ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಹಂಚಿಕೆ: ತೀವ್ರ ನಿಗಾ

ಜಿಲ್ಲಾ ಚುನಾವಣಾಧಿಕಾರಿ ಜೆ. ಮಂಜುನಾಥ್ ಸೂಚನೆ
Last Updated 4 ಏಪ್ರಿಲ್ 2018, 14:27 IST
ಅಕ್ಷರ ಗಾತ್ರ

ಯಾದಗಿರಿ:‘ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯು ಕೊಪನ್ ಅಥವಾ ಟೋಕನ್ ನೀಡುವ ಮೂಲಕ ಅಕ್ರಮವಾಗಿ ಮದ್ಯ ಹಂಚುವುದು ಕಂಡು ಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸಿ ಮದ್ಯದ ಅಂಗಡಿ ಪರವಾನಗಿ ರದ್ದು ಮಾಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಜೆ. ಮಂಜುನಾಥ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಬಕಾರಿ ಇಲಾಖೆಯ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳ ಸಭೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

‘ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ಗ್ರಾಮೀಣ ಮತ್ತು ನಗರಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿದ್ದಲ್ಲಿ ಕೂಡಲೇ ದಾಳಿ ನಡೆಸಿ ವಶಕ್ಕೆ ತೆಗೆದುಕೊಳ್ಳಬೇಕು. ಕರ್ನಾಟಕ ರಾಜ್ಯ ಪಾನೀಯ ನಿಗಮದಿಂದ ಜಿಲ್ಲೆಯ ಮದ್ಯ ಮಾರಾಟಗಾರರು ಎತ್ತುವಳಿ ಮಾಡುವ ಮದ್ಯ ಮತ್ತು ಮಾರಾಟಗಾರರು ಗ್ರಾಹಕರಿಗೆ ಮಾರಾಟ ಮಾಡುವ ಮದ್ಯದ ಮೇಲೆ ನಿಗಾ ವಹಿಸಬೇಕು’ ಎಂದರು. ‘ಕಳೆದ ವರ್ಷದ ಮದ್ಯ ಮಾರಾಟದ ಸರಾಸರಿ ತುಲನೆ ಮಾಡುವ ಮೂಲಕ ಮದ್ಯ ಮಾರಾಟದ ಸರಾಸರಿ ಮೇಲೆ ನಿಗಾ ಇಡಲಾಗುತ್ತಿದ್ದು, ದೈನಂದಿನ ಸರಾಸರಿಗಿಂತ ಶೇ 30ಕ್ಕೂ ಹೆಚ್ಚು ಮಾರಾಟ ಮಾಡುವ ಕೇಂದ್ರಗಳ ಪರಿಶೀಲಿಸಿ ಪ್ರತಿದಿನ ವರದಿ ನೋಡಬೇಕು. ಮದ್ಯದ ಅಂಗಡಿಗಳು ಪ್ರತಿ ದಿನ ತಮ್ಮ ವ್ಯಾಪಾರ ವಾಹಿವಾಟು ಸೇರಿ ದೈನಂದಿನ ವರದಿ ನೀಡಬೇಕು’ ಎಂದರು.

‘ಅಂತರ ರಾಜ್ಯ (ತೆಲಂಗಾಣ ) ಗಡಿಯಲ್ಲಿ ಮೂರು ಚೆಕ್ ಪೋಸ್ಟ್ ಹಾಗೂ ಅಂತರ ಜಿಲ್ಲೆ ಗಡಿಯಲ್ಲಿ ಐದು ಚೆಕ್ ಪೋಸ್ಟ್ ಸೇರಿದಂತೆ ಒಟ್ಟು 21 ಚೆಕ್ ಪೋಸ್ಟ್ ತೆರೆಯಲಾಗಿದೆ. ತೆಲಂಗಾಣದಿಂದ ಬರುವ ಅಕ್ರಮ ಮದ್ಯ ತಡೆಗೆ ಕ್ರಮಕೈಗೊಳ್ಳಲಾಗಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ತೆಲಂಗಾಣದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಪರ್ಕದಲ್ಲಿರಬೇಕು’ ಎಂದರು.

9 ಪ್ರಕರಣ ದಾಖಲು: ‘ಇದುವರೆಗೂ ಜಿಲ್ಲೆಯ ಅಬಕಾರಿ ಪೋಲಿಸರು ಒಂಬತ್ತು ಕಡೆ ದಾಳಿ ನಡೆಸಿ 115 ಲೀಟರ್ ಭಾರತೀಯ ಮದ್ಯ, 50 ಲೀಟರ್ ಬಿಯರ್ ಹಾಗೂ 25ಲೀಟರ್ ಸೇಂದಿ ವಶಪಡಿಸಿಕೊಂಡು 5 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಆಕ್ರಮ ಮದ್ಯ ಸಾಗಾಟ ಮತ್ತಿತರ ದೂರುಗಳು ಇದ್ದಲ್ಲಿ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 1077 ಮತ್ತು 08473–253772 ಗೆ ಕರೆ ಮಾಡಬಹುದು’ ಎಂದು  ತಿಳಿಸಿದರು.ಸಭೆಯಲ್ಲಿ ಅಬಕಾರಿ ಉಪಆಯುಕ್ತ ಜಿ.ಪಿನರೇಂದ್ರ ಕುಮಾರ್, ಡಿವೈಎಸ್ಪಿ ಮಹಮ್ಮದ್ ಇಸ್ಮಾಯಿಲ್ ಇನಾಂದಾರ್, ಅಬಕಾರಿ ನಿರೀಕ್ಷಕ ಶ್ರೀರಾಮ ರಾಥೋಡ ಇದ್ದರು.

**

ಜಿಲ್ಲೆಯ ತುಮಕೂರಿನಲ್ಲಿ ಪ್ರಾಥಮಿಕ ಮದ್ಯಸಾರ ಘಟಕ ಇದ್ದು, ಅಲ್ಲಿ ಸಿಸಿಟಿವಿ ಆಳವಡಿಸುವ ಮೂಲಕ ಮದ್ಯಸಾರ ಉತ್ಪಾದನೆ, ರವಾನೆ ಮೇಲೆ ನಿಗಾ ಇಡಲಾಗಿದೆ – ಜೆ.ಮಂಜುನಾಥ್, ಜಿಲ್ಲಾ ಚುನಾವಣಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT