ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಫ್ರಿಜ್ ಮೇಲೆ ಎಲ್ಲರ ಕಣ್ಣು

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಬಿಸಿಲಿನ ಝಳ ತಾಳಲಾಗದು. ಗಂಟಲು ಒಣಗಿತು ಅಂತ ಫ್ರಿಜ್ ನೀರು ಕುಡಿದೆ. ಈಗ ನೋಡಿ ಇನ್‌ಫೆಕ್ಷನ್ ಸಮಸ್ಯೆ’ ಇದು ಕೆಲವರ ಗೊಣಗಾಟ. ‘ಬಿಸಿಲು ಹೆಚ್ಚಾಗಿದ್ದಾಗ ಎಷ್ಟೇ ನೀರು ಕುಡಿದರೂ ಸಮಾಧಾನವಾಗಲ್ಲ; ಒಂದು ಸಣ್ಣ ಮಡಕೆನಾದರೂ ತರಬೇಕು’ ಎನ್ನುವುದು ನಗರವಾಸಿಗಳ ಸಾಮಾನ್ಯ ಮಾತು. ಬೀದಿಬದಿ ಮಡಕೆಗಳ ಮಾರಾಟ ಬೇಸಿಗೆ ಕಾಲದ ಸಾಮಾನ್ಯ ನೋಟ. ಮನೆಯಲ್ಲಿ ಎಂಥದ್ದೇ ಫ್ರಿಜ್ ಇದ್ದರೂ, ಬೇಸಿಗೆಯಲ್ಲಿ ಮಡಕೆ ನೀರು ಕುಡಿಯಬೇಕು ಎನ್ನುವುದು ಸಾಮಾನ್ಯ ಮಾತು. ‘ಮಡಕೆ ನೀರು ಕುಡಿದರೆ ನೂರು ರೋಗ ದೂರ’ ಎನ್ನುವ ನಗರವಾಸಿಗಳು ನಮ್ಮ ನಡುವೆ ಇದ್ದಾರೆ. ಹಾಗಾಗಿಯೇ ವರ್ಷದಿಂದ ವರ್ಷಕ್ಕೆ ನಗರದಲ್ಲಿ ಮಡಕೆಯ ಬೇಡಿಕೆ ಹೆಚ್ಚುತ್ತಲಿದೆ.

ಯಶವಂತಪುರ, ಶಿವಾಜಿನಗರ, ಜೆ.ಸಿ.ನಗರ, ಕೋರಮಂಗಲ, ಮಡಿವಾಳಸಂತೆ, ಗಾಂಧಿಬಜಾರ್, ಮಲ್ಲೇಶ್ವರ ಮಾರ್ಕೆಟ್‌, ಮಾಗಡಿ ರಸ್ತೆ, ವಿಜಯನಗರ, ರಾಜರಾಜೇಶ್ವರಿನಗರ, ನಾಗರಬಾವಿ ಸರ್ಕಲ್‌, ಮೈಸೂರು ರಸ್ತೆಯ ಅನೇಕ ಕಡೆ ಮಡಕೆ ಮಾರಾಟಗಾರರು ಬೀಡುಬಿಟ್ಟಿದ್ದಾರೆ.

ಮಣ್ಣಿನ ಮಡಕೆಗಳಿಗೆ ಸಾವಿರಾರು ರೂಪಾಯಿ ತೆರಬೇಕಾಗಿಲ್ಲ. ₹80ರಿಂದ ₹400ರ ಒಳಗೆ ಬೆಲೆ ಇರುತ್ತದೆ. ಮಡಕೆಗಳನ್ನು ಇರಿಸಲು ಸ್ವಲ್ಪವೇ ಜಾಗ ಸಾಕು. ಖರ್ಚಿಲ್ಲದೆ ತಂಪು ನೀರು ಸಂಗ್ರಹಿಸಿಟ್ಟುಕೊಳ್ಳುವ ಸುಲಭ ವಿಧಾನ ಇದು. ವ್ಯಾಪಾರಕ್ಕೂ ವಿಶಾಲವಾದ ಜಾಗವೇನೂ ಬೇಕಾಗಿಲ್ಲ. ಹಾಗಾಗಿ ಇದು ‘ಬಡವರ ಫ್ರಿಜ್’ ಎಂದೇ ಕರೆಸಿಕೊಂಡಿದೆ.

ಮಡಕೆ ಖರೀದಿಸುವ ಗ್ರಾಹಕರನ್ನು ಗಮನಿಸಿದರೆ ಎಲ್ಲ ವರ್ಗಕ್ಕೆ ಸೇರಿದವರೂ ಕಂಡುಬರುತ್ತಾರೆ. ಮಣ್ಣಿನ ಮಡಕೆ ಈಗ ಶ್ರೀಮಂತರ ಫ್ರಿಜ್‌ ಕೂಡ ಹೌದು. ನಡೆದು ಬರುವವರು, ದ್ವಿಚಕ್ರವಾಹನಗಳಲ್ಲಿ ಬರುವವರು ಅಷ್ಟೇಕೆ, ಐಷಾರಾಮಿ ಕಾರುಗಳಲ್ಲಿ ಬರುವವರೂ ಮಡಕೆ, ಹೂಜಿ ಕೊಂಡು ಹುಷಾರಾಗಿ ಮನೆಗೆ ಕೊಂಡೊಯ್ಯುವ ದೃಶ್ಯ ಮಡಿವಾಳಸಂತೆ, ಕೋರಮಂಗಲ ಸುತ್ತ ನಿತ್ಯ ಕಂಡು ಬರುತ್ತದೆ.

‘ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲಿನ ಅತಿಯಾದ ಅವಲಂಬನೆ ಬೇಸರ ತರಿಸಿದೆ. ಆರೋಗ್ಯದ ದೃಷ್ಟಿಯಿಂದಲೂ ಮಣ್ಣಿನ ಮಡಕೆ ಬಳಕೆ ಒಳಿತು ಎಂದು ಅರಿತಿರುವ ಜನರು ಮಡಕೆಯ ತಣ್ಣನೆಯ ನೀರು ಬಳಸುವುದು ಟ್ರೆಂಡ್ ಆಗಿದೆ’ ಎಂದು ಎಚ್‌ಎಸ್ಆರ್ ಬಡಾವಣೆಯ ಆಂಜನೇಯ ರೆಡ್ಡಿ ವಿಶ್ಲೇಷಿಸುತ್ತಾರೆ.

ಅಲಂಕಾರಕ್ಕೂ ಬೇಕು: ‘ಚಿತ್ತಾರದ ಪುಟ್ಟ ಮಡಕೆಗಳನ್ನು ಮದುವೆ, ಹಬ್ಬ ಮುಂತಾದ ಸಮಾರಂಭಗಳಿಗೆ ಬಳಸಲಾಗುತ್ತದೆ. ‌ಪೂಜೆ, ಗೃಹಪ್ರವೇಶ, ಶಾಲಾ ವಾರ್ಷಿಕೋತ್ಸವ ನೃತ್ಯಗಳಲ್ಲಿ ಬಳಸುವ ಅಲಂಕಾರದ ಮಡಕೆಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ದೃಷ್ಟಿಬೊಂಬೆಗಳು, ಹೋಮ, ಸಾವಿಗೂ ಮಡಕೆಯನ್ನು ಬಳಕೆ ಮಾಡಲಾಗುತ್ತದೆ. ಕೆಲ ಮಾರ್ವಾಡಿಗಳು ಅಮವಾಸ್ಯೆಯಂದು ಮಡಕೆ ದಾನ ಮಾಡುವ ಸಂಪ್ರದಾಯ ಪಾಲಿಸುತ್ತಿದ್ದಾರೆ’ ಎನ್ನುತ್ತಾರೆ ಮಡಿವಾಳ ಮಾರ್ಕೆಟ್‌ನ ವ್ಯಾಪಾರಿ ಹಂಸರಾಣಿ.

‘ರಾಜಸ್ಥಾನ ಶೈಲಿಯ ಚಿತ್ತಾರಗಳನ್ನು ಹೊಂದಿರುವ ಮಡಕೆಗಳು ತಣ್ಣನೆಯ ನೀರು ತುಂಬುವ ಕೊಡವಾಗಿಯೂ, ಅಲಂಕಾರದ ವಸ್ತುವಾಗಿಯೂ ಮನೆಯ ಅಂದ ಹೆಚ್ಚಿಸುತ್ತವೆ. ಬೇಸಿಗೆ ಕಾಲದಲ್ಲಿ ಸಣ್ಣ, ಮಧ್ಯಮ, ದೊಡ್ಡ ಗಾತ್ರಕ್ಕೆ ಅನುಗುಣವಾಗಿ ಜೋರು ವ್ಯಾಪಾರ ನಡೆಯುತ್ತದೆ. ಹೊರಗಿನಿಂದ ಆಮದು ಮಾಡಿಕೊಳ್ಳುವುದರಿಂದ ಬೆಲೆಯೂ ಕೊಂಚ ದುಬಾರಿ' ಎನ್ನುತ್ತಾರೆ ಆಗರ ಕೆರೆ ಸಮೀಪದಲ್ಲಿ ವ್ಯಾಪಾರ ನಡೆಸುವ ರಾಜಸ್ಥಾನ ಮೂಲದ ಮಥುರಾ.

ಬೆಂಗಳೂರಿನಲ್ಲಿ ಮಾರಾಟವಾಗುವ ಬಹುತೇಕ ಮಡಕೆಗಳು ತಮಿಳುನಾಡಿನ ಧರ್ಮಪುರಿ, ಕೃಷ್ಣಗಿರಿ ಜಿಲ್ಲೆಯಿಂದ ಬರುತ್ತವೆ. ಯಶವಂತಪುರ ಮತ್ತು ಸುತ್ತಮುತ್ತ ಗೌರಿಬಿದನೂರು ತಾಲ್ಲೂಕಿನ ಹಳ್ಳಿಗಳಿಂದ ತರುವ ಮಡಕೆಗಳನ್ನು ಮಾರಲಾಗುತ್ತದೆ.

ನಗರದ ಸುತ್ತಮುತ್ತಲಿನ ಕೆರೆಗಳು ನಾಶವಾಗಿವೆ. ಮಡಕೆ ತಯಾರಿಕೆಗೆ ಬೇಕಾಗುವ ಉತ್ತಮ ಗುಣಮಟ್ಟದ ಮಣ್ಣು ಸಿಗುವುದಿಲ್ಲ. ಕುಂಬಾರರು ಪಾರಂಪರಿಕ ವೃತ್ತಿಗೆ ವಿದಾಯ ಹೇಳಿ ಪರ್ಯಾಯ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಮಡಕೆ ತಯಾರಿಕೆಯ ಮಾತೆಲ್ಲಿ’ ಎಂದು ಬೆಳ್ಳಂದೂರಿನ ಶಂಕರ್‌ ವಿಷಾದದ ನಗೆ ಬೀರಿದರು.

(ಹಂಸರಾಣಿ, ಮಡಕೆ ವ್ಯಾಪಾರಿ)

ಮಡಕೆ ಕೊಳ್ಳುವ ಮುನ್ನ

ಮಡಕೆ ಕೊಳ್ಳುವ ಮುನ್ನ ಅದರ ಗುಣಮಟ್ಟ ಪರೀಕ್ಷಿಸುವುದನ್ನು ಮರೆಯಬೇಡಿ.

ಮಡಕೆಯನ್ನು ನಿಮ್ಮ ತೋರು ಬೆರಳಿನಿಂದ ಮೃದುವಾಗಿ ತಟ್ಟಿ ಪರೀಕ್ಷಿಸಿ. ಹೀಗೆ ತಟ್ಟಿದಾಗ ಅದರಿಂದ ಟಣ್‌ ಟಣ್‌ ಎನ್ನುವ ಶಬ್ದ ಬಂದರೆ ಸರಿಯಾಗಿದೆ ಎಂದರ್ಥ. ಎರಡನೆಯದಾಗಿ ಮಡಕೆಯನ್ನು ಒಳಗಿನಿಂದ ಮೂಸಿ ನೋಡಿ. ಸುಟ್ಟ ಮಣ್ಣಿನ ವಾಸನೆ ಬರಬೇಕು. ನಂತರ ಅದರಲ್ಲಿ ನೀರು ತುಂಬಿಸಿ ನೋಡಿ. ಕಣ್ಣಿಗೆ ಕಾಣದ ಸಣ್ಣ ತೂತುಗಳು, ಸೀಳುಗಳು ಏನಾದರೂ ಇದ್ದರೆ ಗೊತ್ತಾಗುತ್ತದೆ.

ಇತ್ತೀಚೆಗೆ ಮಡಕೆಗೆ ನಲ್ಲಿಯನ್ನು ಜೋಡಿಸಿರುತ್ತಾರೆ. ಅಂಥವನ್ನು ಕೊಳ್ಳುವಾಗ ನಲ್ಲಿಯ ಗುಣಮಟ್ಟವನ್ನೂ ಪರೀಕ್ಷಿಸಿ. ನಲ್ಲಿ ಜೋಡಿಸಿರುವ ಜಾಗದಲ್ಲಿ ಸೋರಬಹುದು. ನಲ್ಲಿಗಳು ಕಿಲುಬು ಹಿಡಿದಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT