ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಣಾಳಿಕೆ’ಯಲ್ಲೇ ಉಳಿದ ‘ಸಿಂಗಪುರ ಮಾದರಿ ರಸ್ತೆ’!

Last Updated 4 ಏಪ್ರಿಲ್ 2018, 20:23 IST
ಅಕ್ಷರ ಗಾತ್ರ

ಬೆಂಗಳೂರು: ಹೊರವಲಯಗಳನ್ನೂ ತನ್ನ ಒಡಲಲ್ಲಿ ಸೇರಿಸಿಕೊಂಡು ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿರುವ ಬೆಂಗಳೂರು ನಗರ ಈಗ ಸಂಕಷ್ಟದ ಸನ್ನಿವೇಶ ಎದುರಿಸುತ್ತಿದೆ. ಕಳೆದೊಂದು ದಶಕದಲ್ಲಿ ಜನ ಹಾಗೂ ವಾಹನಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಸಮರ್ಪಕ ಯೋಜನೆ ಹಾಕಿಕೊಳ್ಳಲು ಎಡವಿದ್ದರಿಂದ ಸಂಚಾರ ನಿರ್ವಹಣೆ ವಿಷಯದಲ್ಲಿ ಲೆಕ್ಕವಿಲ್ಲದಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ.

ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರತಿದಿನ ಮೂರೂವರೆ ಸಾವಿರ ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ಈಗಿರುವ ರಸ್ತೆಜಾಲಕ್ಕೆ ಅರ್ಧದಷ್ಟು ವಾಹನಗಳ ಧಾರಣಶಕ್ತಿಯೂ ಇಲ್ಲದಂತಾಗಿದೆ. ಆದ್ದರಿಂದಲೇ ನಗರದ ಸಂಚಾರ ವೇಗ ಗಂಟೆಗೆ 10 ಕಿ.ಮೀ.ಗಿಂತಲೂ ಕಡಿಮೆಗೆ ಇಳಿದಿದೆ.

ಹದಗೆಟ್ಟ ರಸ್ತೆಗಳು, ಪಾದಚಾರಿ ಮಾರ್ಗಗಳ ಅಸಮರ್ಪಕ ನಿರ್ವಹಣೆ, ಅವೈಜ್ಞಾನಿಕ ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳು, ವಾಹನ ಸವಾರರ ನಿರ್ಲಕ್ಷ್ಯ... ಹೀಗೆ ಹಲವು ಕಾರಣಗಳಿಂದ ನಗರದಲ್ಲಿ ಪ್ರತಿವರ್ಷ 700 ರಿಂದ 800 ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ವಾಹನ ಸವಾರರು ಗಂಟೆಗಟ್ಟಲೇ ದಟ್ಟಣೆಯಲ್ಲಿ ನಿಲ್ಲಬೇಕಾಗಿದೆ.

ಸಂಚಾರದಟ್ಟಣೆ ಕಡಿಮೆ ಮಾಡುವ ಹೊಣೆ ರಾಜ್ಯ ಸರ್ಕಾರದ ಜತೆಗೆ ಸ್ಥಳೀಯ ಆಡಳಿತವಾದ ಬಿಬಿಎಂಪಿ ಮೇಲೂ ಇದೆ. ಆದರೆ, ಇಲಾಖೆಗಳ ನಡುವೆ ಇರುವ ಸಮನ್ವಯದ ಕೊರತೆಯು ಪರಿಣಾಮಕಾರಿ ಕೆಲಸಗಳಿಗೆ ಅಡ್ಡಿಯಾಗಿದೆ. ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸದೆಯೇ, ಹೊಸ ಕಾಮಗಾರಿಗಳನ್ನು ನಡೆಸುತ್ತಿರುವುದೂ ದಟ್ಟಣೆಗೆ ಪ್ರಮುಖ ಕಾರಣ ‌ಎನ್ನುತ್ತಾರೆ ಸಂಚಾರ ತಜ್ಞರು.

ಯಾವ ಪಕ್ಷ ಅಧಿಕಾರಕ್ಕೆ ಬಂದರೂ, ರಾಜಧಾನಿಯ ರಸ್ತೆಗಳನ್ನು ಸಿಂಗಪುರ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಆರಂಭದಲ್ಲಿ ಹೇಳುತ್ತದೆ. ತನ್ನ ಪ್ರಣಾಳಿಕೆಯಲ್ಲೂ ಅದನ್ನೇ ತೋರಿಸುತ್ತದೆ. ಆದರೆ, ‘ಟ್ರಾಫಿಕ್ ಜಾಮ್’ ಎಂಬ ಒಂದು ಮೂಲಭೂತ ಸಮಸ್ಯೆಯನ್ನು ಬಗೆಹರಿಸಲು ಈವರೆಗೂ ಯಾರಿಂದಲೂ ಆಗಿಲ್ಲ. ಜನಪ್ರತಿನಿಧಿಗಳು ಸುಗಮ ಸಂಚಾರಕ್ಕೆ ಮೇಲ್ಸೇತುವೆಗಳು ಹಾಗೂ ಅಂಡರ್‌ಪಾಸ್‌ಗಳನ್ನು ನಿರ್ಮಿಸಿದರೇ ಹೊರತು, ಅವುಗಳಿಂದ ವೈಜ್ಞಾನಿಕ ಪರಿಹಾರಗಳಂತೂ ಸಿಕ್ಕಿಲ್ಲ.

ಸದಾ ಏರುಗತಿಯಲ್ಲಿ ಸಾಗುತ್ತಿರುವ ದಟ್ಟಣೆ, ಹೆಚ್ಚುತ್ತಿರುವ ರಸ್ತೆ ಅಪಘಾತ, ಅಪಾಯದ ಮಟ್ಟ ತಲುಪಿದ ವಾಯು ಮತ್ತು ಶಬ್ದ ಮಾಲಿನ್ಯ... ಇಂತಹ ಮೊದಲಾದ ಸಮಸ್ಯೆಗಳು ಖಾಸಗಿ ವಾಹನಗಳ ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸಿ ಸಮೂಹ ಸಾರಿಗೆ ವ್ಯವಸ್ಥೆ ಹೆಚ್ಚಿಸಬೇಕು ಎಂಬುದರತ್ತ ಬೊಟ್ಟು ಮಾಡುತ್ತಿವೆ. ಪೊಲೀಸರು ಹಾಗೂ ಸಂಚಾರ ತಜ್ಞರೂ ಇದೇ ಅಭಿಮತವನ್ನು ಮುಂದಿಟ್ಟಿದ್ದಾರೆ. ಆದರೆ, ಈ ವ್ಯವಸ್ಥೆಯ ಬಳಕೆ ಬಗ್ಗೆ ಜನರಿಗೆ ಮನವರಿಕೆ ಮಾಡುವ ಸಣ್ಣ ಕೆಲಸವನ್ನೂ ಜನಪ್ರತಿನಿಧಿಗಳು ಮಾಡುತ್ತಿಲ್ಲ ಎಂಬ ದೂರೂ ಇದೆ.

800 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ನಗರದ ರಸ್ತೆಯ ಜಾಲ 15 ಸಾವಿರ ಕಿ.ಮೀ ಇದೆ. ಸದ್ಯ 72.58 ಲಕ್ಷ ವಾಹನಗಳು ನಿತ್ಯ ಓಡಾಟ ನಡೆಸುತ್ತಿದ್ದು, 353 ಟ್ರಾಫಿಕ್ ಸಿಗ್ನಲ್‌ಗಳು ಹಾಗೂ 44 ಸಾವಿರ ಕೂಡು ರಸ್ತೆಗಳಿವೆ. ನಗರದಲ್ಲಿ ಎಲ್ಲ ಉಪರಸ್ತೆಗಳು ಕಿಷ್ಕಿಂದೆಯಿಂದ ಕೂಡಿರುವ ಕಾರಣ, ಅವುಗಳ ವಿಸ್ತರಣೆ ಮಾಡುವುದೂ ಸಾಧ್ಯವಾಗುತ್ತಿಲ್ಲ.

‘ನಿಧಾನಗತಿಯ ವಾಹನ ಸಂಚಾರವಿರುವ ದೇಶದ ಪ್ರಮುಖ ಏಳು ಮಹಾನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇಲ್ಲಿ ಟ್ರಾಫಿಕ್ ಜಾಮ್‌ನಿಂದ ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಗಿದೆ ಎಂದರೆ, ನೀವು ಯಾವ ದಿಕ್ಕಿನಿಂದ ನಗರದ ಹೃದಯ ಭಾಗವನ್ನು ಪ್ರವೇಶ ಮಾಡಿದರೂ ಗಂಟೆಗೆ 18 ಕಿ.ಮೀಗಿಂತ ಹೆಚ್ಚು ವೇಗದಲ್ಲಿ ಸಾಗಲು ಆಗುವುದಿಲ್ಲ. ದಟ್ಟಣೆ ಹೆಚ್ಚಿರುವ ಅವಧಿಯಲ್ಲಿ ಕೆಲ ರಸ್ತೆಗಳಲ್ಲಿ ವಾಹನಗಳಿಗಿಂತ ನಡಿಗೆಯಲ್ಲೇ ಬೇಗನೇ ಗುರಿ ತಲುಪಬಹುದು’ ಎನ್ನುತ್ತಾರೆ ಸಂಚಾರ ನಿರ್ವಹಣಾ ಕೇಂದ್ರದ (ಟಿಎಂಸಿ) ಅಧಿಕಾರಿಯೊಬ್ಬರು.

‘ಸ್ವಂತ ವಾಹನದಲ್ಲಿ ಪ್ರಯಾಣಿಸುವುದು ಕೆಲವರಿಗೆ ಪ್ರತಿಷ್ಠೆಯ ಸಂಗತಿ ಇರಬಹುದು. ಆದರೆ, ಅದರಿಂದ ನಮ್ಮ ಸಮೂಹ ಸಾರಿಗೆ ವ್ಯವಸ್ಥೆಯ ದುರವಸ್ಥೆ ಕಣ್ಣಿಗೆ ರಾಚುತ್ತದೆ. ಮೆಟ್ರೊ ಬಂದ ನಂತರ ಪರಿಸ್ಥಿತಿ ಕೊಂಚ ಸುಧಾರಿಸಿದೆ ನಿಜ. ಆದರೆ, ವಾಹನ ಸಂದಣಿಯ ಅಗಾಧತೆಯನ್ನು ಗಮನಿಸದರೆ ಮೆಟ್ರೊ ಅದಷ್ಟು ಬೇಗ ಇನ್ನಷ್ಟು ವಿಸ್ತರಣೆಯಾಗಬೇಕು ಎಂಬ ತುರ್ತನ್ನು ಹೇಳುತ್ತದೆ’ ಎನ್ನುತ್ತಾರೆ ಅವರು.

ಪಾದಚಾರಿಗಳಿಗೆ ಕಂಟಕ: ರಾಜಧಾನಿಯಲ್ಲಿ 2017ರಲ್ಲಿ 284 ಪಾದಚಾರಿಗಳು ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದರೆ, 1,346 ಪಾದಚಾರಿಗಳು ಗಾಯಗೊಂಡು ಕೈ–ಕಾಲು ಕಳೆದುಕೊಂಡಿದ್ದಾರೆ. ನಗರದ ಫುಟ್‌ಪಾತ್‌ಗಳು ಜನಕ್ಕೆ ಎಷ್ಟರ ಮಟ್ಟಿಗೆ ಉಪಯೋಗವಾಗುತ್ತಿವೆ ಎಂಬುದನ್ನು ಈ ಅಂಕಿ ಅಂಶವೇ ಹೇಳುತ್ತದೆ.

ಜನರ ಓಡಾಟ ಹೆಚ್ಚಿರುವ ಬಹುತೇಕ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ. ಕೆಲವೆಡೆ ಕಾಮಗಾರಿಗಳ ಹೆಸರಿನಲ್ಲಿ ಫುಟ್‌ಪಾತ್‌ಗಳನ್ನು ಹಾಳುಗೆಡವಲಾಗಿದೆ. ಹೀಗಾಗಿ, ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ.

‘ಜನ ಸಂಚಾರವೇ ಸಾರಿಗೆ ನೀತಿಯ ಕೇಂದ್ರಬಿಂದು ಆಗಬೇಕೇ ಹೊರತು ವಾಹನ ಸಂಚಾರವಲ್ಲ. ರಸ್ತೆ ವಾಹನಗಳಿಗೆ, ಫುಟ್‌ಪಾತ್ ಪಾದಚಾರಿಗಳಿಗೆ ಎಂಬುದು ಎಲ್ಲರಿಗೂ ಅರಿವಾಗಬೇಕು. ಆದರೆ, ಸದ್ಯದ ನೀತಿಗಳು ತದ್ವಿರುದ್ಧವಾಗಿವೆ’ ಎನ್ನುತ್ತಾರೆ ಸಂಚಾರ ತಜ್ಞ ಎಂ.ಎನ್.ಶ್ರೀಹರಿ.

‘ನಗರದಲ್ಲಿರುವ ಪಾದಚಾರಿ ಮಾರ್ಗದ ಉದ್ದ 28 ಸಾವಿರ ಕಿ.ಮೀ (ರಸ್ತೆಯ ಎರಡೂ ಬದಿ ಸೇರಿಸಿ). ಅದರಲ್ಲಿ ಶೇ 60ರಷ್ಟು ಫುಟ್‌ಪಾತ್ ನಡಿಗೆಗೆ ಯೋಗ್ಯವಾಗಿಲ್ಲ. ಪಾದಚಾರಿಗಳು ಪ್ರತ್ಯೇಕ ಪಥದಲ್ಲೂ ಜೀವಬಿಗಿಹಿಡಿದು ಓಡಾಡಬೇಕಾದ ಪರಿಸ್ಥಿತಿ ಇದೆ’ ಎಂದರು ಅವರು.

ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಅವೆನ್ಯೂ ರಸ್ತೆ, ಶಿವಾಜಿನಗರ ಸುತ್ತಮುತ್ತಲ ಪ್ರದೇಶಗಳು, ಎಂ.ಜಿ.ರಸ್ತೆ, ಕೆ.ಜಿ.ರಸ್ತೆ, ಜೆ.ಸಿ.ರಸ್ತೆ, ಎಸ್‌.ಪಿ.ರಸ್ತೆ, ಮಲ್ಲೇಶ್ವರ, ಮಡಿವಾಳ, ಕೆ.ಆರ್.ಪುರ, ಜಯನಗರ, ಬಸವನಗುಡಿ, ಮಾಗಡಿ ರಸ್ತೆ, ಕನಕಪುರ ರಸ್ತೆಗಳ.. ಫುಟ್‌ಪಾತ್‌ಗಳನ್ನು ಬೀದಿಬದಿ ವ್ಯಾಪಾರಿಗಳು ಕಬಳಿಸಿದ್ದಾರೆ. ಸಂಜೆ ವೇಳೆ ತಿಂಡಿ ಗಾಡಿಗಳು ಈ ಮಾರ್ಗಗಳನ್ನು ಆವರಿಸುತ್ತವೆ. ಬೀದಿ ವ್ಯಾಪಾರಿಗಳು ಸುರಂಗ ಮಾರ್ಗವನ್ನೂ ಬಿಟ್ಟಿಲ್ಲ.

‘ಫುಟ್‌ಪಾತ್‌ ಮಾಫಿಯಾಗೆ ಜನಪ್ರತಿನಿಧಿಗಳೇ ಶ್ರೀರಕ್ಷೆ. ಪಾದಚಾರಿ ಮಾರ್ಗದಲ್ಲಿರುವ ತಿಂಡಿ ಗಾಡಿ ತೆಗೆಸಲು ಮುಂದಾದರೆ, ಆ ವ್ಯಕ್ತಿ ನೇರವಾಗಿ ಕ್ಷೇತ್ರದ ಶಾಸಕರಿಗೇ ಕರೆ ಮಾಡುತ್ತಾರೆ. ಫುಟ್‌ಪಾತ್ ವ್ಯಾಪಾರಿಗಳೂ ಜನಪ್ರತಿನಿಧಿಗಳ ಮತಬ್ಯಾಂಕ್ ಆಗಿರುವುದರಿಂದ ನಾವೂ ಅಸಹಾಯಕರಾಗಿದ್ದೇವೆ’ ಎನ್ನುತ್ತಾರೆ ಸಂಚಾರ ಪೊಲೀಸರು.

ಗುಂಡಿ ಬಿದ್ದ ರಸ್ತೆಗಳು: 2017ರ ಅಕ್ಟೋಬರ್‌ನಲ್ಲಿ ನಗರದ ರಸ್ತೆಗಳಲ್ಲಿ 15,935 ಗುಂಡಿಗಳಿದ್ದವು. ಈ ಗುಂಡಿಗಳಿಗೆ ಕಳೆದ ವರ್ಷ 34 ಮಂದಿ ಬಲಿಯಾಗಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಲ್ಲ ರಸ್ತೆಗಳು ‘ಚೆಂದ’ವಾಗುತ್ತಿವೆ. ಡಾಂಬರ್ ಸುರಿದು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

2017ರ ಅಕ್ಟೋಬರ್‌ನಲ್ಲಿ ಬಿಜಿಎಸ್ ಮೇಲ್ಸೇತುವೆಯಲ್ಲಿ ರಸ್ತೆ ಗುಂಡಿಗೆ ಜೋಸೆಫ್ ಹಾಗೂ ಸಗಾಯ್ ಮೇರಿ ಎಂಬ ದಂಪತಿ ಬಲಿಯಾದರು. ಅವರ ಸಂಬಂಧಿ ಅಂಥೋಣಿ ಜತೆ ಮಾತನಾಡಿದಾಗ, ‘ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣಕ್ಕೆ ಇನ್ನೂ ಓಬಿರಾಯನ ಕಾಲದ ವ್ಯವಸ್ಥೆಯನ್ನೇ ಅನುಸರಿಸಲಾಗುತ್ತಿದೆ (ನೆಲ ಸಮತಟ್ಟು ಮಾಡಿ, ಜಲ್ಲಿಕಲ್ಲು ಹಾಕಿ, ಅದರ ಮೇಲೆ ಡಾಂಬರು ಸುರಿಯುವುದು). ಈಗ ಬಿಜಿಎಸ್ ಮೇಲ್ಸೇತುವೆಯ ರಸ್ತೆ ನವೀಕರಣ ಆಗಿದೆಯಾದರೂ, ಮುಂದಿನ ಮಳೆಗಾಲಕ್ಕೆ ಎಲ್ಲ ಡಾಂಬರು ಕಿತ್ತು ಹೋಗುತ್ತದೆ. ಹೀಗಾಗಿ, ಶಾಶ್ವತ ಪರಿಹಾರ ಬೇಕು. ವಿದೇಶಗಳಂತೆ ತಂತ್ರಜ್ಞಾನ ಬಳಸಿ ರಸ್ತೆ ಮಾಡಬೇಕು’ ಎಂದು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.

‘2014ರಿಂದ 2017ರಲ್ಲಿ ಸಂಭವಿಸಿದ ಅಪಘಾತಗಳ ಬಗ್ಗೆ ಅಧ್ಯಯನ ನಡೆಸಿ 17 ‘ಬ್ಲ್ಯಾಕ್‌ಸ್ಪಾಟ್‌’ಗಳನ್ನು ಗುರುತಿಸಿದ್ದೇವೆ. (ಹಳೇ ಮದ್ರಾಸ್ ರಸ್ತೆ, ಸಿಂಗಸಂದ್ರ, ವೀರಸಂದ್ರ, ರೂಪೇನ ಅಗ್ರಹಾರ, ದೊಡ್ಡಬೆಲೆ, ಆರ್‌ಎಂಸಿ ಯಾರ್ಡ್, ಹೆಬ್ಬಾಳ, ಹೆಬ್ಬಾಳ ಕೆರೆ ಪ್ರದೇಶ, ಬೆಥಲ್ ಚರ್ಚ್, ಜಕ್ಕೂರಿನ ಎಲ್‌ಟಿ ಮುಖ್ಯದ್ವಾರ, ಯಲಹಂಕ ಬೈಪಾಸ್, ಐಎಎಫ್ ಮುಖ್ಯದ್ವಾರ, ಎಂವಿಐಟಿ ಜಂಕ್ಷನ್, ಬೆಟ್ಟಹಲಸೂರು, ದೊಡ್ಡಜಾಲ ರೈಲು ನಿಲ್ದಾಣ, ಬಿಐಎಎಲ್ ಪೊಲೀಸ್ ಠಾಣೆ ಬಳಿ) ಆ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೌಲಭ್ಯ ಒದಗಿಸಿದರೆ ಸಾಕು. ಅಪಘಾತಗಳಿಂದ ಮರಣ ಹೊಂದುವವರ ಸಂಖ್ಯೆಯಲ್ಲಿ ಶೇ 30ರಷ್ಟಾದರೂ ಇಳಿಕೆಯಾಗುತ್ತದೆ’ ಎನ್ನುತ್ತಾರೆ ಪೊಲೀಸರು.

ನಗರೋತ್ಥಾನ ಯೋಜನೆಯಡಿ 93.47 ಕಿ.ಮೀ ಉದ್ದದ 29 ರಸ್ತೆಗಳು ಹಾಗೂ ಆರು ಜಂಕ್ಷನ್‌ಗಳಲ್ಲಿ ವೈಟ್‌ ಟಾಪಿಂಗ್‌ ಮಾಡಲಾಗುತ್ತಿದೆ. 2018–19ರ ಸಾಲಿನಲ್ಲಿ ₹ 1,000 ಕೋಟಿ ವೆಚ್ಚದಲ್ಲಿ 150 ಕಿ.ಮೀ ಮುಖ್ಯರಸ್ತೆ ಹಾಗೂ ಉಪರಸ್ತೆಗಳ ವೈಟ್‌ಟಾಪಿಂಗ್ ಮಾಡಲು ಪಾಲಿಕೆ ಸಿದ್ಧತೆ ನಡೆಸುತ್ತಿದೆ.

ಫುಟ್‌ಪಾತ್‌ಗೆ ಆದ್ಯತೆ ನೀಡಿ’

‘ಹೊಸ ರಸ್ತೆಗಳನ್ನು ನಿರ್ಮಿಸುವಾಗ ನಮ್ಮ ನೀತಿ ಹೊರಗಿನಿಂದ ಒಳಕ್ಕೆ (‘ಔಟ್‌ಸೈಡ್‌ ಇನ್‌’) ಎಂದಾಗಿರಬೇಕೇ ಹೊರತು ಒಳಗಿನಿಂದ ಹೊರಕ್ಕೆ (‘ಇನ್‌ಸೈಡ್‌ ಔಟ್‌’) ಎಂದಲ್ಲ. ‘ಔಟ್‌ಸೈಡ್‌ ಇನ್‌’ ಎಂದರೆ ಮೊದಲು ಫುಟ್‌ಪಾತ್‌, ಬಳಿಕ ಸೈಕಲ್‌ ಲೇನ್‌ಗೆ ಅವಕಾಶ ಕಲ್ಪಿಸಿ ಮಿಕ್ಕ ಜಾಗವನ್ನು ವಾಹನಗಳ ಓಡಾಟಕ್ಕೆ ಮೀಸಲಿಡುವುದು. ಆದರೆ, ಬೆಂಗಳೂರಿನಲ್ಲಿ ಪಾಲನೆ ಆಗುತ್ತಿರುವುದು ‘ಇನ್‌ಸೈಡ್‌ ಔಟ್‌’ ನೀತಿ. ಈ ನೀತಿಯಂತೆ ರಸ್ತೆಯಲ್ಲಿ ಲಭ್ಯವಿರುವ ಬಹುತೇಕ ಜಾಗವನ್ನು ವಾಹನಗಳ ಸಂಚಾರಕ್ಕೆ ಮೀಸಲಿಟ್ಟು, ಮಿಕ್ಕ ಸ್ವಲ್ಪ ಜಾಗದಲ್ಲಿ, ಅದೂ ಲಭ್ಯವಿದ್ದ ಕಡೆ ಮಾತ್ರ, ಫುಟ್‌ಪಾತ್‌ ನಿರ್ಮಾಣ ಮಾಡಲಾಗಿದೆ. ಈ ಸೂಕ್ಷ್ಮ ವಿಚಾರವನ್ನು ಜನಪ್ರತಿನಿಧಿಗಳು ಗಮನಿಸಬೇಕು’ ಎನ್ನುತ್ತಾರೆ ವಿಶ್ವಸಂಸ್ಥೆಯ ಸಲಹೆಗಾರ (ಮೂಲಸೌಕರ್ಯ ಹಾಗೂ ರಸ್ತೆ ಸುರಕ್ಷತೆ) ಲೋಕೇಶ್ ಹೆಬ್ಬಾನಿ.

‘ಹೆಚ್ಚು ಜನರನ್ನು ಕರೆದೊಯ್ಯುವ ವಾಹನಗಳಿಗೆ (ಹೈ ಆಕ್ಯುಪೆನ್ಸಿ ವೆಹಿಕಲ್) ರಸ್ತೆಯ ಎಡಬದಿಯಲ್ಲಿ ಪ್ರತ್ಯೇಕ ಪಥ ನಿರ್ಮಿಸಬೇಕು. ಆಗ ವಾಹನಗಳು ವೇಗವಾಗಿ ಸಾಗುತ್ತವೆ’ ಎಂದು ಅವರು ಸಲಹೆ ನೀಡಿದರು.

‘ಸಮೂಹ ಸಾರಿಗೆಗೆ ಉತ್ತೇಜನ ಕೊಡಿ’

‘ನಗರದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನ ಪ್ರಯಾಣಕ್ಕೆ ಬಸ್‌ಗಳನ್ನೇ ಅವಲಂಭಿಸಿದ್ದಾರೆ. ಆದರೆ, ಅವರು ಸುರಕ್ಷಿತವಾಗಿ ಬಸ್ ನಿಲ್ದಾಣಕ್ಕೆ ನಡೆದು ಹೋಗುವಂತಹ ಪಾದಚಾರಿ ಮಾರ್ಗಗಳು ನಗರದಲ್ಲಿಲ್ಲ. ಹೀಗಾಗಿ, ಪಾದಚಾರಿಗಳ ಬಳಕೆಗೆ ಯೋಗ್ಯವಾದ ಫುಟ್‌ಪಾತ್‌ ನಿರ್ಮಿಸಬೇಕು. ಸಿಬಿಡಿ ಪ್ರದೇಶದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಪಾದಚಾರಿಗಳಿಗೆ ಮಾತ್ರ ಅವುಗಳನ್ನು ಮೀಸಲಿಡಬೇಕು’ ಎಂದು ನಗರ ಯೋಜನಾ ತಜ್ಞ ರವಿಚಂದರ್ ತಿಳಿಸಿದರು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡದ ಹೊರತು ದಟ್ಟಣೆ ನಿವಾರಣೆ ಸಾಧ್ಯ ವಾಗದು. ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಿ, ಮೆಟ್ರೊ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಬೇಕು. ಸಬ್‌ ಅರ್ಬನ್ ರೈಲುಗಳ ಓಡಾಟ ಹೆಚ್ಚಾಗಬೇಕು. ಸಮೂಹ ಸಾರಿಗೆ ಸೌಲಭ್ಯ ಒದಗಿಸಿದ ಮೇಲೂ ಜನ ಖಾಸಗಿ ವಾಹನಗಳನ್ನೇ ಅವಲಂಬಿಸಿದರೆ, ಅಂತಹ ವಾಹನಗಳಿಗೆ ಗರಿಷ್ಠ ಪ್ರಮಾಣದ ಶುಲ್ಕ ವಿಧಿಸಬೇಕು. ರಸ್ತೆ ಮತ್ತು ಪಾರ್ಕಿಂಗ್‌ ಸಮಸ್ಯೆಗೆ ಸಮೂಹ ಸಾರಿಗೆಯೇ ಶಾಶ್ವತ ಪರಿಹಾರ ಎಂಬುದನ್ನು ಗಮನಿಸಬೇಕು’ ಎಂದು ಹೇಳಿದರು.

ತಜ್ಞರ ಸಲಹೆ

ಕೇವಲ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ಅಥವಾ ಇನ್ನಾವುದೋ ಸೇತುವೆ ನಿರ್ಮಿಸಿದರೆ ಸಂಚಾರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅತಿ ಉದ್ದದ ಮೇಲ್ಸೇತುವೆಗಳು (ಲಾಂಗ್ ಕನೆಕ್ಟಿವಿಟಿ) ನಿರ್ಮಾಣವಾಗಬೇಕು. ಆಗ ವಾಹನಗಳು ಸರಾಗವಾಗಿ ಸಾಗುತ್ತವೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಎರಡೇ ವರ್ಷಗಳಲ್ಲಿ ಮೇಲ್ಸೇತುವೆಗಳ ಸಂಖ್ಯೆ ಹೆಚ್ಚಾಗುತ್ತದೆ. ನಗರದ ಎಲ್ಲ ರಸ್ತೆಗಳು ಹಾಗೂ ಪಾದಚಾರಿಗಳು ಟೆಂಡರ್ ಶ್ಯೂರ್ ಸ್ವರೂಪ ಪಡೆದುಕೊಳ್ಳಲಿವೆ.

ರೋಷನ್ ಬೇಗ್, ನಗರಾಭಿವೃದ್ಧಿ ಸಚಿವ (ಕಾಂಗ್ರೆಸ್)

***

‘ಫುಟ್‌ಪಾತ್ ಒತ್ತುವರಿ ಈಗ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಮೊದಲು ಪರಿಹಾರ ಕಂಡುಕೊಳ್ಳುತ್ತೇವೆ. ಎಲ್ಲರೂ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಹೋಗಿ ವಸ್ತುಗಳನ್ನು ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ, ನಗರದೆಲ್ಲೆಡೆ ಸಣ್ಣ ಸಣ್ಣ ಮಾರುಕಟ್ಟೆಗಳನ್ನು ಪ್ರಾರಂಭಿಸಿ, ಫುಟ್‌ಪಾತ್‌ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸುತ್ತೇವೆ. ಇದರಿಂದ ಪಾದಚಾರಿಗಳ ಓಡಾಟಕ್ಕೂ ಫುಟ್‌ಪಾತ್‌ಗಳು ಮುಕ್ತವಾಗುತ್ತವೆ. ವ್ಯಾಪಾರಿಗಳಿಗೂ ಅನುಕೂಲವಾಗುತ್ತದೆ. ನಮ್ಮ ಪ್ರಣಾಳಿಕೆಯಲ್ಲಿ ಈ ಅಂಶವೂ ಇದೆ.’

‘ನಗರದ ಪ್ರತಿಯೊಂದು ಪ್ರದೇಶಕ್ಕೂ ಬಿಎಂಟಿಸಿ ಹಾಗೂ ಮೆಟ್ರೊ ಸಂಪರ್ಕ, ನಗರದಿಂದ ಸುತ್ತಮುತ್ತಲ ಹಳ್ಳಿಗಳಿಗೆ ರೈಲು ಸಂಪರ್ಕ, ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಮೇಲ್ಸೇತುವೆಗಳ ನಿರ್ಮಾಣ, ಸಾರ್ವಜನಿಕ ವಾಹನಗಳ ಬಳಕೆಗೆ ಉತ್ತೇಜನ... ಹೀಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ.’

ಎಲ್‌.ಎ.ರವಿ ಸುಬ್ರಹ್ಮಣ್ಯ, ಬಿಜೆಪಿ ಶಾಸಕ

***

ಮೆಟ್ರೊ ರೈಲಿನಿಂದ ಜನರ ಓಡಾಟ ಸ್ವಲ್ಪ ಸುಲಭವಾಗಿದೆ. ಹೀಗಾಗಿ, ಅದೇ ಮಾದರಿಯಲ್ಲೇ ಮಾನೊ ರೈಲನ್ನು ನಗರಕ್ಕೆ ತರಬೇಕು ಎಂಬ ಆಲೋಚನೆ ಇದೆ. ಕನಿಷ್ಠ ಹತ್ತು ವರ್ಷವಾದರೂ ಬಾಳಿಕೆ ಬರುವಂಥ ಗುಣಮಟ್ಟದ ರಸ್ತೆಗಳನ್ನು ಜನರಿಗೆ ಕೊಡುತ್ತೇವೆ.

ಟಿ.ಎ.ಶರವಣ, ಜೆಡಿಎಸ್ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT