ಗುರುವಾರ , ಜೂನ್ 4, 2020
27 °C

ಮತ್ತೆ ಮತ್ತೆ ಸಹೋದರರ ಸವಾಲ್‌

ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಮತ್ತೆ ಮತ್ತೆ ಸಹೋದರರ ಸವಾಲ್‌

ಶಿವಮೊಗ್ಗ:  ‘ನಾವು ಸಮಾಜವಾದಿಗಳು; ನಮ್ಮ ಕ್ಷೇತ್ರವನ್ನಷ್ಟೇ ಅಭಿವೃದ್ಧಿ ಮಾಡಿಕೊಂಡರೆ ರಾಜ್ಯದ ಜನ ಏನು ತಿಳಿದುಕೊಂಡಾರು? ಹಾಗಾಗಿ, ನನ್ನ ಕ್ಷೇತ್ರದ ಜನರಿಗೆ ತೀರಾ ಅಗತ್ಯವಾದದ್ದನ್ನಷ್ಟೇ ನೀಡಿದ್ದೇನೆ’ ಎಂದು ಎಸ್‌.ಬಂಗಾರಪ್ಪ ಬಹಳ ಹಿಂದೆ ಚುನಾವಣಾ

ಭಾಷಣವೊಂದರಲ್ಲಿ ಹೇಳಿದ್ದರು. ಆದರೆ, ‘ರಸ್ತೆ, ಚರಂಡಿ, ನೀರಾವರಿ, ಶಿಕ್ಷಣದಂತಹ ಮೂಲಸೌಲಭ್ಯಗಳನ್ನೂ ಕ್ಷೇತ್ರದಲ್ಲಿ ಸಮರ್ಪಕವಾಗಿ ಕಲ್ಪಿಸದಿದ್ದರೆ ಹೇಗೆ? ಇದು ಮುಖ್ಯಮಂತ್ರಿಯನ್ನು ನಾಡಿಗೆ ನೀಡಿದ ಕ್ಷೇತ್ರ ಎಂದು ಹೆಮ್ಮೆಯಿಂದ ಹೇಳಲು ಆಗುತ್ತಾ’ ಎಂದು ಪ್ರಶ್ನಿಸುತ್ತಾರೆ ಸೊರಬದ ಜನ.

ಸುಮಾರು ಐದು ದಶಕಗಳವರೆಗೆ ಬಂಗಾರಪ್ಪ– ಸೊರಬ ಎರಡೂ ಪೂರಕ ಪದಗಳಾಗಿದ್ದವು. ಅವರು ಇರುವವರೆಗೂ ಅವರದ್ದೇ ಹವಾ. ಕಟ್ಟಿದ, ಸೇರಿದ ಪಕ್ಷಗಳಿಗೆ ಲೆಕ್ಕ ಇಲ್ಲ. ರಾಜಕೀಯ ರಂಗದಲ್ಲಿ ಘಟಾನುಘಟಿಗಳನ್ನೇ ಕುಟ್ಟಿ, ಕೆಡವಿದರು. ಹಲವರ ಭವಿಷ್ಯವನ್ನೂ ಬರೆದರು. ಸೊರಬವನ್ನು ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕಣವನ್ನಾಗಿ ಉಳಿಸುತ್ತಲೇ ಬಂದರು.

ಸೊರಬ ಅರೆ ಮಲೆನಾಡು. ಆದರೆ, 1,186 ಕೆರೆಗಳಿವೆ. ಇದು ಜಿಲ್ಲೆಯಲ್ಲೇ ಅತಿ ಹೆಚ್ಚು. ಇವುಗಳಲ್ಲಿ ಮಳೆಗಾಲದಲ್ಲಷ್ಟೇ ನೀರು. ಪ್ರತಿ ಬೇಸಿಗೆಯಲ್ಲಿ ಇಲ್ಲಿನ ಜನ ಕುಡಿಯುವ ನೀರಿಗೆ ಪರದಾಡುವುದು ತಪ್ಪಿಲ್ಲ. ಬಹುತೇಕರು ಬಗರ್‌ಹುಕುಂ ರೈತರು. ಹಕ್ಕುಪತ್ರ ಹಲವರಿಗೆ ಇನ್ನೂ ಸಿಕ್ಕಿಲ್ಲ. ಸೊರಬದ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಮುಂದಕ್ಕೆ ಹೋಗುತ್ತಿಲ್ಲ. ಸಮಗ್ರ ನೀರಾವರಿ ಹಾಗೂ ಬಗರ್‌ಹುಕುಂ ಹಕ್ಕುಪತ್ರ ಇಲ್ಲಿನ ಪ್ರಮುಖ ವಿಷಯಗಳು.

