿವೆ. ಆದರೆ, ಭಾರತದ ಕಾನೂನು ಪ್ರಕಾರ, ಈಗ ಆಗಿರುವ ದತ್ತಾಂಶ ದುರ್ಬಳಕೆ ಅಪರಾಧ ಅಲ್ಲ, ಹೆಚ್ಚೆಂದರೆ ಅದನ್ನು ‘ಅನೈತಿಕ’ ಎಂದು ಮಾತ್ರ ಹೇಳಬಹುದು ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.

‘ಕೇಂಬ್ರಿಜ್‌ ಅನಲಿಟಿಕಾದ ಉದಾಹರಣೆಯನ್ನೇ ತೆಗೆದುಕೊಂಡರೆ, ಈ ಕಂಪನಿಯು ದತ್ತಾಂಶವನ್ನು ಉಪಯೋಗಿಸಲು ಬಳಕೆದಾರರಿಂದ ಮೋಸದ ಮೂಲಕ ಅನುಮತಿ ಪಡೆದುಕೊಂಡಿದೆ. ಒಪ್ಪಿಗೆ ಪಡೆದುಕೊಂಡು ದತ್ತಾಂಶ ಬಳಕೆ ಭಾರತದಲ್ಲಿ ಕಾನೂನುಬಾಹಿರ ಅಲ್ಲ ಎಂದು ಸೈಬರ್‌ ಸುರಕ್ಷತಾ ಪರಿಣತ ಜಿತೇನ್‌ ಜೈನ್‌ ಹೇಳಿದ್ದಾರೆ.

**

ವಿವಾದಗಳೇನು

* ಕೇಂಬ್ರಿಜ್‌ ಅನಲಿಟಿಕಾದ ಜತೆಗೆ ಇರುವ ಸಂಬಂಧ ಏನು ಎಂಬುದನ್ನು ಕಾಂಗ್ರೆಸ್‌ ವಿವರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ

* ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಹಾರ ಮತ್ತು ಇತರ ರಾಜ್ಯಗಳಲ್ಲಿ ಇದೇ ಕಂಪನಿಯ ಸೇವೆಯನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ

* ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ ಆ್ಯಪ್‌’ ಮೂಲಕ ಸಂಗ್ರಹಿಸಲಾದ ದತ್ತಾಂಶವನ್ನು ಅಮೆರಿಕದ ಕಂಪನಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ಆಪಾದಿಸಿದೆ‌

**

ಖಾಸಗಿ ಮಸೂದೆ

ಬಿಜು ಜನತಾ ದಳದ ಸಂಸದ ವೈಜಯಂತ್‌ ಜಯ್‌ ಪಾಂಡಾ ಅವರು ‘ಸಂವೇದನಾಶೀಲ ಹೊಸ ನಿಯಂತ್ರಣ’ ಕ್ರಮಗಳು ಬೇಕು ಎಂದು ಒತ್ತಾಯಿಸಿ ಖಾಸಗಿ ಸದಸ್ಯರ ಮಸೂದೆಯೊಂದನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ವ್ಯಾಪಾರ ಮತ್ತು ರಾಜಕೀಯ ಪ್ರಚಾರದ ಉದ್ದೇಶಕ್ಕೆ ದತ್ತಾಂಶ ಬಳಕೆ ಕಾನೂನುಬದ್ಧವಾಗಿ ನಡೆಯಬೇಕು. ಮಾಹಿತಿಯು ಯಾವ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂಬುದು ಬಳಕೆದಾರರಿಗೆ ತಿಳಿದಿರಬೇಕು. ದುರ್ಬಳಕೆಗೆ ಉತ್ತರದಾಯಿತ್ವ ನಿಗದಿ ಮಾಡಬೇಕು ಎಂದು ಪಾಂಡಾ ಪ್ರತಿಪಾದಿಸಿದ್ದಾರೆ.

**

ಐಟಿ ಕಾಯ್ದೆ ರೂಪುಗೊಂಡ ಬಳಿಕ ಈ ಕ್ಷೇತ್ರದಲ್ಲಿ ಅಗಾಧ ಬದಲಾವಣೆ ಆಗಿದೆ. ಹಾಗಾಗಿ ಸೈಬರ್‌ ಸುರಕ್ಷತೆಯ ಸಮಗ್ರ ಕಾನೂನಾಗಿ ಇದನ್ನು ನೋಡುವುದೇ ತಪ್ಪು

ಪವನ್‌ ದುಗ್ಗಲ್‌,ಸುಪ್ರೀಂ ಕೋರ್ಟ್‌ ವಕೀಲ

**


ದತ್ತಾಂಶದ ದುರ್ಬಳಕೆಯನ್ನು ಸುರಕ್ಷತೆಯ ಲೋಪವಲ್ಲ. ಇದು ಬಳಕೆದಾರರಿಗೆ ಮಾಡಿದ ವಿಶ್ವಾಸದ್ರೋಹ.

ರಮಾ ವೇದಶ್ರೀ, ಭಾರತೀಯ ದತ್ತಾಂಶ ಸುರಕ್ಷತಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.