ಮಂಗಳವಾರ, ಆಗಸ್ಟ್ 4, 2020
26 °C
ಪತ್ನಿ ಹತ್ಯೆ ಮಾಡಿದ್ದಕ್ಕೆ ಜೀವಾವಧಿ ಶಿಕ್ಷೆ l ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಮಹೇಶ್

ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾದ ಕೈದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾದ ಕೈದಿ

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದ ಸಂಗೀತ ಶಾಲೆಯಲ್ಲಿ ಗುರುವಾರ ಮಹೇಶ್ ಅಲಿಯಾಸ್ ಮಾಸ್ತಿ ಕುಮಾರ (36) ಎಂಬ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿವಮೊಗ್ಗ ಜಿಲ್ಲೆ ಕಲ್ಕೆರೆ ಗ್ರಾಮದ ಮಹೇಶ್, ಕಿಟಕಿಗೆ ನೇಣು ಬಿಗಿದುಕೊಂಡಿದ್ದಾನೆ. ರಾತ್ರಿ 9 ಗಂಟೆ ಸುಮಾರಿಗೆ ಜೈಲು ಸಿಬ್ಬಂದಿ ಕೊಠಡಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

2015ರಲ್ಲಿ ಪತ್ನಿಯನ್ನು ಹತ್ಯೆಗೈದಿದ್ದ ‌ಮಹೇಶ್‌ಗೆ, 2017ರ ಫೆಬ್ರುವರಿಯಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆತನನ್ನು ‘ಬಿ’ ಬ್ಯಾರಕ್‌ನ ಸೆಲ್‌ನಲ್ಲಿ ಇರಿಸಲಾಗಿತ್ತು. ‘ಎ’ ಬ್ಯಾರಕ್‌ ಕಟ್ಟಡದಲ್ಲಿ ಉನ್ನತ ಶಿಕ್ಷಣ ತರಬೇತಿ ಕೇಂದ್ರ, ಜಿಮ್‌, ಗ್ರಂಥಾಲಯ, ಪ್ರಾರ್ಥನಾ ಕೊಠಡಿ ಹಾಗೂ ಸಂಗೀತ ಶಾಲೆ ಇದೆ. ಕೈದಿಗಳು ಬೆಳಿಗ್ಗೆ 7ರಿಂದ ಸಂಜೆ 6ರ ನಡುವೆ ಅವುಗಳ ಸೌಲಭ್ಯ ಪಡೆಯುತ್ತಾರೆ. ಸಂಜೆ ನಂತರ ಆ ಬ್ಯಾರಕ್ ಬಂದ್ ಮಾಡಲಾಗುತ್ತದೆ.

‘ಎಂದಿನಂತೆ ಸಂಜೆ 6 ಗಂಟೆಗೆ ಎಲ್ಲ ಕೈದಿಗಳನ್ನು ಅವರವರ ಸೆಲ್‌ಗಳಿಗೆ ಕಳುಹಿಸಿ ‘ಎ’ ಬ್ಯಾರಕ್‌ನ ಪ್ರವೇಶ ದ್ವಾರ ಬಂದ್ ಮಾಡಿದ್ದೆವು. ನಂತರ ಕೈದಿಗಳ ತಲೆ ಎಣಿಸಿದಾಗ ಮಹೇಶ್ ನಾಪತ್ತೆಯಾಗಿರುವುದು ಗೊತ್ತಾಯಿತು. ಎಲ್ಲ ಸೆಲ್‌ ಹಾಗೂ ಶೌಚಾಲಯಗಳಲ್ಲಿ ಶೋಧ ನಡೆಸಿದರೂ ಆತ ಪತ್ತೆಯಾಗಲಿಲ್ಲ. ಕೊನೆಗೆ ‘ಎ’ ಬ್ಯಾರಕ್‌ಗೆ ಹೋಗಿ ನೋಡಿದಾಗ ಸಂಗೀತ ಶಾಲೆಯಲ್ಲಿ ಆತ ನೇಣು ಹಾಕಿಕೊಂಡಿದ್ದ’ ಎಂದು ಜೈಲು ಸಿಬ್ಬಂದಿ ಹೇಳಿದ್ದಾರೆ.

ಕಿಂಡಿಯಿಂದ ಹೋಗಿದ್ದಾನೆ: ‘ಮಹೇಶ್ ಸಂಜೆ 6 ಗಂಟೆಗೆ ತನ್ನ ಸೆಲ್‌ ಬಳಿಯೇ ಇದ್ದ. ನಂತರ ಹೊರಗೆ ಹೋಗಿ ಮೆಟ್ಟಿಲುಗಳ ಮಧ್ಯೆ ಇರುವ ಕಿಂಡಿಯಿಂದ ‘ಎ’ ಬ್ಯಾರಕ್‌ಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಕೈದಿಗಳು ಗಾಂಜಾ ಸೇದಲು ರಾತ್ರಿ ವೇಳೆ ಆ ಕಿಂಡಿಯಿಂದಲೇ ಬ್ಯಾರಕ್‌ಗೆ ಹೋಗಿ ಬರುತ್ತಿದ್ದಾರೆ. ಹೀಗಾಗಿ, ಅದನ್ನು ಮುಚ್ಚಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ತಲೆ ಕೆಡಿಸಿಕೊಳ್ಳಲಿಲ್ಲ’ ಎಂದು ಕೆಲ ಕೈದಿಗಳು ದೂರಿದ್ದಾರೆ. ಜೈಲಿನಲ್ಲಿದ್ದ ಜೈಶಂಕರ್ ಅಲಿಯಾಸ್ ‘ಸೈಕೊ’ ಶಂಕರ್ ಇದೇ ಫೆ.27ರಂದು ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

**

ಹಿಂದೆಯೂ ಆಸ್ಪತ್ರೆಯಿಂದ ಪರಾರಿಯಾಗಿದ್ದ

2017ರ ಜುಲೈ 29ರಂದು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹೇಶ್‌ನನ್ನು ಜೈಲು ಸಿಬ್ಬಂದಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆತನ ಪಕ್ಕದ ಬೆಡ್‌ನಲ್ಲೇ ಹಿರಿಯ ನಾಗರಿಕರೊಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ ಕುಟುಂಬ ಸದಸ್ಯರು ಮರುದಿನ ರಾತ್ರಿ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೊರಟಿದ್ದರು.

ಈ ಸಂದರ್ಭದಲ್ಲಿ ಮಹೇಶ್, ಅವರ ಜತೆಯಲ್ಲೇ ಸೇರಿಕೊಂಡು ಆಸ್ಪತ್ರೆಯಿಂದ ಪರಾರಿಯಾಗಿದ್ದ. ಆತನ ಕಾವಲಿಗಿದ್ದ ಜೈಲು ಸಿಬ್ಬಂದಿ, ಊಟ ಮುಗಿಸಿ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿತ್ತು. ವಿ.ವಿ.ಪುರ ಪೊಲೀಸರು ವಾರದ ನಂತರ ಆತನನ್ನು ಪತ್ತೆ ಮಾಡಿ, ಪುನಃ ಜೈಲಿಗೆ ಅಟ್ಟಿದ್ದರು.

**

‘ಆಡಳಿತ ಮಂಡಳಿ ವೈಫಲ್ಯ’

‘ಮಹೇಶ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿಚಾರ ಎಲ್ಲರಿಗೂ ಗೊತ್ತಿತ್ತು. ಹಿಂದೊಮ್ಮೆ ಆತ ಆತ್ಮಹತ್ಯೆಗೂ ಯತ್ನಿಸಿದ್ದ. ಹೀಗಾಗಿ, ಆಪ್ತ ಸಮಾಲೋಚನೆ ಕೊಡಿಸಿ ಮಹೇಶ್‌ ಮೇಲೆ ಹೆಚ್ಚಿನ ನಿಗಾ ಇಡಬೇಕಿತ್ತು. ಜೈಲು ಅಧಿಕಾರಿಗಳು ಆ ಕೆಲಸವನ್ನು ಸರಿಯಾಗಿ ಮಾಡಲಿಲ್ಲ. ಆತನ ಸಾವಿಗೆ ಅವರ ವೈಫಲ್ಯವೇ ಕಾರಣ’ ಎಂದು ಇತ್ತೀಚೆಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾದ ಮೃತನ ಸ್ನೇಹಿತರು ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.