ಎಸ್‌.ಎಂ.ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಕುಮಾರ್‌ ಬಂಗಾರಪ್ಪ ಸಣ್ಣ ನೀರಾವರಿ ಸಚಿವರಾಗಿದ್ದಾಗ ತಾಲ್ಲೂಕಿನ ಕೆರೆ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದರು. ದಂಡಾವತಿ ನದಿಗೆ ಸಣ್ಣ, ಸಣ್ಣ ಬ್ಯಾರೇಜ್‌ಗಳ ನಿರ್ಮಾಣಕ್ಕೂ ಪ್ರಯತ್ನಿಸಿದ್ದರು. ಆದರೆ, ಅವು ಅನುಷ್ಠಾನಗೊಳ್ಳಲೇ ಇಲ್ಲ. ನಂತರ ಎಚ್‌.ಹಾಲಪ್ಪ ಸಚಿವರಾಗಿದ್ದ ಕಾಲದಲ್ಲಿ ಸೊರಬ ಒಂದಿಷ್ಟು ಅಭಿವೃದ್ಧಿ ಕಂಡಿತು ಎಂದು ಜನ ಈಗಲೂ ನೆನಪಿಸಿಕೊಳ್ಳುತ್ತಾರೆ.

ಹಾಲಿ ಶಾಸಕ ಮಧು ಬಂಗಾರಪ್ಪ ಕ್ಷೇತ್ರದ ಸಮಗ್ರ ನೀರಾವರಿ ಹಾಗೂ ಬಗರ್‌ಹುಕುಂ ಹಕ್ಕುಪತ್ರ ಸಮಸ್ಯೆಗಳ ನಿವಾರಣೆಗೆ ಕಂಡು

ಕೊಂಡ ದಾರಿ ಪಾದಯಾತ್ರೆ. ಕಳೆದ ಚುನಾವಣೆಯಲ್ಲಿ ಇದೇ ವಿಷಯಗಳನ್ನು ಮುಂದಿಟ್ಟು ಪಾದಯಾತ್ರೆ ನಡೆಸಿದ್ದರು. ಈ ಬಾರಿಯೂ ಅದನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಐದು ವರ್ಷಗಳಲ್ಲಿ ಕೆಲ ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ನೀಡಿದ್ದಾರೆ. ಬಹುಕಾಲದ ಬೇಡಿಕೆಯಾದ ಖಾಸಗಿ ಬಸ್‌ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದಾರೆ. ಕಚವಿ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ

ನೆರವೇರಿಸಿದ್ದಾರೆ.

ದಂಡಾವತಿ ಅಣೆಕಟ್ಟೆ ವಿವಾದ: ದಂಡಾವತಿ ಮಳೆಗಾಲದಲ್ಲಷ್ಟೇ ಹರಿಯುವ ವರದಾ ನದಿಯ ಉಪ ನದಿ. ಇದಕ್ಕೆ ಅಣೆಕಟ್ಟೆ ನಿರ್ಮಿಸಿ ನೀರಾವರಿ ಕೈಗೊಳ್ಳಲು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ₹ 272 ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದರು. ಇದಕ್ಕೆ ಬಂಗಾರಪ್ಪ ವಿರೋಧ ವ್ಯಕ್ತಪಡಿಸಿದ್ದರು. ದಂಡಾವತಿ ಬದಲು ಮೂಗೂರು, ಮೂಡಿ ಹಾಗೂ ಕುಣಿತೆಪ್ಪ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಈ ಜಟಾಪಟಿಯಲ್ಲಿ ಅತ್ತ ಅಣೆಕಟ್ಟೆಯೂ ಆಗಿಲ್ಲ; ಇತ್ತ ಏತ ನೀರಾವರಿ ಯೋಜನೆಗಳೂ ಜಾರಿಗೊಳ್ಳಲಿಲ್ಲ.

ಹಾಲಪ್ಪಗೆ ಸಂಕಟ: ಈ ಚುನಾವಣೆಯಲ್ಲಿ ಮಧು ಬಂಗಾರಪ್ಪ ಸ್ಪರ್ಧೆ ಖಚಿತ. ಕುಮಾರ್‌ ಬಂಗಾರಪ್ಪ ಬಿಜೆಪಿ ಅಭ್ಯರ್ಥಿ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಕಾಂಗ್ರೆಸ್, ಅಭ್ಯರ್ಥಿಗೆ ಹುಡುಕಾಟ ನಡೆಸಿದೆ. ಹಿಂದೆ, ಇದೇ ಕ್ಷೇತ್ರವನ್ನು ಬಂಗಾರಪ್ಪ ಕುಟುಂಬದಿಂದ ಕಸಿದುಕೊಂಡಿದ್ದ ಎಚ್‌.ಹಾಲಪ್ಪ ಈಗ ಕುಮಾರ್‌ ಬಂಗಾರಪ್ಪ ಅವರಿಗೆ ಕ್ಷೇತ್ರ ಬಿಟ್ಟುಕೊಡಬೇಕಾದ ಅನಿವಾರ್ಯ ಸಂಕಟ ಎದುರಿಸುತ್ತಿದ್ದಾರೆ.

‘ನಮ್ಮದು ಕಾರ್ಯಕರ್ತರನ್ನು ಆಧರಿಸಿದ ಪಕ್ಷ. ಅಭ್ಯರ್ಥಿ ಯಾರೇ ಆಗಲಿ, ಗೆಲ್ಲಿಸುವುದೇ ನಮ್ಮ ಗುರಿ. ಕುಮಾರ್ ಬಂಗಾರಪ್ಪ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯ ಬರುವಂತೆ ಬಿಂಬಿಸಲಾಗಿದೆ. ಅವರೊಬ್ಬ ಸಜ್ಜನ ರಾಜಕಾರಣಿ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಮ್ಮದೇ ಆದ ಕಲ್ಪನೆ ಹೊಂದಿದ್ದಾರೆ’ ಎಂಬುದು ಬಿಜೆಪಿ ತಾಲ್ಲೂಕು ಮಾಧ್ಯಮ ವಕ್ತಾರ ಡಿ.ಶಿವಯೋಗಿ ಹಾಗೂ ಬಿಜೆಪಿ ವಿಶೇಷ ಆಹ್ವಾನಿತ ಶಬ್ಬೀರ್‌ ಅಹಮದ್‌ ಅವರ ಮಾತು.

‘ಹಕ್ಕುಪತ್ರ ನೀಡುವುದರಲ್ಲಿ ಪಕ್ಷ ರಾಜಕಾರಣ ಮಾಡಿಲ್ಲ. ಇದಕ್ಕಾಗಿ ಫಲಾನುಭವಿಗಳಿಂದ ಹಣ ಪಡೆಯಲಾಗಿದೆ ಎಂಬುದು ವಿರೋಧಿಗಳ ಅಪಪ್ರಚಾರ. ಮಧು ಬಂಗಾರಪ್ಪ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ. ಬೇರೆಯವರು ಹಿಂದೆ ಗೆದ್ದಾಗ ಹೇಗೆ ನಡೆದುಕೊಂಡಿದ್ದಾರೆಂಬುದು ಕ್ಷೇತ್ರದ ಜನರಿಗೆ ತಿಳಿದಿದೆ’ ಎಂಬ ಅಭಿಪ್ರಾಯ ಜೆಡಿಎಸ್‌ ಮುಖಂಡ

ಡಿ. ಮೋಹನ್‌ಕುಮಾರ್ ಜೆಡ್ಡಿಹಳ್ಳಿ ಅವರದ್ದು.

‘ಹಕ್ಕುಪತ್ರವನ್ನು ಶಾಸಕರು ವಿತರಿಸಿದರೂ ಅದನ್ನು ನೀಡಿದ್ದು ಕಾಂಗ್ರೆಸ್ ಸರ್ಕಾರ. ಸಿದ್ದರಾಮಯ್ಯ ಅವರ ಹಲವು ಯೋಜನೆಗಳು ಜನರಿಗೆ ನೇರವಾಗಿ ತಲುಪಿವೆ. ಇಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿವೆ. ಪಕ್ಷ ಯಾರನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿದರೂ ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ’ ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಇ.ಎಚ್‌.ಮಂಜುನಾಥ್.

ನಾಲ್ಕನೇ ಬಾರಿ ಮುಖಾಮುಖಿ?

ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಸಹೋದರರು ಮತ್ತೆ ಮುಖಾಮುಖಿಯಾಗುವುದು ಬಹುತೇಕ ಖಚಿತ. ಹೀಗೆ ಅಣ್ಣ–ತಮ್ಮ ಎದುರಾಗುತ್ತಿರುವುದು ಇದು ನಾಲ್ಕನೇ ಬಾರಿ. 2004ರಲ್ಲಿ ಕುಮಾರ್ ಬಂಗಾರಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಗಳಿಸಿದ್ದರು. ಆಗ ಮಧು ಬಂಗಾರಪ್ಪ ಬಿಜೆಪಿ ಅಭ್ಯರ್ಥಿ. 2008ರಲ್ಲಿ ಹಾಲಪ್ಪ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಆದರೆ, ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ನಿಂದ, ಮಧು ಬಂಗಾರಪ್ಪ ಸಮಾಜವಾದಿ ಪಕ್ಷದಿಂದ ಸೆಣಸಾಡಿದ್ದರು. 2013ರಲ್ಲಿ ಮತ್ತೆ ಎದುರುಬದುರಾದರು. ಆಗ ಮಧು ಬಂಗಾರಪ್ಪ ಜೆಡಿಎಸ್‌ನಿಂದ ಸ್ಪರ್ಧಿಸಿ ಶಾಸಕರಾದರು. ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದರು.

ಗೀತಾ ಶಿವರಾಜ್‌ಕುಮಾರ್, ಬಂಗಾರಪ್ಪ ಅವರ ಮಗಳು. 2014ರಲ್ಲಿ ಯಡಿಯೂರಪ್ಪ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದರು. ಈಗ ಮಧು ಬಂಗಾರಪ್ಪ ಪರ ಕ್ಷೇತ್ರದಲ್ಲಿ ಸ್ಟಾರ್ ಪ್ರಚಾರಕಿ. ಪಕ್ಷ ಹಾಗೂ ಕ್ಷೇತ್ರಗಳು ಬೇರೆ ಬೇರೆಯಾದರೂ ಸಚಿವ ಕಾಗೋಡು ತಿಮ್ಮಪ್ಪ–ಮಧು ಬಂಗಾರಪ್ಪ ನಡುವೆ ಹೊಂದಾಣಿಕೆ ಚೆನ್ನಾಗಿದೆ. ಜಿಲ್ಲೆಯ ಭವಿಷ್ಯದ ರಾಜಕಾರಣದಲ್ಲಿ ಈ ಹೊಂದಾಣಿಕೆಯ ಪರಿಣಾಮದ ಲೆಕ್ಕಾಚಾರವೂ ನಡೆದಿದೆ.

ಹಕ್ಕುಪತ್ರ ಸಿಕ್ಕಿದ್ದು 3,888 ಫಲಾನುಭವಿಗಳಿಗೆ!

ತಾಲ್ಲೂಕಿನಲ್ಲಿ ಬಗರ್‌ಹುಕುಂ ಅರ್ಜಿಗಳು ಸಲ್ಲಿಕೆಯಾಗಿದ್ದು 25,618. ಹಕ್ಕುಪತ್ರ ನೀಡಿದ್ದು ಕೇವಲ 3,888 ಫಲಾನುಭವಿಗಳಿಗೆ. ವಿಲೇವಾರಿ ಮಾಡಬೇಕಾದ ಅರ್ಜಿಗಳ ಸಂಖ್ಯೆ 148. ತಿರಸ್ಕೃತಗೊಂಡ ಅರ್ಜಿಗಳು 21,582. ಇದು ತಹಶೀಲ್ದಾರ್‌ ಕಚೇರಿ ಮಾಹಿತಿ.

‘ಬಂಗಾರಪ್ಪ ಕುಟುಂಬದ ಋಣ ತೀರಿಸಿದ್ದೇವೆ’

ಸೊರಬದ ಜನ ನಾವು ಬಂಗಾರಪ್ಪ ಕುಟುಂಬದ ಋಣ ತೀರಿಸಿದ್ದೇವೆ. ಅವರನ್ನು ಮಂತ್ರಿ, ಮುಖ್ಯಮಂತ್ರಿ ಮಾಡಿದ್ದೇವೆ. ಅವರ ಮಕ್ಕಳನ್ನೂ ಗೆಲ್ಲಿಸಿದ್ದೇವೆ. ಆದರೆ, ಜನರ ಆಸೆಗಳು ಮಾತ್ರ ಇನ್ನೂ ಈಡೇರಿಲ್ಲ. ಇಷ್ಟು ವರ್ಷ ನಾವು ಕುರಿಗಳಾಗಿದ್ದು ಸಾಕು. ಮುಂದಾದರೂ ಸೊರಬ ಅಭಿವೃದ್ಧಿ ಕಾಣಬೇಕು.

–ರಾಜಪ್ಪ ಮಾಸ್ತರ್, ಚಿಂತಕ

‘ಚಿತ್ರಣ ಬೇರೆ ಇರುತ್ತಿತ್ತು’

ಹಾಲಪ್ಪ ಅವರೇ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದರೆ ಸ್ಪರ್ಧಾಕಣದ ಚಿತ್ರಣವೇ ಬೇರೆ ಇರುತ್ತಿತ್ತು. ಮಧು ಬಂಗಾರಪ್ಪ ಅವರ ಮಾತಿನ ಶೈಲಿ, ಮುನ್ನುಗ್ಗುವ ಛಾತಿ ಯುವಕರನ್ನು ಸೆಳೆದಿವೆ. ಅವರು ಗೆದ್ದರೆ ಮಂತ್ರಿ ಆಗುವ ಅವಕಾಶ ಇದೆ. ಸೊರಬದ ಅಭಿವೃದ್ಧಿಗೆ ಸಹಕಾರವಾಗುತ್ತದೆ.

–ರಾಜಶೇಖರ ಗೌಡ ತ್ಯಾವಗೋಡು

ಅತಿಥಿ ಉಪನ್ಯಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.