ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು–ಗೆಲುವಿನ ಮತ ಲೆಕ್ಕಾಚಾರ

Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಸೋಲು–ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಜಾತಿ, ಧರ್ಮ ಆಧಾರಿತ ಮತಗಳಿಕೆಯಷ್ಟೇ ಪಕ್ಷ ರಾಜಕಾರಣದ ತರ್ಕವೂ ಗಹನವಾಗಿ ನಡೆಯುತ್ತಿದೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಿಂದ ಸೋತವರು ಈ ಬಾರಿ, ವಿಧಾನಸೌಧದ ಮೆಟ್ಟಿಲೇರುವುದಕ್ಕೆ ಮರಳಿ ಯತ್ನ ನಡೆಸುತ್ತಿದ್ದಾರೆ. ಆದರೆ, ಐದು ವರ್ಷಗಳಲ್ಲಿ ಕಾವೇರಿ, ಕೃಷ್ಣೆ, ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿರುವಂತೆ ರಾಜಕೀಯ ಪ್ರವಾಹದಲ್ಲಿ ಈಜಿದ ಕೆಲವರು ‘ದಡ’ ಬದಲಾಯಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಹರಸಾಹಸ ಮಾಡಿ ಗೆದ್ದವರು, ಗೆಲುವಿಗೆ ಶ್ರಮಿಸಿದವರ ಪೈಕಿ ಕೆಲವರು ನಿಧನರಾಗಿದ್ದಾರೆ.

ಅತ್ತಿಂದಿತ್ತ ಜಿಗಿದವರ ಸಂಖ್ಯೆ ಬಹು ದೊಡ್ಡದಿದೆ. ಜೆಡಿಎಸ್ ಅಭ್ಯರ್ಥಿಗಳಾಗಿ ಸೋತ ಅನೇಕರು ಬಿಜೆಪಿ ಸೇರಿದ್ದರೆ, ಗೆದ್ದವರ ಪೈಕಿ 10ಕ್ಕೂ ಹೆಚ್ಚಿನವರು ಈಗ ಬೇರೆ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ವಿಜೇತರಾಗಿದ್ದವರು ಹಾಗೂ ಸೋತವರ ಪೈಕಿ ಕೆಲವರು ಈಗ ಬೇರೆ ಪಕ್ಷದ ಬಾವುಟ ಹಿಡಿದಿದ್ದಾರೆ.

2013ರಲ್ಲಿ ಚುನಾವಣೆ ನಡೆಯುವಾಗ ಬಿಜೆಪಿ ಅಧಿಕಾರದಲ್ಲಿದ್ದರೂ ಪಕ್ಷ ಹೀನಾಯವಾಗಿ ಸೋತಿತ್ತು. ಜೆಡಿಎಸ್‌ನಷ್ಟೇ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅಂದು ಕಮಲ ಮುದುಡಲು ಕಾರಣವಾಗಿದ್ದು, ಬಿ.ಎಸ್‌. ಯಡಿಯೂರಪ್ಪ ಕಟ್ಟಿದ್ದ ಕೆಜೆಪಿ ಹಾಗೂ ಶ್ರೀರಾಮುಲು ಸ್ಥಾಪಿಸಿದ್ದ ಬಿಎಸ್ಆರ್ ಕಾಂಗ್ರೆಸ್‌. ತಮ್ಮದೇ ಕಾರಣಗಳಿಗಾಗಿ ಕೇಸರಿ ಕೊಡವಿದ್ದ ಇಬ್ಬರೂ ಈಗ ಕಮಲ ಮುಡಿದು ರಾಜ್ಯದಾದ್ಯಂತ ಓಡಾಡುತ್ತಿದ್ದಾರೆ. ಕೆಜೆಪಿ–ಬಿಎಸ್ಆರ್ ಸವಾಲು ಒಡ್ಡಿದ್ದರಿಂದಾಗಿ ಕಡಿಮೆ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು, ಕೆಲವು ಕಡೆ ಕೆಜೆಪಿ ಅಭ್ಯರ್ಥಿಗಳು ಸೋತು ಮನೆ ಸೇರಿದ್ದರು.

ಸೋಲು–ಗೆಲುವಿನ ಗಣಿತವನ್ನು ಅಂಕಿ ಅಂಶಗಳ ಸಮೇತ ಇಲ್ಲಿ ಪ್ರಸ್ತುತಪಡಿಸುವ ಯತ್ನ ಮಾಡಲಾಗಿದೆ. ವಿಧಾನಸಭೆಯ 224 ಕ್ಷೇತ್ರಗಳಲ್ಲಿ 5,000ಕ್ಕಿಂತ ಕಡಿಮೆ ಮತಗಳ ಅಂತರದಿಂದ ವಿಜೇತರಾದ ಶಾಸಕರ ಸಂಖ್ಯೆ 44.

10,000 ಮತಗಳ ಅಂತರದೊಳಗೆ ಗೆದ್ದವರು 50ಕ್ಕಿಂತ ಹೆಚ್ಚಿದ್ದಾರೆ. ಈ ವಿವರವನ್ನು ಇಲ್ಲಿ ನೀಡಿಲ್ಲ.

ಈ ಪೈಕಿ 1,000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದವರ ಸಂಖ್ಯೆ 9. ಶತಪ್ರಯತ್ನ ಪಟ್ಟರೂ ಕೇವಲ 125 ಮತಗಳಿಂದ ಗೆದ್ದವರು ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಭೀಮಾನಾಯ್ಕ. ಅಂದು ಜೆಡಿಎಸ್ ಅಭ್ಯರ್ಥಿಯಾಗಿದ್ದ ಇವರಿಗೆ ಸವಾಲು ಒಡ್ಡಿದ್ದು, ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ನೇಮಿರಾಜ ನಾಯ್ಕ. ಈ ಬಾರಿ ಪಕ್ಷ ಬದಲಾಯಿಸಿರುವ ಭೀಮಾನಾಯ್ಕ ಕಾಂಗ್ರೆಸ್ ಸೇರಿದ್ದಾರೆ. ಅಂದು ಕೈ ಪಾಳಯದಿಂದ ಸ್ಪರ್ಧಿಸಿದ್ದ  ಮರೆಣ್ಣ 23,860 ಮತ ಪಡೆದಿದ್ದರು.

ಅದನ್ನೂ ಸೇರಿಸಿಕೊಂಡರೆ ಗೆಲುವು ಸುಲಭ ಎನ್ನುವುದು ಕಾಂಗ್ರೆಸ್ ಅಭ್ಯರ್ಥಿಯ ನಂಬಿಕೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಬಳ್ಳಾರಿಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಶ್ರೀರಾಮುಲು ಈಗ ಬಿಜೆಪಿಯಲ್ಲಿದ್ದಾರೆ. ಇದು ಮತ ಲೆಕ್ಕಾಚಾರವನ್ನೇ ಬದಲಿಸಲಿದೆ ಎಂದೂ ಹೇಳಲಾಗುತ್ತಿದೆ.

ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಬಿಜೆಪಿಯಿಂದ ಶಿವಮೊಗ್ಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. ಕೆಜೆಪಿ ಒಡ್ಡಿದ ಪೈಪೋಟಿಯಿಂದಾಗಿ ‘ಪ್ರಭಾವಿ’ ನಾಯಕ ಮೂರನೇ ಸ್ಥಾನಕ್ಕೆ ಹೋಗಿದ್ದರು. ಇದರಿಂದಾಗಿ ಕಾಂಗ್ರೆಸ್‌ನ ಕೆ.ಬಿ. ಪ್ರಸನ್ನಕುಮಾರ್ ಕೇವಲ 278 ಮತಗಳಿಂದ ವಿಜಯಿಯಾಗಿದ್ದರು. ಈಗ ಕೆಜೆಪಿ–ಬಿಜೆಪಿಯಲ್ಲಿ ವಿಲೀನವಾಗಿದೆ. ಆದರೆ, ಪಕ್ಷದಲ್ಲಿ ನಾಯಕರ ಮಧ್ಯೆ ಭಿನ್ನಮತದ ಒಳಬೇಗುದಿ ಹಾಗೆಯೇ ಮುಂದುವರಿದಿದೆ.

ಬಿಎಸ್ಆರ್ ಕಾಂಗ್ರೆಸ್‌ನ ಅಭ್ಯರ್ಥಿ ತೀವ್ರ ಸೆಣಸಾಟ ನಡೆಸಿದ್ದರಿಂದಾಗಿ ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ದೊಡ್ಡಮನಿ ರಾಮಕೃಷ್ಣ ಕೇವಲ 315 ಮತಗಳಿಂದ ಗೆದ್ದಿದ್ದರು. ಈ ಕ್ಷೇತ್ರ ಕೂಡ ಕುತೂಹಲ ಮೂಡಿಸಿದೆ.

ಜೆಡಿಎಸ್ ಪಾರಮ್ಯ: ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಿದ್ದರು. ಎರಡರಿಂದ ಮೂರು ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸೋತ ಇಬ್ಬರು ಹಾಗೂ ಗೆದ್ದ ಇಬ್ಬರು ಈ ಬಾರಿ ಬಿಜೆಪಿಯಲ್ಲಿದ್ದಾರೆ.

ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಡಿಮೆ ಅಂತರದಿಂದ ಗೆಲುವು ಸಾಧಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿಗಳು ಪಡೆದ ಗಣನೀಯ ಮತಗಳೇ ಕಾರಣವಾಗಿದ್ದವು. ಹಾಗಿದ್ದರೂ ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಕಳೆದ ಚುನಾವಣೆಯಲ್ಲಿ ಆಗಿದ್ದ ಮತವಿಭಜನೆ ಅಂಕಿ ಅಂಶಗಳನ್ನು ಇಟ್ಟುಕೊಂಡು, ಈ ಬಾರಿ ಅದು ಒಂದು ನಿರ್ದಿಷ್ಟ ಪಕ್ಷಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂಬ ಲೆಕ್ಕಾಚಾರ ಹಾಕುವುದು ಸಮಂಜಸವಲ್ಲ. ಪ್ರತಿ ಚುನಾವಣೆಯೂ ಆಯಾ ಕಾಲದ ರಾಜಕಾರಣ, ಕ್ಷೇತ್ರ ರಾಜಕೀಯ ಹಾಗೂ ಅಭ್ಯರ್ಥಿಯ ಸಾಮರ್ಥ್ಯ ಆಧರಿಸಿ ತನ್ನದೇ ಆದ ವಿಭಿನ್ನತೆಯನ್ನು ಹೊಂದಿರುತ್ತದೆ. ಚುನಾವಣಾ ಗಣಿತ ಬೇರೆ ರೀತಿಯದು.

2013ರಲ್ಲಿ ನಡೆದ ಚುನಾವಣೆ ಹೊತ್ತಿಗೆ ಬಿಜೆಪಿ ಒಡೆದು ಕೆಜೆಪಿ, ಬಿಎಸ್ಆರ್‌ ಕಾಂಗ್ರೆಸ್‌ ಎಂಬ ಪಕ್ಷಗಳು ಅಸ್ತಿತ್ವಕ್ಕೆ ಬಂದಿದ್ದವು. ಬಳಿಕ ಈ ಮೂರೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರು. ಇದು ಸರಿಸುಮಾರು 25 ಕ್ಷೇತ್ರಗಳ ಫಲಿತಾಂಶದ ಮೇಲೆ ಪರಿಣಾಮ ಬೀರಿತು.

ಚುನಾವಣಾ ಗಣಿತವೇ ಬೇರೆ

ಈ ಎರಡೂ ಹೊಸ ಪಕ್ಷಗಳು ಇಲ್ಲದೇ ಇದ್ದಿದ್ದರೆ ಅಲ್ಲಿ ಬಿಜೆಪಿಯೇ ಗೆಲ್ಲುತ್ತಿತ್ತು ಎಂಬುದು ಕೇವಲ ಊಹೆ. ಅಂದು ಕೆಜೆಪಿ, ಬಿಎಸ್ಆರ್‌ಗೆ ಬೇರೆ ಪಕ್ಷಗಳ ಮತಗಳು ಸಿಕ್ಕಿರಬಹುದು. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಅಭ್ಯರ್ಥಿ ಗಳು ಬೇರೆ ಪಕ್ಷದ ಮತ ಸೆಳೆದಿಲ್ಲ; ಆದರೆ, ಬಿಎಸ್‌‍ಪಿ ಮತಗಳನ್ನು ಬೇರೆ ಪಕ್ಷಗಳ ಅಭ್ಯರ್ಥಿಗಳು ಸೆಳೆದಿದ್ದಾರೆ. 2013ರ ಚುನಾವಣೆಗೆ ಇದನ್ನು ಅನ್ವಯಿಸಬಹುದು.

ರಾಜಕೀಯ ಪೈಪೋಟಿಯ ದೃಷ್ಟಿಯಲ್ಲಿ ಹಿಂದಿನ ಚುನಾವಣೆಗೂ ಈಗಿನದಕ್ಕೂ ವ್ಯತ್ಯಾಸವಿದೆ. ರಾಜಕೀಯ ಪರಿಸ್ಥಿತಿ, ಕ್ಷೇತ್ರದ ರಾಜಕಾರಣವನ್ನು ಗಮನಿಸಬೇಕಾಗುತ್ತದೆ. ಹಿಂದೆ ಕೆಜೆಪಿ, ಬಿಎಸ್‌ಆರ್‌ನಲ್ಲಿ ಸ್ಪರ್ಧಿಸಿದ್ದವರು ಇಂದು ಬಿಜೆಪಿಗೆ ಹೋಗಿದ್ದಾರೆಯೇ ಅಥವಾ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದಾರೆಯೇ ಎಂಬುದು ಗಮನಿಸಬೇಕಾದ ಅಂಶ. ಚುನಾವಣೆಯಲ್ಲಿ ಕೆಲವೊಮ್ಮೆ ಪಕ್ಷಕ್ಕಿಂತ ಅಭ್ಯರ್ಥಿಯೂ ಪ್ರಮುಖವಾಗುವುದುಂಟು. ಹೀಗಾಗಿ, ಕಳೆದ ಚುನಾವಣೆಯ ಆಧಾರದ ಮೇಲೆ ಲೆಕ್ಕಾಚಾರ ಹಾಕಿ, ಕೂಡಿ–ಕಳೆಯುವುದು ಕಷ್ಟ.

ಸಂದೀಪ್ ಶಾಸ್ತ್ರಿ, ಜೈನ್‌ ವಿ.ವಿ ಸಹ ಕುಲಪತಿ

***

ಕಾಂಗ್ರೆಸ್–122

ಬಿಜೆಪಿ–40

ಜೆಡಿಎಸ್‌–40

ಕೆಜೆಪಿ–6

ಬಿಎಸ್‌ಆರ್–4

ಸಮಾಜವಾದಿ ಪಕ್ಷ–1

ಸರ್ವೋದಯ ಕರ್ನಾಟಕ–1

ಕನ್ನಡ ಮಕ್ಕಳ ಪಕ್ಷ–1

ಪ‍ಕ್ಷೇತರರು–9

ಒಟ್ಟು ಸ್ಥಾನಗಳು  224

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT