ಸಂಘ ಪರಿವಾರದಿಂದ ಹಿಂದೂ ಹಿತಕ್ಕೆ ವಂಚನೆ

7
ಸಂವಿಧಾನ ಉಳಿವಿಗಾಗಿ ಸಂಕಲ್ಪ ಸಮಾವೇಶದಲ್ಲಿ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಆರೋಪ

ಸಂಘ ಪರಿವಾರದಿಂದ ಹಿಂದೂ ಹಿತಕ್ಕೆ ವಂಚನೆ

Published:
Updated:

ಶಿವಮೊಗ್ಗ: ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ಹಿಂದೂ ಹಿತಕ್ಕೆ ವಂಚನೆ ಮಾಡುವ ಸಂಘಟನೆಗಳು ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಆರೋಪಿಸಿದರು.ನಗರದ ಎನ್‌ಡಿವಿ ಹಾಸ್ಟೆಲ್‌ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ‘ಸಂವಿಧಾನ ಉಳಿವಿಗಾಗಿ ಸಂಕಲ್ಪ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಒಂದಕ್ಕಿಂತ ಹೆಚ್ಚು ಬಾರಿ ವಂಚಿಸಿವೆ. ಆದರೆ, ಎಲ್ಲಾ ಪಕ್ಷಗಳಿಗಿಂತ ಆರ್‌ಎಸ್ಎಸ್‌, ಬಿಜೆಪಿ ಅಪಾಯಕಾರಿ. ಕಾರಣ ಎರಡೂ ಸಂವಿಧಾನ ವಿರೋಧಿ. ಹಿಂದುತ್ವದ ಹೆಸರಿನಲ್ಲಿ ಜನವಿರೋಧಿ ಸಮಾಜ ಕಟ್ಟಲು ಹವಣಿಸುತ್ತಿವೆ. ಸಂಘ ಪರಿವಾರದ ಹಿಡನ್‌ ಅಜೆಂಡಾಗಳು ಅನಂತ ಕುಮಾರ್ ಹೆಗಡೆ ಬಾಯಿಂದ ಹೊರಬರುತ್ತಿವೆ’ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಅವರಿಗೆ ಉದ್ಯೋಗ, ಚಿಕಿತ್ಸೆ, ಶಿಕ್ಷಣ, ಜನಪರ ಕಾಳಜಿ, ರೈತರ ಆತ್ಮಹತ್ಯೆ, ದಲಿತರ ಕೊಲೆ ಈ ರೀತಿಯ ಸಮಸ್ಯೆಗಳೇ ಗೊತ್ತಿಲ್ಲ. ಉದ್ಯೋಗ ಕೇಳಿದರೆ ದೇವಸ್ಥಾನ ಎನ್ನುತ್ತಾರೆ. ಭದ್ರತೆ ಕೇಳಿದರೆ ಗೋಮಾತೆ ಅನ್ನುತ್ತಾರೆ. ಇಂತಹ ವ್ಯಕ್ತಿ ಏಪ್ರಿಲ್‌ 15ಕ್ಕೆ ಚುನಾವಣೆ ಪ್ರಚಾರಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ. ಆಗ ಎಲ್ಲಾ ಸಮಾನ ಮನಸ್ಸುಗಳು ಅವರನ್ನು ತಡೆದು ಒಕ್ಕೊರಲಿನಿಂದ ಯುವಕರಿಗೆ ಉದ್ಯೋಗ ಕೊಡಿ ಎಂದು ಪಟ್ಟು ಹಿಡಿಯಬೇಕು ಎಂದು ಕೋರಿದರು.

ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವ ನಾಗಿದೇವ ಶರಣ ಮಾತನಾಡಿ, ‘ಮೂಲಭೂತವಾದಿಗಳು ಯಾವುದೇ ಆಯುಧ ಇಟ್ಟುಕೊಂಡರೂ ನಮಗೆ ಸಂವಿಧಾನವೇ ಆಯುಧ. ಇಂತಹ ಆಯುಧವನ್ನು ನಮ್ಮ ಜತೆಯಲ್ಲಿಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ಸಂವಿಧಾನ ವಿರೋಧಿಗಳಿಗೆ, ಆಹಾರ ಪದ್ಧತಿ ಪ್ರಶ್ನಿಸುವವರಿಗೆ, ಧರ್ಮ, ಧರ್ಮದ ಸಹೋದರತ್ವ ಒಡೆಯುವವರಿಗೆ ಮತ ನೀಡುವುದಿಲ್ಲ ಎನ್ನುವ ಸಂಕಲ್ಪ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆಯ ಮುಖಂಡ ಕೆ.ಎಲ್‌.ಅಶೋಕ್‌ ಮಾತನಾಡಿ, ‘ಸಂವಿಧಾನ ವಿರೋಧಿಗಳ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಅವರ ಭದ್ರಕೋಟೆಗೆ ನಾವು ಲಗ್ಗೆ ಹಾಕಬೇಕಿದೆ. ಹಣ ಹಂಚಿ, ಹೆಣದ ಮೆರವಣಿಗೆ ಮಾಡುವ ಸನ್ನಿವೇಶ ಶಿವಮೊಗ್ಗದಲ್ಲಿ ಸೃಷ್ಟಿಯಾಗಬಹುದು. ಹಾಗಾಗಿ, ಸಂವಿಧಾನ ವಿರೋಧಿಗಳಿಗೆ ಸೋಲಿನ ರುಚಿ ತೋರಿಸಬೇಕು’ ಎಂದರು.

ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್‌ ಸೆರಾವೋ ಮಾತನಾಡಿ, ‘ಮೂಲಭೂತವಾದಿಗಳು ಗಾಂಧಿ, ಗೌರಿ ಕೊಲೆ ಮಾಡಿರಬಹುದು. ಆದರೆ, ಸಂವಿಧಾನದ ಕೊಲೆಯಾಗಲು ನಾವು ಬಿಡುವುದಿಲ್ಲ’ ಎಂದರು.

ಶಿವಮೊಗ್ಗ ಜಾಮಿಯಾ ಮಸೀದಿಯ ಧರ್ಮಗುರು ಮೌಲಾನಾ ಹೈದರ್ ಅಲಿ ಮಾತನಾಡಿ, ‘ಭಾರತ ಸುಂದರ ಹೂದೋಟ. ಸಂವಿಧಾನ ಮತ್ತು ಸುಪ್ರಿಂಕೋರ್ಟ್‌ ನಮ್ಮ ಆಯುಧಗಳು. ಇಂತಹ ದೇಶದಲ್ಲಿ ಮಾನವೀಯತೆಗೆ ಬೆಲೆ ಕೊಡಬೇಕಿದೆ’ ಎಂದು ಹೇಳಿದರು.

ಡಿಎಸ್‌ಎಸ್‌ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ‘ನಮ್ಮ ಧ್ವನಿ ಅಡಗಿಸಲು ಕೋಮುವಾದಿಗಳಿಗೆ ಸಾಧ್ಯವಿಲ್ಲ. ಹಾಗಾಗಿ, ನಾವೆಲ್ಲರೂ ಅಂಬೇಡ್ಕರ್‌ ಜ್ಞಾನಮಾರ್ಗ, ಜ್ಯೋತಿಬಾ ಫುಲೆ ಅಕ್ಷರ ಮಾರ್ಗ, ನಾರಾಯಣ ಗುರು ಅವರ ಮಾನವೀಯ ಮಾರ್ಗ ಕೈಕೊಂಡು ಮುನ್ನಡೆಯಬೇಕಿದೆ’ ಎಂದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೆ.ಪಿ. ಶ್ರೀಪಾಲ್‌, ಡಿ.ಎಸ್. ಶಿವಕುಮಾರ್, ನೂರ್‌ ಶ್ರೀಧರ್ ಉಪಸ್ಥಿತರಿದ್ದರು.

ಅತ್ಯಾಚಾರಿಗಳ ಸಮಾಜ ಸೃಷ್ಟಿ: ಪ್ರಕಾಶ್‌ ರೈ

‘ಈಚೆಗೆ ಸ್ವಾಮೀಜಿಯೊಬ್ಬರು ಒಂದು ಹೆಣ್ಣು ಕೊಂದರೆ ನೂರು ಹೆಣ್ಣು ಕೊಲ್ಲುತ್ತೇವೆ ಎಂದಿದ್ದಾರೆ. ಇವರಿಗೆ ಮದುವೆಯಾಗಿಲ್ಲ, ಮಕ್ಕಳಾಗಿಲ್ಲ. ಹೆಣ್ಣುಮಕ್ಕಳ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ. ಇಂತಹ ಹೇಳಿಕೆಗಳ ಮೂಲಕ ಅತ್ಯಾಚಾರಿಗಳ ಸಮಾಜ ಸೃಷ್ಟಿಸುತ್ತಿದ್ದಾರೆ. ಇಂತಹವರಿಗೆ ಕಡಿವಾಣ ಹಾಕಬೇಕಿದೆ’ ಎಂದು ನಟ ಪ್ರಕಾಶ್ ರೈ ಅಭಿಪ್ರಾಯಪಟ್ಟರು.‘ಒಬ್ಬ ಗೌರಿಯನ್ನು ಕೊಂದಿರಬಹುದು. ಆದರೆ, ಈಗ ಪ್ರಕಾಶ್ ರೈ ಹುಟ್ಟಿದ್ದಾನೆ. ನಾವು ಸಮಾಧಿ ಬಿತ್ತುತ್ತೇವೆ. ಅವು ಮರುಹುಟ್ಟು ಪಡೆಯುತ್ತವೆ. ಎಲ್ಲರೂ ಸೇರಿ ಈ ದೇಶಕ್ಕೆ ಅಂಟಿದ ಕೆಟ್ಟ ರೋಗ ತೊಳೆಯುತ್ತೇವೆ’ ಎಂದರು.

ಪ್ರತಿಭಟನೆ, ಬಂಧನ

‘ಸಂವಿಧಾನ ಉಳಿವಿಗಾಗಿ ಸಂಕಲ್ಪ’ ಸಮಾವೇಶ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಶಿವಪ್ಪ ನಾಯಕ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.ನಟ ಪ್ರಕಾಶ್ ರೈ ಮತ್ತು ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದರು.ತಾವು ಪ್ರಕಾಶ್ ರೈ ಮತ್ತು ಜಿಗ್ನೇಶ್ ಮೇವಾನಿ ಅವರೊಂದಿಗೆ ಸಂವಿಧಾನ ಕುರಿತು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ಕಾರ್ಯಕರ್ತರು ಸಮಾವೇಶದ ಆವರಣದೊಳಗೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry