47 ಅತಿಸೂಕ್ಷ್ಮ, 84 ಸೂಕ್ಷ್ಮ ಮತಗಟ್ಟೆ

7
ಏ. 8ರಿಂದ ಮಿಂಚಿನ ನೋಂದಣಿ ಅಭಿಯಾನಕ್ಕೆ ಚಾಲನೆ

47 ಅತಿಸೂಕ್ಷ್ಮ, 84 ಸೂಕ್ಷ್ಮ ಮತಗಟ್ಟೆ

Published:
Updated:

ಮಸ್ಕಿ: ‘ಮೇ 12ರಂದು ನಡೆಯುವ ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿ 1,95,494 ಮತದಾರರು ಇದ್ದು ಅದರಲ್ಲಿ 96,649 ಪುರುಷ ಹಾಗೂ 98,829 ಮಹಿಳಾ ಮತದಾರರು ಇದ್ದಾರೆ. ಇತರೆ 16 ಮತದಾರರು ಇದ್ದಾರೆ’ ಎಂದು ಚುನಾವಣಾಧಿಕಾರಿ ಡಾ. ಚೇತನ ಪಾಟೀಲ ಹೇಳಿದರು.

ಶುಕ್ರವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ’ಶಾಂತಿಯುತ ಮತದಾನಕ್ಕಾಗಿ 229 ಮತಗಟ್ಟೆಗಳನ್ನು ತೆರೆಯಲಾಗುವುದು. ಅದರಲ್ಲಿ 47 ಅತಿ ಸೂಕ್ಷ್ಮ, 84 ಸೂಕ್ಷ್ಮ ಹಾಗೂ 98 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. 229 ಮತಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮತದಾನ ಪ್ರಕ್ರಿಯೆಗಾಗಿ 1603 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಲಿಂಗಸುಗೂರಿನ ವಿಸಿಬಿ ಕಾಲೇಜಿನಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ಚುನಾವಣೆಗೆ ಸಂಬಂಧಪಟ್ಟ ಮಾಹಿತಿಯನ್ನು ನಿಯಂತ್ರಣ ಕೊಠಡಿಯಿಂದ ಪಡೆಯಬಹುದು, ಚುನಾವಣೆಯಲ್ಲಿ ಅಕ್ರಮ ಹಣ ಹಾಗೂ ಮಧ್ಯ ಸರಬರಾಜು ತಡೆಯುವ ಉದ್ದೇಶದಿಂದ ಮಸ್ಕಿ ಹಾಗೂ ಉಮಲೂಟಿಯಲ್ಲಿ ಎರಡು ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಸಿಸಿ ಕ್ಯಾಮೆರಾ ಮತ್ತು ಪೊಲೀಸ್ ಬೀಗಿ ಭದ್ರತೆ ಮಾಡಲಾಗಿದೆ, ಇದರ ಜೊತೆಗೆ ವಿವಿಧ ಹಂತದ ಜಾಗೃತ ತಂಡ, ತಪಾಸಣೆ ತಂಡಗಳನ್ನು ರಚಿಸಲಾಗಿದ್ದು ದಿನದ 24 ಗಂಟೆಯೂ ರಾಜಕೀಯ ಪಕ್ಷಗಳ ಮೇಲೆ ಕಣ್ಣು ಇಡಲಿದ್ದಾರೆ. ಜೊತೆಗೆ ವಿಡಿಯೋ ಚಿತ್ರೀಕರಣವನ್ನು ಈ ತಂಡ ಮಾಡಲಿದೆ’ ಎಂದು ತಿಳಿಸಿದರು.

"ಕಡ್ಡಾಯ ಮತದಾನ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಸಂಬಂಧ ಮಿಂಚಿನ ನೊಂದಣಿ ಕಾರ್ಯಕ್ರಮ ಏಪ್ರಿಲ್ 8 ರಿಂದ ಕ್ಷೇತ್ರದಲ್ಲಿ ಪ್ರತಿ ಹೂಬಳಿಗಳಲ್ಲಿ ಆರಂಭಿಸಲಾಗುವುದು, ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳು ಈ ಆಂದೋಲನದಲ್ಲಿ ಪಾಲ್ಗೊಳ್ಳಲಿವೆ, ಮತದಾರರಿಗೆ ಮತ ಯಂತ್ರದ ಬಗ್ಗೆ ಮಾಹಿತಿ ನೀಡಲಾಗುವುದು" ಎಂದು ತಿಳಿಸಿದರು.

’ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣೆ ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಮದ್ಯದ ಅಂಗಡಿ, ಪೆಟ್ರೂಲ್ ಬಂಕ್ ಹಾಗೂ ಮುದ್ರಣಾಲಯಗಳ ಮೇಲೆ ನಿಗಾ ಹಿಡಲಿದೆ. ರಾಜಕೀಯ ಪಕ್ಷಗಳ ತಮ್ಮ ಸಭೆ ಸಮಾರಂಭಗಳ ಅನುಮತಿ ಪಡೆಯಲು, ವಾಹನಗಳ ಪರವಾನಗಿಗಾಗಿ ಆನ್ ಲೈನ್ ನಲ್ಲಿ ಅರ್ಜಿ ಪಡೆದು ಬರ್ತಿ ಮಾಡಿ ಕೊಟ್ಟರೆ ಅನುಮತಿ ನೀಡಲಾಗುವುದು, 48 ಗಂಟೆಗಳ ಮುಂಚೆ ಕಾರ್ಯಕ್ರಮಕ್ಕೆ ಅನುಮತಿ ಪಡೆದುಕೊಳ್ಳಬೇಕು’ ಎಂದರು.

’ಸಾರ್ವಜನಿಕ ಸ್ಥಳ ಹಾಗೂ ಧಾರ್ಮಿಕ ಕೇಂದ್ರಗಳಿಂದ 200 ಮೀಟರ್ ಹೊರಗೆ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದು ಸರ್ಕಾರದ ಸ್ಥಳವಾಗಿದ್ದರೆ ಸ್ಥಳೀಯ ಸಂಸ್ಥೆಗಳ ಪರವಾನಗಿ,

ಖಾಸಗಿ ವ್ಯಕ್ತಿಯ ಸ್ಥಳವಾಗಿದ್ದರೆ ಅವರ ಒಪ್ಪಿಗೆ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಪ್ರತಿ ಅಭ್ಯರ್ಥಿಗೆ 4 ವಾಹನಗಳಿಗೆ ಮಾತ್ರ ಪರವಾನಗಿ ನೀಡಲಾಗುವುದು, ಅಭ್ಯರ್ಥಿಯ ಚುನಾವಣೆ ವೆಚ್ಚು ₹ 28 ಲಕ್ಷ ಇದ್ದು ಲೆಕ್ಕಪತ್ರ ಕಡ್ಡಾಯವಾಗಿ ಸಲ್ಲಿಸಬೇಕು" ಎಂದು ತಿಳಿಸಿದರು.

ತಹಶೀಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಸಬ್ ಇನ್ಸ್‌ಪೆಕ್ಟರ್ ಅಮರೇಶ ಹುಬ್ಬಳ್ಳಿ ಇದ್ದರು.

‘ಮಹಿಳೆಯರಿಗೆ ಸಂಪೂರ್ಣ ಜವಾಬ್ದಾರಿ’

‘ಇದೇ ಮೊದಲ ಬಾರಿಗೆ ಕ್ಷೇತ್ರದ 7 ಹೋಬಳಿಗಳಲ್ಲಿನ ಒಂದೊಂದು ಮತಗಟ್ಟೆಯಲ್ಲಿ ಅಂತರ್ಜಾಲ ಸೌಲಭ್ಯ ಹಾಗೂ ಮತಗಟ್ಟೆಯ ಸಂಪೂರ್ಣ ಜವಾಬ್ದಾರಿ ಮಹಿಳೆಯರಿಗೆ ನೀಡಲಾಗುವುದು’ ಎಂದು ಚುನಾವಣಾಧಿಕಾರಿ ಡಾ. ಚೇತನ ಪಾಟೀಲ ತಿಳಿಸಿದರು.‘ಮಹಿಳೆಯರು ಕಾರ್ಯನಿರ್ವಹಿಸುವ ಮತಗಟ್ಟೆಗಳನ್ನು ’ಪಿಂಕ್ ಮತಗಟ್ಟೆ’ ಎಂದು ಕರೆಯಲಾಗುವುದು. ಇಲ್ಲಿ ಪೊಲೀಸರಿಂದ ಹಿಡಿದು ಚುನಾವಣೆ ಸಿಬ್ಬಂದಿವರೆಗೆ ಎಲ್ಲರೂ ಮಹಿಳೆಯರು. ಮತಗಟ್ಟೆಯೊಂದರಲ್ಲಿ ಅಂತರ್ಜಾಲ ಸೌಲಭ್ಯ ಕಲ್ಪಿಸುವುದರಿಂದ ಮತದಾನದ ಕ್ಷಣ ಕ್ಷಣದ ಮಾಹಿತಿ ಚುನಾವಣೆ ಆಯೋಗಕ್ಕೆ ತಲುಪಲಿದೆ. ಚುನಾವಣೆ ಆಯೋಗ ಇದೇ ಮೊದಲ ಬಾರಿಗೆ ಇಂತಹ ಎರಡು ಹೋಸ ಪ್ರಯೋಗ ಮಾಡಿದೆ’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry