ಭಾನುವಾರ, ಡಿಸೆಂಬರ್ 15, 2019
25 °C
ಹಾಕಿ: ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ ರಾಣಿ ರಾಂಪಾಲ್ ಬಳಗ

ಇಂಗ್ಲೆಂಡ್‌ಗೆ ಆಘಾತ ನೀಡಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ಇಂಗ್ಲೆಂಡ್‌ಗೆ ಆಘಾತ ನೀಡಿದ ಭಾರತ

ಗೋಲ್ಡ್ ಕೋಸ್ಟ್‌: ಒಲಿಂಪಿಕ್ ಚಾಂಪಿಯನ್‌ ಇಂಗ್ಲೆಂಡ್‌ಗೆ ಆಘಾತ ನೀಡಿದ ಭಾರತ ಮಹಿಳಾ ತಂಡದವರು ಕಾಮನ್‌ವೆಲ್ತ್ ಗೇಮ್ಸ್ ಹಾಕಿಯ ಸೆಮಿಫೈನಲ್‌ ಹಾದಿಯನ್ನು ಸುಗಮಗೊಳಿಸಿದ್ದಾರೆ.

ಭಾನುವಾರ ನಡೆದ ಗುಂಪು ಹಂತದ ಮೂರನೇ ಪಂದ್ಯದಲ್ಲಿ ರಾಣಿ ರಾಂಪಾಲ್ ಬಳಗದವರು 2–1 ಗೋಲುಗಳಿಂದ ಗೆದ್ದರು. ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನಕ್ಕೆ ಏರಿದರು.

ಕಳೆದ ಎರಡು ಕಾಮನ್‌ವೆಲ್ತ್ ಕೂಟ ಗಳಲ್ಲಿ ಐದನೇ ಸ್ಥಾನ ಗಳಿಸಿದ್ದ ಭಾರತ ಈ ಬಾರಿ ಮೊದಲ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಸೋತು ನಿರಾಸೆ ಕಂಡಿತ್ತು.

ಆದರೆ ನಂತರ ಪುಟಿದೆದ್ದ ತಂಡ ಮಲೇಷ್ಯಾವನ್ನು ಮಣಿಸಿತ್ತು. ಭಾನು ವಾರದ ಪಂದ್ಯದಲ್ಲಿ 35ನೇ ನಿಮಿಷದಲ್ಲಿ ಅಲೆಕ್ಸಾಂಡ್ರಾ ಡಾನ್ಸನ್‌ ಗಳಿಸಿದ ಗೋಲಿನ ಮೂಲಕ ಇಂಗ್ಲೆಂಡ್‌ ಮುನ್ನಡೆ ಗಳಿಸಿತ್ತು. ಇದರಿಂದ ಎದೆಗುಂದದ ಭಾರತ 42ನೇ ನಿಮಿಷದಲ್ಲಿ ಗುರುಜೀತ್‌ ಕೌರ್ ಗಳಿಸಿದ ಗೋಲಿನ ಮೂಲಕ ಸಮಬಲ ಸಾಧಿಸಿತು. 48ನೇ ನಿಮಿಷದಲ್ಲಿ ನವ ನೀತ್ ಕೌರ್‌ ಗೋಲು ಗಳಿಸಿ ಮುನ್ನಡೆ ಒದಗಿಸಿದರು.

ಇಂಗ್ಲೆಂಡ್‌ಗೆ ಮೊದಲ ಗೋಲು ಬಿಟ್ಟುಕೊಟ್ಟ ನಂತರ ಭಾರತದ ರಕ್ಷಣಾ ವಿಭಾಗದವರು ಎಚ್ಚೆತ್ತುಕೊಂಡರು. ದ್ವಿತೀಯಾರ್ಧದಲ್ಲಿ ಚುರುಕಿನ ಆಟದ ಮೂಲಕ ಎದುರಾಳಿ ತಂಡವನ್ನು ಕಂಗೆಡಿಸಿದರು. ಮಿಡ್‌ಫೀಲ್ಡರ್‌ ನಿಕ್ಕಿ ಪ್ರಧಾನ್‌ ಮುಖಕ್ಕೆ ಗಾಯಗೊಂಡು ನೆತ್ತರು ಹರಿಯಿತು. 42ನೇ ನಿಮಿಷದಲ್ಲಿ ಇಂಗ್ಲೆಂಡ್‌ಪೆನಾಲ್ಟಿ ಕಾರ್ನರ್‌ ಬಿಟ್ಟುಕೊಟ್ಟಿತು. ಅವಕಾಶವನ್ನು ಸದುಪಯೋಗ ಮಾಡಿಕೊಂಡ ಗುರುಜೀತ್ ಕೌರ್ ಚೆಂಡನ್ನು ಗುರಿ ಸೇರಿಸಿದರು. 48ನೇ ನಿಮಿಷದಲ್ಲಿ ನವನೀತ್ ಕೌರ್ ಫೀಲ್ಡ್ ಗೋಲು ಗಳಿಸಿ ಸಂಭ್ರಮದ ಅಲೆ ಎಬ್ಬಿಸಿದರು.

‘ಇಂಗ್ಲೆಂಡ್‌ ವಿರುದ್ಧ ಇದು ನಮ್ಮ ತಂಡದ ಮೊದಲ ಜಯ. ಒಲಿಂಪಿಕ್‌ ಚಾಂಪಿಯನ್ನರನ್ನು ಮಣಿಸಿದ್ದು ಖುಷಿ ತಂದಿದೆ. ಮುಂದಿನ ಪಂದ್ಯಗಳಲ್ಲೂ ಅವಕಾಶಗಳನ್ನು ಸದ್ಬಳಕೆ ಮಾಡಿ ಕೊಂಡು ಮುಂದೆ ಸಾಗುತ್ತೇವೆ’ ಎಂದು ರಾಣಿ ರಾಂಪಾಲ್ ಹೇಳಿದರು.

‘ಇಂದು ಭಾರತದ ದಿನವಾಗಿತ್ತು. ಅವಕಾಶಗಳನ್ನು ಅವರು ಚೆನ್ನಾಗಿ ಬಳಸಿಕೊಂಡರು. ನಮಗೆ ಚೆನ್ನಾಗಿ ಆಡಲು ಆಗಲಿಲ್ಲ’ ಎಂದು ಇಂಗ್ಲೆಂಡ್‌ ನಾಯಕಿ ಅಲೆಕ್ಸಾಂಡ್ರಾ ಹೇಳಿದರು.

**

ಇದು ನನ್ನ ವೃತ್ತಿ ಜೀವನದ ಮಹತ್ವದ ಗೋಲು. ಒಲಿಂಪಿಕ್ ಚಾಂಪಿಯನ್ನರ ವಿರುದ್ಧ ಗೋಲು ಗಳಿಸಿದ ಈ ದಿನವನ್ನು ಎಂದಿಗೂ ಮರೆಯಲಾರೆ.

-ನವನೀತ್ ಕೌರ್‌, ಗೋಲು ಗಳಿಸಿದ ಭಾರತದ ಆಟಗಾರ್ತಿ

ಪ್ರತಿಕ್ರಿಯಿಸಿ (+)